ಮಹಾರಾಷ್ಟ್ರ ಸಚಿವ ಸಂಪುಟ ರಚನೆಯಾಗಿ 2 ವಾರ ಬಳಿಕ ಖಾತೆ ಹಂಚಿಕೆ, ಗೃಹ ಖಾತೆ ಉಳಿಸಿಕೊಂಡ ಸಿಎಂ ಫಡ್ನವೀಸ್‌, ಶಿಂಧೆಗೆ 3, ಪವಾರ್‌ಗೆ 2 ಖಾತೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾರಾಷ್ಟ್ರ ಸಚಿವ ಸಂಪುಟ ರಚನೆಯಾಗಿ 2 ವಾರ ಬಳಿಕ ಖಾತೆ ಹಂಚಿಕೆ, ಗೃಹ ಖಾತೆ ಉಳಿಸಿಕೊಂಡ ಸಿಎಂ ಫಡ್ನವೀಸ್‌, ಶಿಂಧೆಗೆ 3, ಪವಾರ್‌ಗೆ 2 ಖಾತೆ

ಮಹಾರಾಷ್ಟ್ರ ಸಚಿವ ಸಂಪುಟ ರಚನೆಯಾಗಿ 2 ವಾರ ಬಳಿಕ ಖಾತೆ ಹಂಚಿಕೆ, ಗೃಹ ಖಾತೆ ಉಳಿಸಿಕೊಂಡ ಸಿಎಂ ಫಡ್ನವೀಸ್‌, ಶಿಂಧೆಗೆ 3, ಪವಾರ್‌ಗೆ 2 ಖಾತೆ

Maharashtra Cabinet: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಭರ್ಜರಿ ಗೆಲುವು ದಾಖಲಿಸಿದರೂ, ಮುಖ್ಯಮಂತ್ರಿ ಆಯ್ಕೆ, ಖಾತೆ ಹಂಚಿಕೆ ವಿಚಾರ ನಿಧಾನವಾಗಿದೆ. ಸಚಿವ ಸಂಪುಟ ರಚನೆಯಾಗಿ 2 ವಾರ ಬಳಿಕ ಖಾತೆ ಹಂಚಿಕೆ, ಗೃಹ ಖಾತೆ ಉಳಿಸಿಕೊಂಡ ಸಿಎಂ ಫಡ್ನವೀಸ್‌, ಶಿಂಧೆಗೆ 3, ಪವಾರ್‌ಗೆ 2 ಖಾತೆ ಹಂಚಿಕೆ ಮಾಡಿದ್ದಾರೆ.

ಮಹಾರಾಷ್ಟ್ರ ಸಚಿವ ಸಂಪುಟ ರಚನೆಯಾಗಿ 2 ವಾರ ಬಳಿಕ ಖಾತೆ ಹಂಚಿಕೆ, ಗೃಹ ಖಾತೆ ಉಳಿಸಿಕೊಂಡ ಸಿಎಂ ದೇವೇಂದ್ರ ಫಡ್ನವೀಸ್‌ (ಎಡ ಬದಿ), ಏಕನಾಥ ಶಿಂಧೆ(ಮಧ್ಯದಲ್ಲಿರುವವರು) ಗೆ 3, ಅಜಿತ್ ಪವಾರ್‌ (ಅಜಿತ್‌ ಪವಾರ್‌)ಗೆ 2 ಖಾತೆ ಹಂಚಿಕೆ ಮಾಡಿದ್ದಾರೆ.
ಮಹಾರಾಷ್ಟ್ರ ಸಚಿವ ಸಂಪುಟ ರಚನೆಯಾಗಿ 2 ವಾರ ಬಳಿಕ ಖಾತೆ ಹಂಚಿಕೆ, ಗೃಹ ಖಾತೆ ಉಳಿಸಿಕೊಂಡ ಸಿಎಂ ದೇವೇಂದ್ರ ಫಡ್ನವೀಸ್‌ (ಎಡ ಬದಿ), ಏಕನಾಥ ಶಿಂಧೆ(ಮಧ್ಯದಲ್ಲಿರುವವರು) ಗೆ 3, ಅಜಿತ್ ಪವಾರ್‌ (ಅಜಿತ್‌ ಪವಾರ್‌)ಗೆ 2 ಖಾತೆ ಹಂಚಿಕೆ ಮಾಡಿದ್ದಾರೆ.

