ಗಂಡ ಹೆಂಡತಿ ಡಿವೋರ್ಸ್‌ ನೀಡುವುದೇಕೆ? ವಿವಾಹ ವಿಚ್ಛೇದನಕ್ಕೆ ಕಾರಣ ತಿಳಿದು ಎಚ್ಚರ ವಹಿಸಿದ್ರೆ ದೂರವಾಗುವ ಮಾತೆಲ್ಲಿ?
ಕನ್ನಡ ಸುದ್ದಿ  /  ಜೀವನಶೈಲಿ  /  ಗಂಡ ಹೆಂಡತಿ ಡಿವೋರ್ಸ್‌ ನೀಡುವುದೇಕೆ? ವಿವಾಹ ವಿಚ್ಛೇದನಕ್ಕೆ ಕಾರಣ ತಿಳಿದು ಎಚ್ಚರ ವಹಿಸಿದ್ರೆ ದೂರವಾಗುವ ಮಾತೆಲ್ಲಿ?

ಗಂಡ ಹೆಂಡತಿ ಡಿವೋರ್ಸ್‌ ನೀಡುವುದೇಕೆ? ವಿವಾಹ ವಿಚ್ಛೇದನಕ್ಕೆ ಕಾರಣ ತಿಳಿದು ಎಚ್ಚರ ವಹಿಸಿದ್ರೆ ದೂರವಾಗುವ ಮಾತೆಲ್ಲಿ?

ಸಂಗೀತ ನಿರ್ದೇಶಕ ಎಆರ್‌ ರೆಹಮಾನ್ ಹಾಗೂ ಪತ್ನಿ ಸಾಯಿರಾ ಬಾನು ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದಾರೆ. ಈ ವಿಷಯ ಅಭಿಮಾನಗಳಿಗೆ ಶಾಕ್ ನೀಡಿದೆ. 29 ವರ್ಷಗಳ ಕಾಲ ಒಂದಾಗಿ ಸಂಸಾರ ಮಾಡಿದ್ದ ಈ ಜೋಡಿ ದೂರಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಕಾಮನ್ ಆಗಿದ್ದು, ಸಂಸಾರದ ನೌಕೆ ಹಳಿ ತಪ್ಪಲು ಪ್ರಮುಖ ಕಾರಣಗಳೇನು ನೋಡಿ.

ವಿವಾಹ ವಿಚ್ಛೇದನಕ್ಕೆ ಪ್ರಮುಖ ಕಾರಣಗಳು
ವಿವಾಹ ವಿಚ್ಛೇದನಕ್ಕೆ ಪ್ರಮುಖ ಕಾರಣಗಳು (PC: Canva)

ಮದುವೆ ಎಂಬುದು ಎರಡು ಮನಸ್ಸುಗಳು ಒಂದಾಗುವ ಅಪರೂಪದ ಬಂಧ. ಸಾಂಸಾರಿಕ ಜೀವನ ಎಂದರೆ ಒಂದೇ ದೋಣಿಯಲ್ಲಿ ಇಬ್ಬರು ಸೇರಿ ಸಾಗುವುದು. ಮದುವೆಯ ನಂತರದ ಬದುಕು ಗಂಡ–ಹೆಂಡತಿ ಇಬ್ಬರಿಗೂ ಸೇರಿದ್ದು. ಕಷ್ಟ, ಸುಖ, ದುಃಖ, ನೋವುಗಳಲ್ಲಿ ಇಬ್ಬರು ಸಮಾನ ಪಾಲುದಾರರು. ಆದರೆ ಕೆಲವೊಮ್ಮೆ ಈ ಸಂಸಾರ ದೋಣಿಯ ಪಥ ಬದಲಾಗಬಹುದು. ಬಹಳ ದೂರವರೆಗೆ ಸಾಗಿದ ಮೇಲೂ ಇಬ್ಬರೂ ಬೇರೆ ಬೇರೆ ದೋಣಿಯಲ್ಲಿ ಸಾಗಲು ನಿರ್ಧಾರ ಮಾಡಬಹುದು. ಇದು ಕೊನೆಗೆ ನಿಲ್ಲುವುದು ವಿಚ್ಛೇದನದ ಹಂತದಲ್ಲಿ.

