ಧನುರ್ಮಾಸದ ಪೂಜೆಯಿಂದ 1000 ವರ್ಷದ ಪೂಜಾಫಲ ಒಂದೇ ದಿನ ಲಭ್ಯ, ಪೂಜಾ ಮಹತ್ವ ಮತ್ತು ಅನುಸರಿಸಬೇಕಾದ ಕ್ರಮವೇನು
ಧನುರ್ಮಾಸದ ಪೂಜೆ ಬಹಳ ವಿಶೇಷ. ಅರುಣೋದಯಕ್ಕೂ ನಾಲ್ಕು ಘಳಿಗೆ ಮೊದಲೇ ಎದ್ದು, ಅರುಣೋದಯದಲ್ಲಿ ಪೂಜೆ ಆರಂಭಿಸಿ ಸೂರ್ಯೋದಯಕ್ಕೂ ಮೊದಲೇ ಪೂಜೆ ಮುಗಿಸಬೇಕು ಎನ್ನುತ್ತದೆ ಶಾಸ್ತ್ರ. ಹೀಗೆ ಮಾಡುವುದರಿಂದ 1000 ವರ್ಷಗಳ ಪೂಜಾ ಫಲ ಒಂದೇ ದಿನದಲ್ಲಿ ಲಭ್ಯವಾಗುತ್ತದೆ ಎಂಬುದು ನಂಬಿಕೆ. ಧನುರ್ಮಾಸದ ಪೂಜೆಯ ವಿಶೇಷ, ಮಹತ್ವ ಮತ್ತು ಕ್ರಮಗಳ ಕುರಿತು ಒಂದಿಷ್ಟು ವಿವರ.
ಭಗವಂತನ ಅನುಗ್ರಹವನ್ನು ಪಡೆದು ಕೃತಾರ್ಥರಾಗಬೇಕು ಎಂದು ಪ್ರಯತ್ನಿಸುವ ಸಜ್ಜೀವರ ಮೇಲೆ ಭಗವಂತ ತೋರಿಸುವ ಅನುಗ್ರಹ ಅಪಾರವಾದುದು. ಧನುರ್ಮಾಸದ ಪೂಜೆ ಮಾಡುವುದರಿಂದ ಒಂದು ಸಾವಿರ ವರ್ಷ ಮಾಡುವ ಪೂಜೆಯ ಪುಣ್ಯದ ಫಲವನ್ನು ಒಂದು ದಿನದಲ್ಲಿ ಭಗವಂತ ಕೊಡುತ್ತಾನೆ. ಅನೇಕ ರೀತಿಯ ಕಾರುಣ್ಯವನ್ನು ಭಗವಂತ ತೋರಿಸುತ್ತಿದ್ದು, ಅಂತಹ ಕಾರುಣ್ಯಗಳ ಪೈಕಿ ಒಂದು ಧನುರ್ಮಾಸದ ಪೂಜೆಗೆ ಭಗವಂತ ನೀಡಿರುವ ಮಹತ್ವವೇ ಇದು.
ಕೋದಂಡಸ್ಥೇ ಸವಿತರೇ
ಪ್ರತ್ಯೂಷೇ ಪೂಜನಾರ್ಥೇ
ಸಹಸ್ರಾಬ್ದಾರ್ಚನ ಫಲಂ
ದಿನೇನೈಕೇನ ಲಭ್ಯತೇ
ಧನುರ್ಮಾಸದ ಕಾಲದಲ್ಲಿ ಸೂರ್ಯೋದಯಕ್ಕಿಂತ ಮುಂಚೆ, ಅರುಣೋದಯದ ಕಾಲದಲ್ಲಿ ದೇವರ ಪೂಜೆಯನ್ನು ಮಾಡಬೇಕು. ಆ ರೀತಿಯಾಗಿ ಪೂಜೆಯನ್ನು ಮಾಡುವುದರಿಂದ ಒಂದು ಸಾವಿರ ವರ್ಷ ಪೂಜೆಯನ್ನು ಮಾಡಿದರೆ ಏನು ಫಲ ಸಿಗುವುದೋ ಆ ಫಲವನ್ನು ಒಂದೇ ದಿನದಲ್ಲಿ ಪಡೆಯಬಹುದು. ಮನುಷ್ಯನಾದವನು ನಿರಂತರ ಒಂದು ಸಾವಿರ ವರ್ಷ ಬದುಕುವುದು ಸಾಧ್ಯವೇ ಇಲ್ಲ. ಬದುಕಿದರೂ ನಿರಂತರ ಒಂದು ಸಾವಿರ ವರ್ಷ ಪೂಜೆ ಮಾಡುವುದು ಸಾಧ್ಯವೇ ಇಲ್ಲ. ಯಾವುದನ್ನು ನಮಗೆ ಪಡೆಯುವುದಕ್ಕೆ ಸಾಧ್ಯವಿಲ್ಲವೋ ಅಂತಹ ಪೂಜಾಫಲವನ್ನು ಭಗವಂತ ನಮಗೆ ಈ ಅವಧಿಯಲ್ಲಿ ಸಲ್ಲಿಸುವ ಪೂಜೆಯ ಮೂಲಕ ಅನುಗ್ರಹಿಸುತ್ತಾನೆ.