Maharashtra Cabinet: ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ, ಪ್ರಮಾಣ ವಚನ ಸಮಾರಂಭ ನಡೆದು ಸುಮಾರು ಎರಡು ವಾರಗಳ ನಂತರ, ಶನಿವಾರ ಸಚಿವ ಸಂಪುಟದ ಖಾತೆಗಳನ್ನು ಘೋಷಿಸಲಾಯಿತು. ಕಳೆದ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಏಕನಾಥ ಶಿಂಧೆ ಈ ಬಾರಿ ಉಪಮುಖ್ಯಮಂತ್ರಿ. ಅವರಿಗೆ ನಗರಾಭಿವೃದ್ಧಿ, ವಸತಿ ಮತ್ತು ಲೋಕೋಪಯೋಗಿ ಮೂರು ಸಚಿವಾಲಯಗಳ ಹೊಣೆಗಾರಿಕೆ ಸಿಕ್ಕಿದೆ. ಆದರೆ, ಅವರು ನಿರೀಕ್ಷಿಸಿದಂತೆ ಗೃಹ ಖಾತೆ ಸಿಗಲಿಲ್ಲ. ಎರಡನೇ ಅವಧಿಗೂ ಉಪ ಮುಖ್ಯಮಂತ್ರಿಯಾಗಿ ಮುಂದುವರಿದಿರುವ ಎನ್‌ಸಿಪಿ ನಾಯಕ ಅಜಿತ್ ಪವಾರ್‌ ಅವರಿಗೆ ಹಣಕಾಸು ಮತ್ತು ರಾಜ್ಯ ಅಬಕಾರಿ ಖಾತೆಯ ಹೊಣೆಗಾರಿಕೆ ನೀಡಲಾಗಿದೆ. ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಅವರು ಗೃಹ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇದಲ್ಲದೆ, ನವೀಕರಿಸಬಹುದಾದ ಇಂಧನ ಹೊರತು ಪಡಿಸಿದ ಇಂಧನ ಖಾತೆ, ಕಾನೂನು ಮತ್ತು ನ್ಯಾಯಾಂಗ, ಸಾಮಾನ್ಯ ಆಡಳಿತ, ಮಾಹಿತಿ ಮತ್ತು ಪ್ರಚಾರ ಖಾತೆ ತಮ್ಮ ಬಳಿ ಉಳಿಸಿಕೊಂಡಿದ್ದಾರೆ.

ದೇವೇಂದ್ರ ಫಡ್ನವೀಸ್ ಸಚಿವ ಸಂಪುಟ; ಖಾತೆ ಹಂಚಿಕೆ ಕಸರತ್ತು ಮತ್ತು ರಾಜಕೀಯ

ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ, ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಡಿಸೆಂಬರ್ 5 ರಂದು ಪ್ರಮಾಣವಚನ ಸ್ವೀಕರಿಸಿದರು. ಡಿಸೆಂಬರ್ 15 ರಂದು ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ 39 ಮಂತ್ರಿಗಳನ್ನು ಸೇರ್ಪಡೆಗೊಳಿಸಲಾಯಿತು. ಶಾಸಕಾಂಗ ನಿಯಮ ಪ್ರಕಾರ ಸಚಿವ ಸಂಪುಟದಲ್ಲಿ 43 ಸದಸ್ಯರಿರಬಹುದು.

ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನ ಡಿಸೆಂಬರ್ 15 ರಂದು ಶುರುವಾಗಿದ್ದು, ಒಂದು ವಾರದ ಅಧಿವೇಶದ ಬಳಿಕ ಸಚಿವ ಸಂಪುಟದ ಸದಸ್ಯರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಈ ಖಾತೆ ಹಂಚಿಕೆ ಘೋಷಣೆಗೆ ಕೆಲವು ಗಂಟೆಗಳ ಮೊದಲು ಸಚಿವ ಗಿರೀಶ್ ಮಹಾಜನ್‌ ಅವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ನಡುವೆ ಖಾತೆ ಹಂಚಿಕೆ ಸಂಬಂಧ ಒಮ್ಮತ ಏರ್ಪಟ್ಟಿದೆ ಎಂದು ಹೇಳಿದ್ದರು.