ಹೌದು ಇದೀಗ ಎಲ್ಲೆಲ್ಲೂ ಸಂಗೀತ ನಿರ್ದೇಶಕ ಏಆರ್ ರೆಹಮಾನ್‌ ಅವರ ವಿಚ್ಛೇದನದ್ದೇ ಸುದ್ದಿ. ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಸಹಜವಾಗಿದ್ದರೂ ಕೂಡ ಜನ ಸಾಮಾನ್ಯರಲ್ಲೂ ಕೂಡ ಕಾಮನ್ ಎನ್ನಿಸಿಕೊಂಡಿದೆ. ಮದುವೆಯಾಗಿ ಹೊಂದಿಕೊಂಡು ಬಾಳುವ ಮನಸ್ಥಿತಿ ನಮಲ್ಲಿ ಹಲವರಿಗಿಲ್ಲ. ಮದುವೆ ಎಂದರೆ ಹೊಂದಾಣಿಕೆ, ಆದರೆ ಎಷ್ಟೋ ಜನರಿಗೆ ಹೊಂದಾಣಿಕೆ ಸಾಧ್ಯವಾಗದೇ ಕಟ್ಟಿಕೊಂಡ ಆರೇ ತಿಂಗಳು, ವರ್ಷಕ್ಕೆ ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರುತ್ತಾರೆ. ಆದರೆ ರೆಹಮಾನ್ ಅವರದ್ದು ಬರೋಬ್ಬರಿ 29ವರ್ಷದ ಸಂಸಾರಿಕ ಜೀವನ. ಇವರಿಗೆ ಎದೆಯತ್ತರ ಬೆಳೆದ ಮೂವರು ಮಕ್ಕಳಿದ್ದಾರೆ. ಹಾಗಾದರೆ ವಿವಾಹ ವಿಚ್ಛೇದಕ್ಕೆ ಕಾರಣವೇನು, ಸಂಸಾರದ ನೌಕೆ ಹಳಿ ತಪ್ಪಲು ಯಾವ ಅಂಶ ಕಾರಣವಾಗುತ್ತದೆ ಎಂಬ ವಿವರ ಇಲ್ಲಿದೆ ನೋಡಿ.

ಸಂಬಂಧದಲ್ಲಿ ಬದ್ಧತೆ ಇಲ್ಲದೇ ಇರುವುದು

ಪ್ರಪಂಚದಾದ್ಯಂತ ವಿಚ್ಛೇದನಕ್ಕೆ ಮೊದಲು ಹಾಗೂ ಪ್ರಮುಖ ಕಾರಣವಾಗಿರುವುದು ಸಂಬಂಧದಲ್ಲಿ ಬದ್ಧತೆ ಇಲ್ಲದೇ ಇರುವುದು. ಶೇ 75ರಷ್ಟು ವಿಚ್ಛೇದನಕ್ಕೆ ಇದೇ ಕಾರಣ ಎನ್ನಲಾಗುತ್ತದೆ. ಸಂಸಾರ ಎನ್ನುವುದು ಬಸ್‌ ಪಯಣವಲ್ಲ. ಒಂದು ನಿಲ್ದಾಣದಲ್ಲಿ ಹತ್ತಿ ಮತ್ತೊಂದು ನಿಲ್ದಾಣದಲ್ಲಿ ಇಳಿದು ಹೋಗಲು. ಇದೊಂಥರ ಅಂತ್ಯವಿಲ್ಲದ ನಿರಂತರ ಪಯಣದಂತೆ. ಈ ಪಯಣದಲ್ಲಿ ನೀವು ಸಾಗುತ್ತಲೇ ಇರಬೇಕು. ಮದುವೆ, ಸಂಸಾರ ಎಂಬ ಬದ್ಧತೆ ಇದ್ದರೆ ಮಾತ್ರ ಸಂಸಾರ ನೌಕೆ ಸಂತೋಷದಿಂದ ಸಾಗಲು ಸಾಧ್ಯ.

ದಾಂಪತ್ಯ ದ್ರೋಹ

ಇತ್ತೀಚಿನ ದಿನಗಳಲ್ಲಿ ವಿಚ್ಛೇದನಕ್ಕೆ ಇದು ಕೂಡ ಪ್ರಮುಖ ಕಾರಣ ಎನ್ನಿಸಿಕೊಳ್ಳುತ್ತಿದೆ. ಮದುವೆಯಾದ ಆರಂಭಿಕ ವರ್ಷದಲ್ಲಿ ಸಂಬಂಧದಲ್ಲಿ ಅತ್ಯಂತ ಅನ್ಯೋನ್ಯತೆಯಿಂದ ಇದ್ದು, ನಂತರ ಹಳೆ ಸಂಬಂಧ ಹಳಸಲು ಶುರುವಾಗಿ, ಹೊಸ ಸಂಬಂಧದತ್ತ ಮನಸ್ಸು ಮಾಡುವುದು. ಗಂಡ ಹೆಂಡತಿಗೆ, ಹೆಂಡತಿಗೆ ಗಂಡನಿಗೆ ಅರಿಯದಂತೆ ದಾಂಪತ್ಯ ದ್ರೋಹ ಮಾಡುವುದು ಕೂಡ ವಿವಾಹ ವಿಚ್ಛೇದನಕ್ಕೆ ಕಾರಣವಾಗಿದೆ.

