ಪ್ರಶಾಂತ್‍ ನೀಲ್‍ ಷರತ್ತಿಗೆ ಒಪ್ಪಿ ರುಕ್ಮಿಣಿ ವಸಂತ್‍ ತಪ್ಪು ಮಾಡುತ್ತಿದ್ದಾರಾ? ಅಭಿಮಾನಿಗಳಿಗೆ ಯಾಕೆ ಬೇಸರ
ಕನ್ನಡ ಸುದ್ದಿ  /  ಮನರಂಜನೆ  /  ಪ್ರಶಾಂತ್‍ ನೀಲ್‍ ಷರತ್ತಿಗೆ ಒಪ್ಪಿ ರುಕ್ಮಿಣಿ ವಸಂತ್‍ ತಪ್ಪು ಮಾಡುತ್ತಿದ್ದಾರಾ? ಅಭಿಮಾನಿಗಳಿಗೆ ಯಾಕೆ ಬೇಸರ

ಪ್ರಶಾಂತ್‍ ನೀಲ್‍ ಷರತ್ತಿಗೆ ಒಪ್ಪಿ ರುಕ್ಮಿಣಿ ವಸಂತ್‍ ತಪ್ಪು ಮಾಡುತ್ತಿದ್ದಾರಾ? ಅಭಿಮಾನಿಗಳಿಗೆ ಯಾಕೆ ಬೇಸರ

ಜ್ಯೂನಿಯರ್ NTR ಮತ್ತು ಪ್ರಶಾಂತ್ ನೀಲ್‍ ಕಾಂಬಿನೇಷನ್‌ನ ‘ಡ್ರಾಗನ್’ ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ್‍ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇಂಥದ್ದೊಂದು ದೊಡ್ಡ ಚಿತ್ರದಲ್ಲಿ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರವಾದರೂ, ಇದು ಅವರಿಗೆ ದೊಡ್ಡ ನಷ್ಟ ಎಂಬುದು ರುಕ್ಮಿಣಿ ಅಭಿಮಾನಿಗಳ ತರ್ಕ. (ವರದಿ: ಚೇತನ್‌ ನಾಡಿಗೇರ್‌)

 ರುಕ್ಮಿಣಿ ವಸಂತ್‍ ತಪ್ಪು ಮಾಡುತ್ತಿದ್ದಾರಾ? ಅಭಿಮಾನಿಗಳಿಗೆ ಯಾಕೆ ಬೇಸರ
ರುಕ್ಮಿಣಿ ವಸಂತ್‍ ತಪ್ಪು ಮಾಡುತ್ತಿದ್ದಾರಾ? ಅಭಿಮಾನಿಗಳಿಗೆ ಯಾಕೆ ಬೇಸರ

ಬೆಂಗಳೂರು: ರುಕ್ಮಿಣಿ ಅಭಿನಯದ ‘ಬಘೀರ’ ಮತ್ತು ‘ಭೈರತಿ ರಣಗಲ್‍’ ಎರಡೂ ಚಿತ್ರಗಳು 15 ದಿನಗಳ ಅಂತರದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿವೆ. ಎರಡೂ ಚಿತ್ರಗಳು 15 ಕೋಟಿ ರೂ. ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಹೀಗೆ ರುಕ್ಮಿಣಿ ವಸಂತ್‍, ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದರೆ, ಅವರು ವೃತ್ತಿಜೀವನದಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದಾರೆ ಎಂಬ ಬೇಸರವನ್ನು ಅವರ ಅಭಿಮಾನಿಗಳು ಹೊರಹಾಕುತ್ತಿದ್ದಾರೆ.

ರುಕ್ಮಿಣಿ ವಸಂತ್, ಕನ್ನಡದ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳದಿದ್ದರೂ, ಒಂದಿಷ್ಟು ಪರಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿಜಯ್ ಸೇತುಪತಿ ಅಭಿನಯದ ‘ಏಸ್’ ಮತ್ತು ಶಿವಕಾರ್ತಿಕೇಯನ್‍ ಅಭಿನಯದ ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ, ಅವರು ಪ್ರಶಾಂತ್‍ ನೀಲ್‍ ನಿರ್ದೇಶನದ ಮತ್ತು ಜ್ಯೂನಿಯರ್ NTR ಅಭಿನಯದ ‘ಡ್ರಾಗನ್‍’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ಸುದ್ದಿ ಇದೆ.

