ಈ ಕ್ಷೇತ್ರದಲ್ಲಿ ಪಿತೃಗಳಿಗೆ ಶ್ರದ್ಧಾ ಮಾಡಿದ್ರೆ ಪುಣ್ಯ ಬರುತ್ತೆ; ಗಯಾ ಮಹಾತ್ಮೆ, ಪೌರಾಣಿಕ ಕಥೆ ಓದಿ
ಬಿಹಾರದಲ್ಲಿರುವ ಗಯಾ ಹಿಂದೂಗಳ ಪವಿತ್ರ ಕ್ಷೇತ್ರ. ಇಲ್ಲಿ ತೀರ್ಥ ಸ್ಥಾನ ಮಾಡಿದರೆ ಪಾಪ ಪರಿಹಾರವಾಗುತ್ತೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಪಿತೃ ಪಕ್ಷದ ಸಮಯದಲ್ಲಿ ಪೂರ್ವಜರಿಗೆ ಶ್ರದ್ಧಾ ಮಾಡಿದರೆ ಪುಣ್ಯ ಬರುತ್ತೆ, ಪಿತೃಗಳ ಅಶೀರ್ವಾದ ಸಿಗುತ್ತೆ ಎಂಬ ನಂಬಿಕೆ ಇದೆ. ಗಯಾ ಮಹಾತ್ಮೆ ಮತ್ತು ಪೌರಾಣಿಕ ಕಥೆಯನ್ನು ಇಲ್ಲಿ ನೀಡಲಾಗಿದೆ.
ಹಿಂದೂಗಳ ಧಾರ್ಮಿಕ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಗಯಾಗೆ ವಿಶೇಷ ಮಹತ್ವವಿದೆ. ಈ ತೀರ್ಥ ಕ್ಷೇತ್ರದಲ್ಲಿ ಪಾಪ ಪರಿಹಾರವಾಗುತ್ತೆ. ಸಾಮಾನ್ಯ ದಿನಗಳಾಗಿರಲಿ ಅಥವಾ ವಿಶೇಷ ಪಿತೃ ಪಕ್ಷವಾಗಿರಲಿ ಇಲ್ಲಿ ಪಿಂಡ ದಾನ ಮಾಡಿದರೆ ಪೂರ್ವಜನರು ಸಂತೃಪ್ತರಾಗುತ್ತಾರೆ ಎಂಬ ನಂಬಿಕೆ ಇದೆ. ಬಿಹಾರ ರಾಜಧಾನಿ ಪಾಟ್ನಾದಿಂದ 100 ಕಿಲೋ ಮೀಟರ್‌ಗಳ ದೂರದಲ್ಲಿರುವ ಈ ಕ್ಷೇತ್ರ ಫಲ್ಗು ನದಿ ತೀರದಲ್ಲಿದೆ. ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ವಿಷ್ಣು ಇಲ್ಲಿ ಗಯಾಸುರನೆಂಬ ರಾಕ್ಷಸನನ್ನು ಸಂಹರಿಸಿದ. ಹೀಗಾಗಿ ನಗರಕ್ಕೆ ಗಯಾಸುರನ ಹೆಸರನ್ನೇ ಇಡಲಾಗಿದೆ.
ಪಿತೃಗಳಿಗೆ ಮುಕ್ತಿ ನೀಡುವ ಗಯಾ ಮಹಾತ್ಮೆ ಬಗ್ಗೆ ಹಿಂದೂ ಪುರಾಣದ ಕಥೆ
ಪ್ರಕೃತಿ ವಾಯು ಪುರಾಣದಲ್ಲಿ ಗಯಾ ಮಹಾತ್ಮೆಯನ್ನು ವರ್ಣಿಸಲಾಗಿದೆ. ಒಮ್ಮೆ ಭಕ್ತ ಶಿರೊಮಣಿಗಳಾದ ನಾರದರು ಶೌನಕಾದಿ ಮುನಿಗಳಿಂದ ಸನತ್‌ಕುಮಾರರಲ್ಲಿ ಹೋಗಿ ಅತ್ಯಂತ ನಮ್ರತೆಯಿಂದ ಪ್ರಾರ್ಥಿಸುತ್ತಾರೆ. ಮಹಾತ್ಮರೇ ತಾವು ನಮ್ಮ ಮೇಲಿನ ದಯೆಯಿಂದ ತೀರ್ಥ ಮಹಿಮೆ ಹೇಳಿ. ಯಾವ ತೀರ್ಥದಲ್ಲಿ ಕರ್ಮಾನುಷ್ಠಾನ ಮಾಡುವುದರಿಂದ ನಮಗೆ ಪುಣ್ಯ ಪ್ರಾಪ್ತಿಯಾಗಿ ನಮ್ಮ ಪಿತೃಗಳಿಗೆ ಮುಕ್ತಿಯಾಗುತ್ತೆ ಅಂತ ತೀರ್ಥದ ಬಗ್ಗೆ ತಿಳಿಸಿರಿ ಎಂದು ಕೇಳುತ್ತಾನೆ. ಆಗ ಸನತ್‌ಕುಮಾರರು ಹೇಳುತ್ತಾರೆ. ಭೂಮಂಡಲದಲ್ಲಿ ಒಂದು ಅತ್ಯಂತ ಪವಿತ್ರವಾದ ಸ್ಥಾನ ಇದೆ. ಅದನ್ನು ಗಯಾ ತೀರ್ಥ ಎಂದು ಕರೆಯುತ್ತಾರೆ. ಆ ಕ್ಷೇತ್ರದಲ್ಲಿ ಪಿತೃಗಳನ್ನು ಉದ್ದೇಶಿ ಶ್ರಾದ್ಧ, ದಾನಾದಿಗಳನ್ನು ಮಾಡುವುದರಿಂದ ಪಿತೃ ದೇವತೆಗಳಿಗೆ ಅಕ್ಷಯ ಲೋಕ ಪ್ರಾಪ್ತವಾಗುತ್ತದೆ. ಅವರು ಸಂತುಷ್ಟರಾಗಿ ಆಯುರಾರೋಗ್ಯ ಐಶ್ವರ್ಯಾದಿಗಳನ್ನು ಕೊಡುತ್ತಾರೆ ಎಂದು ಹೇಳುತ್ತಾರೆ.
ಆಗ ನಾರದರು ಮತ್ತು ಋಷಿಗಳು ಕೇಳಿದರು. ಏಕೆ ಆ ಗಯಾ ಕ್ಷೇತ್ರಕ್ಕೆ ಅಷ್ಟು ಮಹಿಮೆ? ಅದಕ್ಕೆ ಸನತ್‌ಕುಮಾರರು ಉತ್ತರಿಸಿ, ಅತ್ಯಂತ ಪ್ರಾಚೀನ ಕಾಲದಲ್ಲಿ ಗಯಾಸುರನೆಂಬ ಒಬ್ಬ ದೈತ್ಯನಿದ್ದನು. ಇವನು ಕೋಲಾಹಲವೆಂಬ ಪರ್ವತದಲ್ಲಿ ಬ್ರಹ್ಮನನ್ನು ಕುರಿತು ತಪಸ್ಸನ್ನು ಮಾಡಿ ಬ್ರಹ್ಮನಿಂದ ಎರಡು ವರಗಳನ್ನು ಕೇಳುತ್ತಾನೆ. ನಾನು ಮೂರು ಲೋಕದಲ್ಲಿದ್ದವರಿಗೆಲ್ಲರಿಗೂ ಮಹಾ ಪವಿತ್ರನಾಗಿರಬೇಕು ಮತ್ತು ನಾನು ಸ್ಪರ್ಶ ಮಾಡಿದ ವಸ್ತುಗಳು, ಜೀವಿಗಳು ಮುಕ್ತಿಗೆ ಹೋಗಲು ಯೋಗ್ಯರಾಗಬೇಕು ಎಂದು. ಬ್ರಹ್ಮನು ಈ ಎರಡು ವರಗಳನ್ನು ಕೊಟ್ಟನು. ವರಗಳ ಪ್ರಕಾರ, ಇವನನ್ನು ಮುಟ್ಟಿದವರೆಲ್ಲಾ ಮುಕ್ತಿ ಯೋಗ್ಯರಾಗುತ್ತಿದ್ದರು. ಇದರ ಪರಿಣಾಮದಿಂದ ಧರ್ಮ ದಾನ ಪಿತೃ ಕಾರ್ಯ ಎಲ್ಲವೂ ಕಮ್ಮಿಯಾಗುತ್ತಾ ಬಂತು. ಏಕೆಂದರೆ ಇವನನ್ನೇ ಎಲ್ಲರೂ ಸ್ಪರ್ಶಿಸಿ ಮುಕ್ತಿ ಪಡೆಯುತ್ತಿದ್ದರು.
