ಲೋಕಸಭಾ ಚುನಾವಣೆ; ಪ್ರಚಾರದ ನಡುವೆ ವಿವಿಧ ರಾಜಕೀಯ ಪಕ್ಷಗಳು ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳಿವು
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಪ್ರಚಾರದ ನಡುವೆ ವಿವಿಧ ರಾಜಕೀಯ ಪಕ್ಷಗಳು ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳಿವು

ಲೋಕಸಭಾ ಚುನಾವಣೆ; ಪ್ರಚಾರದ ನಡುವೆ ವಿವಿಧ ರಾಜಕೀಯ ಪಕ್ಷಗಳು ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳಿವು

ಲೋಕಸಭಾ ಚುನಾವಣೆ 2024 ಮತದಾನ, ಪ್ರಚಾರ ಎಲ್ಲವೂ ಪ್ರಗತಿಯಲ್ಲಿದೆ. ಈ ಹಂತದಲ್ಲಿ ಅನೇಕ ವಿಚಾರಗಳು ಪ್ರಚಾರದ ವಿಷಯವಾಗಿ ಬಿಂಬಿತವಾಗಿವೆ. ದೇಶ ಮಟ್ಟದಲ್ಲಿ ಪ್ರಚಾರದ ನಡುವೆ ವಿವಿಧ ರಾಜಕೀಯ ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳಿವು. ವಿವರ ವರದಿ ಇಲ್ಲಿದೆ.

ಲೋಕಸಭಾ ಚುನಾವಣೆ 2024;  ಪ್ರಚಾರದ ನಡುವೆ ವಿವಿಧ ರಾಜಕೀಯ ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳ ಕಡೆಗೊಂದು ಇಣುಕುನೋಟ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ 2024; ಪ್ರಚಾರದ ನಡುವೆ ವಿವಿಧ ರಾಜಕೀಯ ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳ ಕಡೆಗೊಂದು ಇಣುಕುನೋಟ. (ಸಾಂಕೇತಿಕ ಚಿತ್ರ)

ನವದೆಹಲಿ/ ಬೆಂಗಳೂರು: ಲೋಕಸಭಾ ಚುನಾವಣೆ 2024ರ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಎರಡನೇ ಹಂತದ ಮತದಾನಕ್ಕೆ ದೇಶ ಸಜ್ಜಾಗುತ್ತಿದೆ. ಏಪ್ರಿಲ್ 19ರಂದು ಮೊದಲ ಹಂತದ ಮತದಾನ ನಡೆಯಿತು. ಏಳು ಹಂತಗಳ ಮತದಾನ ಪ್ರಕ್ರಿಯೆಯಲ್ಲಿ ಕೊನೆಯ ಹಂತ ಜೂನ್ 1 ರಂದು ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ಇನ್ನು, ಏಪ್ರಿಲ್ 26ಕ್ಕೆ ಎರಡನೇ ಹಂತದ ಮತದಾನ ನಡೆಯಲಿದ್ದು, ಚುನಾವಣಾ ಪ್ರಚಾರ ಭರದಿಂದ ಸಾಗಿದೆ. ಪ್ರಚಾರ ವಿಷಯವಾಗಿ ಚಾಲ್ತಿಯಲ್ಲಿರುವ ವಿಷಯಗಳನ್ನು ಗಮನಿಸಿದಾಗ ಏಳು ಮುಖ್ಯ ಅಂಶಗಳು ಗಮನಸೆಳೆಯುತ್ತಿವೆ. ಆರ್ಥಿಕ ಅಭಿವೃದ್ಧಿ, ಹಣದುಬ್ಬರ, ಕಲ್ಯಾಣ ಯೋಜನೆ, ಹಿಂದು ಜಾಗೃತಿ, ಭ್ರಷ್ಟಾಚಾರ, ನಿರುದ್ಯೋಗ, ಕೃಷಿಕರ ವಿಚಾರಗಳು ಹೆಚ್ಚು ಚರ್ಚೆಗೆ ಒಳಗಾಗಿವೆ.

