ಬೆರಳುಗಳಲ್ಲಿದೆ ನಮ್ಮ ಜೀವನದ ಸಾರಾಂಶ, ತೋರು ಬೆರಳಿನ ಆಕಾರ ಹೇಳಲಿದೆ ನಿಮ್ಮ ಗುಣ ಸ್ವಭಾವ; ನಿಮ್ಮ ಕೈ ಬೆರಳುಗಳು ಹೇಗಿವೆ?
ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳುಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ತೋರು ಬೆರಳಿನ ಮಹತ್ವ ಏನು? ತೋರು ಬೆರಳಿನ ಆಕಾರದ ಮೇಲೆ ನಿಮ್ಮ ಗುಣ ಸ್ವಭಾವ ಹೇಗಿರಲಿದೆ? ಇಲ್ಲಿದೆ ಮಾಹಿತಿ. (ಬರಹ: ಎಚ್. ಸತೀಶ್, ಜ್ಯೋತಿಷಿ)
ತೋರು ಬೆರಳು ಗುರು ಗ್ರಹದ ಪ್ರಭಾವಕ್ಕೆ ಒಳಗಾಗಿರುತ್ತದೆ. ಪ್ರತಿಯೊಂದು ಬೆರಳುಗಳು ಬೇರೆ ಬೇರೆ ಅಳತೆಯನ್ನು ಹೊಂದಿವೆ. ಸಾಮಾನ್ಯವಾಗಿ ಮಧ್ಯದ ಬೆರಳು ಸಾಮಾನ್ಯವಾಗಿ ಅತ್ಯಂತ ಉದ್ದವಾಗಿರುತ್ತದೆ. ಆದರೆ ಅಪರೂಪವೆಂಬಂತೆ ಕೆಲವರ ಕೈಯಲ್ಲಿ ತೋರು ಬೆರಳು ಉದ್ದವಾಗಿರುತ್ತದೆ ಅಥವಾ ಶುಭ ಚಿಹ್ನೆಗಳು ಇರುತ್ತವೆ.
ಮಧ್ಯದ ಬೆರಳಿಗಿಂತ ತೋರುಬೆರಳು ಉದ್ದವಾಗಿರುವವರ ಸ್ವಭಾವ
ಈ ರೀತಿ ಬೆರಳು ಹೊಂದಿರುವವರ ಜಾತಕದಲ್ಲಿ ಗುರುಗ್ರಹದ ಪಾತ್ರ ಬಹಳ ಮುಖ್ಯವಾಗುತ್ತದೆ. ಇವರಿಗೆ ಇಷ್ಟವಿಲ್ಲದೇ ಹೋದರು ಕುಟುಂಬದ ಯಜಮಾನಿಕೆ ದೊರೆಯುತ್ತದೆ. ಯಾವುದೇ ಕಾರಣಕ್ಕೂ ದುಡುಕದ ಇವರು ಕುಟುಂಬವನ್ನು ಯಶಸ್ಸಿನತ್ತ ನಡೆಸುತ್ತಾರೆ. ಯಾರ ಮೇಲಾಗಲಿ ಅಧಿಕಾರ ಚಲಾಯಿಸುವುದು ಇವರಿಗೆ ಆಗದ ವಿಚಾರ. ಎಲ್ಲರನ್ನೂ ಗೌರವದಿಂದ ಕಾಣುತ್ತಾರೆ. ಕಷ್ಟ ದಲ್ಲಿ ಇದ್ದ ಜನರಿಗೆ ಸಹಾಯ ಮಾಡುವುದರಲ್ಲಿ ಇವರೇ ಮೊದಲಿಗರು. ತಮಗೆ ತಿಳಿದಿರುವ ವಿಚಾರಗಳನ್ನು ಬೇರೆಲ್ಲರಿಗೂ ತಿಳಿಸುತ್ತಾರೆ. ಬೇರೆಯವರ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಬೇಕಾದ ಎಲ್ಲಾ ಕೆಲಸವನ್ನು ಇವರು ಮಾಡುತ್ತಾರೆ. ಒಂದು ವೇಳೆ ಇವರುಗಳು ಶಿಕ್ಷಕರಾಗಿದ್ದಲ್ಲಿ ಅಪರಿಮಿತ ಶುಭ ಫಲಗಳನ್ನು ಪಡೆಯುತ್ತಾರೆ.
