ಕ್ಯಾಮರೂನ್ ಗ್ರೀನ್, ರಜತ್ ಪಾಟೀದಾರ್ ಔಟ್; ರಾಜಸ್ಥಾನ್ ರಾಯಲ್ ಪಂದ್ಯಕ್ಕೆ ಆರ್ಸಿಬಿ ಪ್ಲೇಯಿಂಗ್ XIನಲ್ಲಿ 5 ಬದಲಾವಣೆ
RCB Playing XI : ಸತತ ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ನಲ್ಲಿ ಐದು ಬದಲಾವಣೆ ಮಾಡಲು ಚಿಂತನೆ ನಡೆಸಿದೆ.
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಗ್ಗರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತನ್ನ 2ನೇ ಪಂದ್ಯದಲ್ಲಿ ಗೆದ್ದು ಲಯಕ್ಕೆ ಮರಳಿತ್ತಾದರೂ ಮತ್ತೆ ಸತತ ಸೋಲುಗಳಿಂದ ಕಂಗೆಟ್ಟಿದೆ. ಕಳೆದ ಎರಡು ಪಂದ್ಯಗಳಲ್ಲಿ ಎದುರಾಳಿಗೆ ಶರಣಾಗಿರುವ ಆರ್ಸಿಬಿ (RCB 2024), ಈಗ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ಸೆಣಸಾಟಕ್ಕೆ ಸಜ್ಜಾಗುತ್ತಿದೆ. ಉಭಯ ತಂಡಗಳು ಏಪ್ರಿಲ್ 6ರಂದು ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಸೆಣಸಾಟಕ್ಕೆ ರೆಡಿಯಾಗಿವೆ.
ಒಂದೆಡೆ ಆರ್ಸಿಬಿ ಸತತ ಸೋಲುಗಳಿಂದ ಕಂಗೆಟ್ಟಿದ್ದರೆ, ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಸತತ ಗೆಲುವುಗಳೊಂದಿಗೆ ಮುನ್ನುಗ್ಗುತ್ತಿದೆ. ಆರ್ಆರ್ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಇನ್ನೂ ಸೋಲು ಕಾಣದ ಆರ್ಆರ್, ಮತ್ತೊಂದು ಗೆಲುವಿನ ಮೇಲೆ ಕಣ್ಣಿಟ್ಟಿದೆ. ತನ್ನ ತವರಿನ ಲಾಭ ಪಡೆದು ಆರ್ಸಿಬಿಗೆ ಸೋಲುಣಿಸಲು ಲೆಕ್ಕಾಚಾರ ಹಾಕಿಕೊಂಡಿದೆ ರಾಜಸ್ಥಾನ್.
ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದ್ದ ಆರ್ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿತ್ತು. ಆದರೆ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ದ ಸೋತು ತೀವ್ರ ಹಿನ್ನಡೆ ಅನುಭವಿಸಿತು. ತನ್ನ ಪ್ಲೇ ಆಫ್ ಹಾದಿಯನ್ನು ಸುಲಭವಾಗಿಸಿಕೊಳ್ಳಲು ಆರ್ಸಿಬಿ ಗೆಲ್ಲುವ ಅನಿವಾರ್ಯತೆಗೆ ಸಿಲುಕಿದೆ. ಅದಕ್ಕಾಗಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡುವ ಸಾಧ್ಯತೆ ಇದೆ. ಆಕ್ರಮಣಕಾರಿ ಆಟಗಾರರು ಅವಕಾಶ ಪಡೆಯುವ ನಿರೀಕ್ಷೆ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಬ್ಯಾಟಿಂಗ್ ಲೈನಪ್ ಹೊಂದಿದೆ. ಆದರೆ ಆರಂಭದಲ್ಲಿ ವಿರಾಟ್ ಕೊಹ್ಲಿ ಮತ್ತು ಕೊನೆಯಲ್ಲಿ ದಿನೇಶ್ ಕಾರ್ತಿಕ್ ಮಾತ್ರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನಾಯಕ ಫಾಫ್ ಡು ಪ್ಲೆಸಿಸ್, 17.50 ಕೋಟಿ ಒಡೆಯ ಕ್ಯಾಮರೂನ್ ಗ್ರೀನ್, ರಜತ್ ಪಾಟೀದಾರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ನಾಲ್ಕು ಪಂದ್ಯಗಳಿಂದಲೂ ವೈಫಲ್ಯ ಅನುಭವಿಸಿದ್ದಾರೆ. ಹಾಗಾಗಿ ಈ ನಾಲ್ವರಲ್ಲಿ ಇಬ್ಬರನ್ನು ಕೈಬಿಡುವ ಸಾಧ್ಯತೆ ಇದೆ.