ಲೋಕಸಭಾ ಚುನಾವಣೆ 2024; ವಿವಿಧ ರಾಜಕೀಯ ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳಿವು

1) ಆರ್ಥಿಕ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣದುಬ್ಬರ

ಕಳೆದ ಮಾರ್ಚ್ 31 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಸುಮಾರು ಶೇಕಡ 8 ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ. ಇದು ಪ್ರಮುಖ ದೇಶಗಳ ಪೈಕಿ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ. ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಜಾಗತಿಕ ಮಟ್ಟದಲ್ಲಿ 5 ಸ್ಥಾನ ಮೇಲೇರಿದೆ. ಈ ಸಲ ಚುನಾವಣೆಯಲ್ಲಿ ಗೆಲುವು ನೀಡಿದರೆ, ದೇಶದ ಆರ್ಥಿಕತೆ ಜಾಗತಿಕವಾಗಿ ಮೂರನೆ ಸ್ಥಾನದಲ್ಲಿರಲಿದೆ ಎಂಬ ಭರವಸೆಯನ್ನು ಪ್ರಧಾನಿ ಮೋದಿ ನೀಡುತ್ತಿದ್ದಾರೆ. ನವದೆಹಲಿ ಮತ್ತು ಮುಂಬಯಿ, ಅದೇ ರೀತಿ ಪ್ರಮುಖ ನಗರಗಳ ನಡುವೆ ರಸ್ತೆ, ರೈಲು, ವಾಯುಯಾನ ಸೇರಿ ಸಾರಿಗೆ ಸಂಪರ್ಕ ಮೂಲ ಸೌಕರ್ಯಗಳು ಹೆಚ್ಚು ವಿಸ್ತರಣೆಯಾಗಿದೆ.

ಇನ್ನೊಂದೆಡೆ, ದೇಶದಲ್ಲಿ 2022 - 23 ರಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡ 6.7ಕ್ಕೆ ಏರಿದೆ. ಈ ಹಿಂದೆ 2021- 22 ರಲ್ಲಿ ಶೇಕಡಾ 5.5 ರಿಂದ ಇತ್ತು. ವರ್ಷದ ಹಿಂದೆ ಇದು ಶೇಕಡ 6.2 ಇತ್ತು. ಫೆಬ್ರವರಿಯಲ್ಲಿ ವಾರ್ಷಿಕ ಚಿಲ್ಲರೆ ಹಣದುಬ್ಬರವು ಶೇ.5.09 ರಷ್ಟಿತ್ತು ಎಂಬುದು ಕೂಡ ಗಮನಸೆಳೆದಿದೆ.

2) ಸಾಮಾಜಿಕ ಕಲ್ಯಾಣ ಯೋಜನೆಗಳು

ವರ್ಲ್ಡ್ ಇನ್‌ಈಕ್ವಿಲಾಟಿ ಲ್ಯಾಬ್‌ ಸಂಶೋಧನಾ ಗುಂಪಿನ ಪ್ರಕಾರ, ಕಳೆದ ವರ್ಷದ ಅಂತ್ಯಕ್ಕೆ, ಭಾರತದ ಶ್ರೀಮಂತ ನಾಗರಿಕರು ದೇಶದ ಒಟ್ಟು ಸಂಪತ್ತಿನ 40.1 ಪ್ರತಿಶತವನ್ನು ಹೊಂದಿದ್ದಾರೆ. ಇದು 1961 ರಿಂದ ಈಚೆಗೆ ಹೋಲಿಸಿದರೆ ಅತ್ಯಧಿಕವಾಗಿದೆ. ಒಟ್ಟು ಆದಾಯದಲ್ಲಿ ಅವರ ಪಾಲು ಶೇಕಡಾ 22.6 ರಷ್ಟಿದೆ/ ಇದು 1922 ರಿಂದಲೂ ಹೆಚ್ಚು.

ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತ ಸರ್ಕಾರ 81 ಕೋಟಿ ಜನರಿಗೆ ಉಚಿತ ಪಡಿತರ ನೀಡಲಾರಂಭಿಸಿತು. ಇದು ಭಾರತದ ಜನಸಂಖ್ಯೆಯ ಶೇಕಡ 60ಕ್ಕಿಂತ ಹೆಚ್ಚು. ಇದು ಭಾರತದ ಅಸಮ ಆರ್ಥಿಕ ಬೆಳವಣಿಗೆಯ ಸಂಕೇತ ಎಂದು ಕೆಲವು ಟೀಕಾಕಾರರು ಹೇಳಿದ್ದಾರೆ. ಈ ನಡುವೆ, ಮೋದಿ ಮತ್ತು ಅವರ ಬಿಜೆಪಿಯು ಮಹಿಳಾ ಮತದಾರರನ್ನು ಗೆಲ್ಲಲು ಪ್ರಯತ್ನಿಸಿದೆ. ನಗದು ಮತ್ತು ಗೃಹಬಳಕೆಯ ಪ್ರಯೋಜನಗಳಾದ ಪೈಪ್ ನೀರು, 24/7 ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕಗಳ ಯೋಜನೆ ಜಾರಿಗೊಳಿಸುವ ಮೂಲಕ ಅವರ ಕಲ್ಯಾಣವನ್ನು ಕೇಂದ್ರೀಕರಿಸಿದೆ.