ತೋರು ಬೆರಳ ತುದಿಯು ಮಾವಿನ ಎಲೆಯ ತುದಿಯಂತೆ ಇದ್ದಲ್ಲಿ ಬೇರೆಯವರಿಗೆ ಬುದ್ಧಿವಾದ ಹೇಳುವಲ್ಲಿ ನಿಸ್ಸೀಮರಾಗುತ್ತಾರೆ. ಒಳ್ಳೆಯ ಶಿಕ್ಷಕರು ಆಗುತ್ತಾರೆ. ಇವರಿಗೆ ಮೂರಕ್ಕಿಂತಲೂ ಹೆಚ್ಚಿನ ಭಾಷೆ ತಿಳಿದಿರುತ್ತದೆ. ಭಾಷಾಜ್ಞಾನ ಸೊಗಸಾಗಿರುತ್ತದೆ. ಕೇಳುಗರಿಗೆ ಇವರ ಮಾತನ್ನು ಕೇಳುತ್ತಲೇ ಇರಬೇಕೆಂಬ ಭಾವನೆ ಮೂಡುತ್ತದೆ. ತೋರು ಬೆರಳು ತಲೆ ಕೆಳಕಾದ ಯು ಅಕ್ಷರವನ್ನು ಹೋಲುವಂತಿದ್ದರೆ ಇವರುಗಳು ಯಾವುದಾದರೂ ಒಂದು ರೂಪದಲ್ಲಿ ಸಮಾಜವನ್ನು ಪ್ರತಿನಿಧಿಸುತ್ತಾರೆ. ಯಾರ ಮೇಲೂ ಇವರು ಒತ್ತಡವನ್ನು ಹೇರುವುದಿಲ್ಲ. ಬೇರೊಬ್ಬರನ್ನು ಆಶ್ರಯಿಸದೆ ಸ್ವತಂತ್ರವಾದ ಜೀವನವನ್ನು ನಡೆಸುತ್ತಾರೆ.
ವಿದ್ಯಾರ್ಥಿಗಳನ್ನು ಇವರು ಶಿಕ್ಷಿಸದೆ, ಪ್ರೀತಿಯ ಮಾತುಳಿಂದ ಅವರಲ್ಲಿ ಸ್ಪೂರ್ತಿಯನ್ನು ತುಂಬುತ್ತಾರೆ. ಇದರಿಂದ ತಮಗಿಂತ ಚಿಕ್ಕ ವಯಸ್ಸಿನವರ ಪ್ರೀತಿ ವಿಶ್ವಾಸ ಗಳಿಸುತ್ತಾರೆ. ಬೇರೆಯವರಿಗೆ ಬುದ್ಧಿವಾದ ಹೇಳುವುದು ಇವರಿಗೆ ಇಷ್ಟವಾಗುವುದಿಲ್ಲ. ಇವರು ಅತಿಯಾದ ಭಾವುಕತೆಯಿಂದ ವರ್ತಿಸುತ್ತಾರೆ. ಸಣ್ಣಪುಟ್ಟ ಸೋಲುಗಳನ್ನು ಗಂಭೀರವಾಗಿ ಪರಿಗಣಿಸಿ ಯಶಸ್ಸಿನ ನಿರೀಕ್ಷೆಯಲ್ಲಿ ಇರುತ್ತಾರೆ. ಇವರಿಗೆ ಕುಟುಂಬದ ಎಲ್ಲಾ ಸದಸ್ಯರ ಸಹಾಯ ಸಹವಾಸ ಇರುತ್ತದೆ. ದಾಂಪತ್ಯ ಜೀವನವು ಸುಖಮಯ ವಾಗಿರುತ್ತದೆ.
