ಕನ್ನಡ ಸುದ್ದಿ  /  Cricket  /  Ipl 2024 Opener Chennai Super Kings Vs Royal Challengers Bengaluru Breaks Viewers Records On Tv And Digital Csk Rcb Jra

ಟಿವಿ ಮತ್ತು ಡಿಜಿಟಲ್ ವೀಕ್ಷಣೆಯಲ್ಲಿ ಹೊಸ ರೆಕಾರ್ಡ್;‌ ಹಳೆ ದಾಖಲೆ ಮುರಿದ ಸಿಎಸ್‌ಕೆ-ಆರ್‌ಸಿಬಿ ಐಪಿಎಲ್‌ ಉದ್ಘಾಟನಾ ಪಂದ್ಯ

ಐಪಿಎಲ್‌ 17ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಸಿಎಸ್‌ಕೆ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾದವು. ಈ ಪಂದ್ಯವು ಅತಿ ಹೆಚ್ಚು ಟಿವಿ ವೀಕ್ಷಣೆಗೆ ಸಾಕ್ಷಿಯಾಯಿತು. ಇದೇ ವೇಳೆ ಡಿಜಿಟಲ್‌ ಮಾಧ್ಯಮದಲ್ಲಿಯೂ ಆರ್‌ಸಿಬಿ ತಂಡದ ಪಂದ್ಯ ದಾಖಲೆಯ ವೀಕ್ಷಣೆ ಗಳಿಸಿತು.

ಹಳೆ ದಾಖಲೆ ಮುರಿದ ಸಿಎಸ್‌ಕೆ-ಆರ್‌ಸಿಬಿ ಐಪಿಎಲ್‌ ಉದ್ಘಾಟನಾ ಪಂದ್ಯ
ಹಳೆ ದಾಖಲೆ ಮುರಿದ ಸಿಎಸ್‌ಕೆ-ಆರ್‌ಸಿಬಿ ಐಪಿಎಲ್‌ ಉದ್ಘಾಟನಾ ಪಂದ್ಯ (AP)

ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಗಳು ಕಾದಾಡಿದವು. ಚೆನ್ನೈನ ಚೆಪಾಕ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಸಿಎಸ್‌ಕೆ ತಂಡವು ಭರ್ಜರಿ ಜಯ ಸಾಧಿಸಿತು. ಈ ಪಂದ್ಯವು ವೀಕ್ಷಣೆಯ ಲೆಕ್ಕದಲ್ಲಿ ದಾಖಲೆ ನಿರ್ಮಿಸಿದೆ. ಟಿವಿ ವೀಕ್ಷಣೆಯಲ್ಲಿ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದಿದೆ ಎಂದು ಐಪಿಎಲ್‌ ಪಂದ್ಯಗಳ ಅಧಿಕೃತ ಟಿವಿ ಪ್ರಸಾರಕ ಡಿಸ್ನಿ ಸ್ಟಾರ್ ತಿಳಿಸಿದೆ.

“ಐಪಿಎಲ್ 2024ರ ಮೊದಲ ಪಂದ್ಯದ ದಿನದಂದು ಬರೋಬ್ಬರಿ 16.8 ಕೋಟಿ ವೀಕ್ಷಕರು (unique viewers) ವೀಕ್ಷಿಸಿದ್ದಾರೆ. ಒಟ್ಟು 1276 ಕೋಟಿ ನಿಮಿಷಗಳ ವೀಕ್ಷಣಾ ಸಮಯ ದಾಖಲಾಗಿದೆ. ಇದುವರೆಗೆ ಐಪಿಎಲ್‌ ಉದ್ಘಾಟನಾ ಪಂದ್ಯವು ಇಷ್ಟು ಪ್ರಮಾಣದ ವೀಕ್ಷಣೆ ಪಡೆದಿರಲಿಲ್ಲ. ಯಾವುದೇ ಐಪಿಎಲ್ ಋತುವಿನ ಆರಂಭಿಕ ದಿನದಂದು ದಾಖಲಾದ ಅತಿ ಹೆಚ್ಚು ವೀಕ್ಷಣೆ ಇದು” ಎಂದು ಡಿಸ್ನಿ ಸ್ಟಾರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಐಪಿಎಲ್‌ 17ನೇ ಆವೃತ್ತಿಯ ಆರಂಭಿಕ ದಿನದ ಪಂದ್ಯವು ಏಕಕಾಲಕ್ಕೆ ಅತಿ ಹೆಚ್ಚು ಜನ ವೀಕ್ಷಿಸಿದ ದಾಖಲೆಗೆ ಸಾಕ್ಷಿಯಾಯ್ತು. ಟಿವಿ ಮೂಲಕ ಡಿಸ್ನಿ ಸ್ಟಾರ್ ನೆಟ್ವರ್ಕ್‌ನಲ್ಲಿ ಏಕಕಾಲದಲ್ಲಿ ನೇರಪ್ರಸಾರವನ್ನು 6.1 ಕೋಟಿ ವೀಕ್ಷಕರು ವೀಕ್ಷಿಸಿದ್ದಾರೆ ಎಂದು ಸ್ಟಾರ್‌ ಸ್ಪೋರ್ಟ್ಸ್‌ ತಿಳಿಸಿದೆ.