3) ಹಿಂದು ಮರುಜಾಗೃತಿ ಅಭಿಯಾನಗಳು

ಹಿಂದೂ-ರಾಷ್ಟ್ರೀಯವಾದದ ಮೂಲಕ ತನ್ನ ನೆಲೆಯನ್ನು ಕಟ್ಟಿಕೊಂಡ ಬಿಜೆಪಿ ಈಗ 35 ವರ್ಷ ಹಿಂದೆ ನೀಡಿದ್ದ ರಾಮ ಮಂದಿರ ನಿರ್ಮಾಣದ ಭರವಸೆಯನ್ನು ಈಡೇರಿಸಿದೆ. ಮೋದಿ ಅವರು ಜನವರಿಯಲ್ಲಿ ರಾಮಜನ್ಮಭೂಮಿಯಲ್ಲಿ ಭವ್ಯ ದೇವಾಲಯವನ್ನು ಲೋಕಾಪರ್ಣೆ ಮಾಡಿದರು. 1992ರಲ್ಲಿ ಅಲ್ಲಿದ್ದ ಬಾಬರಿ ಕಟ್ಟಡವನ್ನು ರಾಮಭಕ್ತರು ಕೆಡವಿದ್ದರು.

ಪ್ರಧಾನಿಯವರು ದೇಶಾದ್ಯಂತ ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ನಿಯತವಾಗಿ ಭೇಟಿ ನೀಡಿದ್ದು ವ್ಯಾಪಕ ಪ್ರಚಾರ ಪಡೆದುಕೊಂಡಿತ್ತು. ಇದು ಬಿಜೆಪಿಯ ಮೂಲ ಮತ್ತು ಕೇಂದ್ರ ಚಿಂತನೆಯನ್ನು ಖಚಿತಗೊಳಿಸಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ಇದೇ ವೇಳೆ, ಸರ್ಕಾರವು ಸಮುದಾಯದ ಹಿತಾಸಕ್ತಿಗೆ ವಿರುದ್ಧವಾದ ನೀತಿಗಳ ಮೂಲಕ ಪರಿಣಾಮ ಬೀರುತ್ತಿದೆ. ಸಾಂಪ್ರದಾಯಿಕವಾಗಿ ಮುಸ್ಲಿಮರ ಬೆಂಬಲ ಹೊಂಧಿರುವ ವಿಪಕ್ಷಗಳನ್ನು ಕೆಣಕಲು ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಅನೇಕ ಮುಸ್ಲಿಮರು ಆರೋಪಿಸಿದ್ದಾರೆ. 2014 ರ ಡಿಸೆಂಬರ್ 31 ರ ಮೊದಲು ಮುಸ್ಲಿಂ ಬಹುಸಂಖ್ಯಾತ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ಪಲಾಯನ ಮಾಡಿದ ಹಿಂದೂಗಳು, ಪಾರ್ಸಿಗಳು, ಸಿಖ್ಖರು, ಬೌದ್ಧರು, ಜೈನರು ಮತ್ತು ಕ್ರಿಶ್ಚಿಯನ್ನರಿಗೆ ರಾಷ್ಟ್ರೀಯತೆ ನೀಡುವ ತೀರ್ಮಾನ ತೆಗೆದುಕೊಂಡಿದೆ. ಇದರ ಮೂಲಕ ಬಿಜೆಪಿ ಸರ್ಕಾರ, ಮುಸ್ಲಿಮರ ವಿರುದ್ಧ ತಾರತಮ್ಯ ನೀಡಿ ಎಂದು ಟೀಕಿಸಲಾಗುತ್ತಿದೆ.

