ರೋಹಿತ್-ದ್ರಾವಿಡ್ ಮೇಲೆ ವಿಶ್ವಕಪ್ ಫೈನಲ್ ಪಿಚ್ ಡಾಕ್ಟರಿಂಗ್‌ ಆರೋಪ; ಪ್ರತಿದಿನ ಪಿಚ್‌ ಬಳಿ ಬರುತ್ತಿದ್ದರು ಎಂದ ಮಾಜಿ ಕ್ರಿಕೆಟಿಗ
ಕನ್ನಡ ಸುದ್ದಿ  /  ಕ್ರಿಕೆಟ್  /  ರೋಹಿತ್-ದ್ರಾವಿಡ್ ಮೇಲೆ ವಿಶ್ವಕಪ್ ಫೈನಲ್ ಪಿಚ್ ಡಾಕ್ಟರಿಂಗ್‌ ಆರೋಪ; ಪ್ರತಿದಿನ ಪಿಚ್‌ ಬಳಿ ಬರುತ್ತಿದ್ದರು ಎಂದ ಮಾಜಿ ಕ್ರಿಕೆಟಿಗ

ರೋಹಿತ್-ದ್ರಾವಿಡ್ ಮೇಲೆ ವಿಶ್ವಕಪ್ ಫೈನಲ್ ಪಿಚ್ ಡಾಕ್ಟರಿಂಗ್‌ ಆರೋಪ; ಪ್ರತಿದಿನ ಪಿಚ್‌ ಬಳಿ ಬರುತ್ತಿದ್ದರು ಎಂದ ಮಾಜಿ ಕ್ರಿಕೆಟಿಗ

ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ, ಟೀಮ್ ಇಂಡಿಯಾ ಸೋಲು ಕಂಡಿತ್ತು. ಭಾರತ ವಿಶ್ವಕಪ್‌ ಸೋತು ಹಲವು ತಿಂಗಳುಗಳೇ ಕಳೆದಿವೆ. ಆದರೆ ಈಗ ವಿಶ್ವಕಪ್‌ ಫೈನಲ್‌ ಪಂದ್ಯದ ಪಿಚ್‌ ಮಾರ್ಪಾಡು ಮಾಡಿದ ಆರೋಪ ಕೇಳಿ ಬಂದಿದೆ.

ರೋಹಿತ್-ದ್ರಾವಿಡ್ ಮೇಲೆ ವಿಶ್ವಕಪ್ ಫೈನಲ್ ಪಿಚ್ ಡಾಕ್ಟರಿಂಗ್‌ ಆರೋಪ
ರೋಹಿತ್-ದ್ರಾವಿಡ್ ಮೇಲೆ ವಿಶ್ವಕಪ್ ಫೈನಲ್ ಪಿಚ್ ಡಾಕ್ಟರಿಂಗ್‌ ಆರೋಪ (PTI)

ನವೆಂಬರ್ 19, 2023; ಈ ದಿನವನ್ನು ಯಾವೊಬ್ಬ ಕ್ರಿಕೆಟ್‌ ಅಭಿಮಾನಿಯೂ ಮರೆಯಲಾರ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ನೆನಪಿನಂಗಳದಲ್ಲಿ ಅಚ್ಚಳಿಯದೆ ಉಳಿಯುವ ಕರಾಳ ದಿನವೇ ಹೌದು. ಕೋಟಿ ಕೋಟಿ ಭಾರತೀಯರ ವಿಶ್ವಕಪ್‌ ಕನಸಿಗೆ ಆಸ್ಟ್ರೇಲಿಯಾ ತಂಡ ಕೊಳ್ಳಿ ಇಟ್ಟ ದಿನವದು. ತುಂಬಿದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಆಸೀಸ್‌, ವಿಶ್ವಕಪ್‌ ಗೆದ್ದು ಅಬ್ಬರಿಸಿತು. ಟೂರ್ನಿಯುದ್ದಕ್ಕೂ ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದ ರೋಹಿತ್‌ ಶರ್ಮಾ ಬಳಗ. ಕೊನೆಯ ಆ ಒಂದು ಹೆಜ್ಜೆಯನ್ನು ಯಶಸ್ವಿವಾಗಿ ಇಡುವಲ್ಲಿ ವಿಫಲವಾಯ್ತು. ಆದರೆ, ಇದೀಗ ಮತ್ತೆ ಈ ಪಂದ್ಯ ಚರ್ಚೆಯಾಗುತ್ತಿದೆ. ಭಾರತದ ಸೋಲಿಗೆ ಭಾರತವೇ ಕಾರಣ ಎನ್ನಲಾಗುತ್ತಿದೆ.