ಆರ್ಥಿಕ ವಿಚಾರದಲ್ಲಿ ಬೇಜವಾಬ್ದಾರಿತನ

ಮೊದಲೇ ಹೇಳಿದಂತೆ ಸಂಸಾರ ಎಂಬುದು ಬಹಳ ದೂರ ಸಾಗಬೇಕಾದ ನೌಕೆ. ಇದರಲ್ಲಿ ಗಂಡ, ಹೆಂಡತಿ, ಮಕ್ಕಳು, ಮನೆ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ ಸೇರಿ ಹಲವು ಅಂಶಗಳು ಒಳಗೊಂಡಿರುತ್ತವೆ. ಈ ಎಲ್ಲವೂ ಸುಸೂತ್ರವಾಗಿದ್ದು, ಸಂಸಾರದ ನೌಕೆ ಯಾವುದೇ ಅಡೆತಡೆಯಿಲ್ಲದೇ ಸಾಗಲು ಆರ್ಥಿಕ ಪರಿಸ್ಥಿತಿ ಕೂಡ ಮುಖ್ಯವಾಗುತ್ತದೆ. ಆದರೆ ಕೆಲವು ಸಂದರ್ಭದಲ್ಲಿ ಗಂಡ ಅಥವಾ ಹೆಂಡತಿ ಆರ್ಥಿಕ ವಿಚಾರದಲ್ಲಿ ಬೇಜವಾಬ್ದಾರಿ ತೋರುತ್ತಾರೆ. ಇದರಿಂದ ಇಡೀ ಸಂಸಾರ ಅಲ್ಲೋಕ ಕಲ್ಲೋಕವಾಗುತ್ತದೆ. ಕೊನೆಗೆ ಇದು ವಿಚ್ಛೇದನದ ಹಂತಕ್ಕೆ ಬಂದು ತಲುಪುತ್ತದೆ.

ಆತ್ಮೀಯತೆ ಇಲ್ಲದೇ ಇರುವುದು

ಗಂಡ–ಹೆಂಡತಿ, ಸಂಸಾರ ಎಂದ ಮೇಲೆ ಆತ್ಮೀಯವಾಗಿರುವುದು ಬಹಳ ಮುಖ್ಯ. ನೀ ನನಗೆ ನೀ ನಿನಗೆ ಎಂದುಕೊಂಡು ಪ್ರತಿ ವಿಚಾರದಲ್ಲಿ ಗಂಡ ಹೆಂಡತಿಗೆ ಹೆಂಡತಿ ಗಂಡನಿಗೆ ಹೆಗಲಾಗಿ ಇರಬೇಕು. ಆದರೆ ಇತ್ತೀಚಿನ ಎಷ್ಟೋ ಮದುವೆಗಳು ಪೋಷಕರ ಒತ್ತಾಯಕ್ಕೋ ಇಲ್ಲ ಇನ್ಯಾವುದೋ ಕಾರಣಕ್ಕೂ ಆಗಿರುತ್ತದೆ. ಇದರಿಂದ ಆತ್ಮೀಯತೆ ಬೆಳೆಯುವುದಿಲ್ಲ. ಮದುವೆ ಆದ ತಪ್ಪಿಗೆ ಸಂಸಾರ ಮಾಡುತ್ತಿದ್ದೇವೆ ಎಂಬ ಭಾವ ಅವರಲ್ಲಿ ಇರುತ್ತದೆ. ಇದು ಕೊನೆಗೆ ಅತಿರೇಕವಾಗಿ ವಿಚ್ಛೇದನದ ಹಂತ ತಲುಪುತ್ತದೆ.

ಜಗಳ, ವಾದ

ಸಂಸಾರ ಎಂದರೆ ಯಾವ ದಿಕ್ಕಿನಲ್ಲಿ ಸಾಗಿದರೂ ಒಬ್ಬರು ಒಂದಾಗಿಯೇ ಸಾಗಬೇಕು. ಮೊದಲೇ ಹೇಳಿದಂತೆ ಒಂದೇ ದೋಣಿಯನ್ನು ಆ ಕಡೆಗೂ ಈ ಕಡೆಗೂ ನಡೆಸಲು ಸಾಧ್ಯವಿಲ್ಲ. ಆದರೆ ಈಗೀಗ ಗಂಡ ಹೆಂಡತಿಯ ನಡುವೆ ಚಿಕ್ಕ ಪುಟ್ಟ ವಿಚಾರಕ್ಕೂ ಜಗಳ, ವಾದ ನಡೆಯುತ್ತದೆ. ನಾನು ಹೇಳಿದ್ದೇ ಸರಿ, ನಾನು ಮಾಡಿದ್ದೇ ಸರಿ ಗಂಡ ವಾದ ಮಾಡಿದರೆ, ಅವನು ಮಾಡಿದ್ದು ಸರಿಯಿಲ್ಲ ಎಂದು ಹೆಂಡತಿ ಜಗಳ ಮಾಡುತ್ತಾಳೆ. ಇದು ಗಂಡ–ಹೆಂಡತಿಯ ನಡುವೆ ವೈಮನಸ್ಸಿಗೆ ಕಾರಣವಾಗುತ್ತದೆ. ಇದೇ ನಿರಂತರವಾಗಿ ಕೊನೆಗೆ ಡಿವೋರ್ಸ್‌ನಲ್ಲಿ ಅಂತ್ಯವಾಗುತ್ತದೆ.

