ಕಂಬಳಿ ಬೇಕೇ ಕಂಬಳಿ... ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಕುರಿ ಉಣ್ಣೆಯ ಪಾರಂಪರಿಕ ಕಂಬಳಿ, ಟೋಪಿ
ಕನ್ನಡ ಸುದ್ದಿ  /  ಕರ್ನಾಟಕ  /  ಕಂಬಳಿ ಬೇಕೇ ಕಂಬಳಿ... ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಕುರಿ ಉಣ್ಣೆಯ ಪಾರಂಪರಿಕ ಕಂಬಳಿ, ಟೋಪಿ

ಕಂಬಳಿ ಬೇಕೇ ಕಂಬಳಿ... ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಕುರಿ ಉಣ್ಣೆಯ ಪಾರಂಪರಿಕ ಕಂಬಳಿ, ಟೋಪಿ

ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಸಾಹಿತ್ಯ ಸಮ್ಮೇಳನವೂ ಪುಸ್ತಕ ಮಾರಾಟಗಾರರಿಗೆ ಮಾತ್ರವಲ್ಲ, ವಿವಿಧ ಉತ್ಪನ್ನಗಳ ಮಾರಾಟಗಾರರಿಗೂ ವೇದಿಕೆಯಾಗಿತ್ತು. ರಾಜ್ಯ, ದೇಶದ ವಿವಿಧ ಭಾಗಗಳಿಂದ ಬಂದ ಮಾರಾಟಗಾರರು ಇಲ್ಲಿದ್ದರು. ಈ ಬಾರಿಯ ಸಾಹಿತ್ಯ ಸಮ್ಮೇಳನದಲ್ಲಿ ಕುರಿ ಉಣ್ಣೆಯ ಉತ್ಪನ್ನಗಳ ಮಾರಾಟಗಾರೊಬ್ಬರು ಗಮನ ಸೆಳೆದರು.

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಕುರಿ ಉಣ್ಣೆಯ ಪಾರಂಪರಿಕ ಕಂಬಳಿ, ಟೋಪಿ ಇತರ ಉತ್ಪನ್ನಗಳು
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಂಡ ಕುರಿ ಉಣ್ಣೆಯ ಪಾರಂಪರಿಕ ಕಂಬಳಿ, ಟೋಪಿ ಇತರ ಉತ್ಪನ್ನಗಳು

ಹಿಂದೊಂದು ಕಾಲವಿತ್ತು, ಆಗ ಚಳಿಗಾಲದಲ್ಲಿ ಕಂಬಳಿ ಹೊದ್ದು ಕೂರುವ ಅಭ್ಯಾಸವಿತ್ತು. ಕಂಬಳಿ ಎಂದರೆ ಹಳ್ಳಿ ಜನರಿಗೆ ಅದೇನೋ ವ್ಯಾಮೋಹ, ಪ್ರೀತಿ. ಶುಭ ಸಮಾರಂಭಗಳಲ್ಲೂ ಕಂಬಳಿಗೆ ವಿಶೇಷ ಬೇಡಿಕೆ ಇತ್ತು. ಡಾ. ರಾಜ್‌ಕುಮಾರ್ ಕೂಡ ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಕುರಿಗಾಹಿ ಪಾತ್ರದಲ್ಲಿ ಕಂಬಳಿ ಹೊದ್ದು ‘ಬೆಳ್ಳಿ ಮೂಡಿತೋ ಕೋಳಿ ಕೂಗಿತೋ‘ ಎಂದು ಹಾಡಿ, ಕುಣಿದಿದ್ದನ್ನು ನೀವು ನೋಡಿರಬಹುದು. ಆ ಕಾಲದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಕಂಬಳಿ ಕಾಲ ಬದಲಾದಂತೆಲ್ಲಾ ಮೂಲೆ ಗುಂಪಾಯಿತು. ಕಂಬಳಿ ಜಾಗದಲ್ಲಿ ಜಾಕೆಟ್‌, ಸ್ವೆಟರ್‌ಗಳು ಬಂದವು. ಹೊದೆಯಲು ಕಾಟನ್‌, ಉಲ್ಲನ್ ಬೆಡ್‌ಶೀಟ್‌ಗಳು ಬಂದವು. ಹಿಂದೆಲ್ಲಾ ಕುರಿಗಾಹಿಗಳ ಬದುಕಿನ ಭಾಗವಾಗಿದ್ದ ಕಂಬಳಿ ಈಗ ಅವರಿಗೂ ಬೇಡವಾಗಿದೆ.

