ಕನ್ನಡ ಸುದ್ದಿ  /  ಮನರಂಜನೆ  /  ‘ಮಾವ ಸಲ್ಮಾನ್‌ ಖಾನ್‌ ಹಂಗಲ್ಲಿ ನಾನಿರಲ್ಲ!’ Sk Films ತೊರೆದ ಸಲ್ಲುಮಿಯಾನ ತಂಗಿ ಗಂಡ, ನಟ ಆಯುಷ್‌ ಶರ್ಮಾ, ಅಷ್ಟಕ್ಕೂ ಏನಾಯ್ತು?

‘ಮಾವ ಸಲ್ಮಾನ್‌ ಖಾನ್‌ ಹಂಗಲ್ಲಿ ನಾನಿರಲ್ಲ!’ SK Films ತೊರೆದ ಸಲ್ಲುಮಿಯಾನ ತಂಗಿ ಗಂಡ, ನಟ ಆಯುಷ್‌ ಶರ್ಮಾ, ಅಷ್ಟಕ್ಕೂ ಏನಾಯ್ತು?

ಸೋದರ ಮಾವ ಸಲ್ಮಾನ್‌ ಖಾನ್‌ ಅವರ ಸಂಗ ಬಿಟ್ಟಿದ್ದಾರೆ ಅಳಿಯ ಆಯುಷ್‌ ಶರ್ಮಾ. ಈ ವರೆಗೂ ಆಯುಷ್‌ ಶರ್ಮಾ ಅವರ ಎರಡು ಸಿನಿಮಾಗಳನ್ನು ಸಲ್ಮಾನ್‌ ಖಾನ್‌ ನಿರ್ಮಾಣ ಮಾಡಿದ್ದರು. ಈಗ ಅದೇ ಪ್ರೊಡಕ್ಷನ್‌ ಹೌಸ್‌ನಿಂದ ಹೊರನಡೆದಿದ್ದಾರೆ ಆಯುಷ್.‌ ಹಾಗಾದರೆ ಇವರಿಬ್ಬರ ನಡುವೆ ಮುನಿಸು ಮನೆಮಾಡಿದೆಯೇ?

‘ಮಾವ ಸಲ್ಮಾನ್‌ ಖಾನ್‌ ಹಂಗಲ್ಲಿ ನಾನಿರಲ್ಲ!’ SK Films ತೊರೆದ ಸಲ್ಲುಮಿಯಾನ ತಂಗಿ ಗಂಡ, ನಟ ಆಯುಷ್‌ ಶರ್ಮಾ
‘ಮಾವ ಸಲ್ಮಾನ್‌ ಖಾನ್‌ ಹಂಗಲ್ಲಿ ನಾನಿರಲ್ಲ!’ SK Films ತೊರೆದ ಸಲ್ಲುಮಿಯಾನ ತಂಗಿ ಗಂಡ, ನಟ ಆಯುಷ್‌ ಶರ್ಮಾ

Salman Khan: ಸಲ್ಮಾನ್‌ ಖಾನ್‌ ಅಂದರೆ ಅದೊಂದು ದೊಡ್ಡ ಆಲದ ಮರ. ಅವರನ್ನೇ ಆಶ್ರಯಿಸಿದ ಸಾವಿರಾರು ಸಿನಿಮಾ ಮಂದಿಯಿದ್ದಾರೆ. ಹೀಗಿರುವಾಗ ಇದೇ ಸಲ್ಮಾನ್‌ ಖಾನ್‌, ತನ್ನ ತಂಗಿ ಗಂಡ ಆಯುಷ್‌ ಶರ್ಮಾಗೂ ಬಾಲಿವುಡ್‌ನಲ್ಲಿ ಸಿನಿಮಾ ಚಾನ್ಸ್‌ ನೀಡಿ ಹೀರೋ ಆಗಿ ಮಾಡಿದ್ದರು. ಆಯುಷ್‌ ಚಿತ್ರಕ್ಕೆ ತಮ್ಮದೇ ಹೋಮ್‌ ಬ್ಯಾನರ್‌ SK Films (Salman Khan Films) ಅಡಿಯಲ್ಲಿ ಸಿನಿಮಾಗಳನ್ನೂ ನಿರ್ಮಿಸಿದ್ದರು. 2018ರಲ್ಲಿ ಲವ್‌ಯಾತ್ರಿ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗಿಳಿದರು ಆಯುಷ್.‌ ಆದರೆ, ಆ ಸಿನಿಮಾ ಹೇಳಿಕೊಳ್ಳುವ ಯಶ ತಂದುಕೊಡಲಿಲ್ಲ.

ಟ್ರೆಂಡಿಂಗ್​ ಸುದ್ದಿ

ಆ ಸಿನಿಮಾ ನಿರ್ಮಾಣ ಮಾಡಿದ್ದು ಸಲ್ಮಾನ್‌ ಖಾನ್.‌ ಅದಾದ ಬಳಿಕ "ಅಂತಿಮ್‌" ಸಿನಿಮಾದಲ್ಲೂ ಆಯುಷ್‌ ನಾಯಕನಾಗಿ ನಟಿಸಿದರು. ಅಳಿಯನ ಗೆಲುವಿಗಾಗಿ ಸಲ್ಮಾನ್‌ ಖಾನ್‌ ಕೂಡ ಅಂತಿಮ್‌ ಸಿನಿಮಾದಲ್ಲಿ ಪೊಲೀಸ್‌ ಪಾತ್ರದಲ್ಲಿ ನಟಿಸಿದರು. ಚಿತ್ರಕ್ಕೂ ಬಂಡವಾಳ ಹೂಡಿದರು. ಆದರೆ ಆ ಸಿನಿಮಾ ಕೂಡ ಸೋಲುಂಡಿತು. ಅದಾದ ಮೇಲೆ ಸಿನಿಮಾದಿಂದಲೇ ಎರಡು ವರ್ಷ ದೂರ ಉಳಿದ ಆಯುಷ್‌, ಈಗ ಬೇರೆಯದೇ ನಿರ್ಧಾರ ಮಾಡಿದ್ದಾರೆ. ಸಲ್ಮಾನ್‌ ಖಾನ್‌ ಅವರ ಹಂಗಿನಲ್ಲಿ ನಾನು ಇರಲಾರೆ ಎಂದು ಹೊರಬಂದಿದ್ದಾರೆ!

ಅಂದರೆ, ಸಲ್ಮಾನ್‌ ಖಾನ್‌ ನಿರ್ಮಾಣ ಸಂಸ್ಥೆಯಿಂದ ಆಯುಷ್‌ ಶರ್ಮಾ ಹೊರನಡೆದಿದ್ದಾರೆ. ಕಂಫರ್ಟ್‌ ಝೋನ್‌ನಲ್ಲಿ ನಾನು ಕೆಲಸ ಮಾಡಲಾರೆ, ಅದರಾಚೆಗೆ ಬೇರೆ ಪ್ರೊಡಕ್ಷನ್‌ ಹೌಸ್‌ಗಳ ಜತೆಗೆ ನನ್ನನ್ನು ನಾನು ತೆರೆದುಕೊಳ್ಳುವೆ ಎಂದಿದ್ದಾರೆ. ಅದರಂತೆ, ಈಗ ಸಿದ್ಧವಾಗಿದೆ “ರುಸ್ಲಾನ್‌” ಸಿನಿಮಾ. ಇದೇ ಸಿನಿಮಾ ಇನ್ನೇನು ಬಿಡುಗಡೆಯ ಸನಿಹದಲ್ಲಿದೆ. ಆ ಚಿತ್ರದ ನಿಮಿತ್ತ ಇತ್ತೀಚೆಗೆ ಸಂದರ್ಶನ ನೀಡಿದ್ದ ಆಯುಷ್‌, ನಾನಿನ್ನು ಸಲ್ಮಾನ್‌ ಖಾನ್‌ ಪ್ರೊಡಕ್ಷನ್‌ ಹೌಸ್‌ನಲ್ಲಿ ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ. ಹೀಗೆ ತಮ್ಮ ನಿರ್ಧಾರ ತಿಳಿಸುತ್ತಿದ್ದಂತೆ, ಬಾಲಿವುಡ್‌ ಅಂಗಳದಲ್ಲಿ ಬಗೆಬಗೆ ಗುಮಾನಿಗಳು ಸೃಷ್ಟಿಯಾಗುತ್ತಿವೆ.

ಸಲ್ಮಾನ್‌ ಖಾನ್‌ ಮತ್ತು ಆಯುಷ್‌ ಶರ್ಮಾ ನಡುವೆ ಮುನಿಸು ಮನೆ ಮಾಡಿದೆಯೇ? ಚೆನ್ನಾಗಿಯೇ ಇದ್ದ ಅಳಿಯ ಮಾವನ ನಡುವೆ ಏನಾಯ್ತು? ಇಬ್ಬರ ನಡುವಿನ ಬಿರುಕಿಗೆ ಕಾರಣ ಏನು? ಹೀಗೆ ಬಗೆಬಗೆ ಟಾಕ್ಸ್ ಕೇಳತೊಡಗಿತು. ಈ ಗಾಸಿಪ್‌ ಬಗ್ಗೆಯೇ ಆಯುಷ್‌ ಸ್ಪಷ್ಟಪಡಿಸಿದ್ದಾರೆ. ಸಲ್ಮಾನ್‌ ಖಾನ್‌ ಪ್ರೊಡಕ್ಷನ್‌ ಹೌಸ್‌ ತೊರೆದ ಬಗ್ಗೆಯೂ ಮಾತನಾಡಿದ್ದಾರೆ.

ಇದು ಮುನಿಸಲ್ಲ..

ಬಾಲಿವುಡ್ ಹಂಗಾಮಾ ಜೊತೆಗಿನ ಸಂದರ್ಶನದಲ್ಲಿ ಆಯುಷ್ ಶರ್ಮಾ, ತಮ್ಮ ಮತ್ತು ಸಲ್ಮಾನ್ ಖಾನ್ ನಡುವೆ ಯಾವುದೇ ರೀತಿಯ ಬಿರುಕು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಅದು ಹಾಗಲ್ಲ. ಅದು ನನ್ನ ಮನೆ (SK Films). ಯಾವುದೇ ನಟ ಕೇವಲ ಒಂದೇ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುವುದಿಲ್ಲ. ಹಾಗೇ ನೋಡಿದರೆ, ಇದು ತಮಾಷೆಯ ವಿಷಯ. ಆದರೆ ನನ್ನ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಕೆಲವರು ಕಂಫರ್ಟ್‌ ಝೋನ್‌ನಲ್ಲಿ ಕೆಲಸ ಮಾಡಲು ಬಯಸುತ್ತಾರೆ. ನಾನು ಅದರಾಚೆಗೂ ಗುರುತಿಸಿಕೊಳ್ಳಬೇಕು ಎಂದುಕೊಂಡವನು” ಎಂದಿದ್ದಾರೆ.

ಸಂಸಾರ ಬಿಟ್ಟು ಹೊರ ನಡೆಯಬೇಕಿದೆ..

“ನಾನು SK Films ಪ್ರೊಡಕ್ಷನ್‌ ಹೌಸ್‌ನಿಂದ ಹೊರಬರಲು ಈ ಹಿಂದೆಯೇ ನಿರ್ಧರಿಸಿದ್ದೆ. ಹೊರಗಡೆ ಏನು ನಡೆಯುತ್ತಿದೆ ಎಂಬುದನ್ನು ಅನ್ವೇಷಿಸುವುದು ನನ್ನ ಉದ್ದೇಶವಾಗಿತ್ತು. ಸದ್ಯಕ್ಕೆ ನನಗೆ ಆ ಹಂಗು ಸಾಕು. ನಾನು ನನ್ನದೇ ಕುಟುಂಬದ ಮುಚ್ಚಿದ ಸೆಟ್‌ನಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ಏಕೆಂದರೆ, ಅದು ನನ್ನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲಕಾಲ ಸಂಸಾರ ಬಿಟ್ಟು, ಹೊರಗೆ ದುಡಿಯುವ ನಿರ್ಧಾರ ನನ್ನದು. ಈ ಹಂತದಲ್ಲಿ ಕಲಿಕೆಯ ಜತೆಗೆ ಬೆಳೆಯುವುದು ತುಂಬ ಮುಖ್ಯ” ಎಂದಿದ್ದಾರೆ ಆಯುಷ್‌.

ಲವ್‌ಯಾತ್ರಿ ಮೂಲಕ ಪದಾರ್ಪಣೆ

ಆಯುಷ್ ಶರ್ಮಾ ವಾರಿನಾ ಹುಸೇನ್ ಅವರೊಂದಿಗೆ ಲವ್‌ಯಾತ್ರಿ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈ ಚಿತ್ರವನ್ನು ಸಲ್ಮಾನ್ ಖಾನ್ ಫಿಲಂಸ್ ನಿರ್ಮಾಣ ಮಾಡಿದೆ. ಇದರ ನಂತರ, ಆಯುಷ್ ಶರ್ಮಾ ಸಲ್ಮಾನ್ ಖಾನ್ ಅವರ ಆಕ್ಷನ್- ಡ್ರಾಮಾ ಚಿತ್ರ 'ಅಂತಿಮ್‌'ನಲ್ಲಿಯೂ ಕಾಣಿಸಿಕೊಂಡರು. ಈ ಚಿತ್ರವನ್ನು ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ್ದಾರೆ. ಮಹಿಮಾ ಮಕ್ವಾನಾ, ಮಹೇಶ್ ಮಂಜ್ರೇಕರ್, ಜಿಸ್ಶು ಸೇನ್‌ಗುಪ್ತಾ, ಸಚಿನ್ ಖಡೇಕರ್, ನಿಕಿತಾನ್ ಧೀರ್, ಛಾಯಾ ಕದಮ್ ಇತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

IPL_Entry_Point