ವಿಶ್ವಕಪ್‌ ಫೈನಲ್‌ ಪಂದ್ಯಕ್ಕಾಗಿ ಪಿಚ್‌ನಲ್ಲಿ ಮಾರ್ಪಾಡು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅದು ಕೂಡಾ ಭಾರತವು ಭಾರತ ತಂಡಕ್ಕೆ ಬೇಕಾದಂತೆ ಪಿಚ್‌ ಅನ್ನು ಡಾಕ್ಟರಿಂಗ್‌ ಮಾಡಿದೆ ಎಂದು ಭಾರತೀಯನೇ ಆರೋಪಿಸಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಆಸೀಸ್‌ ನಾಯಕ ಪ್ಯಾಟ್ ಕಮಿನ್ಸ್, ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆ ಬಳಿಕ ಭಾರತ ತಂಡದ ನಾಯಕನನ್ನು ಕೇಳಿದಾಗ, ತಾನು ಕೂಡಾ ಮೊದಲು ಬ್ಯಾಟಿಂಗ್ ಮಾಡಲು ಬಯಸಿದ್ದಾಗಿ ಹೇಳಿದ್ದರು. ಈ ವೇಳೆ ಮೈದಾನದಲ್ಲಿ ಸೇರಿದ್ದ ಭಾರತೀಯ ಅಭಿಮಾನಿಗಳ ಖುಷಿ ದುಪ್ಪಟ್ಟಾಯ್ತು. ಆದರೆ, ಪಂದ್ಯ ಸಾಗುತ್ತಿದ್ದಂತೆ ಎಲ್ಲವೂ ಬದಲಾಯ್ತು.

ಇದನ್ನೂ ಓದಿ | ಆರ್‌ಸಿಬಿ ಅಭಿಮಾನಿಗಳಿಗೆ ಶುಭಸುದ್ದಿ; ಅಕಾಯ್ ಜನನ ಬಳಿಕ ಮೊದಲ ಬಾರಿ ಕಾಣಿಸಿಕೊಂಡ ವಿರಾಟ್, ಬಿಳಿ ಗಡ್ಡ ಕಂಡು ಅಚ್ಚರಿ