ಈ ಪೂಜೆಯನ್ನು ಹೇಗೆ ಮಾಡಬೇಕು? ಯಾವ ಕ್ರಮದಲ್ಲಿ ಮಾಡಬೇಕು
ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ ಮುಂತಾದವು ಚಾಂದ್ರಮಾನ ಮಾಸದ ಪರಿಗಣನೆ. ಅದೇ ರೀತಿ ಮೇಷ, ವೃಷಭ, ಮಿಥುನ ಮುಂತಾದವು ಸೌರಮಾನ ಮಾಸದ ಪರಿಗಣನೆ. ಈ ಸೌರಮಾನದ ಪರಿಗಣನೆಯಲ್ಲಿ ಯಾವ ರಾಶಿಯಲ್ಲಿ ಸೂರ್ಯನಿರುತ್ತಾನೆಯೋ ಆ ರಾಶಿಯ ಹೆಸರು ಬರುತ್ತದೆ. ಅಂದರೆ ಸೂರ್ಯ ಮೇಷ ರಾಶಿಯಲ್ಲಿದ್ದರೆ ಅದು ಮೇಷ ಮಾಸ, ಸಿಂಹ ರಾಶಿಯಲ್ಲಿದ್ದರೆ ಅದು ಸಿಂಹ ಮಾಸ, ಅದೇ ರೀತಿ ಈಗ ಸೂರ್ಯ ಧನು ರಾಶಿಯಲ್ಲಿರುವ ಕಾರಣ ಈಗ ಧನುರ್ ಮಾಸ.
ಯಾವ ದಿನ ಸೂರ್ಯ ಧನು ರಾಶಿಯನ್ನು ಸೂರ್ಯೋದಯ ಒಳಗೆ ಪ್ರವೇಶಿಸುತ್ತಾನೋ ಆ ದಿನವೇ ಧನು ಪೂಜೆ ಶುರು. ಸೂರ್ಯದೇವನು ಮಕರ ರಾಶಿಗೆ ಪ್ರವೇಶಿಸಿದ ಬಳಿಕ ಧನುಮಾಸದ ಪೂಜೆ ಸಮಾಪ್ತಿಯಾಗುವುದಲ್ಲ. ಯಾವ ದಿನ ಕೊನೆಯದಾಗಿ ಸೂರ್ಯೋದಯದ ಒಳಗೆ ಧನು ರಾಶಿಯಲ್ಲಿ ಸೂರ್ಯ ಇದ್ದಾನೋ ಆ ದಿನವೇ ಧನುರ್ಮಾಸದ ಪೂಜೆ ಸಮಾಪ್ತಿ.
ಧನುಮಾರ್ಸದಲ್ಲಿ ಅರುಣೋದಯದ ಕಾಲದಲ್ಲಿಯೇ ಪೂಜೆ ಮಾಡಬೇಕು. ಸೂರ್ಯೋದಯಕ್ಕಿಂತ ನಾಲ್ಕು ಘಳಿಗೆ ಮೊದಲು ಅರುಣೋದಯ ಇರುತ್ತದೆ. ಒಂದು ಘಳಿಗೆ ಅಂದರೆ 24 ನಿಮಿಷ. ನಾಲ್ಕು ಘಳಿಗೆ ಅಂದರೆ 96 ನಿಮಿಷ. ಅಂದರೆ ಸೂರ್ಯೋದಯಕ್ಕಿಂತ 96 ನಿಮಿಷ ಅರುಣೋದಯ ಶುರುವಾಗುತ್ತದೆ. ಅದು ಧನುರ್ಮಾಸದ ಪೂಜೆಗೆ ಪ್ರಶಸ್ತ ಕಾಲ.
