ಐದು ದಿನಗಳ ಅಂತರದಲ್ಲಿ ಉಪ್ಪಿ ‘UI’, ಕಿಚ್ಚ ಸುದೀಪ್‌ ‘ಮ್ಯಾಕ್ಸ್’ ಬಿಡುಗಡೆ; ಏನಂತಾರೆ ರಿಯಲ್‌ ಸ್ಟಾರ್‌ ಉಪೇಂದ್ರ?
ಕನ್ನಡ ಸುದ್ದಿ  /  ಮನರಂಜನೆ  /  ಐದು ದಿನಗಳ ಅಂತರದಲ್ಲಿ ಉಪ್ಪಿ ‘Ui’, ಕಿಚ್ಚ ಸುದೀಪ್‌ ‘ಮ್ಯಾಕ್ಸ್’ ಬಿಡುಗಡೆ; ಏನಂತಾರೆ ರಿಯಲ್‌ ಸ್ಟಾರ್‌ ಉಪೇಂದ್ರ?

ಐದು ದಿನಗಳ ಅಂತರದಲ್ಲಿ ಉಪ್ಪಿ ‘UI’, ಕಿಚ್ಚ ಸುದೀಪ್‌ ‘ಮ್ಯಾಕ್ಸ್’ ಬಿಡುಗಡೆ; ಏನಂತಾರೆ ರಿಯಲ್‌ ಸ್ಟಾರ್‌ ಉಪೇಂದ್ರ?

ಡಿಸೆಂಬರ್‌ 2024ರ ಎರಡು ದೊಡ್ಡ ಸಿನಿಮಾಗಳಾದ ಯುಐ ಮತ್ತು ಮ್ಯಾಕ್ಸ್‌ ಕೇವಲ ಐದು ದಿನಗಳ ಅಂತರದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾಕ್ಕಿಂತ ಮೊದಲು ಅಂದರೆ ಡಿಸೆಂಬರ್‌ 20ರಂದು ಯುಐ ರಿಲೀಸ್‌ ಆಗಲಿದೆ.

ಐದು ದಿನಗಳ ಅಂತರದಲ್ಲಿ ‘UI’,  ‘ಮ್ಯಾಕ್ಸ್’ ಬಿಡುಗಡೆಯಾಗಲಿದ್ದು, ಈ ಕುರಿತು ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಐದು ದಿನಗಳ ಅಂತರದಲ್ಲಿ ‘UI’, ‘ಮ್ಯಾಕ್ಸ್’ ಬಿಡುಗಡೆಯಾಗಲಿದ್ದು, ಈ ಕುರಿತು ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಮತ್ತು ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರವು ಇದೇ ತಿಂಗಳು ಐದೇ ದಿನಗಳ ಅಂತರದಲ್ಲಿ ಬಿಡುಗಡೆಯಾಗುತ್ತಿದೆ. ಡಿ. 20ಕ್ಕೆ ‘UI’ ಬಂದರೆ, ಡಿ. 25ರಂದು ‘ಮ್ಯಾಕ್ಸ್’ ಬರುತ್ತಿದೆ. ಸಹಜವಾಗಿಯೇ, ಈ ಪರಿಸ್ಥಿತಿಯಲ್ಲಿ ಇಂತಹ ಪೈಪೋಟಿ ಮತ್ತು ಕ್ಲಾಶ್ ಬೇಕಾ? ಎಂಬ ಪ್ರಶ್ನೆಗಳು ಚಿತ್ರರಂಗದ ವಲಯದಲ್ಲಿ ಮತ್ತು ಸೋಷಿಯಲ್‍ ಮೀಡಿಯಾದಲ್ಲಿ ಕೇಳಿಬರುತ್ತಿದೆ. ಇದರಲ್ಲಿ ಕ್ಲಾಶ್‍ ಏನೂ ಇಲ್ಲ ಎಂದು ಸುದೀಪ್‍ ಈಗಾಗಲೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ಉಪೇಂದ್ರ ಅವರ ನಿಲುವೇನು? ಎಂಬ ಪ್ರಶ್ನೆ ಸಹಜವಾಗಿಯೇ. ಅವರು ಸಹ ಕ್ಲಾಶ್ ‍ಇಲ್ಲ, ಎರಡೂ ಚಿತ್ರಗಳನ್ನು ಪ್ರೇಕ್ಷಕರು ನೋಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ.