ನಿಧಾನಗತಿಯ ವಿಕೆಟ್ ನಡುವೆ, ಆಸೀಸ್ ಬೌಲರ್‌ಗಳು ಅಮೋಘ ಪ್ರದರ್ಶನ ನೀಡಿದರು. ಬಲಿಷ್ಠ ಹಾಗೂ ಆತಿಥೇಯ ಭಾರತವನ್ನು ಕೇವಲ 240 ರನ್‌ಗಳಿಗೆ ಕಟ್ಟಿಹಾಕಿದರು. ಭಾರತದ ಸ್ಫೋಟಕ ಆಟ ಸಾಧ್ಯವಾಗಲಿಲ್ಲ. ಆದರೆ, ಚೇಸಿಂಗ್‌ ವೇಳೆ ಪರಿಸ್ಥಿತಿ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿತ್ತು. ಪಂದ್ಯದಲ್ಲಿ ಆಸೀಸ್‌ ಗೆಲುವಿನ ನಗೆ ಬೀರಿತು. ಭಾರತದ ಸೋಲಿನ ಬಳಿಕ, ವಿಶ್ವಕಪ್ ಫೈನಲ್‌ ಪಿಚ್‌ ಸ್ವರೂಪದ ಬಗ್ಗೆ ಗಂಭೀರ ಚರ್ಚೆಗಳು ನಡೆದವು. ವಿಶ್ವಕಪ್ ಅಭಿಯಾನದುದ್ದಕ್ಕೂ ಸ್ಪರ್ಧಾತ್ಮಕ ಪಿಚ್‌ಗಳಲ್ಲಿಯೂ ಅಮೋಘ ಗೆಲುವುಗಳನ್ನು ದಾಖಲಿಸಿದ್ದ ಭಾರತ, ಫೈನಲ್‌ ಪಂದ್ಯದಲ್ಲಿ ಸೋತಿದ್ದು ಅಚ್ಚರಿಯುಂಟುಮಾಡಿತು. ಹೀಗಾಗಿ ನಿಧಾನಗತಿಯ ಪಿಚ್‌ ಭಾರತದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದು ಎಂದೇ ಹಲವರು ಭಾವಿಸಿದರು. ಆದರೆ, ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. ಪಂದ್ಯಾವಳಿಯಲ್ಲಿ ಬ್ರಾಡ್‌ಕ್ಯಾಸ್ಟಿಂಗ್ ತಂಡದ ಭಾಗವಾಗಿದ್ದ ಭಾರತದ ಮಾಜಿ ಬ್ಯಾಟರ್ ಮೊಹಮ್ಮದ್ ಕೈಫ್, ಫೈನಲ್‌ ಪಂದ್ಯದ ಪಿಚ್‌ ಸಿದ್ಧತೆಯಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪಾತ್ರವಿರುವುದಾಗಿ ಆರೋಪಿಸಿದ್ದಾರೆ.

ಮೂರು ದಿನಗಳಲ್ಲಿ ಪಿಚ್‌ ಬಣ್ಣ ಬದಲು!

ವಿಶ್ವಕಪ್ ಫೈನಲ್‌ ಪಂದ್ಯಕ್ಕೂ ಮುಂಚಿತವಾಗಿ, ಸತತ ಮೂರು ದಿನಗಳ ಕಾಲ ಈ ಇಬ್ಬರು ಪಿಚ್‌ಗೆ ಭೇಟಿ ನೀಡಿದ್ದರು. ಪಿಚ್‌ನ ಬಣ್ಣ ನಿರಂತರವಾಗಿ ಬದಲಾಗುತ್ತಿರುವುದನ್ನು ತಾನು ಖುದ್ದು ನೋಡಿರುವುದಾಗಿ ಎಂದು ಕೈಫ್ ಹೇಳಿದ್ದಾರೆ.

Explainer: ಟಿ20 ವಿಶ್ವಕಪ್‌ನಿಂದ ಹೊಸ ನಿಯಮ; ಪ್ರತಿ ಪಂದ್ಯಕ್ಕೂ ಸ್ಟಾಪ್ ಕ್ಲಾಕ್ ಕಡ್ಡಾಯ, ಏನಿದು ಸ್ಟಾಪ್ ಕ್ಲಾಕ್ ರೂಲ್?

