Bhairathi Ranagal: ಲಾಯರ್‌ ಕೋಟ್ ಹಾಕಿದ ಭೈರತಿ ರಣಗಲ್‌ಗೆ ಸಿಗುತ್ತಾ ಜಯ? ಲಾಂಗ್ ಜೊತೆಗೆ ಲಾ ಪಾಯಿಂಟ್ ಹೇಳಿದ್ದಾರೆ ಶಿವರಾಜ್‌ ಕುಮಾರ್
ಕನ್ನಡ ಸುದ್ದಿ  /  ಮನರಂಜನೆ  /  Bhairathi Ranagal: ಲಾಯರ್‌ ಕೋಟ್ ಹಾಕಿದ ಭೈರತಿ ರಣಗಲ್‌ಗೆ ಸಿಗುತ್ತಾ ಜಯ? ಲಾಂಗ್ ಜೊತೆಗೆ ಲಾ ಪಾಯಿಂಟ್ ಹೇಳಿದ್ದಾರೆ ಶಿವರಾಜ್‌ ಕುಮಾರ್

Bhairathi Ranagal: ಲಾಯರ್‌ ಕೋಟ್ ಹಾಕಿದ ಭೈರತಿ ರಣಗಲ್‌ಗೆ ಸಿಗುತ್ತಾ ಜಯ? ಲಾಂಗ್ ಜೊತೆಗೆ ಲಾ ಪಾಯಿಂಟ್ ಹೇಳಿದ್ದಾರೆ ಶಿವರಾಜ್‌ ಕುಮಾರ್

Bhairathi Ranagal: ಗ್ಯಾಂಗ್ ಸ್ಟರ್ ಶೈಲಿಯ ಮಫ್ತಿ ಚಿತ್ರದ ಪ್ರಿಕ್ವೇಲ್ ಭೈರತಿ ರಣಗಲ್ ಅವತಾರದಲ್ಲಿ ಆಗಮಿಸಿದ್ದಾರೆ ಶಿವಣ್ಣ. ಲಾಂಗ್ ಮಾತ್ರವಲ್ಲದೆ, ಕೋಟ್ ಹಾಕಿಕೊಂಡು ಲಾಯರ್ ಲುಕ್ ನಲ್ಲಿ ಎದುರಾಗಿದ್ದಾರೆ ಶಿವರಾಜ್ ಕುಮಾರ್. ಬಹು ನಿರೀಕ್ಷೆ ಮೂಡಿಸಿರುವ ಈ ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ವಿವರ.

ಶಿವರಾಜ್‌ಕುಮಾರ್‌ ಅಭಿನಯದ ಭೈರತಿ ರಣಗಲ್‌ ಫಸ್ಟ್‌ ಹಾಫ್‌ ರಿವ್ಯೂ
ಶಿವರಾಜ್‌ಕುಮಾರ್‌ ಅಭಿನಯದ ಭೈರತಿ ರಣಗಲ್‌ ಫಸ್ಟ್‌ ಹಾಫ್‌ ರಿವ್ಯೂ

Bhairathi Ranagal First Half Review: ಚಂದನವನದ ಬಹುನಿರೀಕ್ಷಿತ‌ ಭೈರತಿ ರಣಗಲ್ ಸಿನಿಮಾ ಇಂದು (ನ.15) ಅದ್ಧೂರಿಯಾಗಿ ತೆರೆಕಂಡಿದೆ. ಕನ್ನಡದ ಜತೆಗೆ ಪರಭಾಷೆಗಳಲ್ಲೂ ಈ ಸಿನಿಮಾ ಬಿಡುಗಡೆಯಾಗಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತೊಮ್ಮೆ ರಣಗಲ್ ಪಾತ್ರದಲ್ಲಿ ಎದುರಾಗಿದ್ದಾರೆ. ನರ್ತನ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾವನ್ನು ಗೀತಾ ಶಿವರಾಜ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೊದಲಾರ್ಧ ಹೇಗಿದೆ, ಇಲ್ಲಿದೆ ಫಸ್ಟ್ ಹಾಫ್ ವಿಮರ್ಶೆ. ಮೊದಲಾರ್ಧದಲ್ಲಿ ಗಮನ ಸೆಳೆದ ಪ್ರಮುಖ 10 ಅಂಶಗಳಿವು.

1) ಮಫ್ತಿ ಚಿತ್ರದಲ್ಲಿನ ಗ್ಯಾಂಗ್ ಸ್ಟರ್ ಕಥೆಗೂ ಮುನ್ನ ಏನೆಲ್ಲ ನಡೆದಿರಬಹುದು? ಭೈರತಿ ರಣಗಲ್ ಯಾರು? ಈ ವಿಚಾರಗಳನ್ನು ಭೈರತಿ ರಣಗಲ್ ಚಿತ್ರದಲ್ಲಿ ಬಿತ್ತಿದ್ದಾರೆ ನಿರ್ದೇಶಕ ನರ್ತನ್.

2) ಅದರಂತೆ ರೋಣಾಪುರ ಊರಿನಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಸಿಗದಿದ್ದಾಗ, ಬಾಲಕ ರಣಗಲ್, ತಾಲೂಕು ಕಚೇರಿಗೆ ಬಾಂಬ್ ಇಟ್ಟು 21ವರ್ಷ ಜೈಲು ಸೇರುತ್ತಾನೆ.

3) ಜೈಲಿನಲ್ಲಿದ್ದುಕೊಂಡೆ, ಲಾ‌ ಓದಿ,‌ಲಾಯರ್ ಆಗುತ್ತಾನೆ ರಣಗಲ್. ಹೀಗೆ‌ ಜೈಲಿನಿಂದ ಬಿಡುಗಡೆಯಾಗಿ ಬರುವ ಆತ, ಕಾನೂನಿನ ಮೂಲಕವೇ ಎಲ್ಲರಿಗೂ ಸಹಾಯ ಮಾಡುತ್ತಿರುತ್ತಾನೆ.

4) ಅಚ್ಚರಿಯ ವಿಚಾರವೆಂದರೆ ರೋಣಾಪುರದಲ್ಲಿ ಬೆಲೆಬಾಳುವ ಅದಿರು ಇರುವುದು ಪತ್ತೆಯಾಗುತ್ತದೆ. ಭೈರತಿ ಜೈಲಿನಿಂದ ಬರುವಷ್ಟರಲ್ಲಿ, ಇಡೀ ರೋಣಾಪುರವೇ ಬದಲಾಗಿರುತ್ತದೆ.

5) ಪರಾಂಡೆ ಮೈನ್ಸ್ ಎಲ್ಲವನ್ನು ತನ್ನ ವಶಕ್ಕೆ ಪಡೆದಿರುತ್ತದೆ. ಜನರಿಗೆ ಕೆಲಸ ಕೊಡುವ ನೆಪದಲ್ಲಿ ಜಮೀನುಗಳನ್ನು ಅಕ್ರಮವಾಗಿ ತನ್ನ ಹೆಸರಿಗೆ ಬರೆದುಕೊಂಡಿರುತ್ತದೆ..

6) ಪರಾಂಡೆ ಕಂಪನಿ ವಿರುದ್ಧ ನ್ಯಾಯವಾದಿಯಾಗಿ ಕಾನೂನು ಹೋರಾಟಕ್ಕೆ ಇಳಿಯುವ ರಣಗಲ್ ಗೆಲ್ಲುತ್ತಾನಾ? ಕಪ್ಪು ಕೋರ್ಟ್ ಬದಿಗಿಟ್ಟು, ಕೈಯಲ್ಲಿ ಲಾಂಗ್ ಹಿಡಿಯುವುದೇಕೆ? ಈ ಬದಲಾವಣೆಗೆ ಕಾರಣವೇನು? -ಈ ಎಲ್ಲ ಪ್ರಶ್ನೆಗಳನ್ನೂ ನೀವು ಸಿನಿಮಾ ನೋಡಿಯೇ ತಣಿಸಿಕೊಳ್ಳಬೇಕು.

7) ಮೊದಲಾರ್ಧದಲ್ಲಿ ರಣಗಲ್ ಯಾರು ಎಂಬ ವಿವರ ಇದೆ. ಜನರಿಗಾಗಿ ಮಿಡಿಯುವ ಆತನ ಮನಸ್ಸು ಎಂಥದ್ದು ಎಂಬುದನ್ನು ನಿರ್ದೇಶಕರು ತೋರಿಸಿದ್ದಾರೆ.‌

8) ರಣಗಲ್ ತಂಗಿಯಾಗಿ ಛಾಯಾಸಿಂಗ್, ವರ್ಕರ್ಸ್ ಯೂನಿಯನ್ ಲೀಡರ್ ಆಗಿ ಗೋಪಾಲ ಕೃಷ್ಣ ದೇಶಪಾಂಡೆ, ಖಂಡ್ರೆ ಪಾತ್ರದಲ್ಲಿ ಅವಿನಾಶ್ ಮೊದಲ ಭಾಗದಲ್ಲಿ ಗಮನ ಸೆಳೆಯುತ್ತಾರೆ.

9) ಮೊದಲ ಭಾಗದಲ್ಲಿ ಕಿವಿಗೆ ಬೀಳುವ 'ಕಾವಲಿಗ' ಹಾಡು ಗಮನ ಸೆಳೆಯುತ್ತದೆ. ರವಿ ಬಸ್ರೂರು ಸಂಗೀತ ರಗಡ್ ಆಗಿದೆ. ಮೇಕಿಂಗ್ ವಿಚಾರದಲ್ಲಿಯೂ ಸಖತ್ ರಿಚ್ ಆಗಿಯೇ ಕಾಣುತ್ತದೆ ಭೈರತಿ ರಣಗಲ್ ಸಿನಿಮಾ.

10) ವೈಶಾಲಿ ಪಾತ್ರದಲ್ಲಿ ನಾಯಕಿ ರುಕ್ಮಿಣಿ ವಸಂತ್ ಇಲ್ಲಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಮೊದಲ ಭಾಗದಲ್ಲಿ ರುಕ್ಮಿಣಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ.

ಭೈರತಿ ರಣಗಲ್ ಸಿನಿಮಾದ ತಾರಾಗಣ, ತಂತ್ರಜ್ಞರು

ಭೈರತಿ ರಣಗಲ್ ಸಿನಿಮಾದಲ್ಲಿ ಶಿವರಾಜ್‌ ಕುಮಾರ್‌ ಜೊತೆಗೆ ರುಕ್ಮಿಣಿ ವಸಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನರ್ತನ್ ನಿರ್ದೇಶನ, ಗೀತಾ ಶಿವರಾಜ್‌ ಕುಮಾರ್ ನಿರ್ಮಾಣದ ಸಿನಿಮಾಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಚೇತನ್ ಡಿಸೋಜಾ ಮತ್ತು ದಿಲೀಪ್ ಸುಬ್ರಹ್ಮಣ್ಯನ್ ರೂಪಿಸಿರುವ ಸಾಹಸ ಸಂಯೋಜನೆ ಫೈಟ್‌ಗಳ ಬಗ್ಗೆ ನಿರೀಕ್ಷೆ ಹುಟ್ಟುಹಾಕಿದೆ. ಖ್ಯಾತ ಬಾಲಿವುಡ್ ನಟ ರಾಹುಲ್ ಬೋಸ್ ಜೊತೆಗೆ ಶಬೀರ್ ಕಲ್ಲರಕಲ್, ಛಾಯಾ ಸಿಂಗ್, ದೇವರಾಜ್, ಮಧು ಗುರುಸ್ವಾಮಿ, ಬಾಬು ಹಿರಣ್ಣಯ್ಯ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Whats_app_banner