ದೇವತೆಗಳ ಪಾಲಿಗೆ ನಮ್ಮ ಅಂದರೆ ಮನುಷ್ಯರ 365 ದಿನಗಳು ಒಂದು ಹಗಲು ಮತ್ತು ಒಂದು ರಾತ್ರಿ. ನಮ್ಮಲ್ಲಿ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದಿದೆಯಲ್ಲ. ಅದು ದಕ್ಷಿಣಾಯಣ ಅವರಿಗೆ ರಾತ್ರಿ, ಉತ್ತರಾಯಣ ಅವರಿಗೆ ಹಗಲು. ದಕ್ಷಿಣಾಯಣದ ಕಾಲದಲ್ಲಿ ಸೂರ್ಯ ಆರು ರಾಶಿಗಳಲ್ಲಿರುತ್ತಾನೆ. ಉತ್ತರಾಯಣದಲ್ಲೂ ಆರು ರಾಶಿಗಳಲ್ಲಿರುತ್ತಾನೆ. ಒಂದು ದಿವಸ ಎಂದರೆ 60 ಘಳಿಗೆ. ಈ 60 ಘಳಿಗೆಗಳನ್ನು ಎರಡು ಭಾಗ ಮಾಡಿದರೆ 30 - 30 ಘಳಿಗೆಗಳು ಬರುತ್ತವೆ. ಈ ಲೆಕ್ಕಾಚಾರ ಪ್ರಕಾರ ಒಂದೊಂದು ರಾಶಿಯಲ್ಲಿ ಸೂರ್ಯ 5 ಘಳಿಗೆ ಇರುತ್ತಾನೆ.
ಧನುರ್ಮಾಸದ 5 ಘಳಿಗೆ ಇದೆಯಲ್ಲ, ಅದು ದೇವತೆಗಳ ಪಾಲಿಗೆ ಸೂರ್ಯೋದಯಕ್ಕಿಂತ ಮುಂಚಿನ ಅವಧಿ ಎನ್ನುವ ಲೆಕ್ಕಾಚಾರದೊಳಗೆ ಅರುಣೋದಯ. ಈ ಅವಧಿಯಲ್ಲಿ ದೇವತೆಗಳು ಎದ್ದು ಸ್ನಾನ ಸಂಧ್ಯಾವಂದನೆಗಳನ್ನು ಮಾಡುತ್ತಾರೆ. ದೇವತೆಗಳು ಎಚ್ಚರಗೊಂಡು ಭಗವಂತನನ್ನು ಆರಾಧಿಸುತ್ತಿದ್ದಾರೆ.
ಅರುಣೋದಯದ ಕಾಲ ಅದು ದೇವತೆಗಳ ಕಾಲ, ಬ್ರಾಹ್ಮ ಕಾಲ. ಅದೇ ಸಂದರ್ಭದಲ್ಲಿ ನಾವು ದೇವತೆಗಳ ಆರಾಧನೆಯನ್ನು ಮಾಡಿದಾಗ ಭಗವಂತ, ಸುಪ್ರೀತನಾಗುತ್ತಾನೆ. ಅದಕ್ಕಾಗಿಯೇ ಮುಖ್ಯಾ ಅರುಣೋದಯೇ ಪೂಜಾ, ಮಧ್ಯಮಾ ಲುಪ್ತ ತಾರಕಾ.
ಸುಮಾರು 6.30ಕ್ಕೆ ಸೂರ್ಯೋದಯ ಆಗುವುದಾದರೆ, ಅದಕ್ಕೂ ಮೊದಲೇ ದೇವರ ಪೂಜೆ ಮಾಡಿ, ಪೆಟ್ಟಿಗೆ ಕಟ್ಟಿಟ್ಟು ದೇವರಿಗೆ ನಮಸ್ಕಾರ ಮಾಡಿಬಿಡಬೇಕು. ಒಂದೂವರೆ ಗಂಟೆ ಕಾಲ ಪೂಜೆ ಮಾಡುವುದಾದರೆ, ಸೂರ್ಯೋದಯಕ್ಕೆ ಒಂದೂವರೆ ಗಂಟೆ ಮೊದಲೇ ಪೂಜೆ ಶುರುಮಾಡಬೇಕು. ಅದಕ್ಕಿಂತ ಮುಂಚೆಯೇ ನಮ್ಮ ಸಂಧ್ಯಾವಂದನೆ ಮತ್ತು ಪೂಜಾ ಸಿದ್ಧತೆ ಮಾಡಿಕೊಂಡಿರಬೇಕು. ಅದಕ್ಕಿಂತ ಮೊದಲೇ ಎದ್ದು ಶೌಚ, ಮುಖತೊಳೆಯುವುದು, ತಣ್ಣೀರಲ್ಲಿ ಸ್ನಾನ ಇತ್ಯಾದಿ ಮುಗಿಸಿಕೊಂಡಿರಬೇಕು. ಆರೂವರೆ ಸೂರ್ಯೋದಯ ಎಂದಾದರೆ 3-3.30ಕ್ಕೆಲ್ಲ ಎದ್ದು ಈ ಎಲ್ಲ ಕೆಲಸ ಮುಗಿಸಿರಬೇಕು.
