ಇಂಗ್ಲೆಂಡ್ ಮಣಿಸಿದ ಭಾರತದ ಆಟಗಾರರಿಗೆ ಭರ್ಜರಿ ಉಡುಗೊರೆ ಘೋಷಿಸಿದ ಬಿಸಿಸಿಐ; ಇನ್ಮುಂದೆ ಪಂದ್ಯದ ಶುಲ್ಕ ಡಬಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ಮಣಿಸಿದ ಭಾರತದ ಆಟಗಾರರಿಗೆ ಭರ್ಜರಿ ಉಡುಗೊರೆ ಘೋಷಿಸಿದ ಬಿಸಿಸಿಐ; ಇನ್ಮುಂದೆ ಪಂದ್ಯದ ಶುಲ್ಕ ಡಬಲ್

ಇಂಗ್ಲೆಂಡ್ ಮಣಿಸಿದ ಭಾರತದ ಆಟಗಾರರಿಗೆ ಭರ್ಜರಿ ಉಡುಗೊರೆ ಘೋಷಿಸಿದ ಬಿಸಿಸಿಐ; ಇನ್ಮುಂದೆ ಪಂದ್ಯದ ಶುಲ್ಕ ಡಬಲ್

BCCI : ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟೆಸ್ಟ್​​​ನಲ್ಲಿ ಇನಿಂಗ್ಸ್ ಹಾಗೂ 64 ರನ್‌ಗಳಿಂದ ಗೆದ್ದ ಭಾರತ ತಂಡದ ಆಟಗಾರರಿಗೆ ಬಿಸಿಸಿಐ ಭರ್ಜರಿ ಉಡುಗೊರೆ ನೀಡಿದೆ.

ಇಂಗ್ಲೆಂಡ್ ಮಣಿಸಿದ ಭಾರತದ ಆಟಗಾರರಿಗೆ ಭರ್ಜರಿ ಉಡುಗೊರೆ ಘೋಷಿಸಿದ ಬಿಸಿಸಿಐ.
ಇಂಗ್ಲೆಂಡ್ ಮಣಿಸಿದ ಭಾರತದ ಆಟಗಾರರಿಗೆ ಭರ್ಜರಿ ಉಡುಗೊರೆ ಘೋಷಿಸಿದ ಬಿಸಿಸಿಐ. (Jay Shah-X)

ಧರ್ಮಶಾಲಾದಲ್ಲಿ ಜರುಗಿದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಚಾರಿತ್ರಿಕ ಗೆಲುವು ದಾಖಲಿಸಿದ ಬೆನ್ನಲ್ಲೇ ಭಾರತ ತಂಡದ ಆಟಗಾರರಿಗೆ ಬಿಸಿಸಿಐ ಸಿಹಿ ಸುದ್ದಿಯನ್ನು ಪ್ರಕಟಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಕುರಿತು ಟ್ವೀಟ್ ಮಾಡಿದ್ದಾರೆ. ಆಟಗಾರರ ವಾರ್ಷಿಕ ವೇತನದ ಜತೆಗೆ ಹೆಚ್ಚುವರಿಯಾಗಿ ಮೊತ್ತವನ್ನು ಪಾವತಿಸುವ ನಿರ್ಧಾರವನ್ನು ಘೋಷಿಸಿದ್ದಾರೆ.

ಸದ್ಯ ಭಾರತೀಯ ಆಟಗಾರರಿಗೆ ಪ್ರತಿ ಟೆಸ್ಟ್​ ಪಂದ್ಯಕ್ಕೆ ವೇತನ 15 ಲಕ್ಷ ಸಿಗುತ್ತಿದೆ. ಆದರೆ, 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಬಳಿಕ ನಡೆಯುವ ಟೆಸ್ಟ್​​​ಗಳಲ್ಲಿ ಬೋನಸ್ ರೂಪದಲ್ಲಿ ನೂತನ ವೇತನ ಮಾದರಿಯಲ್ಲಿ ಹಣವನ್ನು ಪಡೆಯಲಿದ್ದಾರೆ. ಅಂದರೆ ಉದಾಹರಣೆಗೆ 9 ಪಂದ್ಯಗಳ ಆವೃತ್ತಿಯಲ್ಲಿ ಕನಿಷ್ಠ 5 ರಿಂದ 6 ಟೆಸ್ಟ್​​ ಆಡುವ ಆಟಗಾರರು ಪಂದ್ಯಕ್ಕೆ 15 ಲಕ್ಷದ ಬದಲಿಗೆ 30 ಲಕ್ಷ (ಪ್ರತಿ ಪಂದ್ಯಕ್ಕೆ) ಪಡೆಯಲಿದ್ದಾರೆ.

