ಜ 5 ಕ್ಕೆ ಕರ್ನಾಟಕದ ಪ್ರಸಿದ್ಧ ನಾಗಕ್ಷೇತ್ರ ಘಾಟಿ ಸುಬ್ರಹ್ಮಣ್ಯ ರಥೋತ್ಸವ, ದನಗಳ ಜಾತ್ರೆ ಆರಂಭ: ಪ್ರತಿದಿನ ಭರ್ಜರಿ ಜನಸಂದಣಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜ 5 ಕ್ಕೆ ಕರ್ನಾಟಕದ ಪ್ರಸಿದ್ಧ ನಾಗಕ್ಷೇತ್ರ ಘಾಟಿ ಸುಬ್ರಹ್ಮಣ್ಯ ರಥೋತ್ಸವ, ದನಗಳ ಜಾತ್ರೆ ಆರಂಭ: ಪ್ರತಿದಿನ ಭರ್ಜರಿ ಜನಸಂದಣಿ

ಜ 5 ಕ್ಕೆ ಕರ್ನಾಟಕದ ಪ್ರಸಿದ್ಧ ನಾಗಕ್ಷೇತ್ರ ಘಾಟಿ ಸುಬ್ರಹ್ಮಣ್ಯ ರಥೋತ್ಸವ, ದನಗಳ ಜಾತ್ರೆ ಆರಂಭ: ಪ್ರತಿದಿನ ಭರ್ಜರಿ ಜನಸಂದಣಿ

Ghati Subrahmanya cattle fair 2024: ಡಿಸೆಂಬರ್‌ 20 ರಿಂದ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯದಲ್ಲಿ ರಾಸುಗಳ ಜಾತ್ರೆ ಆರಂಭವಾಗಿದೆ. 2025 ಜನವರಿ 5ಕ್ಕೆ ಸುಬ್ರಹ್ಮಣ್ಯ ರಥೋತ್ಸವ ಇದ್ದು ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ದೂರದ ಊರಿನಿಂದ ಬರುವವರು ಘಾಟಿಗೆ ಹೋಗುವುದು ಹೇಗೆ? ಊಟ, ವಸತಿ ವ್ಯವಸ್ಥೆ ಬಗ್ಗೆ ಇಲ್ಲಿ ಮಾಹಿತಿ ಇದೆ.

ಜ 5 ಕ್ಕೆ ಕರ್ನಾಟಕದ ಪ್ರಸಿದ್ಧ ನಾಗಕ್ಷೇತ್ರ ಘಾಟಿ ಸುಬ್ರಹ್ಮಣ್ಯ ರಥೋತ್ಸವ
ಜ 5 ಕ್ಕೆ ಕರ್ನಾಟಕದ ಪ್ರಸಿದ್ಧ ನಾಗಕ್ಷೇತ್ರ ಘಾಟಿ ಸುಬ್ರಹ್ಮಣ್ಯ ರಥೋತ್ಸವ (PC: Twitter, Shri Ghati Subramanya Swamy Temple Facebook)

 ಬೆಂಗಳೂರು: ಪ್ರತಿ ವರ್ಷ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ನಡೆಯುವ ದನಗಳ ಜಾತ್ರೆ ಡಿಸೆಂಬರ್‌ 20 ಶುಕ್ರವಾರದಿಂದ ಆರಂಭವಾಗಿದೆ.ಜಾತ್ರೆಗೆ ರೈತರು ತಮ್ಮ ರಾಸುಗಳನ್ನು ಕರತರುತ್ತಿದ್ದಾರೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ಹೂವಿನ ಹಾರ ಹಾಕುವ ಮೂಲಕ ರಾಸುಗಳನ್ನು ಸ್ವಾಗತಿಸಿದರು.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ರಾಸುಗಳು ಆಗಮಿಸುವ ಕಾರಣ ವ್ಯಾಪಾರ ವಹಿವಾಟು ಕೂಡಾ ಚೆನ್ನಾಗಿರಲಿದೆ ಎನ್ನಲಾಗುತ್ತಿದೆ. ರಾಸುಗಳು ಮಲಗಲು ಹಾಗೂ ರೈತರಿಗೆ ಉಳಿದುಕೊಳ್ಳಲು ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಕೋಲಾರ, ಮುಳಬಾಗಿಲು, ದೇವನಹಳ್ಳಿ, ಹೊಸಕೋಟೆ ಹಾಗೂ ಸುತ್ತಮುತ್ತಲಿನ ರೈತರು ಲಕ್ಷಾಂತರ ರೂ ಬೆಲೆ ಬಾಳುವ ಹೋರಿಗಳನ್ನು ಸಾಕಿ ಜಾತ್ರೆಗೆ ಮಂಗಳವಾದ್ಯಗಳೊಂದಿಗೆ ಕರೆತರುವ ಸಂಪ್ರದಾಯ ಕೂಡಾ ಇದೆ. ಕಳೆದ ವರ್ಷ ಜೋಡಿ ಎತ್ತು 1.50 ಲಕ್ಷ ರೂಗೆ ಮಾರಾಟವಾಗಿದ್ದು ವಿಶೇಷ. ಜಾತ್ರೆಯಲ್ಲಿ ರಾಸುಗಳನ್ನು ಖರೀದಿಸಲು ಕರ್ನಾಟಕ ಮಾತ್ರವಲ್ಲ ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡಿನಿಂದ ಕೂಡಾ ರೈತರು ಆಗಮಿಸುತ್ತಾರೆ. ಜನವರಿ 5ಕ್ಕೆ ರಥೋತ್ಸವ ನಡೆಯಲಿದ್ದು ಆ ದಿನ ಕೂಡಾ ಭಕ್ತರು ದೂರದ ಊರುಗಳಿಂದ ಆಗಮಿಸುತ್ತಾರೆ.

