Vastu tips: ಮನೆಯ ಈ ದಿಕ್ಕಿನಲ್ಲಿ ಕಸದ ಬುಟ್ಟಿ ಇಡುತ್ತಿದ್ದರೆ ಕಾದಿದೆ ದುರಾದೃಷ್ಟ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಮನೆಯ ಈ ದಿಕ್ಕಿನಲ್ಲಿ ಕಸದ ಬುಟ್ಟಿ ಇಡುತ್ತಿದ್ದರೆ ಕಾದಿದೆ ದುರಾದೃಷ್ಟ

Vastu tips: ಮನೆಯ ಈ ದಿಕ್ಕಿನಲ್ಲಿ ಕಸದ ಬುಟ್ಟಿ ಇಡುತ್ತಿದ್ದರೆ ಕಾದಿದೆ ದುರಾದೃಷ್ಟ

Vastu tips for dustbin: ಮನೆಯಲ್ಲಿ ಕಸದ ಬುಟ್ಟಿ ಇರುವುದು ಸರ್ವೇ ಸಾಮಾನ್ಯ . ಆದರೆ ವಾಸ್ತು ಶಾಸ್ತ್ರದ ಪ್ರಕಾರ ಎಲ್ಲೆಂದರಲ್ಲಿ ಕಸದ ಬುಟ್ಟಿಗಳನ್ನು ಇಡುವಂತಿಲ್ಲ. ಈ ದಿಕ್ಕುಗಳಲ್ಲಿ ನೀವು ಕಸದ ಬುಟ್ಟಿಗಳನ್ನು ಇಡುತ್ತಿದ್ದರೆ ಹಣ ವ್ಯಯ, ಉದ್ಯೋಗದಲ್ಲಿ ಕಿರಿಕಿರಿ ಹಾಗೂ ವ್ಯವಹಾರದಲ್ಲಿ ನಷ್ಟ ಅನುಭವಿಸುವುದು ಪಕ್ಕಾ ಎನ್ನುತ್ತದೆ ವಾಸ್ತು ಶಾಸ್ತ್ರ.

ಕಸದ ಬುಟ್ಟಿ ಯಾವ ದಿಕ್ಕಿನಲ್ಲಿ ಇಡಬೇಕು  (unsplash)
ಕಸದ ಬುಟ್ಟಿ ಯಾವ ದಿಕ್ಕಿನಲ್ಲಿ ಇಡಬೇಕು (unsplash)

ಒಂದು ಮನೆ ಎಂದಮೇಲೆ ಅಲ್ಲಿ ಕಸ ಇರುವುದು ಸರ್ವೇ ಸಾಮಾನ್ಯ. ಆದರೆ ಆ ಕಸವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದು ಮನೆಯ ಸದಸ್ಯರಿಗೆ ಅರಿವಿರಬೇಕು. ಮನೆಯಲ್ಲಿ ಕಸದ ಬುಟ್ಟಿಗಳನ್ನು ಇಡುವ ಮೂಲಕ ಕಸವನ್ನು ಸರಿಯಾಗಿ ಸಂಗ್ರಹ ಮಾಡಬಹುದು. ಅನೇಕರು ಅಡುಗೆ ಮನೆಗಳಲ್ಲಿ ಕೂಡ ಕಸದ ಬುಟ್ಟಿಯನ್ನು ಹೊಂದಿರುತ್ತಾರೆ. ಅಡುಗೆ ಮಾಡುವಾಗ ಕಸದ ಬುಟ್ಟಿ ತುಂಬಾನೇ ಉಪಯೋಗಕ್ಕೆ ಬರುತ್ತದೆ. ಇದರಿಂದ ಅಡುಗೆ ಮನೆ ಚೆಲ್ಲಾಪಿಲ್ಲಿ ಆಗುವುದನ್ನೂ ಸಹ ತಪ್ಪಿಸಬಹುದಾಗಿದೆ.