ಹೊಂದಾಣಿಕೆ ಇಲ್ಲದೇ ಇರುವುದು

ಮದುವೆ ಎನ್ನುವುದು ಎಲ್ಲೋ ಇರುವ ಎರಡು ಜೀವಗಳನ್ನು ಒಂದು ಮಾಡುವ ಬಂಧ. ಮದುವೆ ಆಗುವವರವರೆಗಿನ ಜೀವನವೇ ಬೇರೆ, ಮದುವೆಯ ನಂತರದ ಜೀವನವೇ ಬೇರೆ. ಆದರೆ ಮದುವೆ ಆದ ಮೇಲೆ ಇಬ್ಬರೂ ಒಂದೇ, ಇಬ್ಬರ ದಾರಿ, ಬದುಕು, ಆಸೆ, ಕನಸು ಎಲ್ಲವೂ ಒಂದೇ ಎಂಬಂತೆ ಬದುಕು ಸಾಗಿಸಬೇಕು. ಆದರೆ ಈಗೀಗ ಗಂಡ–ಹೆಂಡತಿ ಇಬ್ಬರಲ್ಲೂ ಹೊಂದಾಣಿಕೆ ಕೊರತೆ ಕಾಡುತ್ತಿದೆ. ಇದು ಮದುವೆ ಎಂಬ ಸುಂದರ ಸಂಬಂಧ ವಿಚ್ಛೇದನದಲ್ಲಿ ಅಂತ್ಯವಾಗುವಂತೆ ಮಾಡುತ್ತದೆ.

ಮೌಲ್ಯ, ನೈತಿಕತೆಯನ್ನು ವಿರೋಧಿಸುವುದು

ಪ್ರತಿಯೊಬ್ಬರ ಬದುಕಿಗೂ ತಮ್ಮದೇ ಆದ ಮೌಲ್ಯ, ನೈತಿಕತೆ ಇರುತ್ತದೆ. ಮದುವೆಯಾದ ಮಾತ್ರಕ್ಕೆ ಮೌಲ್ಯವನ್ನು ಬಿಟ್ಟು ಬದುಕಬೇಕು ಎಂಬುದೇನಿಲ್ಲ. ಆದರೆ ಕೆಲವೊಮ್ಮೆ ಗಂಡ ಹೆಂಡತಿ ನಡುವೆ ಮೌಲ್ಯ, ನೈತಿಕತೆಯ ವಿಚಾರಕ್ಕೆ ವಿರೋಧ ವ್ಯಕ್ತವಾಗುವುದು ಕೂಡ ವಿಚ್ಛೇದನಕ್ಕೆ ಕಾರಣವಾಗುವುದು.

ನಂಬಿಕೆ ಇಲ್ಲದೇ ಇರುವುದು

ಇತ್ತೀಚಿನ ಜಗತ್ತಿನಲ್ಲಿ ನಂಬಿಕೆ ಕೂಡ ಸಂಬಂಧ ಅಸ್ತಿತ್ವದಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನಂಬಿಕೆ ಕಳೆದುಕೊಳ್ಳುವುದು ಕೂಡ ಸಂಬಂಧ ಕೆಡಲು ಪ್ರಮುಖ ಕಾರಣವಾಗಿದೆ. ಗಂಡ ಹೆಂಡತಿಯ ಮೇಲೆ, ಹೆಂಡತಿ ಗಂಡನ ಮೇಲೆ ಇಲ್ಲದ ಕಾರಣಕ್ಕೆ ಅನುಮಾನ ಪಟ್ಟು ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅನುಮಾನ ಎಂಬ ಭೂತವನ್ನು ಆರಂಭದಲ್ಲೇ ಓಡಿಸಿಲ್ಲ ಎಂದರೆ ಸಂಸಾರದ ಸೂತ್ರ ಹರಿಯುವುದು ಖಂಡಿತ.

Whats_app_banner