ಸೋಮವಾರ ಈ ಕುರಿತು ‘UI’ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಮ್ಯಾಕ್ಸ್’ ಚಿತ್ರಕ್ಕೂ ಒಳ್ಳೆಯದಾಗಲಿ. ಒಂದೇ ದಿನ ಎರಡು ದೊಡ್ಡ ಚಿತ್ರಗಳು ಬಿಡುಗಡೆಯಾದಾಗ, ಎರಡೂ ಚಿತ್ರಗಳನ್ನು ನೋಡಿ, ಯಶಸ್ವಿಯಾದ ಉದಾಹರಣೆಗಳಿವೆ. ಅದು ರಜೆಯ ಸೀಸನ್‍ ಆಗಿರುವುದರಿಂದ, ಅವರೂ ಬರುತ್ತಿದ್ದಾರೆ. ಅವರಿಗೂ ಒಳ್ಳೆಯದಾಗಲಿ. ಜನ ಎರಡೂ ಚಿತ್ರಗಳನ್ನು ನೋಡುತ್ತಾರೆ ಎಂಬ ನಂಬಿಕೆ ಇದೆ. ನಾವೆಲ್ಲಾ ಕನ್ನಡ ಚಿತ್ರರಂಗದವರು, ಕನ್ನಡ ಚಿತ್ರಗಳನ್ನು ಮಾಡುತ್ತಿದ್ದೇವೆ. ಕನ್ನಡ ಚಿತ್ರಗಳು ಬೆಳೆಯುತ್ತಿವೆ. ಅದಕ್ಕೆ ಹೆಮ್ಮೆ ಪಡಬೇಕು ನಾವು. ಒಬ್ಬರಿಗೊಬ್ಬರು ಸಪೋರ್ಟ್ ಮಾಡಬೇಕು. ಸುದೀಪ್‍ ಅವರು ನಮ್ಮ ಚಿತ್ರಕ್ಕೆ ಶುಭಕೋರಿ ಟ್ವೀಟ್ ‍ಮಾಡಿದ್ದಾರೆ. ನಾವು ಬೆಂಬಲ ಕೊಡುತ್ತೇವೆ’ ಎಂದರು.

ಇನ್ನು, ನಿರ್ಮಾಪಕರಲ್ಲೊಬ್ಬರಾದ ಕೆ.ಪಿ. ಶ್ರೀಕಾಂತ್‍ ಮಾತನಾಡಿ, ‘ನಾವು ಮೂರು ತಿಂಗಳ ಹಿಂದೆಯೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದೆವು. ಘೋಷಣೆಗೂ ಮುನ್ನ ಸುದೀಪ್‍ ಅವರನ್ನು ಭೇಟಿಯಾಗಿ ಡಿಸೆಂಬರ್‌ನಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವ ಬಗ್ಗೆ ಹೇಳಿದ್ದೆವು. ನೀವು ಬಿಡುಗಡೆ ಮಾಡಿ ಎಂದು ಅವರೂ ಹೇಳಿದ್ದರು. ಆ ಸಂದರ್ಭದಲ್ಲಿ ಅವರಿಗೂ ಹೀಗಾಗಬಹುದು ಎಂದು ಗೊತ್ತಿರಲಿಲ್ಲ. ಇದು ನಿರ್ಮಾಪಕರ ತೀರ್ಮಾನ ಎಂದು ನಿನ್ನೆ ಪತ್ರಿಕಾಗೋಷ್ಠಿಯಲ್ಲೂ ಹೇಳಿದ್ದಾರೆ’ ಎಂದರು.

ಅಂದುಕೊಂಡಂತೆ, ಚಿತ್ರವು ಡಿ. 20ಕ್ಕೆ ಬಿಡುಗಡೆಯಾಗುತ್ತಿದೆ ಎನ್ನುವ ಶ್ರೀಕಾಂತ್‍, ‘ಚಿತ್ರಮಂದಿರಗಳ ಪಟ್ಟಿ ಫೈನಲ್‍ ಆಗುತ್ತಿದೆ. ಹೊರರಾಜ್ಯಗಳಲ್ಲಿ ದೊಡ್ಡ ನಿರ್ಮಾಣ ಮತ್ತು ವಿತರಣಾ ಸಂಸ್ಥೆಗಳು ಚಿತ್ರವನ್ನು ಬಿಡುಗಡೆ ಮಾಡುತ್ತಿವೆ. ಗೀತಾ ಆರ್ಟ್ಸ್ ಸಂಸ್ಥೆಯ ಅಲ್ಲು ಅರವಿಂದ್, ಎ.ಪಿ ಇಂಟರ್‍ನ್ಯಾಷನಲ್‍ನ ಸಂಜಯ್‍, ಜೀ ಸ್ಟೂಡಿಯೋಸ್‍ನ ಪುನೀತ್‍ ಮುಂತಾದವರು ಹೊರರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಹೊರರಾಜ್ಯಗಳಷ್ಟೇ ಅಲ್ಲ, ಅಮೇರಿಕಾ ಕೆನಡಾ, ಆಸ್ಟ್ರೇಲಿಯಾ, ದುಬೈ ಮುಂತಾದ ದೇಶಗಳಲ್ಲೂ ಚಿತ್ರ ಏಕಕಾಲಕ್ಕೆ ಬಿಡುಗಡೆ ಆಗಲಿದೆ’ ಎಂದರು.

ಡಿಸೆಂಬರ್ 7ರಿಂದ ‘UI’ ಚಿತ್ರದ ಪ್ರಮೋಷನ್ ಹೊರರಾಜ್ಯಗಳಲ್ಲಿ ನಡೆಯಲಿದ್ದು, ಬೆಂಗಳೂರು ಅಥವಾ ಚಿತ್ರದುರ್ಗದಲ್ಲಿ ಚಿತ್ರದ ಪ್ರೀ-ರಿಲೀಸ್‍ ಇವೆಂಟ್‍ ನಡೆಯಲಿದೆ.

ವರದಿ: ಚೇತನ್‌ ನಾಡಿಗೇರ್‌

Whats_app_banner