ಇನ್ನೂ ಕೆಲವರು ಎಲ್ಲಿ ಜಾಗ ಸಿಗುತ್ತೋ ಅಲ್ಲಿ ಕಸ ಬಿಸಾಡುತ್ತಾರೆ. ಕೆಲವರಂತೂ ಮನೆಯ ಬಾಗಿಲಿನ ಸಂಧಿಯಲ್ಲಿ ಕಸಗಳನ್ನು ಬಿಸಾಡುವ ಅಥವಾ ಕಸಗಳನ್ನು ಶೇಖರಿಸುವ ಅಭ್ಯಾಸ ಹೊಂದಿರುತ್ತಾರೆ. ಈ ರೀತಿ ಕಸಗಳನ್ನು ಕಂಡ ಕಂಡಲ್ಲಿ ಶೇಖರಿಸಿ ಇಡುವುದರಿಂದ ವಾಸ್ತು ದೋಷ ಸಂಭವಿಸುತ್ತದೆಯೇ..? ಎಂಬ ಪ್ರಶ್ನೆ ನಿಮ್ಮನ್ನು ಕಾಡಿದ್ದರೆ ಇದಕ್ಕೆ ಉತ್ತರ ಹೌದು..! ನಿಮ್ಮ ಮನೆಯ ಕಸವೂ ಕೂಡ ನಿಮ್ಮ ವಾಸ್ತು ದೋಷಕ್ಕೆ ಕಾರಣವಾಗಬಲ್ಲದು. ಯಾವ ಮನೆಯಲ್ಲಿ ಕಸದ ಬುಟ್ಟಿಗಳ ಬಳಕೆ ಆಗುವುದಿಲ್ಲವೋ ಅಂತಹ ಮನೆಗೆ ವಾಸ್ತು ದೋಷ ಸಂಭವಿಸುತ್ತದೆ ಎನ್ನಲಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕಸದ ಬುಟ್ಟಿಗಳನ್ನು ಇಡುವ ಸಂದರ್ಭದಲ್ಲಿ ನೀವು ಯಾವ ಜಾಗದಲ್ಲಿ ಹಾಗೂ ಯಾವ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇರಿಸುತ್ತಿದ್ದೀರ ಎಂಬ ವಿಷಯದ ಬಗ್ಗೆ ಗಮನ ಹರಿಸಬೇಕು. ಸರಿಯಾದ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇಡದೇ ಹೋದಲ್ಲಿ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳ ಸಂಚಲನೆಯು ಹೆಚ್ಚಾಗಬಹುದು. ಅಲ್ಲದೇ ಮನೆಯಲ್ಲಿ ಅನೇಕ ಸಮಸ್ಯೆಗಳು ಒಂದಾದರ ಮೇಲೊಂದರಂತೆ ಬರಬಹುದು ಎಂದೂ ಸಹ ಹೇಳಲಾಗುತ್ತದೆ. ಇದು ಮಾತ್ರವಲ್ಲ ಕುಟುಂಬಸ್ಥರ ನಡುವೆ ಭಿನ್ನಾಭಿಪ್ರಾಯಗಳು ಸಹ ಮೂಡಬಹುದು. ಪದೇ ಪದೇ ಜಗಳ - ಮನಸ್ತಾಪಗಳು ಉಂಟಾಗಿಬಿಡಬಹುದು. ಹೀಗಾಗಿ ಮನೆಯಲ್ಲಿ ಕಸದ ಬುಟ್ಟಿಯನ್ನು ಇರಿಸುವ ದಿಕ್ಕು ವಾಸ್ತು ಶಾಸ್ತ್ರದಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಹಾಗಾದರೆ ಯಾವ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇರಿಸುವುದು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳೋಣ .

ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಕಸದ ಬುಟ್ಟಿಗಳನ್ನು ಇರಿಸಬಾರದು :

ಈಶಾನ್ಯ ದಿಕ್ಕು : ವಾಸ್ತುಶಾಸ್ತ್ರದ ಪ್ರಕಾರ, ಮನೆಯ ಈಶಾನ್ಯ ದಿಕ್ಕಿನಲ್ಲಿ ಕಸ ಸಂಗ್ರಹಣೆ ಮಾಡುವುದು ಶುಭವಲ್ಲ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನನಷ್ಟ ಸಂಭವಿಸುವುದು ಮಾತ್ರವಲ್ಲದೇ ನಕಾರಾತ್ಮಕ ಶಕ್ತಿಯ ಸಂಚಲನ ಹೆಚ್ಚಾಗುತ್ತದೆ. ನೀವು ಎಷ್ಟೇ ಹಣ ಸಂಪಾದನೆ ಮಾಡಿದರೂ ಸಹ ದುಪ್ಪಟ್ಟು ಹಣ ಖರ್ಚಾಗುತ್ತಲೇ ಇರುತ್ತದೆ.

ಆಗ್ನೇಯ ದಿಕ್ಕು : ಮನೆಯ ಆಗ್ನೇಯ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇರಿಸಿದ್ದರೆ ಈ ಕೂಡಲೇ ಅದನ್ನು ಬೇರೆಡೆಗೆ ಸ್ಥಳಾಂತರಿಸಿ. ಈ ದಿಕ್ಕಿನಲ್ಲಿ ನೀವು ಕಸ ಎಸೆಯುತ್ತಿದ್ದರೆ ನೀವು ಎಷ್ಟೇ ಪ್ರಯತ್ನ ಪಟ್ಟು ಮಾಡಿದ ಶ್ರಮವು ಪದೇ ಪದೇ ವ್ಯರ್ಥವಾಗುತ್ತದೆ. ಯಾವುದೇ ಕೆಲಸಗಳನ್ನು ಕೈಗೆತ್ತಿಕೊಂಡರೂ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗಿ ಬರಲಿದೆ.