ಬಿಜೆಪಿ ಸಚಿವರಿಗೆ ಹಂಚಿಕೆಯಾದ ಖಾತೆಗಳು: ಚಂದ್ರಶೇಖರ ಬಾವನಕುಳೆ (ಕಂದಾಯ), ರಾಧಾಕೃಷ್ಣ ವಿಖೆ ಪಾಟೀಲ್ (ಜಲ ಸಂಪನ್ಮೂಲ- ಕೃಷ್ಣಾ ಮತ್ತು ಗೋದಾವರಿ ಕಣಿವೆ ಅಭಿವೃದ್ಧಿ ನಿಗಮ), ಚಂದ್ರಕಾಂತ್ ಪಾಟೀಲ್ (ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಸಂಸದೀಯ ವ್ಯವಹಾರಗಳು), ಗಿರೀಶ್ ಮಹಾಜನ್ (ಜಲ ಸಂಪನ್ಮೂಲ- ವಿದರ್ಭ, ತಾಪಿ, ಕೊಂಕಣ ಅಭಿವೃದ್ಧಿ ನಿಗಮ ಮತ್ತು ವಿಪತ್ತು ನಿರ್ವಹಣೆ). ಗಣೇಶ್ ನಾಯಕ್ ಅವರಿಗೆ ಅರಣ್ಯ, ಮಂಗಲ್ ಪ್ರಭಾತ್ ಲೋಧಾ ಕೌಶಲ್ಯ ಅಭಿವೃದ್ಧಿ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ ನೀಡಲಾಗಿದೆ; ಜಯಕುಮಾರ್ ರಾವಲ್ ಮಾರ್ಕೆಟಿಂಗ್ ಮತ್ತು ಪ್ರೋಟೋಕಾಲ್, ಪಂಕಜಾ ಮುಂಡೆ ಪರಿಸರ ಮತ್ತು ಹವಾಮಾನ ಬದಲಾವಣೆ, ಪಶುಸಂಗೋಪನೆ; ಅತುಲ್ ಸೇವ್ ಒಬಿಸಿ ಕಲ್ಯಾಣ, ಡೈರಿ ಅಭಿವೃದ್ಧಿ ಮತ್ತು ನವೀಕರಿಸಬಹುದಾದ ಇಂಧನ. ಅಶೋಕ್ ಉಯಿಕೆ ಅವರಿಗೆ ಬುಡಕಟ್ಟು ಅಭಿವೃದ್ಧಿ, ಆಶಿಶ್ ಶೆಲಾರ್ ಸಾಂಸ್ಕೃತಿಕ ವ್ಯವಹಾರಗಳು ಮತ್ತು ಮಾಹಿತಿ ತಂತ್ರಜ್ಞಾನ, ಶಿವೇಂದ್ರಸಿನ್ಹ ಭೋಸಲೆ ಲೋಕೋಪಯೋಗಿ. ಜಯಕುಮಾರ್ ಗೋರ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಂಜಯ್ ಸಾವ್ಕರೆ ಅವರಿಗೆ ಜವಳಿ, ನಿತೇಶ್ ರಾಣೆ ಅವರಿಗೆ ಮೀನುಗಾರಿಕೆ ಮತ್ತು ಬಂದರು, ಆಕಾಶ್ ಫಂಡ್ಕರ್ ಅವರಿಗೆ ಕಾರ್ಮಿಕ ಖಾತೆ ನೀಡಲಾಗಿದೆ.

ಶಿವಸೇನೆ ಸಚಿವರ ಖಾತೆಗಳು: ಗುಲಾಬ್‌ರಾವ್‌ ಪಾಟೀಲ್ ನೀರು ಸರಬರಾಜು ಮತ್ತು ನೈರ್ಮಲ್ಯ, ದಾದಾಜಿ ಭೂಸೆ ಶಾಲಾ ಶಿಕ್ಷಣ, ಸಂಜಯ್ ರಾಥೋಡ್ ಮಣ್ಣು ಮತ್ತು ಜಲ ಸಂರಕ್ಷಣೆ, ಉದಯ್ ಸಮಂತ್ ಇಂಡಸ್ಟ್ರೀಸ್ ಮತ್ತು ಮರಾಠಿ ಭಾಷೆ, ಶಂಭುರಾಜ್ ದೇಸಾಯಿ ಪ್ರವಾಸೋದ್ಯಮ, ಗಣಿಗಾರಿಕೆ, ಮಾಜಿ ಸೈನಿಕರ ಕಲ್ಯಾಣ, ಸಂಜಯ್ ಶಿರ್ಸತ್ ಸಾಮಾಜಿಕ ನ್ಯಾಯ, ಪ್ರತಾಪ್ ಸರ್ನಾಯಕ್ ಸಾರಿಗೆ, ಭಾರತ್ ಗೊಗವಾಲೆ ಉದ್ಯೋಗ ಖಾತರಿ, ತೋಟಗಾರಿಕೆ, ಉಪ್ಪಿನಂಗಡಿ ಜಮೀನುಗಳ ಅಭಿವೃದ್ಧಿ; ಪ್ರಕಾಶ್ ಅಬಿತ್ಕರ್ ಅವರಿಗೆ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ನೀಡಲಾಗಿದೆ.

