ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kuja Dosha: ನಿಮ್ಮ ಜಾತಕದಲ್ಲಿ ಕುಜ ದೋಷ ಇದ್ಯಾ, ಬೆಂಗಳೂರಿನಲ್ಲಿದೆ ಅಂಗಾರಕ ದೋಷದಿಂದ ಮುಕ್ತಿ ನೀಡುವ ದೇವಾಲಯ; ಇಲ್ಲಿದೆ ಮಾಹಿತಿ

Kuja Dosha: ನಿಮ್ಮ ಜಾತಕದಲ್ಲಿ ಕುಜ ದೋಷ ಇದ್ಯಾ, ಬೆಂಗಳೂರಿನಲ್ಲಿದೆ ಅಂಗಾರಕ ದೋಷದಿಂದ ಮುಕ್ತಿ ನೀಡುವ ದೇವಾಲಯ; ಇಲ್ಲಿದೆ ಮಾಹಿತಿ

ಶುದ್ಧ ಷಷ್ಠಿಯಂದು ಇಲ್ಲಿ ನಡೆಸುವ ಷಷ್ಠಿ ಪೂಜೆ ನಿಜಕ್ಕೂ ಅತ್ಯುತ್ತಮ ಫಲಿತಾಂಶ ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ದಂಡಪಾಣಿ ಸುಬ್ರಹ್ಮಣ್ಯಸ್ವಾಮಿಗೆ ನಮಸ್ಕರಿಸಿ ಮುಂದೆ ನಡೆದಲ್ಲಿ ಶಿಲೆಯ ಮೇಲೆ ಉಧ್ಬವ ಆಗಿರುವ ಶ್ರೀ ಉಧ್ಬವ ಆದಿಶೇಷ ದೇವಾಲಯ ಕಾಣುತ್ತದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (PC: Facebook)

ಸಾಮಾನ್ಯವಾಗಿ ಜನರು ನಾಗದೋಷ , ಕಾಳ ಸರ್ಪದೋಷ ಮತ್ತು ಕುಜದೋಷದ ಬಗ್ಗೆ ಹೆಚ್ಚು ಭಯ ಪಡುತ್ತಾರೆ. ಇದರ ಬಗ್ಗೆ ಹಲವರಿಗೆ ತಪ್ಪು ಕಲ್ಪನೆ ಇದೆ. ಈ ಮೇಲಿನ ದೋಷಗಳು ಇದ್ದಲ್ಲಿ ಮಕ್ಕಳಿಗೆ ತೊಂದರೆ, ಪತಿ ಅಥವಾ ಪತ್ನಿಗೆ ತೊಂದರೆ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೋರುತ್ತವೆ.

ಕುಜ ದೋಷಗಳಲ್ಲಿ ಅನೇಕ ವಿಧಗಳಿವೆ. ಇದನ್ನು ಅಂಗಾರಕ ದೋಷ, ಮಾಂಗಲ್ಯ ದೋಷ ಎಂದೂ ಕರೆಯುತ್ತಾರೆ. ಈ ದೋಷಕ್ಕೆ ಜನ್ಮಕುಂಡಲಿಯಲ್ಲೇ ಪರಿಹಾರ ದೊರೆತಿರುತ್ತದೆ. ಆದರೂ ನಾವೆಲ್ಲಾ ಆತಂಕಕ್ಕೆ ಒಳಗಾಗುತ್ತೇವೆ. ಕುಜ ದೋಷದಿಂದ ಮುಕ್ತಿ ಪಡೆಯಲು ನೀವು ದೂರ ಎಲ್ಲೋ ಹೋಗಬೇಕಿಲ್ಲ. ಬೆಂಗಳೂರಿನಲ್ಲೇ ದೇವಸ್ಥಾನವೊಂದಿದೆ. ಈ ದೇವಾಲಯ ಇರುವುದು ಬೆಂಗಳೂರು ನಗರದ ಹೃದಯ ಭಾಗದ ಹನುಮಂತ ನಗರದಲ್ಲಿ.

ಬೆಂಗಳೂರಿನ ಹನುಮಂತನಗರದಲ್ಲಿದೆ ಕುಮಾರಸ್ವಾಮಿ ದೇವಸ್ಥಾನ

ಹನುಮಂತ ನಗರದ 50 ಅಡಿ ರಸ್ತೆಯಲ್ಲಿ ಬಸ್‌ನಲ್ಲ ಬರುವವರು ದೇವಸ್ಥಾನದ ಬಸ್ ಸ್ಟಾಪ್ ಎಂದು ಟಿಕೆಟ್‌ ಪಡೆದರೆ ಸಾಕು. ಈ ದೇವಸ್ಥಾನದ ಕೂಗಳತೆ ದೂರದಲ್ಲಿ ಬೆಟ್ಟದ ಮೇಲೆ ಶ್ರೀ ಕುಮಾರಸ್ವಾಮಿ ದೇವಾಲಯ ಇದೆ. ಮೆಟ್ಟಿಲು ಏರುವಾಗ ಬಲ ಭಾಗದಲ್ಲಿ ಗಣಪತಿ ದೇವಸ್ಥಾನವಿದೆ. ಇನ್ನೂ ಮುಂದುವರೆದಲ್ಲಿ ಎಡ ಭಾಗದಲ್ಲಿ ದಂಡಪಾಣಿ ಸುಬ್ರಹ್ಮಣ್ಯ ಸ್ವಾಮಿಯ ದೇವಾಲಯವಿದೆ. ಪೂರ್ಣ ಮೇಲ್ಭಾಗ ತಲುಪಿದರೆ ಶಿವ ಪಾರ್ವತಿ, ಕುಮಾರಸ್ವಾಮಿಯ ದೇವಾಲಯಗಳಿವೆ. ಅಲ್ಲಿನ ಪೂಜೆ ನೋಡಲು ಎರಡು ಕಣ್ಣುಗಳು ಸಾಲದು. ಕುಮಾರಸ್ವಾಮಿಗೆ ಅಭಿಷೇಕ ಮಾಡಿದ ಹಾಲನ್ನು ಬರುವ ಭಕ್ತಾಧಿಗಳಿಗೆ ಪ್ರಸಾದ ರೂಪದಲ್ಲಿ ಹಂಚುವುದು ಇಲ್ಲಿಯ ವಾಡಿಕೆ. ಈ ತೀರ್ಥವನ್ನು ಸೇವಿಸಿದಲ್ಲಿ ಅನೇಕ ರೋಗ ರುಜಿನಗಳು ಮರೆಯಾಗುತ್ತವೆ ಎಂಬ ನಂಬಿಕೆ ಇದೆ.

ದಂಡಪಾಣಿ ಸುಬ್ರಹ್ಮಣ್ಯಸ್ವಾಮಿಗೆ ನಮಸ್ಕರಿಸಿ ಮುಂದೆ ನಡೆದಲ್ಲಿ ಶಿಲೆಯ ಮೇಲೆ ಉಧ್ಬವ ಆಗಿರುವ ಶ್ರೀ ಉಧ್ಬವ ಆದಿಶೇಷ ದೇವಾಲಯ ಕಾಣುತ್ತದೆ. ಇಲ್ಲಿಗೆ ಭೇಟಿ ನೀಡಿದ ಅನೇಕ ಜನರಿಗೆ ಒಳ್ಳೆಯದಾಗಿದೆ. ಆಹಾರ ಸೇವಿಸದ ಮಕ್ಕಳು ಹೊಟ್ಟೆ ತುಂಬಾ ಊಟ ಮಾಡುತ್ತವೆ. ಜಾತಕದಲ್ಲಿ ರವಿ, ಕುಜ, ರಾಹು ಮತ್ತು ಕೇತು ಗ್ರಹಗಳಿಂದ ಜನ್ಮ ಕುಂಡಲಿಯಲ್ಲಿನ ದೋಷವು ಸಂಪೂರ್ಣವಾಗಿ ಪರಿಹಾರವಾಗುತ್ತದೆ.

ಶುದ್ಧ ಷಷ್ಠಿಯಂದು ಇಲ್ಲಿ ನಡೆಸುವ ಷಷ್ಠಿ ಪೂಜೆ ನಿಜಕ್ಕೂ ಅತ್ಯುತ್ತಮ ಫಲಿತಾಂಶ ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇದೇ ದೇವಾಲಯದಲ್ಲಿ ಎಲ್ಲಿಯಾದರೂ ಕುಳಿತು ಸರ್ಪ ಸೂಕ್ತವನ್ನು ಪಠಿಸಿದರೆ, ಉತ್ತಮ ಫಲಗಳನ್ನು ಪಡೆಯಬಹುದು.