ಹೋಟೆಲ್-ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ನಿಷೇಧಿಸಿದ ಅಸ್ಸಾಂ ಬಿಜೆಪಿ ಸರ್ಕಾರ; ಕಾಂಗ್ರೆಸ್‌ಗೆ ಸವಾಲ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹೋಟೆಲ್-ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ನಿಷೇಧಿಸಿದ ಅಸ್ಸಾಂ ಬಿಜೆಪಿ ಸರ್ಕಾರ; ಕಾಂಗ್ರೆಸ್‌ಗೆ ಸವಾಲ್

ಹೋಟೆಲ್-ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ನಿಷೇಧಿಸಿದ ಅಸ್ಸಾಂ ಬಿಜೆಪಿ ಸರ್ಕಾರ; ಕಾಂಗ್ರೆಸ್‌ಗೆ ಸವಾಲ್

“ಅಸ್ಸಾಂ ರಾಜ್ಯದ ಎಲ್ಲಾ ರೆಸ್ಟೋರೆಂಟ್‌, ಹೋಟೆಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬೀಫ್‌ ಸೇವನೆ ನಿಷೇಧಿಸಲಾಗಿದೆ ಎಂದು ಅಸ್ಸಾಂ ಸಿಎಂ ಹಾಗೂ ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.

ಹೋಟೆಲ್-ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ನಿಷೇಧಿಸಿದ ಅಸ್ಸಾಂ ಬಿಜೆಪಿ ಸರ್ಕಾರ
ಹೋಟೆಲ್-ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ನಿಷೇಧಿಸಿದ ಅಸ್ಸಾಂ ಬಿಜೆಪಿ ಸರ್ಕಾರ (PTI file photo)

ಅಸ್ಸಾಂ ರಾಜ್ಯ ಬಿಜೆಪಿ ಸರ್ಕಾರ ಅಚ್ಚರಿಯ ನಿಯಮ ರೂಪಿಸಿದೆ. ರಾಜ್ಯದ ಎಲ್ಲಾ ರೆಸ್ಟೋರೆಂಟ್‌, ಹೋಟೆಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸದ ಅಡುಗೆ ಸರ್ವ್‌ ಮಾಡುವುದು ಮತ್ತು ಸೇವನೆಯನ್ನು ನಿಷೇಧಿಸಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬುಧವಾರ (ಡಿಸೆಂಬರ್‌ 4) ಈ ಕುರಿತ ಸರ್ಕಾರದ ನಿರ್ಣಯ ಪ್ರಕಟಿಸಿದ್ದಾರೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡ ಬಳಿಕ ನಿಷೇಧ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.

“ರಾಜ್ಯದ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸದ ಆಹಾರ ಬಡಿಸುವುದು ಮತ್ತು ಸೇವನೆಯನ್ನು ನಿಷೇಧಿಸಲು ನಾವು ನಿರ್ಧರಿಸಿದ್ದೇವೆ,” ಎಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ಹೇಳಿದರು.

ಗೋಮಾಂಸ ಸೇವನೆ ಕುರಿತು ಈಗಾಗಲೇ ರಾಜ್ಯದಲ್ಲಿ ಇರುವ ಕಾನೂನು ಬಲವಾಗಿದೆ. ಆದರೆ ಈವರೆಗೆ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಧಾರ್ಮಿಕ ಅಥವಾ ಸಾಮಾಜಿಕ ಕೂಟಗಳಲ್ಲಿ ಗೋಮಾಂಸ ಸೇವನೆಗೆ ಯಾವುದೇ ನಿಷೇಧ ಇರಲಿಲ್ಲ ಎಂದು ಶರ್ಮಾ ಹೇಳಿದರು.

ಇಂದಿನಿಂದ ಅಸ್ಸಾಂನ ಯಾವುದೇ ರೆಸ್ಟೋರೆಂಟ್ ಅಥವಾ ಹೋಟೆಲ್‌ಗಳಲ್ಲಿ ಗೋಮಾಂಸ ನೀಡಲಾಗುವುದಿಲ್ಲ. ಇದೇ ವೇಳೆ ಯಾವುದೇ ಸಾರ್ವಜನಿಕ ಸಮಾರಂಭ ಅಥವಾ ಸಾರ್ವಜನಿಕ ಸ್ಥಳದಲ್ಲಿಯೂ ಬೀಫ್‌ ಅಡುಗೆ ಬಡಿಸುವಂತಿಲ್ಲ ಎಂದು ಸರ್ಕಾರ ನಿರ್ಧರಿಸಿದೆ. ಹೀಗಾಗಿ ಇಂದಿನಿಂದಲೇ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗೋಮಾಂಸ ಸೇವನೆ ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಸಂಪೂರ್ಣ ರಾಜ್ಯಕ್ಕೆ ವಿಸ್ತರಣೆ

ಈ ಮೊದಲು ದೇವಾಲಯಗಳ ಬಳಿ ಗೋಮಾಂಸ ತಿನ್ನುವುದನ್ನು ನಿಲ್ಲಿಸಲು ನಿರ್ಧರಿಸಿದ್ದೆವು. ಆದರೆ ಈಗ ನಾವು ಅದನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದ್ದೇವೆ. ಇನ್ನು ಮುಂದೆ ಯಾವುದೇ ಸಮುದಾಯ ಸ್ಥಳ, ಸಾರ್ವಜನಿಕ ಸ್ಥಳ, ಹೋಟೆಲ್ ಅಥವಾ ರೆಸ್ಟೋರೆಂಟ್‌ನಲ್ಲಿ ಬೀಫ್‌ ತಿನ್ನಲು ಸಾಧ್ಯವಾಗುವುದಿಲ್ಲ" ಎಂದು ಹಿಮಂತ ಬಿಸ್ವಾ ಶರ್ಮಾ ವಿವರಿಸಿದ್ದಾರೆ.

ಕಾಂಗ್ರೆಸ್‌ನವರು ಪಾಕಿಸ್ತಾನಕ್ಕೆ ಹೋಗಲಿ

ಈ ನಡುವೆ ಅಸ್ಸಾಂ ಸಚಿವ ಪಿಜುಶ್ ಹಜಾರಿಕಾ ಅವರು, ಕಾಂಗ್ರೆಸ್ ಪಕ್ಷವು ಒಂದಾ ಗೋಮಾಂಸ ನಿಷೇಧದ ನಿರ್ಧಾರವನ್ನು ಸ್ವಾಗತಿಸಬೇಕು. ಇಲ್ಲವಾದಲ್ಲಿ ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದ್ದಾರೆ. "ಕಾಂಗ್ರೆಸಿಗರು ಗೋಮಾಂಸ ನಿಷೇಧವನ್ನು ಸ್ವಾಗತಿಸಲಿ ಅಥವಾ ಪಾಕಿಸ್ತಾನಕ್ಕೆ ಹೋಗಿ ನೆಲೆಸಲಿ ಎಂದು ಸವಾಲು ಹಾಕುತ್ತೇನೆ" ಎಂದು ಅವರು ಹೇಳಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.