ಎನ್‌ಸಿಪಿ ಸಚಿವರ ಖಾತೆಗಳು: ಹಸನ್ ಮುಶ್ರೀಫ್ ವೈದ್ಯಕೀಯ ಶಿಕ್ಷಣ, ಧನಂಜಯ್ ಮುಂಡೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ರಕ್ಷಣೆ, ದತ್ತಾತ್ರೇ ಭರ್ನೆ ಕ್ರೀಡೆ, ಯುವ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಔಕಾಫ್, ಅದಿತಿ ತತ್ಕರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಾಣಿಕ್ರಾವ್ ಕೊಕಾಟೆ ಕೃಷಿ. ನರಹರಿ ಜಿರ್ವಾಲ್ ಅವರಿಗೆ ಆಹಾರ ಮತ್ತು ಔಷಧ ಆಡಳಿತ, ವಿಶೇಷ ನೆರವು ನೀಡಲಾಗಿದೆ. ಮಕರಂದ್ ಪಾಟೀಲ್ ಅವರಿಗೆ ಪರಿಹಾರ ಮತ್ತು ಪುನರ್ವಸತಿ ನೀಡಲಾಗಿದ್ದು, ಬಾಬಾಸಾಹೇಬ್ ಪಾಟೀಲ್ ಅವರಿಗೆ ಸಹಕಾರ ಖಾತೆಯನ್ನು ನೀಡಲಾಗಿದೆ.

ಖಾತೆ ಹಂಚಿಕೆ ಮಾಡದೇ ವಿಧಾನಸಭೆ ಅಧಿವೇಶನ ನಡೆಸಿದ ಸರ್ಕಾರ; ವಿಪಕ್ಷಗಳಿಂದ ಟೀಕೆ

ಖಾತೆ ಹಂಚಿಕೆ ಮಾಡದೇ ಮಹಾರಾಷ್ಟ್ರ ವಿಧಾನಸಭೆ ಅಧಿವೇಶನವನ್ನು ಕಾಟಾಚಾರಕ್ಕೆ ಮಾಡಲಾಗುತ್ತಿದೆ. ರೈತರು ಮತ್ತು ಇತರರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದ ಕಾರಣ, ಸರ್ಕಾರದ ನಡೆಯನ್ನು ವಿರೋಧ ಪಕ್ಷಗಳು ಟೀಕಿಸಿವೆ.

ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ ಪಕ್ಷದ ನಾಯಕ ಆದಿತ್ಯ ಠಾಕ್ರೆ ಅವರು, ಖಾತೆ ಹಂಚಿಕೆಯಲ್ಲಿ ವಿಳಂಬವನ್ನು "ಜೋಕ್‌" ಎಂದು ಹೇಳಿದ್ದು, ಮಂತ್ರಿಗಳು ತಮ್ಮ ಸವಲತ್ತುಗಳನ್ನು ಪಡೆದಿದ್ದಾರೆಯೇ ಹೊರತು ಹೊಣೆಗಾರಿಕೆಯನ್ನಲ್ಲ. ಅವರಿಗೆ ಜನ ಸೇವೆ ಮುಖ್ಯವಲ್ಲ" ಎಂದು ಟೀಕಿಸಿದರು.

ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಲ್ಲಿ, ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ಗಳಿವೆ. ಈ ಮೈತ್ರಿಕೂಟವು ರಾಜ್ಯದ 288 ವಿಧಾನಸಭಾ ಸ್ಥಾನಗಳಲ್ಲಿ 230 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ (ಎಂವಿಎ) ಕಾಂಗ್ರೆಸ್, ಉದ್ಧವ್ ಠಾಕ್ರೆ ಅವರ ಸೇನಾ ಬಣ ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಬಣ 46 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.