ಉತ್ತರ ದಿಕ್ಕು : ಮನೆಯ ಉತ್ತರ ದಿಕ್ಕಿನಲ್ಲಿ ಕಸದ ಬುಟ್ಟಿಯನ್ನು ಇರಿಸುವುದು ವಾಸ್ತು ಶಾಸ್ತ್ರದ ಪ್ರಕಾರ ಶುಭವಲ್ಲ. ಇದರಿಂದ ಉದ್ಯೋಗ ಹಾಗೂ ವ್ಯವಹಾರಗಳಲ್ಲಿ ನಷ್ಟ ಎದುರಿಸಬೇಕಾಗಿ ಬರಲಿದೆ ಎಂದು ಹೇಳಲಾಗುತ್ತದೆ

ಪಶ್ಚಿಮ ದಿಕ್ಕು : ಈ ದಿಕ್ಕಿನಲ್ಲಿ ನೀವು ಕಸದ ಬುಟ್ಟಿಯನ್ನು ಇರಿಸಿದರೆ ನೀವು ಎಷ್ಟೇ ಕಷ್ಟಪಟ್ಟರೂ ಸಹ ಯಶಸ್ಸು ಎನ್ನುವುದು ನಿಮಗೆ ಸಿಗುವುದೇ ಇಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕಿನಲ್ಲಿ ಯಾವುದೇ ಕಸ ಸಂಗ್ರಹ ಇರಬಾರದು. ಇದು ಮನೆಯ ಸದಸ್ಯರ ಎಲ್ಲಾ ಕೆಲಸ ಕಾರ್ಯಗಳಿಗೆ ಅಡ್ಡಿಯನ್ನುಂಟು ಮಾಡಲಿದೆ.

ದಕ್ಷಿಣ ದಿಕ್ಕು : ಮನೆಯ ದಕ್ಷಿಣ ದಿಕ್ಕು ಕೂಡ ಕಸ ಸಂಗ್ರಹಣೆಗೆ ಯೋಗ್ಯವಾದ ದಿಕ್ಕು ಎಂದು ಪರಿಗಣಿಸಲಾಗುವುದಿಲ್ಲ. ಈ ದಿಕ್ಕಿನಲ್ಲಿ ಕಸ ಸಂಗ್ರಹವಾಗುತ್ತಿದ್ದರೆ ಮನೆಯಲ್ಲಿ ಹಣ ಉಳಿತಾಯ ಸಾಧ್ಯವಿಲ್ಲ. ಅಲ್ಲದೇ ಮನೆಯ ಸದಸ್ಯರಲ್ಲಿ ಋಣಾತ್ಮಕ ಚಿಂತನೆಗಳು ಜಾಸ್ತಿಯಾಗುವ ಸಾಧ್ಯತೆಗಳು ಇರುತ್ತವೆ.

ಹಾಗಾದರೆ ಯಾವ ದಿಕ್ಕಿನಲ್ಲಿ ಕಸದ ಬುಟ್ಟಿಗಳನ್ನು ಇರಿಸಬೇಕು..?

ವಾಸ್ತು ಶಾಸ್ತ್ರದ ಪ್ರಕಾರ ವಾಯುವ್ಯ ಹಾಗೂ ನೈಋತ್ಯ ದಿಕ್ಕುಗಳು ಮಾತ್ರ ಕಸದ ಸಂಗ್ರಹಣೆಗೆ ಯೋಗ್ಯವಾದ ದಿಕ್ಕುಗಳಾಗಿವೆ. ಈ ದಿಕ್ಕಿನಲ್ಲಿ ಕಸದ ಬುಟ್ಟಿಗಳನ್ನು ಇರಿಸಿದರೆ ನಿಮಗೆ ಯಾವುದೇ ಹಾನಿಯುಂಟಾಗುವುದಿಲ್ಲ. ಮನೆಯ ಸದಸ್ಯರ ನಡುವೆಯೂ ಯಾವುದೇ ನಕಾರಾತ್ಮಕ ಆಲೋಚನೆಗಳು ಬರುವುದಿಲ್ಲ. ಮನೆಯಲ್ಲಿ ಸುಖ ಸಂತೋಷಗಳು ಸಮೃದ್ಧವಾಗಿ ಇರಲಿವೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.