Bhagavad Gita: ಹಿಂದಿನ ಕರ್ಮಗಳ ಫಲವಾಗಿ ಮನುಷ್ಯ ಬೇರೆ ಬೇರೆ ಸ್ಥಾನಗಳನ್ನು ಪಡೆಯುತ್ತಾನೆ; ಗೀತೆಯ ಅರ್ಥ ತಿಳಿಯಿರಿ
Bhagavad Gita Updesh: ಹಿಂದಿನ ಕರ್ಮಗಳ ಫಲವಾಗಿ ಮನುಷ್ಯ ಬೇರೆ ಬೇರೆ ಸ್ಥಾನಗಳನ್ನು ಪಡೆಯುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 7 ಮತ್ತು 8ನೇ ಶ್ಲೋಕದಲ್ಲಿ ಓದಿ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 7
ಸರ್ವಭೂತಾನಿ ಕೌನ್ತೇಯ ಪ್ರಕೃತಿಂ ಯಾನ್ತಿ ಮಾಮಿಕಾಮ್ |
ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್ ||7||
ಅನುವಾದ: ಕುಂತಿಯ ಮಗನಾದ ಅರ್ಜುನನೆ, ಕಲ್ಪಾಂತ್ಯದಲ್ಲಿ ಎಲ್ಲ ಐಹಿಕ ಅಭಿವ್ಯಕ್ತಿಗಳೂ ನನ್ನ ಪ್ರಕೃತಿಯಲ್ಲಿ ಲೀನವಾಗುತ್ತವೆ ಮತ್ತು ಇನ್ನೊಂದು ಕಲ್ಪವು ಪ್ರಾರಂಭವಾದಾಗ ನನ್ನ ಶಕ್ತಿಯಿಂದ ಮತ್ತೆ ಅವುಗಳನ್ನು ಸೃಷ್ಟಿಸುತ್ತೇನೆ.
ಭಾವಾರ್ಥ: ಈ ಐಹಿಕ ವಿಶ್ವದ ಅಭಿವ್ಯಕ್ತಿಯ ಸೃಷ್ಟಿ. ಪಾಲನೆ ಮತ್ತು ನಾಶಗಳು ದೇವೋತ್ತಮ ಪರಮ ಪುರುಷನ ಪರಮ ಸಂಕಲ್ಪವನ್ನೇ ಸಂಪೂರ್ಣವಾಗಿ ಅವಲಂಬಿಸಿವೆ. ಕಲ್ಪಾಂತ್ಯದಲ್ಲಿ ಎಂದರೆ ಬ್ರಹ್ಮನು ಮರಣ ಹೊಂದಿದಾಗ. ಬ್ರಹ್ಮನು ಒಂದು ನೂರು ವರ್ಷಗಳ ಕಾಲ ಬದುಕಿರುತ್ತಾನೆ ಮತ್ತು ಅವನ ಒಂದು ಹಗಲು ನಮ್ಮ ಭೂಲೋಕದ 4,30,00,00,000 ವರ್ಷಗಳ ಸಮಾನ ಎಂದು ಲೆಕ್ಕಹಾಕಿದ್ದಾರೆ. ಅವನ ರಾತ್ರಿಯ ಅವಧಿಯೂ ಅಷ್ಟೆ. ಅವನ ತಿಂಗಳಲ್ಲಿ ಇಂತಹ 30 ದಿನಗಳಿವೆ. ಅವನ ವರ್ಷದಲ್ಲಿ ಹನ್ನೆರಡು ತಿಗಳು ಇವೆ.
ಇಂತಹ ಒಂದು ನೂರು ವರ್ಷಗಳ ಅನಂತರ ಮಹಾಪ್ರಳಯವಾಗುತ್ತದೆ. ಹೀಗೆಂದರೆ ಪರಮ ಪ್ರಭುವು ಪ್ರಕಟ ಮಾಡಿದ ಶಕ್ತಿಯು ಮತ್ತೆ ಅವನಲ್ಲೆ ಕೊನೆಗೊಂಡಿತು ಎಂದರ್ಥ. ಅನಂತರ ಮತ್ತೆ ವಿಶ್ವದ ರೂಪ ಕೊಡುವುದು ಅಗತ್ಯವಾದಾಗ ಅದು ಆತನ ಸಂಕಲ್ಪದಿಂದಾಗುತ್ತದೆ. ಬಹು ಸ್ಯಾಮ್ ಎಂದರೆ (ಛಾಂದೋಗ್ಯ ಉಪನಿಷತ್ತು 6.2.3) ಆತನು ಈ ಐಹಿಕ ಚೈತನ್ಯದಲ್ಲಿ ವಿಸ್ತಾರಗೊಳ್ಳುತ್ತಾನೆ. ಇಡೀ ವಿಶ್ವದ ಅಭಿವ್ಯಕ್ತಿಯು ಮತ್ತೆ ಆಗುತ್ತದೆ.
9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 8
ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ |
ಭೂತಗ್ರಾಮಮಿಮಂ ಕೃತ್ಸ್ನಮವಶಂ ಪ್ರಕೃತೇರ್ವಶಾತ್ ||8||
ಅನುವಾದ: ಇಡೀ ವಿಶ್ವ ವ್ಯವಸ್ಥೆಯು ನನ್ನ ಅಧೀನವಾಗಿದೆ. ನನ್ನ ಸಂಕಲ್ಪದಿಂದ ಅದು ಮತ್ತೆ ಮತ್ತೆ ರೂಪತಾಳುತ್ತದೆ ಮತ್ತು ನನ್ನ ಸಂಕಲ್ಪದಿಂದ ಕೊನೆಗೆ ಅದು ನಾಶವಾಗುತ್ತದೆ.
ಭಾವಾರ್ಥ: ಈ ಭೌತಿಕ ಜಗತ್ತು ದೇವೋತ್ತಮ ಪರಮ ಪುರುಷನ ಕೆಳಮಟ್ಟದ ಶಕ್ತಿಯ ಅಭಿವ್ಯಕ್ತಿ. ಇದನ್ನು ಆಗಲೇ ಅನೇಕ ಬಾರಿ ವಿವರಿಸಿದೆ. ಸೃಷ್ಟಿಯ ಕಾಲದಲ್ಲಿ ಐಹಿಕ ಶಕ್ತಿಯು ಮಹತ್‌ತತ್ತ್ವವಾಗಿ ಬಿಡುಗಡೆ ಹೊಂದುತ್ತದೆ. ಪ್ರಭುವು ತನ್ನ ಮೊದಲ ಪುರುಷಾವತಾರವಾದ ವಿಷ್ಣುವಾಗಿ ಇದನ್ನು ಪ್ರವೇಶಿಸುತ್ತಾನೆ. ಆತನು ಕಾರಣ ಸಮುದ್ರದಲ್ಲಿ ಮಲಗಿ ಗರ್ಭೋದಕಶಾಯೀ ವಿಷ್ಣುವಾಗಿ ಪ್ರತಿಯೊಂದು ವಿಶ್ವವೂ ಸೃಷ್ಟಿಯಾಗುತ್ತದೆ. ಮುಂದೆ ಅವನು ಕ್ಷೀರೋದಕಶಾಯೀ ವಿಷ್ಣುವಾಗಿ ಪ್ರಕಟಗೊಳ್ಳುತ್ತಾನೆ. ಈ ವಿಷ್ಣುವು ಪರಮಾಣುವರೆಗೆ ಎಲ್ಲವನ್ನೂ ಪ್ರವೇಶಿಸುತ್ತಾನೆ. ಈ ವಿಷಯವನ್ನು ಇಲ್ಲಿ ವಿವರಿಸಿದೆ. ಆತನು ಎಲ್ಲವನ್ನೂ ಪ್ರವೇಶಿಸುತ್ತಾನೆ.
ಜೀವಿಗಳ ಮಾತು ಹೇಳುವುದಾದರೆ ಅವರು ಈ ಐಹಿಕ ಪ್ರಕೃತಿಯ ಗರ್ಭದಲ್ಲಿ ಸೇರುತ್ತಾರೆ. ತಮ್ಮ ಹಿಂದಿನ ಕರ್ಮಗಳ ಫಲವಾಗಿ ಬೇರೆ ಬೇರೆ ಸ್ಥಾನಗಳನ್ನು ಪಡೆಯುತ್ತಾರೆ. ಹೀಗೆ ಐಹಿಕ ಜಗತ್ತಿನ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಬೇರೆ ಬೇರೆ ಜೀವಿವರ್ಗಗಳ ಚಟುವಟಿಕೆಗಳು ಈ ರೀತಿಯಲ್ಲಿ ಸೃಷ್ಟಿಯ ಕ್ಷಣದಿಂದಲೇ ಪ್ರಾರಂಭವಾಗುತ್ತವೆ. ಎಲ್ಲವೂ ವಿಕಸನವಾಗುತ್ತವೆ ಎಂದೇನೂ ಅಲ್ಲ. ಬೇರೆ ಬೇರೆ ಜೀವವರ್ಗಗಳು ವಿಶ್ವದೊಡನೆಯೇ ಕೂಡಲೇ ಸೃಷ್ಟಿಯಾಗುತ್ತವೆ. ಮನುಷ್ಯರು, ಪ್ರಾಣಿಗಳು, ಪಕ್ಷಿಗಳು-ಎಲ್ಲ ಒಟ್ಟಿಗೆ ಸೃಷ್ಟಿಯಾಗುತ್ತವೆ. ಏಕೆಂದರೆ ಜೀವಿಗಳು ಹಿಂದಿನ ವಿನಾಶದ ಹೊತ್ತಿನಲ್ಲಿಟ್ಟುಕೊಂಡಿದ್ದ ಬಯಕೆಗಳು ಮತ್ತೆ ಪ್ರಕಟವಾಗುತ್ತವೆ.
ಅವಶಮ್ ಎನ್ನುವ ಪದವು ಜೀವಿಗಳು ಈ ಪ್ರಕ್ರಿಯೆಯಲ್ಲಿ ಏನನ್ನೂ ಮಾಡುವದಿಲ್ಲ ಎನ್ನುವುದನ್ನು ಸೂಚಿಸುತ್ತದೆ. ಹಿಂದಿನ ಸೃಷ್ಟಿಯಲ್ಲಿ ತಮ್ಮ ಹಿಂದಿನ ಜನ್ಮದಲ್ಲಿ ಅವರಿದ್ದ ಸ್ಥಿತಿಯು ಮತ್ತೆ ಪ್ರಕಟವಾಗುತ್ತದೆ ಅಷ್ಟೆ. ಇದು ಅವನ ಇಚ್ಛೆಯಂತೆಯೇ ನಡೆಯುತ್ತದೆ. ಇದು ಭಗವಂತನ ಊಹಾತೀತ ಶಕ್ತಿ. ಬೇರೆ ಬೇರೆ ಜೀವವರ್ಗಗಳನ್ನು ಸೃಷ್ಟಿಸಿದ ಮೇಲೆ ಆತನಿಗೂ ಅವುಗಳಿಗೂ ಯಾವುದೇ ಸಂಬಂಧವಿಲ್ಲ. ವಿವಿಧ ಜೀವಿಗಳ ಪ್ರವೃತ್ತಿಗಳಿಗೆ ಅವಕಾಶ ಮಾಡಿಕೊಡಲು ಸೃಷ್ಟಿಯು ನಡೆಯುತ್ತದೆ. ಆದುದರಿಂದ ಭಗವಂತನು ಅದರಲ್ಲಿ ಸಿಕ್ಕಿಕೊಳ್ಳುವುದಿಲ್ಲ.