ಆದರೆ ಈ ಬಾರಿ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕಂಬಳಿ ಮಾರಾಟಗಾರರೊಬ್ಬರು ಗಮನ ಸೆಳೆಯುತ್ತಾರೆ. ಕಂಬಳಿಯ ಜೊತೆಗೆ ಇವರು ಕುರಿಯ ಉಣ್ಣೆಯಿಂದ ತಯಾರಿಸಿದ್ದ ಇತರ ಉತ್ಪನ್ನಗಳನ್ನು ತಂದಿದ್ದರು. ದೂರದ ಹಾವೇರಿಯಿಂದ ಬಂದಿದ್ದ ಹುಚ್ಚಪ್ಪ ತಾವು ಮನೆಯಲ್ಲೇ ಕೈಯಿಂದ ನೇಯ್ದು ಮಾಡಿದ್ದ ಕುರಿ ಉಣ್ಣೆಯ ಉತ್ಪನ್ನಗಳನ್ನ ಮಾರಾಟ ಮಾಡಲು ತಂದಿದ್ದರು.

ಹುಚ್ಚಪ್ಪನವರ ಬಳಿ ಏನೆಲ್ಲಾ ಇತ್ತು

ಕುರಿ ಉಣ್ಣೆಯಿಂದ ತಯಾರಿಸಿದ ಕರಿ ಕಂಬಳಿ ಮಾತ್ರವಲ್ಲ ಟೋಪಿ, ಸೊಂಟದ ಪಟ್ಟಿ, ಜಡೆ, ಕೈಗೆ ಕಟ್ಟುವ ದೃಷ್ಟಿದಾರ, ಮಕ್ಕಳ ಕೈಗೆ ಕಟ್ಟುವ ದೃಷ್ಟಿ ದಾರ, ಕಪ್ಪು, ಕಪ್ಪು ಬಿಳಿ ಮಿಶ್ರಿತ ದಾರಗಳು, ಕುರಿ ಉಣ್ಣೆಯ ದಾರದ ಉಂಡೆ ಹೀಗೆ ಕುರಿ ಉಣ್ಣೆಯ ವಿವಿಧ ಉತ್ಪನ್ನಗಳನ್ನು ತಯಾರಿಸಿಕೊಂಡು ಮಾರಾಟಕ್ಕೆ ತಂದಿದ್ದರು ಹುಚ್ಚಪ್ಪ.

ಕುಲ ಕುಸುಬು ಮುಂದುವರಿಸುತ್ತಿರುವ ಹುಚ್ಚಪ್ಪ

ಸುಂದರವಾಗಿ ಕೈಯಿಂದಲೇ ನೇಯ್ದ ಟೋಪಿ, ಕಂಬಳಿ, ಸೊಂಟದ ಪಟ್ಟಿಯನ್ನು ನೋಡಿದಾಗ ಎಂಥವರು ವಾವ್ ಎನ್ನಿವಂತಿತ್ತು. ಕೈಮಗ್ಗದ ಮೂಲಕ ತಯಾರಿಸಿರುವ ಈ ಉಣ್ಣೆಯ ಉತ್ಪನ್ನಗಳು ಜನರ ಗಮನ ಸೆಳೆದವು. ಹುಚ್ಚಪ್ಪನವರಿಗೆ ಈ ಕಲೆ ತಮ್ಮ ಪೂರ್ವಿಕರಿಂದ ಒಲಿದು ಬಂದಿದೆ. ಹಿಂದಿನವರು ಅನುಸರಿಸುತ್ತಿದ್ದ ಕುಲ ಕಸುಬನ್ನು ಹುಚ್ಚಪ್ಪನವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದೀಗ ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆಂದೇ ಈ ಉತ್ಪನ್ನಗಳನ್ನು ಮನೆಯಲ್ಲಿ ತಯಾರಿಸಿಕೊಂಡು ಮಾರಾಟಕ್ಕೆ ತಂದಿದ್ದರು.