ತೋರು ಬೆರಳ ತುದಿ ಅಗಲ ಇರುವವರ ಗುಣ
ಕೆಲವರಿಗೆ ತೋರು ಬೆರಳ ತುದಿಯು ಅಗಲವಾಗಿ ಇರುತ್ತದೆ. ಇಂತಹವರಿಗೆ ವಿಶೇಷವಾದಂತಹ ಆತ್ಮ ವಿಶ್ವಾಸ ಇರುತ್ತದೆ. ಜೀವನದಲ್ಲಿ ಯಾರನ್ನೂ ಅವಲಂಬಿಸದೆ ಸ್ವತಂತ್ರವಾಗಿ ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳಬಲ್ಲರು. ಬೇರೆಯವರಿಗೆ ಇವರು ಒಳ್ಳೆಯ ಮಾರ್ಗದರ್ಶಕವಾಗುತ್ತಾರೆ. ಕೆಲವರಲ್ಲಿ ಈ ಬೆರಳು ಅಪ್ಪಚ್ಚಿ ಆದಂತೆ ಕಂಡು ಬರುತ್ತದೆ. ಇಂತಹವರು ಯಾವುದೇ ವಿಚಾರವನ್ನು ಸುಲಭವಾಗಿ ಒಪ್ಪುವುದಿಲ್ಲ.
ಸರಿಯಾದ ಕಾರಣಗಳಿಲ್ಲದೆ ಯಾವುದೇ ವ್ಯಕ್ತಿಯ ವಿರುದ್ಧದ ತೀರ್ಮಾನಕ್ಕೆ ಬೆಂಬಲ ನೀಡುವುದಿಲ್ಲ. ಕಷ್ಟಪಟ್ಟು ದುಡಿದ ಹಣವನ್ನು ಸುಲಭವಾಗಿ ಬೇರೆಯವರಿಗೆ ನೀಡುವುದಿಲ್ಲ ನಾನು ದುಡಿದ ಹಣ ತನಗೆ ಮತ್ತು ನನ್ನ ಕುಟುಂಬದವರಿಗೆ ಮಾತ್ರ ಎಂಬ ತೀರ್ಮಾನ ಇವರದ್ದು. ಹಣಕಾಸಿನ ವ್ಯವಹಾರದಲ್ಲಿ ಸ್ವಂತ ನಿರ್ಣಯಕ್ಕೆ ಬದ್ಧರಾಗುತ್ತಾರೆ. ಯಾವುದೇ ಹಣಕಾಸಿನ ಯೋಜನೆಗಳಲ್ಲಿ ಸುಲಭವಾಗಿ ಹಣ ಹೂಡುವುದಿಲ್ಲ. ಇವರಿಗೆ ದಬ್ಬಾಳಿಕೆಯ ಗುಣದವರನ್ನು ಕಂಡರೆ ಅಪಾರ ಸಿಟ್ಟು ಬರುತ್ತದೆ.
ಇವರು ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ದರಾಗುವುದಿಲ್ಲ. ಆದರೆ ಅಧಿಕಾರಿಗಳಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಸಹಕಾರಗಳನ್ನು ನೀಡುತ್ತಾರೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ. ಇವರ ಕಾರ್ಯದಕ್ಷತೆಯನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ಹಸಿದವರಿಗೆ ಅನ್ನ ನೀಡುವುದಂದರೆ ಇವರಿಗೆ ಬಲು ಪ್ರೀತಿ. ಸಾಕು ಪ್ರಾಣಿಗಳ ಬಗ್ಗೆ ಹೆಚ್ಚಿನ ಕರುಣೆ ತೋರುತ್ತಾರೆ. ತಮ್ಮ ಮಕ್ಕಳ ಉತ್ತಮ ಜೀವನಕ್ಕೆ ತಮ್ಮ ಜೀವನವನ್ನೇ ಮುಡುಪಾಗಿ ಇಡುತ್ತಾರೆ. ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಅತಿ ಗೌರವದಿಂದ ನೋಡುವುದು ಇವರ ಗುಣ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).