ಕ್ಯಾಮರೂನ್ ಗ್ರೀನ್-ರಜತ್ ಪಾಟೀದಾರ್ ಔಟ್
ಕಳಪೆ ಪ್ರದರ್ಶನ ನೀಡುತ್ತಿರುವ ಆಟಗಾರರ ಪೈಕಿ ರಜತ್ ಪಾಟೀದಾರ್ ಮತ್ತು ಕ್ಯಾಮರೂನ್ ಗ್ರೀನ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಡಲು ಮ್ಯಾನೇಜ್ಮೆಂಟ್ ಚಿಂತಿಸುತ್ತಿದೆ. ಗ್ರೀನ್ ಬದಲಿಗೆ ಹಾರ್ಡ್ ಹಿಟ್ಟರ್ ವಿಲ್ಜ್ಯಾಕ್ಸ್ ಮತ್ತು ಪಾಟೀದಾರ್ ಸ್ಥಾನಕ್ಕೆ ಸುಯೇಶ್ ಪ್ರಭುದೇಸಾಯಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಇದೆ. ಮ್ಯಾಕ್ಸ್‌ವೆಲ್ ಕೂಡ ಅಟ್ಟರ್ಫ್ಲಾಪ್ ಆಗಿದ್ದರೂ ತಂಡದಲ್ಲಿ ಉಳಿಸಿಕೊಳ್ಳಲು ಕಾರಣ ಅವರ ಬೌಲಿಂಗ್ ಚೆನ್ನಾಗಿದೆ. ಇನ್ನು ಡು ಪ್ಲೆಸಿಸ್ ನಾಯಕನಾಗಿದ್ದು, ಅವರ ಬಿಡುಗಡೆ ಅಸಾಧ್ಯ.
ಅಲ್ಲದೆ, ಅನುಜ್ ರಾವತ್ ಬದಲಿಗೆ ಮಹಿಪಾಲ್ ಲೊಮ್ರೋರ್ ತಂಡದಲ್ಲಿ ಆಡಬೇಕು. ದಿನೇಶ್ ಕಾರ್ತಿಕ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸಬೇಕಿದೆ. ಅನುಜ್ ಮೂರು ಪಂದ್ಯಗಳಿಂದಲೂ ನಿರಾಸೆ ಮೂಡಿಸಿದ್ದಾರೆ. ತಂಡವನ್ನು ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿಸಲು ಬೌಲಿಂಗ್ ವಿಭಾಗದಲ್ಲೂ ಕೆಲ ಬದಲಾವಣೆ ಅಗತ್ಯ ಇದೆ. ವಿಜಯ್ ಕುಮಾರ್ ವೈಶಾಕ್ ಮತ್ತು ಲಾಕಿ ಫರ್ಗ್ಯುಸನ್ ಅವಕಾಶ ಪಡೆಯುವ ನಿರೀಕ್ಷೆ ಇದೆ. ಯಶ್ ದಯಾಳ್ ಮತ್ತು ರೀಸ್ ಟೋಪ್ಲಿ ಅವರನ್ನು ಕೈ ಬಿಡಬೇಕಿದೆ. ದಯಾಳ್ರನ್ನು ಕೈಬಿಟ್ಟರೂ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಬಹುದು. ದಯಾಳ್ ಬೌಲಿಂಗ್ ಉತ್ತಮವಾಗಿದ್ದರೂ ವಿಕೆಟ್ ಪಡೆಯುತ್ತಿಲ್ಲ. ರೀಸ್ ಟೋಪ್ಲಿ ಬೌಲಿಂಗ್ ಕೂಡ ಕಳಪೆಯಾಗಿದೆ.
ರಾಜಸ್ಥಾನ್ ರಾಯಲ್ಸ್ ಪಂದ್ಯಕ್ಕೆ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ XI
ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜ್ಯಾಕ್ಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಸುಯೇಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್, ಮಹಿಪಾಲ್ ಲೊಮ್ರೋರ್, ವೈಶಾಖ್ ವಿಜಯ್‌ಕುಮಾರ್, ಲಾಕಿ ಫರ್ಗ್ಯುಸನ್, ಮೊಹಮ್ಮದ್ ಸಿರಾಜ್, ಮಯಾಂಕ್ ಡಾಗರ್.