Breaking News: ತಮಿಳು ನಟ ಧನುಷ್, ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ವಿಚ್ಚೇದನಕ್ಕೆ ಕೋರ್ಟ್ ಅನುಮತಿ; ಅಂತಿಮ ಆದೇಶ ಹೇಗಿದೆ
Dhanush Aishwarya Rajinikanth Seperated: ಎರಡು ವರ್ಷದಿಂದಲೂ ನಟ ಧನುಷ್ ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಅವರ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಚೆನ್ನೈ ಕೋರ್ಟ್ ನಲ್ಲಿ ನಡೆದಿದ್ದ ವಿಚಾರಣೆ ಅಂತಿಮಗೊಂಡು, ಇಬ್ಬರೂ ಪ್ರತ್ಯೇಕಗೊಳ್ಳುವ ತೀರ್ಪು ಹೊರ ಬಿದ್ದಿದೆ.
Dhanush Aishwarya Rajinikanth Seperated: ಕೆಲವು ದಿನಗಳಿಂದ ದೂರವಾಗಿದ್ದ ತಮಿಳಿನ ಸ್ಟಾರ್ ನಟ ಧನುಷ್ ಹಾಗೂ ನಿರ್ದೇಶಕಿ ಮತ್ತು ಸೂಪರ್ ಸ್ಟಾರ್ ನಟ ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರು ಅಧಿಕೃತವಾಗಿ ಬೇರೆಯಾಗಿದ್ದಾರೆ. ಇಬ್ಬರೂ ವಿಚ್ಛೇದನ ಪಡೆಯುವುದಾಗಿ ಹೇಳಿದ್ದರು. ಆನಂತರ ಈ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿತ್ತು. ಆರು ದಿನದ ಹಿಂದೆ ಇಬ್ಬರು ಬೇರ್ಪಡುವ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದರು. ಅದರಂತೆ ತೀರ್ಪು ಕಾಯ್ದಿರಿಸಿದ್ದ ಚೆನ್ನೈನ ನ್ಯಾಯಾಲಯವು ಬುಧವಾರ ಅಂತಿಮ ತೀರ್ಪು ಪ್ರಕಟಿಸಿತು. ಇಬ್ಬರು ವಿಚ್ಛೇದನ ಪಡೆಯುವ ನಿರ್ಧಾರಕ್ಕೆ ಚೆನ್ನೈ ಕೌಟುಂಬಿಕ ನ್ಯಾಯಾಲಯ ಅನುಮತಿ ನೀಡಿತು. ಇದರಿಂದ ಎರಡು ದಶಕದ ಹಿಂದೆ ಮದುವೆಯಾಗಿ ಸ್ಟಾರ್ ಜೋಡಿ ಅಧಿಕೃತವಘಿ ಬೇರ್ಪಟ್ಟಂತೆ ಆಗಿದೆ.
18 ವರ್ಷಗಳ ದಾಂಪತ್ಯದ ನಂತರ 2022 ರ ಜನವರಿಯಲ್ಲಿ ದಂಪತಿಗಳು ತಮ್ಮ ಪ್ರತ್ಯೇಕತೆಯನ್ನು ಘೋಷಿಸಿ ಅವರು ಪರಸ್ಪರ ಒಪ್ಪಿಗೆಗೆ ಸಂಬಂಧಿಸಿದ ಸೆಕ್ಷನ್ 13 ಬಿ ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.
ನ್ಯಾಯಾಲಯ ಸೂಚನೆ ಏನು
ನ್ಯಾಯಾಲಯದ ಪ್ರಕ್ರಿಯೆಗಳು ಎರಡು ವರ್ಷದಿಂದ ನಡೆದಿದ್ದವು. ನವೆಂಬರ್ 21, 2024 ರಂದು, ದಂಪತಿಗಳು ವಿಚ್ಛೇದನದ ನಿರ್ಧಾರವನ್ನು ದೃಢೀಕರಿಸಲು ನ್ಯಾಯಾಲಯಕ್ಕೆ ಹಾಜರಾಗಿದ್ದರು ಮತ್ತು ಅಗತ್ಯ ದಾಖಲೆಗಳಿಗೆ ಸಹಿ ಹಾಕಿದರು. ನ್ಯಾಯಾಲಯವು ಅಂತಿಮ ತೀರ್ಪನ್ನು ನವೆಂಬರ್ 27, 2024 ಕ್ಕೆ ಕಾಯ್ದಿರಿಸಿತ್ತು. ಅದರಂತೆಯೇ ಅಂತಿಮ ತೀರ್ಪು ನಿರೀಕ್ಷೆಯಂತೆಯೇ ಪ್ರಕಟವಾಯಿತು. ಇಬ್ಬರು ಪ್ರತ್ಯೇಕಗೊಳ್ಳುವುದಕ್ಕೆ ಅಧಿಕೃತ ಮುದ್ರೆಯನ್ನು ಕೋರ್ಟ್ ಒತ್ತಿತು.
ಧನುಷ್ ಹಾಗೂ ಐಶ್ವರ್ಯಾ ದಂಪತಿಗೆ ಲಿಂಗ ಮತ್ತು ಯಾತ್ರಾ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರನ್ನು ಸಹ-ಪೋಷಕತ್ವದಲ್ಲಿ ಇಬ್ಬರೂ ಪೋಷಣೆ ಮಾಡಬೇಕು. ಇಬ್ಬರೂ ಮಕ್ಕಳಿಗೆ ತಮ್ಮ ಜೀವನದಲ್ಲಿ ಪೋಷಕರ ಕೊರತೆ ಆಗದಂತೆ ಇಬ್ಬರೂ ನೋಡಿಕೊಳ್ಳಬೇಕು ಎನ್ನುವ ಷರತ್ತಿನೊಂದಿಗೆ ಚೆನ್ನೈ ಕೌಟುಂಬಿಕ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿತು.
ಧನುಷ್ ಮತ್ತು ಐಶ್ವರ್ಯಾ ಮದುವೆ
ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯಾ ರಜನಿಕಾಂತ್ 2004 ರಲ್ಲಿ ಧನುಷ್ ಅವರನ್ನು ವಿವಾಹವಾದರು. ಇಬ್ಬರೂ ಪ್ರೀತಿಸಿ ವಿವಾಹವಾದರು ಎಂದು ಹೇಳಲಾಗಿತ್ತು. ಧನುಷ್ ಮತ್ತು ಐಶ್ವರ್ಯಾಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇಬ್ಬರೂ ಪ್ರಸ್ತುತ ಹದಿಹರೆಯದವರಾಗಿದ್ದಾರೆ. 18 ವರ್ಷಗಳ ಸಂತೋಷದ ದಾಂಪತ್ಯದ ನಂತರ ಇಬ್ಬರೂ 2022 ರಲ್ಲಿ ಬೇರ್ಪಡುವುದಾಗಿ ಘೋಷಿಸಿದರು.̇̈
ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ
ಏಪ್ರಿಲ್ ನಲ್ಲಿ ದಂಪತಿಗಳು ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ಪರಸ್ಪರ ಅರ್ಜಿ ಸಲ್ಲಿಸಿದ್ದರು. 2004ರಲ್ಲಿ ನಡೆದ ತಮ್ಮ ವಿವಾಹವನ್ನು ಅಸಿಂಧು ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು. ಅವರು ಸಲ್ಲಿಸಿದ ಅರ್ಜಿಯನ್ನು ಕುಟುಂಬ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಆದಾಗ್ಯೂ, ಧನುಷ್ ಮತ್ತು ಐಶ್ವರ್ಯಾ ಇಬ್ಬರೂ ವಿಚಾರಣೆಗೆ ಹಾಜರಾಗದ ಕಾರಣ ನ್ಯಾಯಾಲಯವು ಪ್ರಕರಣವನ್ನು ಮೂರು ಬಾರಿ ಮುಂದೂಡಿತು. ಅವರು ನ್ಯಾಯಾಲಯಕ್ಕೆ ಬಾರದ ಕಾರಣ ಇಬ್ಬರೂ ಒಟ್ಟಿಗೆ ವಾಸಿಸಲು ಹೊರಟಿದ್ದಾರೆ ಎಂಬ ವರದಿಗಳು ಬಂದವು. ಆದರೆ ಈ ಎಲ್ಲಾ ವಿಚಾರಗಳಿಗೆ ಬ್ರೇಕ್ ಹಾಕುವಂತೆ ಇಬ್ಬರ ಪ್ರತ್ಯೇಕತೆಯ ಆದೇಶ ಹೊರ ಬಿದ್ದಿದೆ.