ಬೆಂಗಳೂರಿನಿಂದ ಘಾಟಿಗೆ ಸಂಪರ್ಕ ಹೇಗೆ?

ಬೇರೆ ಊರುಗಳಿಂದ ಘಾಟಿ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಜಾತ್ರೆಗೆ ಹೋಗಲು ಬಯಸುವವರು ಬೆಂಗಳೂರಿಗೆ ಬಂದು ಅಲ್ಲಿಗೆ ಹೋಗಬಹುದು. ಬೆಂಗಳೂರು ಕೆಂಪೇಗೌಡ ಬಸ್‌ ನಿಲ್ದಾಣದಿಂದ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಎರಡೂ ಬಸ್‌ ಸೌಲಭ್ಯಗಳು ಇವೆ. ಮೆಜೆಸ್ಟಿಕ್‌ನಿಂದ ದೊಡ್ಡಬಳ್ಳಾಪುರಕ್ಕೆ ತೆರಳಿ ಅಲ್ಲಿಂದ ಖಾಸಗಿ ಬಸ್‌, ಆಟೋ, ಬಿಎಂಟಿಸಿ ಬಸ್‌ಗಳಿಂದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪ್ರಯಾಣಿಸಬಹುದು. ದೊಡ್ಡಬಳ್ಳಾಪುರದಿಂದ ಘಾಟಿ ಸುಬ್ರಹ್ಮಣ್ಯ ಸುಮಾರು 14 ಕಿಮೀ ದೂರದಲ್ಲಿದೆ. ಜಾತ್ರೆ ಸಮಯವಾಗಿದ್ದರಿಂದ ಹೆಚ್ಚವರಿ ಬಸ್‌ ಸೌಲಭ್ಯಗಳು ಕೂಡಾ ಇವೆ.

ಘಾಟಿಯ ಸಮೀಪ ನೋಡಲು ಏನೆಲ್ಲಾ ಇದೆ?

ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ನಾಗ ಕ್ಷೇತ್ರಕ್ಕೆ ಹೆಸರುವಾಸಿಯಾಗಿದೆ. ಜಾತ್ರೆ ಸಮಯದಲ್ಲಿ ಮಾತ್ರವಲ್ಲದೆ ಪ್ರತಿದಿನ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಇಷ್ಟಾರ್ಥಗಳನ್ನು ಪ್ರಾರ್ಥಿಸಿ, ಹರಕೆ ಸಲ್ಲಿಸಿ ಹೋಗುತ್ತಾರೆ. ದೇವಸ್ಥಾನವು ನಾಗಪ್ರತಿಷ್ಠೆ, ಕುಜ ದೋಷ ನಿವಾರಣೆ ಪೂಜೆ, ಸರ್ಪ ದೋಷ ನಿವಾರಣೆ ಪೂಜೆಗಳಿಗೆ ಹೆಸರುವಾಸಿಯಾಗಿದೆ. ಸುಬ್ರಹ್ಮಣ್ಯನು ಘಟಿಕಾಸುರ ಎಂಬ ರಾಕ್ಷಸನನ್ನು ಕೊಂದ ಸ್ಥಳವಾಗಿದ್ದರಿಂದ ಇದಕ್ಕೆ ಘಾಟಿ ಸುಬ್ರಹ್ಮಣ್ಯ ಎಂದು ಹೆಸರು ಬಂದಿದೆ. ದೇವಸ್ಥಾನ ಸುಮಾರು 600 ವರ್ಷಗಳ ಇತಿಹಾಸವನ್ನು ಹೊಂದಿದೆ.