ಅಪರೂಪಕ್ಕೆ ಕಂಡ ಕಂಬಳಿ ಕಂಡು ಜನರು ಕಂಬಳಿಯನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದರು. ಮಕ್ಕಳಂತೂ ಕಂಬಳಿ, ಕುರಿ ಉಣ್ಣೆಯ ಉತ್ಪನ್ನಗಳನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದರು. ಈ ಉತ್ಪನ್ನಗಳ ಬೆಲೆಯೂ ಹೆಚ್ಚೇನಿರಲಿಲ್ಲ. ಮಂಡ್ಯ ಭಾಗದ ಜನರು ಕಂಬಳಿ ಖರೀದಿ ಮಾಡಲು ದರ ವಿಚಾರಿಸುತ್ತಿರುವುದು ಕೂಡ ಗಮನಕ್ಕೆ ಬಂತು.

ಮರೆಯಾಗುತ್ತಿರುವ ಪಾರಂಪರಿಕ ಕಂಬಳಿ

ಕಂಬಳಿ ನೇಯುವವರು ತಮ್ಮ ಪಾರಂಪರಿಕ ಕುಲ ಕಸುಬನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಆದರೆ ಈಗೀಗ ಕಂಬಳಿ ನೇಯ್ಗೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಕುರಿ ಕಾಯುವವರು ಕುರಿಯ ತುಪ್ಪಳವನ್ನು ಕತ್ತರಿಸಿ, ಕಂಬಳಿ ನೇಯ್ಗೆ ಮಾಡುವವರಿಗೆ ನೀಡುತ್ತಿದ್ದರು. ಕಂಬಳಿ ನೇಯುವವರು ಅದನ್ನು ತಂದು ಸ್ವಚ್ಛ ಮಾಡಿ ಕಂಬಳಿ ನೇಯ್ದು ಗಂಜಿ ಹಾಕಿ ಒಣಗಿಸಿ ಕಂಬಳಿ ತಯಾರಿಸುತ್ತಿದ್ದರು. ಈಗೀಗ ಕಂಬಳಿ ಬಳಕೆ ಕಡಿಮೆಯಾಗಿರುವುದರಿಂದ ಸಾಂಪ್ರದಾಯಿಕ ಕಂಬಳಿ ನೇಯ್ಗೆ ಪ್ರಮಾಣವೂ ಕಡಿಮೆಯಾಗಿದೆ. ಹಲವರ ಕುಲ ಕಸುಬಾಗಿ, ಹೊಟ್ಟೆ ತುಂಬಿಸುತ್ತಿದ್ದ ಕಂಬಳಿ ಅಪರೂಪಕ್ಕೊಮ್ಮೆ ಕಾಣುವಂತಾಗಿದೆ. ಮಂಡ್ಯ ಭಾಗದಲ್ಲಿ ಕುರಿಗಾಹಿಗಳ ಸಂಖ್ಯೆ ಹೆಚ್ಚಿದ್ದು, ಅವರಿಗೆ ಕಂಬಳಿ ಅನಿವಾರ್ಯವಾಗಬಹುದು, ಅಲ್ಲದೇ ಕುರಿ ಉಣ್ಣೆಯ ಉತ್ಪನ್ನಗಳು ಹೆಚ್ಚು ಮಾರಾಟವಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಹುಚ್ಚಪ್ಪ ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಕುರಿ ಉಣ್ಣೆ ಉತ್ಪನ್ನಗಳನ್ನು ತಂದಿದ್ದಾರೆ. ಒಟ್ಟಾರೆ ಸಾಹಿತ್ಯ ಸಮ್ಮೇಳನದ ಅಂಗಳದಲ್ಲಿ ಕುರಿ ನುಣ್ಣೆಯ ಉತ್ಪನ್ನಗಳನ್ನು ಕಂಡ ಜನರು ಬೆರಗುಗಣ್ಣಿನಿಂದ ನೋಡಿದ್ದು ಮಾತ್ರ ಸುಳ್ಳಲ್ಲ.

ಲೇಖನ: ರೇಷ್ಮಾ ಶೆಟ್ಟಿ

Whats_app_banner