ಯಮಲೋಕ ಸ್ವರ್ಗ ನರಕ ಎಲ್ಲವೂ ಬಿಕೋ ಎನಿಸಿದವು. ಇದರಿಂದ ಪ್ರಕೃತಿಯ ನಿಯಮ ಬದಲಾಯಿತು. ನಿತ್ಯ ಆಚರಣೆ ನಿಂತುಹೋಯಿತು. ಎಲ್ಲ ದೇವತೆಗಳು ಬ್ರಹ್ಮನಭಗ ಸಮೀಪ ಹೋಗಿ ಪ್ರಾರ್ಥಿಸಿದರು. ದೇವತೆಗಳ ಸಹಿತ ಬ್ರಹ್ಮ ದೇವರು ಆದಿಯಾಗಿ ವಿಷ್ಣುವಿನ ಬಳಿಗೆ ಹೋದರು. ವಿಷ್ಣುವನ್ನು ಪ್ರಾರ್ಥಿಸಿದರು. ಈಗ ವಿಷ್ಣು ದೇವತೆಗಳ ಹಾಗೂ ಬ್ರಹ್ಮ ದೇವರ ಪ್ರಾರ್ಥನೆಯನ್ನು ಕೇಳಿ, ನೀವು ಗಯಾಸುರನ ಸಮೀಪಕ್ಕೆ ಹೋಗಿ ಅವನ ಶರೀರವನ್ನೇ ಯಜ್ಞಕ್ಕಾಗಿ ಬೇಕೆಂದು ಕೇಳಿರಿ ಎಂದನು.
ಭಗವಾನ್ ವಿಷ್ಣುವಿನ ಉಪಾಯವನ್ನು ಕೇಳಿದ ಬ್ರಹ್ಮ ಸಹಿತ ದೇವತೆಗಳೆಲ್ಲರೂ ಗಯಾಸುರನ ಸಮೀಪಕ್ಕೆ ಹೋದರು. ದೇವತೆಗಳಿಂದ ಸಹಿತವಾಗಿ ಬಂದಿರುವ ಬ್ರಹ್ಮನನ್ನು ನೋಡಿ ಬಲು ಸಂತೋಷಪಟ್ಟ ಗಯಾಸುರನು ಅಘ್ಯಪಾದ್ಯಾದಿಗಳನ್ನು ಕೊಟ್ಟು, ತಾವು ಬಂದಿರುವ ಕಾರಣವೇನು, ನನಗೆ ಯಾವ ಅನುಗ್ರಹ ಮಾಡಲು ಬಂದಿರುವಿರಿ ಎಂದು ವಿನಮ್ರತೆಯಿಂದ ಕೇಳುತ್ತಾನೆ.
ಅದಕ್ಕೆ ಬ್ರಹ್ಮದೇವರು ಹೀಗೆ ಹೇಳುತ್ತಾರೆ. ಹೇ ಗಯಾಸುರ ಇಡೀ ಪ್ರಪಂಚದಲ್ಲಿ ನಾನು ಯಜ್ಞಕ್ಕೆ ಪವಿತ್ರವಾದ ಸ್ಥಳವನ್ನು ಹುಡುಕಿದೆ ಆದರೆ ನಿನ್ನ ಶರೀರದಷ್ಟು ಪವಿತ್ರವಾದ ಸ್ಥಳ ನನಗೆ ಮತ್ತೊಂದಿಲ್ಲವೆಂದು ತಿಳಿಯಿತು. ಯಜ್ಞಕ್ಕಾಗಿ ನಿನ್ನ ದೇಹವನ್ನು ಕೇಳಲು ಬಂದಿದ್ವೇನೆ ಎನ್ನುತ್ತಾರೆ. ಬ್ರಹ್ಮನ ಈ ಮಾತುಗಳನ್ನು ಕೇಳುತ್ತಿರುವಾಗಲೇ ಗಯಾಸುರನು ನಾನೇ ಧನ್ಯ ಎಂದುಕೊಂಡು ತನ್ನ ಶರೀರವನ್ನು ಯಜ್ಞಕ್ಕೆ ದೇಹವನ್ನು ಕೊಡಲು ಒಪ್ಪಿಕೊಳ್ಳುತ್ತಾನೆ. ಈತನ ಎದೆಯ ಮೇಲೆ ಯಜ್ಞ ಆರಂಭವಾದಾಗ ಬಿಸಿ ತಾಳಲಾರದೆ ಅಲುಗಾಡುತ್ತಾನೆ. ಅಷ್ಟೇ ಪ್ರಯತ್ನ ಪಟ್ಟರೂ ಗಯಾಸುರ ಅಲುಗಾಡುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ ಆಗ ವಿಷ್ಣುವೇ ಗಧಾದಾರಿ ರೂಪದಲ್ಲಿ ಬಂದು ಆತನ ಎದೆಯ ಮೇಲೆ ಕಾಲಿಟ್ಟಾಗ ಅಲುಗಾಡುವುದು ನಿಲ್ಲುತ್ತೆ.
ಇದರಿಂದ ಗಧಾದಾರಿ ಪ್ರಸನ್ನಾಗಿ ಗಯಾಸುರನಿಗೆ ವರ ಕೇಳಲು ಹೇಳುತ್ತಾನೆ. ಆಗ ಗಯಾಸುರನು, ನಾನು ಪ್ರಸನ್ನನಾಗಿದ್ದೇನೆ, ಈ ಗಧಾದಾರಿ ರೂಪದಿಂದಲೇ ನನ್ನ ಶರೀರದ ಮೇಲೆ ವಿರಾಜಿಸುತ್ತಿರಿ, ನನ್ನನ್ನು ಪವಿತ್ರನನ್ನಾಗಿರಿಸುವುದಲ್ಲದೇ ನನ್ನ ಶರೀರದ ಮೇಲೆ ಎಲ್ಲಾ ದೇವತೆಗಳು ವಾಸವಾಗಿರಲಿ. ವಿಶೇಷವಾಗಿ ನನ್ನ ಶರೀರದ ಮೇಲಿರುವ ನಿನ್ನ ಪಾದದ ಚಿಹ್ನೆ ಇರುವ ಧರ್ಮ ಶಿಲಾದ ಮೇಲೆ ಯಾರು ಪಿಂಡದಾನ ಮಾಡುತ್ತಾರೋ ಅವರ ಪಿತೃ ದೇವತೆಗಳಿಗೆ ಅಕ್ಷಯ ಲೋಕ ಪ್ರಾಪ್ತವಾಗಲಿ ಮತ್ತು ನಿತ್ಯ ಕಾರ್ಯ ನಡೆಯುತ್ತಿರಲಿ ಎಂದು ವರನ್ನು ಕೇಳುತ್ತಾನೆ. ಹೀಗಾಗಿ ಇವತ್ತಿನ ವರೆಗೆ ಭಗವಾನ್ ವಿಷ್ಣು ಗಧಾದಾರಿ ರೂಪದದಲ್ಲಿ ಗಯಾ ಕ್ಷೇತ್ರದಲ್ಲಿದ್ದಾನೆ, ಆ ಸ್ಥಳ ವಿಷ್ಣುವಿನ ಪಾದ ಕ್ಷೇತ್ರವಾಗಿದ್ದು, ಪಿತೃಗಳಿಗೆ ಮುಕ್ತಿ ಕೊಡುವ ಕೆಲಸ ಮಾಡುತ್ತಿದ್ದಾನೆ.