ಇದನ್ನೂ ಓದಿ | ಮೈದಾನಕ್ಕೆ ನುಗ್ಗಿದ ನಾಯಿ ಹಿಡಿಯಲೆತ್ನಿಸಿದ ಹಾರ್ದಿಕ್; ಸಿಕ್ಕಿದ್ದೇ ಚಾನ್ಸೆಂದು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ ನೆಟ್ಟಿಗರು

ಈ ಕುರಿತು ಸ್ಟಾರ್ ಸ್ಪೋರ್ಟ್ಸ್ ವಕ್ತಾರರು ಮಾತನಾಡಿದ್ದು, ಇದು ಒಂದು ಸ್ಮರಣೀಯ ಸಾಧನೆ ಎಂದು ಹೇಳಿದ್ದಾರೆ. “ಸ್ಟಾರ್ ಸ್ಪೋರ್ಟ್ಸ್ ಮೇಲಿನ ಅಭಿಮಾನಿಗಳ ಪ್ರೀತಿ ನೆಟ್ವರ್ಕ್‌ನ ಅಚಲ ಬದ್ಧತೆಯಿಂದ ಸಾಧ್ಯವಾಗಿದೆ. ಕ್ರಿಕೆಟ್ ಮತ್ತು ಐಪಿಎಲ್ ಅನ್ನು ಬೆಳೆಸಲು ಸ್ಟಾರ್ ಸ್ಪೋರ್ಟ್ಸ್ ನಿರಂತರವಾಗಿ ಕೈಗೊಂಡಿರುವ ಉಪಕ್ರಮಗಳಿಗೆ ಬೆಂಬಲ ನೀಡಿದ್ದಕ್ಕಾಗಿ ನಾವು ನಮ್ಮ ಎಲ್ಲಾ ಪಾಲುದಾರರಿಗೆ ಧನ್ಯವಾದ ಅರ್ಪಿಸುತ್ತೇವೆ. ಇದೇ ವೇಳೆ ಬಿಸಿಸಿಐಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ” ಎಂದು ಅವರು ಹೇಳಿದ್ದಾರೆ.

ಸ್ಟಾರ್‌ ಸ್ಫೋರ್ಟ್ಸ್‌ ಮೂಲಕ ಹಲವು ಸ್ಟಾರ್‌ ಆಟಗಾರರು ಕಾಮೆಂಟರಿ ಮಾಡುತ್ತಿದ್ದಾರೆ. ಮಾಜಿ ಕ್ರಿಕೆಟಿಗರು ವೀಕ್ಷಕ ವಿವರಣೆ ಪ್ಯಾನೆಲ್‌ನಲ್ಲಿದ್ದಾರೆ. ನವಜೋತ್ ಸಿಂಗ್ ಸಿಧು, ಭಾರತದ ವಿಶ್ವ ಚಾಂಪಿಯನ್ ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ರವಿ ಶಾಸ್ತ್ರಿ, ಸುನಿಲ್ ಗವಾಸ್ಕರ್ ಮತ್ತು ಕ್ರಿಸ್ ಶ್ರೀಕಾಂತ್ ಕಾಮೆಂಟರಿ ಪ್ಯಾನೆಲ್‌ಗೆ ಮರಳಿದ್ದಾರೆ. ಸ್ಟೀವ್ ಸ್ಮಿತ್ ಮತ್ತು ಸ್ಟುವರ್ಟ್ ಬ್ರಾಡ್, ಬ್ರಿಯಾನ್ ಲಾರಾ, ಮ್ಯಾಥ್ಯೂ ಹೇಡನ್, ಕೆವಿನ್ ಪೀಟರ್ಸನ್, ಜಾಕ್ ಕಾಲಿಸ್, ಡೇಲ್ ಸ್ಟೇನ್ ಅವರಂಥ ದಿಗ್ಗಜ ವಿದೇಶಿ ಆಟಗಾರರು ಕೂಡಾ ವೀಕ್ಷಕ ವಿವರಕರಾಗಿದ್ದಾರೆ.

ಜಿಯೋ ಸಿನಿಮಾದಲ್ಲೂ ದಾಖಲೆಯ ವೀಕ್ಷಣೆ

ಅತ್ತ ಈ ಬಾರಿಯ ಐಪಿಎಲ್‌ ಪಂದ್ಯಾವಳಿಯ ಪ್ರಸಾರದ ಡಿಜಿಟಲ್‌ ಹಕ್ಕುಗಳು ಜಿಯೋ ಸಿನೆಮಾ ಪಾಲಾಗಿದೆ. ಇದರಲ್ಲಿ ಇನ್ನೂ ಹೆಚ್ಚಿನ ವೀಕ್ಷಕರು ಪಂದ್ಯ ವೀಕ್ಷಿಸಿದ್ದಾರೆ. ಮೊದಲ ದಿನದ ಪಂದ್ಯದ ವೇಳೆ 11.3 ಕೋಟಿ ವೀಕ್ಷಕರನ್ನು ಜಿಯೋ ಸಿನಿಮಾ ಗಳಿಸಿದೆ. ಐಪಿಎಲ್ 2023ರ ಮೊದಲ ದಿನದ ಪಂದ್ಯಕ್ಕಿಂತ ಇದು 51 ಪ್ರತಿಶತ ಹೆಚ್ಚಳವಾಗಿದೆ ಎಂದು ವಯಾಕಾಮ್‌ 18 ಹೇಳಿಕೊಂಡಿದೆ. ಮೊದಲ ದಿನ ಜಿಯೋ ಸಿನೆಮಾದಲ್ಲಿ ಒಟ್ಟು ವೀಕ್ಷಣೆಯ ಸಮಯ 660 ಕೋಟಿ ನಿಮಿಷಗಳು ದಾಖಲಾಗಿದೆ.