ಧನುರ್ಮಾಸ ಕೊನೆ ಎಂದು, ಈ ಹೆಸರೇಕೆ ಬಂತು, ಇದೇಕೆ ಶೂನ್ಯ ಮಾಸ, ಮಾರ್ಗಶಿರ ಮಾಸ ಕೂಡ ಇದುವೇನಾ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಧನುರ್ಮಾಸ ಕೊನೆ ಎಂದು, ಈ ಹೆಸರೇಕೆ ಬಂತು, ಇದೇಕೆ ಶೂನ್ಯ ಮಾಸ, ಮಾರ್ಗಶಿರ ಮಾಸ ಕೂಡ ಇದುವೇನಾ

ಧನುರ್ಮಾಸ ಕೊನೆ ಎಂದು, ಈ ಹೆಸರೇಕೆ ಬಂತು, ಇದೇಕೆ ಶೂನ್ಯ ಮಾಸ, ಮಾರ್ಗಶಿರ ಮಾಸ ಕೂಡ ಇದುವೇನಾ

ಪುರಾಣ ಗ್ರಂಥಗಳ ಪ್ರಕಾರ, ನಮ್ಮ ಸನಾತನ ಸಂಸ್ಕೃತಿಯಲ್ಲಿ ರೂಢಿಯಲ್ಲಿರುವ ಕಾಲ ಮಾಪನಗಳ ಪೈಕಿ ಮಾಸವೂ ಒಂದು. ಮಾಸ ಅಂದರೆ ತಿಂಗಳು. ಭಾರತೀಯರ ಮಟ್ಟಿಗೆ ಪ್ರತಿ ಮಾಸವೂ ವಿಶೇಷ. ಪ್ರತಿ ಮಾಸದಲ್ಲೂ ಒಂದಿಲ್ಲೊಂದು ಆಚರಣೆ, ವ್ರತ, ಅನುಷ್ಠಾನ ಇದ್ದೇ ಇದೆ. ಇವೆಲ್ಲದಕ್ಕೂ ಮಹತ್ವವೂ ಇದೆ. ಈಗ ಧನುರ್ಮಾಸ ಶುರುವಾಗಿದೆ. ಹಾಗಾದರೆ ಧನುರ್ಮಾಸ ಎಂದರೇನು ಎಂಬುದನ್ನು ಅರಿಯೋಣ.

ಶೇಷ ಶಯನ ಮಹಾವಿಷ್ಣು (ಸಾಂಕೇತಿಕ ಚಿತ್ರ)
ಶೇಷ ಶಯನ ಮಹಾವಿಷ್ಣು (ಸಾಂಕೇತಿಕ ಚಿತ್ರ)

ಧನುರ್ಮಾಸ ಈ ಸಲ ಡಿಸೆಂಬರ್ 16ರಂದು ಶುರುವಾಗಿದ್ದು ಜನವರಿ 14ರಂದು ಕೊನೆಯಾಗಲಿದೆ. ದೇವಸ್ಥಾನಗಳಲ್ಲಿ ನಿತ್ಯವೂ ಅರುಣೋದಯದಲ್ಲಿ ಪೂಜೆ ನಡೆಯುತ್ತಿದೆ. ದಕ್ಷಿಣ ಭಾರತದ ಬಹುತೇಕ ಮಹಾವಿಷ್ಣು ದೇವಾಲಯಯಗಳಲ್ಲಿ ಮೊದಲ 15 ದಿನ ಅರುಣೋದಯದಲ್ಲೂ, ನಂತರದ 15 ದಿನ ಸೂರ್ಯೋದಯದ ಪೂಜೆ ನಡೆಯುವುದು ವಾಡಿಕೆ. ಇವೆಲ್ಲ ಧನುರ್ಮಾಸದ ವಿಶೇಷಗಳು.

ಅಂದ ಹಾಗೆ, ಹಿಂದೂ ಪಂಚಾಂಗದ 12 ಮಾಸಗಳಲ್ಲಿ ಮಾರ್ಗಶಿರ ಮಾಸ ಅಥವಾ ಧನುರ್ಮಾಸ ದೇವತಾರಾಧನೆಗೆ ಅತ್ಯಂತ ಶ್ರೇಷ್ಠವಾದ ಮಾಸ. ಮಾರ್ಗಶಿರ ಮಾಸದ ಸಂಕ್ರಮಣದ ದಿನ ಸೂರ್ಯ ಭಗವಂತನು ವೃಶ್ಚಿಕ ರಾಶಿಯಿಂದ ಕ್ರಮಿಸಿ, ಧನುರ್ ರಾಶಿಗೆ ಪ್ರವೇಶಿಸುತ್ತಾನೆ. ಒಂದು ತಿಂಗಳ ಕಾಲ ಸೂರ್ಯನ ಚಲನೆ 30 ಡಿಗ್ರಿ ಪರಿಮಿತಿಯಲ್ಲಿರುತ್ತದೆ. ಧನುರ್‌ ರಾಶಿಯಲ್ಲಿ ಸೂರ್ಯನ ಭಾಗಿದ ಚಲನೆಯ ಕಾರಣ, ಇದಕ್ಕೆ ಧನುರ್ಮಾಸ ಎಂಬ ಹೆಸರು ಬಂತು ಎನ್ನುತ್ತಾರೆ ಪ್ರಾಜ್ಞರು.

