ಸಿಕ್ಸರ್ ಸಿಡಿಸಿ 10 ಲಕ್ಷದ ಕಾರಿಗೆ ಹಾನಿ ಮಾಡಿದ ಎಲಿಸ್ ಪೆರ್ರಿ; ನನ್ನಲ್ಲಿ ಇನ್ಶೂರೆನ್ಸ್ ಇಲ್ಲ ಎಂದ ಆರ್‌ಸಿಬಿ ಕ್ವೀನ್
ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಮಾತನಾಡಿದ ಎಲಿಸ್ ಪೆರ್ರಿ, ಕಾರಿಗೆ ಹಾನಿಯಾದ ಬಗ್ಗೆ ನಾನು ಚಿಂತಿತಳಾಗಿದ್ದೆ. ನಷ್ಟ ಭರಿಸಲು ನನ್ನ ಬಳಿ ಯಾವುದೇ ಇನ್ಶೂರೆನ್ಸ್ ಇಲ್ಲ ಎಂದು ನಗುತ್ತಾ ಹೇಳಿದ್ದಾರೆ. ಆರ್‌ಸಿಬಿ ಆಟಗಾರ್ತಿ ಪೆರ್ರಿ ಸಿಡಿಸಿದ ಸಿಕ್ಸರ್‌ಗೆ ಟಾಟಾ ಪಂಚ್ ಇವಿ ಕಾರಿನ ಗಾಜು ಪುಡಿಯಾಗಿತ್ತು.
ಆರ್‌ಸಿಬಿ ಕ್ವೀನ್ ಎಲಿಸ್ ಪೆರ್ರಿ (Ellyse Perry) ಹೊಡೆದ ಸಿಕ್ಸರ್‌ಗೆ ಮಹಿಳಾ ಪ್ರೀಮಿಯರ್ ಲೀಗ್‌ನ ಅಧಿಕೃತ ಕಾರು ಟಾಟಾ ಪಂಚ್ ಇವಿ ಗಾಜು ಪುಡಿಪುಡಿಯಾಯ್ತು. ಯುಪಿ ವಾರಿಯರ್ಸ್ ವಿರುದ್ಧದ (UP Warriorz vs Royal Challengers Bangalore Women) ಡಬ್ಲ್ಯೂಪಿಎಲ್ ಪಂದ್ಯದಲ್ಲಿ, ಎಲಿಸ್ ಪೆರ್ರಿ ವಿರಾವೇಶದ ಸಿಕ್ಸರ್ ಏಟಿಗೆ ಕಾರಿನ ವಿಂಡೋ ಗಾಜು ಸಂಪೂರ್ಣವಾಗಿ ಒಡೆದು ಹೋಯ್ತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಲಿಸ್ಸಾ ಹೀಲಿ ಏತೃತ್ವದ ಯುಪಿ ವಾರಿಯರ್ಸ್ ವಿರುದ್ಧ ಆರ್‌ಸಿಬಿ ತಂಡವು ಭರ್ಜರಿ ಜಯ ಸಾಧಿಸಿತು. ಪಂದ್ಯದ ಬಳಿಕ ಕಾರಿನ ಗಾಜು ಒಡೆದ ಕುರಿತು ಪೆರ್ರಿ ಮಾತನಾಡಿದ್ದಾರೆ.
ಆರ್‌ಸಿಬಿ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಸ್ಪಿನ್ನರ್ ದೀಪ್ತಿ ಶರ್ಮಾ ಎಸೆದ 19ನೇ ಓವರ್‌ನ 5ನೇ ಎಸೆತದಲ್ಲಿ ಮಿಡ್ ವಿಕೆಟ್ ಕಡೆಗೆ ಪೆರ್ರಿ ಬಾರಿಸಿದರು. ಆ ಚೆಂಡು ಬೌಂಡರಿ ಲೈನ್ ದಾಟಿ ಸಿಕ್ಸರ್ ಹೋಗಿದ್ದು ಮಾತ್ರವಲ್ಲದೆ, ಟಾಟಾ ಪಂಚ್ ಕಾರಿನ ಕಿಟಕಿ ಗಾಜಿಗೆ ಬಿತ್ತು. ಚೆಂಡು ಬಿದ್ದ ರಭಸಕ್ಕೆ ಗಾಜು ಪುಡಿ ಪುಡಿಯಾಯಿತು. ಈ ವೇಳೆ ತನ್ನ ಹೊಡೆತಕ್ಕೆ ಗಾಜು ಪುಡಿಯಾಗಿದ್ದು ನೋಡಿ ಪೆರ್ರಿಗೂ ಅಚ್ಚರಿಯಾಗಿದೆ. ಈ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಪಂದ್ಯಾವಳಿಯ ಸೂಪರ್ ಸ್ಟ್ರೈಕರ್ ಪ್ರಶಸ್ತಿ ಪಡೆದ ಆಟಗಾರ್ತಿಗೆ ಈ ಕಾರನ್ನು ಪ್ರಶಸ್ತಿಯಾಗಿ ಕೊಡಲಾಗುತ್ತದೆ. ಹೀಗಾಗಿ ಟಾಟಾ ಪಂಚ್ ಕಂಪನಿಯ ಕಾರನ್ನು ಪ್ರದರ್ಶನವಾಗಿ ಪ್ರತಿ ಪಂದ್ಯದಲ್ಲೂ ಇಡಲಾಗುತ್ತದೆ. ಹಾಗೆ ಇಟ್ಟಿದ್ದ ಕಾರಿನ ಗಾಜಿಗೆ ಎಲಿಸ್ ಪೆರ್ರಿ ಬಾರಿಸಿದ ಸಿಕ್ಸರ್ ಬಡಿದಿದೆ.