4) ಮಿತಿಮೀರಿದ ಭ್ರಷ್ಟಾಚಾರ

ಶಂಕಿತ ಮನಿ ಲಾಂಡರಿಂಗ್ ಅನ್ನು ತನಿಖೆ ಮಾಡುವ ಜಾರಿ ನಿರ್ದೇಶನಾಲಯವು ಕಳೆದ ಒಂದು ದಶಕದಲ್ಲಿ ಸುಮಾರು 150 ವಿರೋಧಿ ರಾಜಕಾರಣಿಗಳನ್ನು ಕರೆಸಿ, ಪ್ರಶ್ನಿಸಿದೆ. ದಾಳಿ ಮಾಡಿದೆ ಅಥವಾ ಬಂಧಿಸಿದೆ. ಅದೇ ಅವಧಿಯಲ್ಲಿ, ಇದು ಸುಮಾರು ಅರ್ಧ ಡಜನ್ ಆಡಳಿತ ಪಕ್ಷದ ರಾಜಕಾರಣಿಗಳನ್ನು ಮಾತ್ರ ತನಿಖೆ ಮಾಡಿದೆ.

ಭ್ರಷ್ಟಾಚಾರವನ್ನು ವಿರೋಧಿಸುತ್ತ ದೆಹಲಿಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಅರವಿಂದ ಕೇಜ್ರಿವಾಲ್ ಅವರು ಅದೇ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಭ್ರಷ್ಟಾಚಾರವನ್ನು ಸಹಿಸಲಾಗದು. ನಿಯಮ ಪ್ರಕಾರ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿರುವುದು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣು ನೀತಿಯನ್ನು ಪ್ರತಿಬಿಂಬಿಸಿದಂತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಇದೇ ವೇಳೆ, ಮೋದಿ ಸರ್ಕಾರ ತನಿಖಾ ಏಜೆನ್ಸಿಗಳನ್ನು ದುರ್ಬಳಕೆ ಮಾಡುತ್ತಿದೆ ಎಂಬ ಆರೋಪವೂ ಇದೆ.

5) ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆಯೇ ಅಥವಾ ಕಡಿಮೆ?

ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯ ಭರವಸೆಯೊಂದಿಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ 2014ರಲ್ಲಿ ಸರ್ಕಾರ ರಚನೆ ಮಾಡಿತು. ಆದರೆ ಉದ್ಯೋಗ ಸೃಜನೆಯಲ್ಲಿ ಬಿಜೆಪಿ ಸರ್ಕಾರ ಸೋಲು ಕಂಡಿದೆ ಎಂಬುದು ಸದ್ಯದ ವ್ಯಾಪಕ ಟೀಕೆ. ಫೆಬ್ರವರಿ ತಿಂಗಳಲ್ಲಿ ನಿರುದ್ಯೋಗ ದರ ಶೇಕಡ 8ಕ್ಕೆ ತಲುಪಿತ್ತು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಹೇಳಿದೆ. ಆದರೆ ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಮಾರ್ಚ್‌ 2024ಕ್ಕೆ ಕೊನೆಗೊಂಡ ವರ್ಷಕ್ಕೆ ನಿರುದ್ಯೋಗ ದರ ಶೇಕಡ 5.4ಕ್ಕೆ ಏರಿದೆ. 2013/14ರಲ್ಲಿ ಇದು ಶೇಕಡ 4.9 ಇತ್ತು. 2022/23ರಲ್ಲಿ 15 ರಿಂದ 29 ವರ್ಷ ವಯೋಮಾನದ ಶೇಕಡ 16ರಷ್ಟು ಜನ ನಿರುದ್ಯೋಗಿಗಳಾಗಿ ಉಳಿದಿದ್ದರು. ಆದರೆ ಖಾಸಗಿ ಏಜೆನ್ಸಿಗಳ ಅಂಕಿ ಅಂಶ ಇನ್ನೂ ಹೆಚ್ಚಿನ ನಿರುದ್ಯೋಗ ದರ ತೋರಿಸುತ್ತಿವೆ.

6) ಕೃಷಿ ಸಮಸ್ಯೆ ಮತ್ತು ಕೃಷಿಕರು

ಕೃಷಿಕರ ಆದಾಯವನ್ನು 2022ರ ಒಳಗೆ ದುಪ್ಪಟ್ಟು ಮಾಡುವ ಭರವಸೆಯನ್ನೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಈ ವಿಚಾರ ಪದೇಪದೆ ಮುನ್ನೆಲೆಗೆ ಬರುತ್ತಿದೆಯಾದರೂ, ಬಿಜೆಪಿ ಇದುವರೆಗೆ ಖಚಿತವಾಗಿ ಈ ಬಗ್ಗೆ ಹೇಳಿಕೆ ನೀಡಿಲ್ಲ. ಮೂರು ಕೃಷಿ ಕಾನೂನುಗಳನ್ನು ಬಿಜೆಪಿ ಸರ್ಕಾರ ತರಲು ಪ್ರಯತ್ನಿಸಿತ್ತು. ಆದರೆ, ರೈತರ ಪ್ರತಿಭಟನೆ ಕಾರಣ ಮೂರು ಕೃಷಿ ಸುಧಾರಣಾ ಕಾನೂನುಗಳನ್ನು ಕೇಂದ್ರ ಕೈಬಿಟ್ಟಿದೆ.

7) ಜಾಗತಿಕವಾಗಿ ಭಾರತದ ಛಾಪು

ಭಾರತವನ್ನು ವಿಶ್ವಗುರುವನ್ನಾಗಿ ಬಿಂಬಿಸುವ ಬಿಜೆಪಿಯ ಪ್ರಯತ್ನವನ್ನು ಮುಂದುವರಿಸಿದೆ. ಇದಕ್ಕೆ ಭಾರತದ ಆರ್ಥಿಕತೆ, ಪ್ರಧಾನಿ ಮೋದಿಯವರ ಸಾಧನೆ, ಜಿ20 ಶೃಂಗವನ್ನು ಆಯೋಜಿಸಿದ್ದು, ವಿಶ್ವ ವೇದಿಕೆಗಳಲ್ಲಿ ವಿವಿಧ ಹೊಣೆಗಾರಿಕೆಗಳನ್ನು ನಿಭಾಯಿಸಿದ್ದು ಗಮನಸೆಳೆದಿವೆ. ಇದಲ್ಲದೆ, ರಷ್ಯಾ - ಉಕ್ರೇನ್‌ ಸಮರ ಶುರುವಾದಾಗ ಅಲ್ಲಿಂದ ಭಾರತದ ಪ್ರಜೆಗಳನ್ನು ವಾಪಸ್ ಕರೆತಂದ ನಡೆ ಎಲ್ಲವೂ ದೇಶದೊಳಗೆ ಮತ್ತು ಜಾಗತಿಕವಾಗಿ ವಿಶ್ವಾಸ ಗಳಿಸಲು ನೆರವಾಗಿವೆ.

ಸ್ಥಳೀಯವಾಗಿ, ಪ್ರಾದೇಶಿಕವಾಗಿ ಅನೇಕ ವಿಚಾರಗಳು

ಲೋಕಸಭಾ ಚುನಾವಣೆಯ ಪ್ರಚಾರ ಕಣದಲ್ಲಿ ಏಳು ಪ್ರಮುಖ ವಿಚಾರಗಳ ಹೊರತಾಗಿ, ರಾಜ್ಯಮಟ್ಟದ ವಿಚಾರಗಳು ಕೂಡ ಗಮನಸೆಳೆಯುತ್ತಿವೆ. ಕರ್ನಾಟಕದಲ್ಲಿ ಬರ ಪರಿಸ್ಥಿತಿಗೆ ಕೇಂದ್ರ ನೆರವು ಸಿಕ್ಕಿಲ್ಲ ಎಂಬ ಆಡಳಿತಾರೂಢ ಕಾಂಗ್ರೆಸ್‌ ಆರೋಪ, ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹತ್ಯೆ, ಲವ್‌ ಜಿಹಾದ್ ಪ್ರಕರಣ ಸೇರಿ ಹಲವು ಸ್ಥಳೀಯ ವಿಚಾರಗಳು ಪ್ರಚಾರದ ಮುನ್ನೆಲೆಯಲ್ಲಿವೆ. ಇನ್ನು, ತಮಿಳುನಾಡಿನಲ್ಲಿ ಕಚ್ಚತೀವು ದ್ವೀಪ ಶ್ರೀಲಂಕಾಕ್ಕೆ ಹಸ್ತಾಂತರಿಸಿದ್ದ ವಿಚಾರ ಮುನ್ನೆಲೆಯಲ್ಲಿದೆ. ಹೀಗೆ ಪ್ರತಿ ರಾಜ್ಯದಲ್ಲೂ ಒಂದಿಲ್ಲೊಂದು ಸ್ಥಳೀಯ ವಿಷಯಗಳು ಗಮನಸೆಳೆದಿವೆ.

Whats_app_banner