ಅರುಣೋದಯಲ್ಲಿ ಪೂಜೆ ಮಾಡಿದರೆ ಅದು ಉತ್ತಮವಾದುದು. ಆಗ ಸಂಪೂರ್ಣ ಕತ್ತಲು ಇರುತ್ತದೆ. ಇನ್ನು ನಕ್ಷತ್ರಗಳು ಮರೆಯಾಗಿ ಇನ್ನೇನು ಸೂರ್ಯೋದಯ ಲಕ್ಷಣಗಳು ಗೋಚರಿಸುವಾಗ ಪೂಜೆ ಶುರುಮಾಡಿದರೆ ಅದು ಮಧ್ಯಮ. ಅದೇ ರೀತಿ ಪೂಜೆ ಮಾಡುವಾಗ ಸೂರ್ಯೋದಯ ಆಗಿದ್ದರೆ ಅದು ಅಧಮ ಪೂಜೆ. ಇನ್ನು ಮಧ್ಯಾಹ್ನ ಪೂಜೆ ಮಾಡಿದರೆ ನಿಷ್ಫಲವಾಗುತ್ತದೆ. ಸರಳವಾಗಿ ಹೇಳಬೇಕು ಎಂದರೆ ದೇವರ ಪೂಜೆ ಯಾವಾಗ ಮಾಡಿದರೂ ಅದಕ್ಕೆ ಫಲ ಇದ್ದೇ ಇರುತ್ತದೆ. ಆದರೆ ಧನುರ್ಮಾಸದಲ್ಲಿ ಮಧ್ಯಾಹ್ನ ಪೂಜೆ ಮಾಡಿದರೆ ಅರುಣೋದಯದಲ್ಲಿ ಮಾಡಿದಾಗ ಸಿಗುವ 1000 ವರ್ಷದ ಪೂಜೆಯ ಫಲ ಸಿಗದು ಎಂದು ಅರ್ಥ.
ಅರುಣೋದಯದಲ್ಲಿ ಪೂಜೆ ಮಾಡುವುದು ಸಾಧ್ಯವಾಗಲಿಲ್ಲ ಎಂದು ಪೂಜನೆ ಮಾಡುವುದನ್ನೇ ಬಿಟ್ಟರೆ, ಆಗ ಪೂಜೆ ಮಾಡದೇ ಇರುವ ದೋಷ ಉಂಟಾಗುತ್ತದೆ. ಪೂಜೆ ಮಾಡುವುದನ್ನು ಬಿಡಬಾರದು.