ಋತುಗಳ ಅಥವಾ ಸೀಸನ್‌ಗಳ ಲೆಕ್ಕಾಚಾರ ತೆಗೆದುಕೊಂಡರೆ ಇದು ಹೇಮಂತ ಋತುವಿನ ಕಾಲ. ಬಹಳ ಚಳಿ. ಈ ಚಳಿಗೆ ಮನುಷ್ಯನ ಶರೀರ ಬಿಲ್ಲಿನಂತೆ ಭಾಗುತ್ತದೆ. ಹಾಗಾಗಿ ಧನುರ್ಮಾಸ ಎಂಬ ಹೆಸರು ಬಂತು ಎಂದು ಪ್ರತಿಪಾದಿಸುವವರೂ ಇದ್ದಾರೆ.

ಧನುರ್ಮಾಸದಲ್ಲಿ ಅಥವಾ ಮಾರ್ಗಶಿರ ಮಾಸದಲ್ಲಿ ಭೂಮಿಯು ಸೂರ್ಯನಿಗೆ ಸಮೀಪವಿರುತ್ತದೆ. ಭೌಗೋಳಿಕವಾಗಿ ಭೂಮಿಯ ಉತ್ತರದ ಭಾಗವು ಸೂರ್ಯನ ವಿರುದ್ಧ ದಿಕ್ಕಿಗೆ ಮುಖಮಾಡಿರುತ್ತದೆ. ಇದೇ ಕಾರಣಕ್ಕೆ ಅದು ಸೃಷ್ಟಿಸುವ ಕೋನದಿಂದಾಗಿ ಸೂರ್ಯ ಕಿರಣಗಳು ಭೂಮಿಗೆ ತಾಗುತ್ತಿದ್ದಂತೆ ಚದುರಿಹೋಗಿ ಭೂಮಿಯ ಈ ಭಾಗವನ್ನು ಬೆಚ್ಚಗಿಡಲು ವಿಫಲವಾಗುತ್ತವೆ. ಆದ್ದರಿಂದಲೇ ಭೂಮಿಯ ಈ ಭಾಗವು ತಂಪಾಗಿರುತ್ತದೆ. ಇನ್ನು ಜನವರಿ 3ರಂದು ಭೂಮಿಯು ಸೂರ್ಯದೇವನಿಗೆ ಅತ್ಯಂತ ಸಮೀಪದಲ್ಲಿದ್ದು, ಗುರುತ್ವಾಕರ್ಷಣೆಯ ಶಕ್ತಿ ಗರಿಷ್ಠ ಮಟ್ಟದಲ್ಲಿರುವುದು ಅನುಭವಕ್ಕೆ ಬರುತ್ತದೆ ಎಂಬುದರ ಬಗ್ಗೆ ಸದ್ಗುರು ಜಗ್ಗಿ ವಾಸುದೇವ್ ಅವರು ಧನುರ್ಮಾಸದ ಕುರಿತಾದ ತಮ್ಮ ಇತ್ತೀಚಿನ ಲೇಖನದಲ್ಲಿ ವಿವರಿಸಿದ್ದಾರೆ.

ಮಾರ್ಗಶಿರ ಮಾಸ ಎಂಬ ಹೆಸರು ಹೇಗೆ ಬಂತು...

ಹಾಗಾದರೆ ಇದೇ ತಿಂಗಳನ್ನು ಮಾರ್ಗಶಿರ ಮಾಸ ಎಂದೂ ಹೇಳುತ್ತಾರಲ್ಲ ಯಾಕೆ ಎಂಬ ಪ್ರಶ್ನೆ ಎದುರಾಗಬಹುದು. ಭಾರತೀಯರು ಸೌರಮಾನದಂತೆಯೇ ಚಾಂದ್ರಮಾನದ ಕಾಲವನ್ನೂ ಅನುಸರಿಸುತ್ತಾರೆ. ಚಾಂದ್ರಮಾನದ ಲೆಕ್ಕಾಚಾರ ಪ್ರಕಾರ ಚಂದ್ರ ದೇವನು ಹುಣ್ಣಿಮೆಯಂದು ಮೃಗಶಿರಾ ನಕ್ಷತ್ರದಲ್ಲಿರುವ ಕಾರಣ ಮಾರ್ಗಶಿರ ಮಾಸ ಎಂದು ಕರೆಯಲಾಗುತ್ತದೆ.