ಘಾಟಿ ದೇವಸ್ಥಾನ ಮಾತ್ರವಲ್ಲದೆ ಸುತ್ತಮುತ್ತಲಿನ ಸ್ಥಳಗಳನ್ನು ನೋಡಲು ಬಯಸುವವರು ನಂದಿಬೆಟ್ಟ, ವಿದುರಾಶ್ವತ್ಥ, ಲೇಪಾಕ್ಷಿ ಹಾಗೂ ಇಶಾ ಫೌಂಡೇಶನ್‌ಗೆ ಹೋಗಿ ಬರಬಹುದು. ನಂದಿಬೆಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದ್ದು ಘಾಟಿಯಿಂದ ಸುಮಾರು 23 ಕಿಮೀ ದೂರದಲ್ಲಿದೆ. ನಂದಿಬೆಟ್ಟದಿಂದ ಸುಮಾರು 32 ಕಿಮೀ ದೂರದಲ್ಲಿ ಇಶಾ ಫೌಂಡೇಶನ್‌ ಇದೆ. ಹಾಗೇ ಘಾಟಿ ಸುಬ್ರಹ್ಮಣ್ಯದಿಂದ ಆಂಧ್ರಪ್ರದೇಶದ ಲೇಪಾಕ್ಷಿಗೆ ಸುಮಾರು 60 ಕಿಮೀ ದೂರವಿದ್ದು ಸ್ವಂತ ವಾಹನದಲ್ಲಿ ಹೋಗಿಬರಬಹುದು. ವಿದುರಾಶ್ವರ್ಥದಲ್ಲಿ ಅಶ್ವತ್ಥನಾರಾಯಣಸ್ವಾಮಿ ಮತ್ತು ಸುಬ್ರಮಣ್ಯಸ್ವಾಮಿಯ ದೇವಸ್ಥಾನಗಳಿದ್ದು ಇಲ್ಲಿ ಕೂಡಾ ನಾಗದೋಷ ನಿವಾರಣೆ ಪೂಜೆ ಬಹಳ ಪ್ರಸಿದ್ದಿ ಪಡೆದಿದೆ. ಇದು ಘಾಟಿ ಸುಬ್ರಹ್ಮಣ್ಯದಿಂದ 35 ಕಿಮೀ ದೂರದಲ್ಲಿದೆ.

ಇದನ್ನು ಹೊರತುಪಡಿಸಿ ಮಾಕಳಿದುರ್ಗ, ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ, ಬಂಡಿಹಳ್ಳ ಜಲಾಶಯಗಳೂ ಹತ್ತಿರದಲ್ಲೇ ಇವೆ.

ಘಾಟಿಯಲ್ಲಿ ಊಟದ ವ್ಯವಸ್ಥೆ

ಘಾಟಿ ಸುಬ್ರಹ್ಮಣ್ಯಕ್ಕೆ ಬರುವವರು ಊಟದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಪ್ರತಿದಿನ ಇಲ್ಲಿಗೆ ಸಾವಿರಾರು ಭಕ್ತರು ಬರುವುದರಿಂದ ಅನೇಕ ಹೋಟೆಲ್‌ಗಳು ಇಲ್ಲಿ ತಲೆಯೆತ್ತಿವೆ. ಅದಕ್ಕಿಂತ ಮುಖ್ಯವಾಗಿ ದೇವಸ್ಥಾನದ ಆಡಳಿತ ಮಂಡಳಿಯು ಇಲ್ಲಿಗೆ ಬರುವ ಭಕ್ತರಿಗೆ ಪ್ರತಿದಿನ ಊಟಕ್ಕೆ ಉಚಿತ ಅನ್ನದಾನ ಮಾಡುತ್ತಿದೆ.

ಘಾಟಿ ಸುಬ್ರಹ್ಮಣ್ಯದಲ್ಲಿ ವಸತಿ ವ್ಯವಸ್ಥೆ

ದೂರದಿಂದ ಘಾಟಿ ಸುಬ್ರಹ್ಮಣ್ಯಕ್ಕೆ ಬರಬೇಕೆಂದುಕೊಂಡವರಿಗೆ ಇಲ್ಲಿ ಉಳಿದುಕೊಳ್ಳಲು ಲಾಡ್ಜ್‌ಗಳ ವ್ಯವಸ್ಥೆ ಇದೆ. ಧರ್ಮಛತ್ರಗಳೂ ಇದ್ದು ಅಲ್ಲಿಯೂ ಉಳಿದುಕೊಳ್ಳಬಹುದು. ಒಂದು ವೇಳೆ ಘಾಟಿ ಸುಬ್ರಹ್ಮಣ್ಯದಲ್ಲಿ ತಂಗಲು ಲಾಡ್ಜ್‌ಗಳು ದೊರೆಯದಿದ್ದರೆ ದೊಡ್ಡಬಳ್ಳಾಪುರದಲ್ಲಿ ಕೂಡಾ ಸಾಕಷ್ಟು ಹೋಟೆಲ್‌ಗಳಿವೆ. ಆದರೆ ಇದು ಜಾತ್ರೆ, ರಥೋತ್ಸವದ ಸಮಯವಾಗಿರುವುದರಿಂದ ಮೊದಲೇ ಬುಕಿಂಗ್‌ ಮಾಡಿದರೆ ಅನುಕೂಲ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.