ಆಗ್ನೇಯ ಪುರಾಣದ ಧನುರ್ಮಾಸದ ಪೂಜಾ ಕ್ರಮದ ವಿವರಣೆ ಇರುವುದು ಹೀಗೆ-
ಕೋದಂಡಸ್ಥೇ ದಿವಾನಾಥೇ ಯೋಮುದ್ಗಾನ್ನಂ ಸಹರ್ದ್ರಕಂ
ನಿವೇದಯೇತ್ ಧರೇಸಮ್ಯಗ್‌ಜಿದ್ವಾ ಶತ್ರೂನ್ ಕ್ಷಣೇನ್ನಸಃ
ಸದದ್ಯಾರ್ದ್ರಕ ಮುದ್ಗಾನ್ನಂ ಯೋಧನುರ್ಮಾಸಿ ವಿಷ್ಣವೇ
ಸಮರ್ಪಯೇತ್ ಸದೀರ್ಘಾಯುಃ ಧನಾಢ್ಯೋ ವೇದಪಾರಗಃ
ಶ್ರೀಮದ್ರಾಘವೇಂದ್ರ ವಿಜಯದಲ್ಲಿ ಹೇಳಿರುವ ಪ್ರಕಾರ, ಧನುರ್ಮಾಸದಲ್ಲಿ ದೇವರಿಗೆ ಮುದ್ಗಾನ್ನ ಅಂದರೆ ಹುಗ್ಗಿ ನೈವೇದ್ಯ ವಿಶೇಷ. ಅಕ್ಕಿ ಮತ್ತು ಅದರ ಎರಡು ಪಟ್ಟು ಹೆಸರುಬೇಳೆ. ಏಲಕ್ಕಿ, ಹಸಿ ಶುಂಠಿ, ಒಣಶುಂಠಿಯನ್ನು ಹಾಕಿ ಹುಗ್ಗಿಯನ್ನು ತಯಾರು ಮಾಡಬೇಕು. ಹುಗ್ಗಿಯ ಜೊತೆಗೆ ಬೆಲ್ಲದ ಗೊಜ್ಜು. ಮೊಸರು ಕೂಡ ಭಗವಂತನಿಗೆ ಸಮರ್ಪಿಸಬೇಕು.
ಯಾರು ಈ ಹುಗ್ಗಿಯನ್ನು ದೇವರಿಗೆ ಸಮರ್ಪಿಸುತ್ತಾರೋ ಅಂಥವರ ಶತ್ರುನಾಶವಾಗುತ್ತದೆ. ನಮ್ಮ ಬದುಕಿನಲ್ಲಿರುವ ಶತ್ರುಗಳ, ಹಿತಶತ್ರುಗಳ ಕಾಟವನ್ನು ನಿವಾರಿಸುವ ಕೆಲಸ ಧನುರ್ಮಾಸದ ಪೂಜೆಯಿಂದ ಆಗುತ್ತದೆ. ನಾವು ನಮ್ಮ ಆಲಸ್ಯವೆಂಬ ಶತ್ರುವನ್ನು ಗೆದ್ದು ದೇವರ ಪೂಜೆ ನೆರವೇರಿಸುವ ಕಾರಣ, ಎಲ್ಲ ಶತ್ರುಕಾಟವೂ ನಾಶವಾಗುತ್ತದೆ. ದೀರ್ಘಾಯುಷ್ಯವನ್ನೂ, ಆರೋಗ್ಯವನ್ನೂ, ಸಾತ್ವಿಕ ಸಂಪತ್ತನ್ನೂ, ವೇದ ಸಂಪತ್ತನ್ನೂ ಒದಗಿಸುತ್ತಾನೆ. ನಿಷ್ಕಾಮವಾಗಿ ಪೂಜೆ ಸಲ್ಲಿಸುವುದರಿಂದ ಸಿಗುವ ಫಲ ಇದು.
ಸರಿಯಾದ, ಸಾತ್ತ್ವಿಕ ಅಪೇಕ್ಷೆಯನ್ನು ಇಟ್ಟುಕೊಂಡು ಧನುರ್ಮಾಸದ ಪೂಜೆ ಮಾಡಿದರೂ ಭಗವಂತ ಅನುಗ್ರಹಿಸುತ್ತಾನೆ. ಆದರೆ ಈ ಎಲ್ಲ ಪೂಜೆಯೂ ಅರುಣೋದಯದಲ್ಲೇ ಆಗಬೇಕು. ನಮ್ಮ ಬದುಕಿನಲ್ಲಿ ಬರುವ ಅಷ್ಟೂ ಧನುರ್ಮಾಸದಲ್ಲಿ ಈ ಪೂಜೆ ನೆರವೇರಿಸಬೇಕು. ಹೀಗೆ ಮಾಡುವುದರಿಂದ ಭಕ್ತಿ, ಜ್ಞಾನ, ಸಂಪತ್ತು ಹೆಚ್ಚಾಗುವುದು ಎಂಬುದು ಪ್ರಾಜ್ಞರ ನಂಬಿಕೆ.
ವಿಷ್ಣುದಾಸ ನಾಗೇಂದ್ರಾಚಾರ್ಯ ಅವರ ಪ್ರವಚನದ ಆಯ್ದ ಭಾಗ..
https://www.youtube.com/watch?v=3l2__Kbqekw
ವಿಭಾಗ