ಹಾಗೇ ವರ್ಷದಲ್ಲಿ ಕನಿಷ್ಠ 75ರಷ್ಟು ಪಂದ್ಯಗಳನ್ನು ಆಡುವ ಆಟಗಾರನ ಶುಲ್ಕವು ಪ್ರತಿ ಪಂದ್ಯಕ್ಕೆ 22.5 ಲಕ್ಷದಿಂದ 45 ಲಕ್ಷಕ್ಕೆ ದುಪ್ಪಟ್ಟಾಗಿದೆ. ವರ್ಷದ ಎಲ್ಲ ಟೆಸ್ಟ್‌ ಸರಣಿಗಳಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಮಾತ್ರ ಇದು ಅನ್ವಯವಾಗಲಿದೆ. ಆದರೆ, ನಾಲ್ಕು ಅಥವಾ ಅದಕ್ಕಿಂತ ಕಡಿಮೆ ಟೆಸ್ಟ್​​​ ಪಂದ್ಯಗಳನ್ನಾಡುವ ಆಟಗಾರರಿಗೆ ಅನ್ವಯವಾಗುವುದಿಲ್ಲ. ಈ ಬಗ್ಗೆ ಜಯ್​ ಶಾ ಅಂಕಿ-ಅಂಶಗಳ ಜೊತೆಗೆ ಟ್ವೀಟ್ ಮಾಡಿದ್ದಾರೆ. ಆ ಪೋಸ್ಟ್​ ಇಲ್ಲಿದೆ ನೋಡಿ.

ಆಟಗಾರರು ಟೆಸ್ಟ್​ ಕ್ರಿಕೆಟ್​ನತ್ತ ಹೆಚ್ಚು ಆಸಕ್ತಿ ವಹಿಸಬೇಕು ಮತ್ತು ಹೆಚ್ಚು ಟೆಸ್ಟ್​​ ಪಂದ್ಯಗಳನ್ನಾಡಬೇಕು ಮತ್ತು ಟೆಸ್ಟ್ ಕ್ರಿಕೆಟ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು ಎನ್ನುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಯ್​ ಶಾ ಹೇಳಿದ್ದಾರೆ. 'ಟೆಸ್ಟ್ ಕ್ರಿಕೆಟ್ ಪ್ರೋತ್ಸಾಹ ಯೋಜನೆ'ಯು ಟೆಸ್ಟ್ ಪಂದ್ಯಗಳಿಗೆ ಅಸ್ತಿತ್ವದಲ್ಲಿರುವ ಪಂದ್ಯ ಶುಲ್ಕದ ಮೇಲೆ ಹೆಚ್ಚುವರಿ ಬಹುಮಾನ ರಚನೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.

ಈ ಹಿಂದೆ ಬಿಸಿಸಿಐನಿಂದ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಪೈಕಿ ಮಹಿಳಾ ಪ್ರೀಮಿಯರ್​​ ಲೀಗ್​ ಮತ್ತು ಮಹಿಳಾ ಆಟಗಾರ್ತಿಯರಿಗೂ ಪುರುಷರಂತೆ ಸಮಾನವಾದ ವೇತನ ಪದ್ಧತಿ ನೀಡಿರುವುದು ಪ್ರಮುಖವಾಗಿವೆ. ಇದೀಗ ಮಹಿಳಾ ಕ್ರಿಕೆಟರ್ಸ್​ಗೂ ದೇಶೀಯ ರೆಡ್ ಬಾಲ್ ಕ್ರಿಕೆಟ್ ಆರಂಭಿಸಲು ಚಿಂತನೆಯೂ ನಡೆದಿದೆ.

ಭಾರತಕ್ಕೆ ಇನ್ನಿಂಗ್ಸ್ ಮತ್ತು 64 ರನ್‌ಗಳ ಜಯ

ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಭಾರತ ಇನ್ನಿಂಗ್ಸ್ ಮತ್ತು 64 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ 218 ರನ್ ಗಳಿಸಿ ಆಲೌಟ್ ಆಗಿತ್ತು. ಕುಲ್ದೀಪ್ 5, ಅಶ್ವಿನ್ 4 ವಿಕೆಟ್ ಪಡೆದು ಮಿಂಚಿದರು. ಇದಕ್ಕೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್​​​ನಲ್ಲಿ ಬ್ಯಾಟಿಂಗ್ ನಡೆಸಿದ ಭಾರತ 477 ರನ್ ಕಲೆ ಹಾಕಿತು. ಅಲ್ಲದೆ, 259 ರನ್​ಗಳ ಮುನ್ನಡೆ ಪಡೆಯಿತು. ಆದರೆ ದ್ವಿತೀಯ ಇನ್ನಿಂಗ್ಸ್​ನಲ್ಲಿ ಈ ರನ್​ಗಳನ್ನು ಮೀರಿಸಲು ಪ್ರಯತ್ನಿಸಿದ ಇಂಗ್ಲೆಂಡ್​ 195 ರನ್​ಗಳಿಗೆ ಸರ್ವಪತನಗೊಂಡಿತು.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner