ನಟ, ನಿರ್ದೇಶಕ ಅರ್ಜುನ್ ಸರ್ಜಾಗೆ ಗೌರವ ಡಾಕ್ಟರೇಟ್ ನೀಡಿದ ಎಂಜಿಆರ್ ಶಿಕ್ಷಣ ಸಂಸ್ಥೆ; 50 ವರ್ಷಗಳ ಸಿನಿ ಸಾಧನೆಗೆ ಗೌರವ
ಸಿನಿರಂಗದಲ್ಲಿ ತಮ್ಮದೇಯಾದ ಪ್ರತಿಭೆ ಮೂಲಕ ಗುರುತಿಸಿಕೊಂಡು 50 ವರ್ಷಗಳ ಕಾಲ ಬಣ್ಣದ ಲೋಕದಲ್ಲಿ ಮಿಂಚಿರುವ ಅರ್ಜುನ್ ಸರ್ಜಾ ಈಗ ಡಾಕ್ಟರ್ ಅರ್ಜುನ್ ಸರ್ಜಾ ಆಗಿದ್ದಾರೆ. ಎಂಜಿಆರ್ ಶಿಕ್ಷಣ ಸಂಸ್ಥೆ ಗೌರವ ಡಾಕ್ಟರೇಟ್ ನೀಡಿದೆ.
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕನ್ನಡ ಹಾಗೂ ತೆಲುಗು ಪ್ರೇಕ್ಷಕರಿಗೆ ಚಿರಪರಿಚಿತ ಮುಖ. ತಮ್ಮ ವೃತ್ತಿ ಜೀವನದಲ್ಲಿ ಇವರು ನಾಯಕ ನಟನಾಗಿ ಹಲವಾರು ಹಿಟ್ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಇವರಿಗೆ ಎಂಜಿಆರ್ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಹಲವು ಪ್ರಾಧ್ಯಾಪಕರ ಸಮ್ಮುಖದಲ್ಲಿ ಅರ್ಜುನ್ ಅವರಿಗೆ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದಿರುವುದಕ್ಕೆ ಅರ್ಜುನ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾನಿಲಯ ತೀರ್ಪುಗಾರರ ತಂಡವು ಅವರ ಚಲನಚಿತ್ರ ವೃತ್ತಿಜೀವನವನ್ನು ಮೀರಿದ ಅವರ ಅತ್ಯುತ್ತಮ ಸಾಧನೆಗಳಿಗಾಗಿ ಅವರನ್ನು ಆಯ್ಕೆ ಮಾಡಿರುವುದಾಗಿ ಹೇಳಿದೆ. ತೆಲುಗು ಮತ್ತು ಕನ್ನಡದಲ್ಲಿ ತಮ್ಮ ನಿರ್ದೇಶನದೊಂದಿಗೆ ಇನ್ನಷ್ಟು ಪ್ರಯೋಗಗಳನ್ನು ಮಾಡಲಿದ್ದಾರೆ ಎಂಬುದು ತಿಳಿದು ಬಂದಿದೆ. ದಳಪತಿ ವಿಜಯ್ ನಟಿಸಿದ ಲಿಯೋ ಅರ್ಜುನ್ ಅವರು ನಟಿಸಿರುವ ಕೊನೆಯ ಚಿತ್ರವಾಗಿದೆ. ಮುಂದಿನ ದಿನಗಳಲ್ಲೂ ಚಿತ್ರರಂಗಕ್ಕೆ ಕೊಡುಗೆ ನೀಡುವ ಬಯಕೆಯನ್ನು ಇವರು ಹೊಂದಿದ್ದಾರೆ.
ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮಾಡಲಿರುವ ತ್ರಿಭಾಷಾ ಪ್ರಾಜೆಕ್ಟ್ ಅನ್ನು ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರೆ ಅರ್ಜುನ್ ಸರ್ಜಾ. ಅವರ ಹೋಮ್ ಬ್ಯಾನರ್ ಶ್ರೀ ರಾಮ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಅಡಿಯಲ್ಲಿ ನಿರ್ಮಾಣವಾಗಲಿರುವ ಚಿತ್ರದ ಬಗ್ಗೆ ಈಗಾಗಲೇ ಕೆಲವು ಸುಳಿವುಗಳು ಸಹ ಸಿಕ್ಕಿದೆ. ಕನ್ನಡದ ಸೂಪರ್‌ಸ್ಟಾರ್ ಉಪೇಂದ್ರ ಅವರ ಸೋದರಳಿಯ ನಿರಂಜನ್ ಸುಧೀಂದ್ರ ನಾಯಕನಾಗಿ ಕಾಣಿಸಿಕೊಳ್ಳಲಿದದ್ದಾರೆ. ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅರ್ಜುನ್ ನಾಯಕಿಯಾಗಿ ‘ಸೀತಾ ಪಯಣ’ ಚಿತ್ರದಲ್ಲಿ ನಟಿಸಲಿದ್ದಾರೆ.
160 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅರ್ಜುನ್ ಸರ್ಜಾ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಇವರು ತೋರ್ಪಡಿಸಿದ್ದಾರೆ. "ಆಕ್ಷನ್ ಕಿಂಗ್" ಎಂದು ಅಭಿಮಾನಿಗಳು ಇವರನ್ನು ಮೆಚ್ಚಿ ಕರೆಯುತ್ತಾರೆ. ಸಿನಿರಂಗದಲ್ಲಿ ತಮ್ಮದೇಯಾದ ಪ್ರತಿಭೆ ಮೂಲಕ ಗುರುತಿಸಿಕೊಂಡು 50 ವರ್ಷಗಳ ಕಾಲ ಬಣ್ಣದ ಲೋಕದಲ್ಲಿ ಮಿಂಚಿರುವ ಅರ್ಜುನ್ ಸರ್ಜಾ ಈಗ ಡಾಕ್ಟರ್ ಅರ್ಜುನ್ ಸರ್ಜಾ ಆಗಿದ್ದಾರೆ.