ಚಾಂದ್ರಮಾನ ಮಾಸಗಳಲ್ಲಿ ಮಾರ್ಗಶಿರ ಮಾಸ, ಸೌರಮಾನದ ಪ್ರಕಾರ ಧನುರ್ಮಾಸ ಎಂದು ಕರೆಯಲ್ಪಡುವ ಈ 9 ನೇ ಮಾಸದಲ್ಲಿ ಉಳಿದೆಲ್ಲದಕ್ಕಿಂತಲೂ ದೇವತಾರಾಧನೆಗೇ ಅದರಲ್ಲೂ ವಿಷ್ಣುವಿನ ಆರಾಧನೆಗೇ ಹೆಚ್ಚು ಮಹತ್ವ ನೀಡಲಾಗಿದೆ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮನು, "ಸಹ ಮಾಸಾನಾಮ್ ಮಾರ್ಗಶೀರ್ಷಃ" ಎಂದು ಹೇಳಿಕೊಂಡಿದ್ದಾನೆ. ಇದರ ಅರ್ಥ ಇಷ್ಟೆ - ಮಾಸಗಳ ಪೈಕಿ ನಾನು ಮಾರ್ಗಶಿರ ಮಾಸ ಎಂದು ತನ್ನನ್ನು ತಾನು ವರ್ಣಿಸಿದ್ದಾನೆ.

ಹೀಗಿರುವಾಗ ಈ ಮಾಸಕ್ಕೆ ಇದಕ್ಕಿಂತ ಹೆಚ್ಚಿನ ಮಹತ್ವ ಅಥವ ವಿಶೇಷ ಬೇರೆ ಏನಿದೆ?, ಸಾಕ್ಷಾತ್ ಪರಮಾತ್ಮನೇ ಈ ಮಾಸದಲ್ಲಿರುವಾಗ, ಈ ಅವಧಿಯಲ್ಲಿ ಯಾವುದೇ ವ್ರತಾನುಷ್ಠಾನ ಮಾಡಿದರೂ, ಪೂಜೆಯನ್ನು ನೆರವೇರಿಸಿದರೂ, ಇಷ್ಟಾರ್ಥಗಳನ್ನು ನೆನೆದು ನಾವು ಭಗವಂತನನ್ನು ಧ್ಯಾನಿಸಿದರೂ ಅದು ನೇರವಾಗಿ ಭಗವಂತನಿಗೆ ಸಮರ್ಪಣೆಯಾಗುತ್ತದೆ ಎನ್ನುತ್ತಾರೆ ಆಸ್ತಿಕ ಪ್ರಜ್ಞೆಯುಳ್ಳ ಹಿರಿಯರು.

ಶೂನ್ಯ ಮಾಸ ವಾಡಿಕೆಯಲ್ಲಿ ಬಂದ ಹೆಸರು, ವಾಸ್ತವದಲ್ಲಿದು ಶ್ರೇಷ್ಠ ಮಾಸ...

ಧನುರ್ಮಾಸ ಅಥವಾ ಮಾರ್ಗಶಿರ ಮಾಸದ ಅವಧಿಯಲ್ಲಿ ಹಿಂದುಗಳು ಯಾವುದೇ ವಿವಾಹ ಮತ್ತು ಇತರೆ ಶುಭ ಕಾರ್ಯಗಳನ್ನು ಆಯೋಜಿಸುವುದಿಲ್ಲ. ಇದು ದೇವತಾರಾಧನೆಗೆ ಮೀಸಲಿಟ್ಟ ತಿಂಗಳಾಗಿದ್ದು, ಪೂಜೆ, ಪುನಸ್ಕಾರಗಳಷ್ಟೇ ನಡೆಯುತ್ತವೆ. ಬಹುತೇಕರು ಬ್ರಾಹ್ಮಿ ಮುಹೂರ್ತದಲ್ಲಿ ದೇವಸ್ಥಾನಗಳಿಗೆ ತೆರಳಿ ಅಲ್ಲಿ ದೇವರ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಸಾಮಾನ್ಯವಾಗಿ ಶುಭ ಕಾರ್ಯ ನಡೆಯದೇ ಇರುವ ತಿಂಗಳು ಎಂದರೆ ಶೂನ್ಯ ಮಾಸ ಎಂದು ಹೇಳುವ ಸಂಪ್ರದಾಯ ರೂಢಿಗೆ ಬಂದಿದೆ. ಇದೂ ಅಷ್ಟೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.