“ನಾನು ಅಲ್ಲಿ ಮೂರು ದಿನಗಳ ಕಾಲ ಇದ್ದೆ. ಸಂಜೆ ವೇಳೆ ರೋಹಿತ್ ಶರ್ಮಾ ಅವರು ರಾಹುಲ್ ದ್ರಾವಿಡ್ ಅವರೊಂದಿಗೆ ಬಂದು, ಪಿಚ್‌ ಬಳಿ ಹೋದರು. ಅಲ್ಲಿ ಒಂದು ಗಂಟೆ ನಿಂತು ಹಿಂತಿರುಗಿದರು. ಎರಡನೇ ದಿನ ಮತ್ತೆ ಬಂದು ಮತ್ತೆ ಅದೇ ಕೆಲಸ ಮಾಡಿದರು. ಇದು ಸತತ ಮೂರು ದಿನಗಳವರೆಗೆ ನಡೆಯಿತು. ಆ ಪಿಚ್‌ನ ಬಣ್ಣ ಬದಲಾಗುವುದನ್ನು ನಾನು ನೋಡಿದೆ. ನಾನು ಇಂದು ನೀಲಿ ಶರ್ಟ್ ಧರಿಸಿದ್ದರೆ, ಮೂರು ದಿನಗಳ ನಂತರ ಹಳದಿ ಬಣ್ಣವಾಗಿ ಕಾಣುತ್ತದೆ. ಪಿಚ್‌ ಬಣ್ಣ ಬದಲಾವಣೆಯ ಪರಿ ಹಾಗಿತ್ತು,” ಎಂದು ಕೈಫ್ ದಿ ಲಾಲನ್ ಟಾಪ್ಪ್‌ ನ್ಯೂಸ್‌ ರೂಮ್‌ ಹೇಳಿಕೊಂಡಿದ್ದಾರೆ.

‌ಪ್ಯಾಟ್ ಕಮಿನ್ಸ್‌ ಚಾಣಾಕ್ಷ ನಡೆಗೆ ಕೈಫ್‌ ಮೆಚ್ಚುಗೆ

ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ ಆಸೀಸ್‌ ಸೋತಿತ್ತು. ಚೆನ್ನೈ ಸೋಲಿನಿಂದ ಆಸ್ಟ್ರೇಲಿಯಾದ ನಾಯಕ ಪಾಠ ಕಲಿತಿದ್ದಾರೆ ಎಂದು ಕೈಫ್ ಅಭಿಪ್ರಾಯಪಟ್ಟಿದ್ದಾರೆ. “ಚೆನ್ನೈನಲ್ಲಿ ನಡೆದ ಮೊದಲ ಪಂದ್ಯದಿಂದಲೇ ಪ್ಯಾಟ್ ಕಮಿನ್ಸ್ ಪಾಠ ಕಲಿತಿದ್ದರು. ಅವರು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದರು. ರನ್ ಚೇಸ್‌ನಲ್ಲಿ ಭಾರತವು ಪಂದ್ಯವನ್ನು ಸುಲಭವಾಗಿ ಗೆದ್ದಿತು. ಫೈನಲ್‌ನಲ್ಲಿ, ತಂಡಗಳು ಸಾಮಾನ್ಯವಾಗಿ ಫೀಲ್ಡಿಂಗ್ ಅನ್ನು ಆಯ್ಕೆ ಮಾಡುವುದಿಲ್ಲ,” ಎಂದು ಕೈಫ್ ಹೇಳಿದ್ದಾರೆ.

“ಒಂದು ವೇಳೆ ಅದು ಸಾಮಾನ್ಯ ಪಿಚ್ ಆಗಿದ್ದರೆ‌; ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್ ಭಾರಿ ಫಾರ್ಮ್‌ನಲ್ಲಿದ್ದರು. ಅವರು ಮಿಂಚಬೇಕಿತ್ತು. ಸಮತಟ್ಟಾದ ಪಿಚ್ ಆಗಿದ್ದರೆ, ನಾವು 100ರಷ್ಟು ಗೆಲ್ಲುತ್ತಿದ್ದೆವು. ನಾವು ವಿಕೆಟ್ ಅನ್ನು ಡಾಕ್ಟರಿಂಗ್(ಬದಲಾವಣೆ) ಮಾಡಿದ್ದರಿಂದ ಸೋಲಬೇಕಾಯ್ತು” ಎಂದು ಕೈಫ್ ಹೇಳಿದ್ದಾರೆ.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner