ಮಗುವಿನ ಹೆಸರಿನಲ್ಲಿ ತಾಯಿ ಪ್ರಸಿದ್ಧಿ; ನವರಾತ್ರಿಯ 5ನೇ ದಿನ ಸ್ಕಂದಮಾತಾ ದೇವಿಯನ್ನ ಪೂಜಿಸಿದರೆ ಸಂಪತ್ತಿನ ಕೊರತೆ ಇರಲ್ಲ
ನವರಾತ್ರಿಯ ಅಂಗವಾಗಿ ಭಕ್ತರು ಈಗಾಗಲೇ ಶೈಲಪುತ್ರಿ ದೇವಿ, ಬ್ರಹ್ಮಚಾರಿಣಿ ದೇವಿ, ಚಂದ್ರಘಂಟಾ ದೇವಿ ಮತ್ತು ಕೂಷ್ಮಾಂಡಾ ದೇವಿಯರನ್ನು ಸತತ ನಾಲ್ಕು ದಿನಗಳ ಕಾಲ ಪೂಜಿಸಿದ್ದಾರೆ. ಐದನೇ ದಿನವಾದ ಸೋಮವಾರದಂದು ಸ್ಕಂದಮಾತೆಯನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಂಪತ್ತು ದೊರೆಯುತ್ತದೆ ಎಂದು ಭಕ್ತರು ನಂಬುತ್ತಾರೆ.
ನವರಾತ್ರಿಯ ಐದನೇ ದಿನವಾದ ಇಂದು (ಅಕ್ಟೋಬರ್ 7, ಸೋಮವಾರ) ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ಭಕ್ತರಿಗೆ ಸುಖ ಶಾಂತಿಯನ್ನು ದಯಪಾಲಿಸುವವಳು ಸ್ಕಂದಮಾತೆ ಎಂದು ಭಕ್ತರು ನಂಬುತ್ತಾರೆ. ದೇವಾಸುರ ಯುದ್ಧದಲ್ಲಿ ಸೈನ್ಯಾಧಿಕಾರಿಯಾಗಿದ್ದ ಸ್ಕಂದನ ತಾಯಿ ದುರ್ಗಾದೇವಿ. ಆಕೆಯನ್ನು ಸ್ಕಂದಮಾತೆ ಎಂದು ಕರೆಯಲಾಗುತ್ತದೆ.
ಸ್ಕಂದಮಾತೆಯನ್ನು ಪದ್ಮಾಸನ ದೇವಿ ಎಂದೂ ವಿದ್ಯಾವಹಿ ದುರ್ಗಾದೇವಿ ಎಂದೂ ಕರೆಯುತ್ತಾರೆ. ಸ್ಕಂದಮಾತೆಯ ವಾಹನ ಸಿಂಹ. ಸೌರ ಕುಟುಂಬದಲ್ಲಿ ಸ್ಕಂದಮಾತೆ ಮುಖ್ಯ ದೇವತೆ. ಹಾಗಾಗಿ ದೇವಿಯ ಆರಾಧನೆಯಿಂದ ಮಹಿಮೆ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ.
ಮಗುವಿನ ಹೆಸರಿನಲ್ಲಿ ತಾಯಿ ಪ್ರಸಿದ್ಧಿ
ತಾಯಿ ಸ್ಕಂದಮಾತೆಗೆ ನಾಲ್ಕು ಕೈಗಳಿವೆ. ಸ್ಕಂದಮಾತಾ ಪ್ರತಿಮೆಯಲ್ಲಿ ಸ್ಕಂದನು ಮಗುವಿನ ರೂಪದಲ್ಲಿ ತಾಯಿಯ ಮಡಿಲಲ್ಲಿ ಕುಳಿತಿದ್ದಾನೆ. ಸ್ಕಂದಮಾತೆಯ ರೂಪವು ವಿಶಿಷ್ಟವಾದ ಕಾಂತಿಯೊಂದಿಗೆ ಬಣ್ಣದಲ್ಲಿ ಮಂಗಳಕರವಾಗಿದೆ.