ಜ್ಯೂನಿಯರ್ NTR ಮತ್ತು ಪ್ರಶಾಂತ್ ನೀಲ್‍, ‘ಡ್ರಾಗನ್’ ಎಂಬ ಚಿತ್ರ ಮಾಡುತ್ತಿರುವುದು ಎರಡು ವರ್ಷಗಳಿಂದ ಕೇಳಿಬರುತ್ತಿರುವ ವಿಷಯ. ಈ ಚಿತ್ರಕ್ಕೆ ಆಗಸ್ಟ್ 09ರಂದು ಹೈದರಾಬಾದ್‍ನಲ್ಲಿ ಮುಹೂರ್ತವೂ ಆಗಿದೆ. ಚಿತ್ರದ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಿದೆ. ಮುಂದಿನ ವರ್ಷದ ಆರಂದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಜ್ಯೂನಿಯರ್‍ NTRಗೆ ನಾಯಕಿಯಾಗಿ ರುಕ್ಮಿಣಿ ವಸಂತ್‍ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಕನ್ನಡದ ನಟಿಯೊಬ್ಬರಿಗೆ ಇಂಥದ್ದೊಂದು ದೊಡ್ಡ ಚಿತ್ರದಲ್ಲಿ ಅವಕಾಶ ಸಿಗುತ್ತಿರುವುದು ಖುಷಿಯ ವಿಚಾರವಾದರೂ, ಇದು ಅವರಿಗೆ ದೊಡ್ಡ ನಷ್ಟ ಎಂಬುದು ರುಕ್ಮಿಣಿ ಅಭಿಮಾನಿಗಳ ತರ್ಕ.

ಅದಕ್ಕೆ ಕಾರಣವೂ ಇದೆ. ‘ಡ್ರಾಗನ್‍’ ಚಿತ್ರದಲ್ಲಿ ನಟಿಸುವುದಕ್ಕೆ ಪ್ರಶಾಂತ್‍ ನೀಲ್‍ ಒಂದು ಪ್ರಮುಖ ಷರತ್ತು ಹಾಕಿದ್ದಾರಂತೆ. ಅದೇನೆಂದರೆ, ಚಿತ್ರವನ್ನು ಒಪ್ಪಕೊಂಡ ನಂತರ ರುಕ್ಮಿಣಿ ಇನ್ನೊಂದು ವರ್ಷ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳಬಾರದು, ಕರೆದಾಗ ಚಿತ್ರೀಕರಣಕ್ಕೆ ಬರಬೇಕು ಎಂದು ಪ್ರಶಾಂತ್‍ ನೀಲ್‍ ಹೇಳಿದ್ದಾರಂತೆ. ಇದಕ್ಕೆ ರುಕ್ಮಿಣಿ ಬಹುತೇಕ ಒಪ್ಪಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರೂ, ಅವರ ನಿರ್ಧಾರದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಬೇಸರವಿದೆ.

ರುಕ್ಮಿಣಿ ಈ ಚಿತ್ರದಲ್ಲಿ ನಟಿಸುವುದರಿಂದ ತಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂಬುದು ಅವರ ಅಭಿಮಾನಿಗಳಲ್ಲಿರುವ ಬೇಸರ. ರುಕ್ಮಿಣಿ ಪ್ರತಿಭಾವಂತ ನಟಿ. ಅವರು ‘ಡ್ರಾಗನ್‍’ ಒಪ್ಪಿಕೊಂಡರೆ ಬೇರೆ ಚಿತ್ರಗಳಲ್ಲಿ ನಟಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಇದರಿಂದ ಅವರು ಒಂದಿಷ್ಟು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಹೋಗಲಿ, ‘ಡ್ರಾಗನ್‍’ ಅಂದುಕೊಂಡ ಸಮಯಕ್ಕೆ ಮುಗಿಯುತ್ತದಾ ಎಂದರೆ ಅದು ಸಹ ಸಂಶಯ. ಪ್ರಶಾಂತ್‍ ನೀಲ್‍ ನಿರ್ದೇಶನದ ಚಿತ್ರಗಳು ಅಂದುಕೊಂಡ ಸಮಯಕ್ಕೆ ಮುಗಿದು, ಬಿಡುಗಡೆಯಾಗಿದ್ದು ಇಲ್ಲ. ಹಾಗಾಗಿ, ಆ ಚಿತ್ರವನ್ನು ಒಪ್ಪಿಕೊಂಡರೆ ಬೇರೇನೂ ಮಾಡಲು ಸಾಧ್ಯವಿಲ್ಲ ಎಂಬುದು ಅಭಿಮಾನಿಗಳ ಕೊರಗು. ಇನ್ನು, ಚಿತ್ರದಲ್ಲಿ ರುಕ್ಮಿಣಿ ಪಾತ್ರ ಚೆನ್ನಾಗಿದ್ದರೂ, ಇದು ಜ್ಯೂನಿಯರ್ NTR ಅವರಿಗೇ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ರುಕ್ಮಿಣಿ ದೊಡ್ಡ ಚಿತ್ರದ ಭಾಗಿಯಾದರೂ ಸೀಮಿತ ಅವಕಾಶವಿರುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಈ ಅಭಿಪ್ರಾಯಗಳನ್ನು ಅಭಿಮಾನಿಗಳು ಸೋ಼ಷಿಯಲ್‍ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಹೀಗಿರುವಾಗ ರುಕ್ಮಿಣಿ ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ.

  • ವರದಿ: ಚೇತನ್‌ ನಾಡಿಗೇರ್‌

Whats_app_banner