ನನ್ನ ಬಳಿ ಯಾವುದೇ ಇನ್ಶೂರೆನ್ಸ್ ಇಲ್ಲ
ಪಂದ್ಯದ ಬಳಿಕ ಮಾತನಾಡಿದ ಪೆರ್ರಿ, ಕಾರಿಗೆ ತಮ್ಮಿಂದಾದ ಹಾನಿಯ ಬಗ್ಗೆ ಸ್ವಲ್ಪ ಚಿಂತಿತರಾಗಿದ್ದರು. ಇದು ಅವರ ಮಾತಿನಿಂದ ಸ್ಪಷ್ಟವಾಗಿದೆ. “ನಾನು ತುಸು ಚಿಂತಿತಳಾಗಿದ್ದೆ. ನಷ್ಟ ಭರಿಸಲು ನನ್ನ ಬಳಿ ಯಾವುದೇ ಇನ್ಶೂರೆನ್ಸ್ ಇಲ್ಲ,” ಎಂದು ಪೆರ್ರಿ ನಗುತ್ತಾ ಹೇಳಿದ್ದಾರೆ.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಪೆರ್ರಿ, 37 ಎಸೆತಗಳಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಸೇರಿದಂತೆ 58 ರನ್ ಗಳಿಸಿದರು. ಅಲ್ಲದೆ ನಾಯಕಿ ಸ್ಮೃತಿ ಮಂಧಾನ ಜೊತೆಗೂಡಿ 95 ರನ್ಗಳ ಆಕರ್ಷಕ ಜೊತೆಯಾಟ ಆಡಿದರು. ಆರ್‌ಸಿಬಿ ತಂಡವು ಬೃಹತ್ ಪೇರಿಸಲು ಸಹ ನೆರವಾದರು.
ಇದನ್ನೂ ಓದಿ | ಎಲಿಸ್ ಪೆರ್ರಿ ಸಿಕ್ಸರ್ ಏಟಿಗೆ ಕಾರಿನ ಗಾಜು ಪುಡಿ ಪುಡಿ; ಪಂಚ್ಗೆ ಸೂಪರ್ ಪಂಚ್ ಎಂದ ನೆಟ್ಟಿಗರು, ವಿಡಿಯೋ ವೈರಲ್
“ನಾವು ಇಲ್ಲಿ ಆಡಿದ ಪ್ರತಿಯೊಂದು ಪಂದ್ಯಗಳು ಅದ್ಭುತವಾಗಿತ್ತು. ನನ್ನ ವೃತ್ತಿಜೀವನದಲ್ಲಿ ನಾನು ಆಡಿದ ಅತ್ಯುತ್ತಮ ವಾತಾವರಣವಿದು. ಅಭಿಮಾನಿಗಳಿಂದ ಇಂಥಾ ಬೆಂಬಲವನ್ನು ಪಡೆಯುವುದು ನಿಜಕ್ಕೂ ಒಂದು ರೀತಿಯ ತಣ್ಣನೆಯ ಭಾವನೆ. ಅದಕ್ಕಾಗಿ ನಾವು ತುಂಬಾ ಅದೃಷ್ಟವಂತರು. ಕಳೆದ ಎರಡು ತಿಂಗಳಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಸ್ಮೃತಿ ಅವರಂತೆಯೇ ಉತ್ತಮ ಪ್ರದರ್ಶನ ನೀಡಲು ಇಂದು ರಾತ್ರಿ ನನಗೆ ಉತ್ತಮ ಅವಕಾಶ ಸಿಕ್ಕಿತು. ಅವರಿಗೆ ಬೆಂಬಲವಾಗಿ ಆಡುವುದೇ ನನ್ನ ಪ್ರಮುಖ ಪಾತ್ರ. ನಮ್ಮ ಅಭಿಮಾನಿಗಳ ಮುಂದೆ ಗೆಲುವಿನೊಂದಿಗೆ ಫಿನಿಶ್ ಮಾಡಲು ಖುಷಿಯಾಗುತ್ತಿದೆ,” ಎಂದು ಪೆರ್ರಿ ಹೇಳಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)