ಸ್ಕಂದಮಾತೆ ಹಿಮಾಲಯದ ಮಗಳು. ಪರ್ವತ ರಾಜ ಹಿಮಾಲಯದ ಮಗಳು ಆಕೆಯನ್ನು ಪಾರ್ವತಿ ಎಂದು ಕರೆಯುತ್ತಾರೆ. ಅಲ್ಲದೆ ಮಹಾದೇವನ ಪತ್ನಿಯಾದ ಆಕೆಗೆ ಮಹೇಶ್ವರಿ ಎಂಬ ಹೆಸರು ಬಂದಿದೆ. ಸ್ಕಂದಮಾತೆ ತನ್ನ ಮಗನನ್ನು ತುಂಬಾ ಪ್ರೀತಿಸುತ್ತಾಳೆ. ಆದುದರಿಂದ ತಾಯಿಯನ್ನು ಮಗನ ಹೆಸರಿನಿಂದ ಕರೆಯುವುದು ಉತ್ತಮ. ಸ್ಕಂದಮಾತೆಯನ್ನು ಪೂಜಿಸುವ ಮತ್ತು ಕಥೆಯನ್ನು ಓದುವ ಅಥವಾ ಕೇಳುವ ಭಕ್ತರಿಗೆ ಸಂತಾನ, ಸಂತೋಷ ಮತ್ತು ಸಂಪತ್ತು ದೊರೆಯುತ್ತದೆ ಎಂದು ನಂಬಲಾಗಿದೆ.
ಸ್ಕಂದಮಾತಾ ಪುರಾಣ
ಪುರಾಣಗಳ ಪ್ರಕಾರ, ತಾರಕಾಸುರನೆಂಬ ರಾಕ್ಷಸನಿದ್ದ. ಅವನ ಅಂತ್ಯವು ಶಿವನ ಮಗನ ಕೈಯಲ್ಲಿತ್ತು. ನಂತರ ಪಾರ್ವತಿ ದೇವಿಯು ತನ್ನ ಮಗ ಸ್ಕಂದ (ಕಾರ್ತಿಕೇಯ) ಯುದ್ಧದಲ್ಲಿ ತರಬೇತಿ ನೀಡಲು ಸ್ಕಂದ ಮಾತೆಯ ರೂಪವನ್ನು ಧರಿಸಿದಳು. ಸ್ಕಂದಮಾತೆಯಿಂದ ಯುದ್ಧದಲ್ಲಿ ತರಬೇತಿ ಪಡೆದ ಕಾರ್ತಿಕೇಯನು ತಾರಕಾಸುರನನ್ನು ಕೊಂದನೆಂದು ಸ್ಕಂದಮಾತಾ ಪುರಾಣ ಹೇಳುತ್ತದೆ.
5ನೇ ದಿನದ ಬಣ್ಣ
ನವರಾತ್ರಿಯ ಐದನೇ ದಿನದ ಬಣ್ಣ ಹಳದಿ. ಇದು ಸಂತೋಷ, ಸಮೃದ್ಧಿಯನ್ನು ಸೂಚಿಸುತ್ತದೆ. ಈ ದಿನ ಹಳದಿ ಬಣ್ಣವನ್ನು ಧರಿಸಿದಾಗ ಸ್ಕಂದಮಾತಾ ನಮಗೆ ಮೋಕ್ಷ, ಸಂತೋಷ ಮತ್ತು ಸಮೃದ್ಧಿಯನ್ನು ಆಶೀರ್ವದಿಸುತ್ತಾಳೆ ಎಂದು ನಂಬಲಾಗಿದೆ.
ನವರಾತ್ರಿ ಅಕ್ಟೋಬರ್ 3 ರಂದು ಪ್ರಾರಂಭವಾಗಿ ಅಕ್ಟೋಬರ್ 13 ರವರೆಗೆ ನಡೆಯಲಿದೆ. ದೇಶಾದ್ಯಂತ ಆಚರಿಸಲಾಗುವ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ. ನವರಾತ್ರಿಯಲ್ಲಿ ದುರ್ಗಾ ದೇವಿ 9 ರೂಪಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ದುರ್ಗಾ ದೇವಿಯ ಒಂಬತ್ತು ರೂಪಗಳೆಂದರೆ - ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಹಾಗೂ ಸಿದ್ಧಿಧಾತ್ರಿ. ಒಂದೊಂದು ದೇವಿಗೆ ಒಂದು ರೀತಿಯ ಪುರಾಣವಿದೆ. ಅಕ್ಟೋಬರ್ 8 ರ ಮಂಗಳವಾರ ನವರಾತ್ರಿಯ 6ನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ.