Maharashtra Politics: ಮಹಾರಾಷ್ಟ್ರ ಕ್ಕೆ ದೇವೇಂದ್ರ ಫಡ್ನವೀಸ್ ಸಿಎಂ; ಬಿಜೆಪಿ, ಶಿವಸೇನೆ, ಎನ್‌ಸಿಪಿಗೆ ಸಿಗಲಿವೆ ಎಷ್ಟು ಸಚಿವ ಸ್ಥಾನ
Maharashtra Politics: ಚುನಾವಣೆ ಫಲಿತಾಂಶ ಬಂದು ಹತ್ತು ದಿನ ಕಳೆದಿದ್ದರೂ ಅಧಿಕಾರ ಹಂಚಿಕೆ ಕಾರಣದಿಂದ ವಿಳಂಬವಾಗಿದ್ದ ಮಹಾರಾಷ್ಟ್ರದ ಮಹಾಯುತಿ ಮೈತ್ರಿಯ ಮಾತುಕತೆ ಮುಗಿದಿವೆ. ಸಚಿವ ಸ್ಥಾನ ಹಂಚಿಕೆಯೂ ಅಂತಿಮಗೊಂಡಿದ್ದು ಗುರುವಾರ ಪ್ರಮಾಣ ಸ್ವೀಕಾರ ನಡೆಯಲಿದೆ.
Maharashtra Politics: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಒಂದೇ ದಿನ ಬಾಕಿಯಿದ್ದು, ಇಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಹಾರಾಷ್ಟ್ರದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನಾವೀಸ್ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೇ ಅವರೇ ಸಿಎಂ ಆಗಲಿದ್ದಾರೆ ಎನ್ನುವ ಘೋಷಣೆ ಮಾಡಲಾಗಿದೆ. ಬುಧವಾರವೇ ರಾಜ್ಯಪಾಲರ ಭೇಟಿಯಾಗಲಿರುವ ಮಯಾಯುತಿ ನಿಯೋಗ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ. ನಾಳೆ ಸಂಜೆ 5.30ಕ್ಕೆ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ದೇವೇಂದ್ರ ಫಡ್ನಾವೀಸ್ ಅವರು ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಏಕನಾಥ ಶಿಂದೆ ಮತ್ತು ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
ಫಡ್ನವೀಸ್ ಆಯ್ಕೆ
ಈ ನಡುವೆ ಇಂದು ಬಿಜೆಪಿ ಶಾಸಕಾಂಗ ಸಭೆ ನಡೆದಿದ್ದು, ಅಲ್ಲಿನ ನಾಯಕನ ಆಯ್ಕೆಯಾಗಿದೆ. ಈ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದು ಮುನ್ನಡೆ ತಂದುಕೊಟ್ಟಿರುವ ಉಪಮುಖ್ಯಮಂತ್ರಿಯಾಗಿದ್ದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರೇ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆಗಿದ್ದಾರೆ.
ಕೇಂದ್ರ ವೀಕ್ಷಕರಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಿಜಯ್ ರೂಪಾನಿ ಅವರು ಪಾಲ್ಗೊಂಡಿದ್ದರು.
ನಿರಂತರ ಚರ್ಚೆ
ಮೂಲಗಳ ಪ್ರಕಾರ, ಸಚಿವ ಸ್ಥಾನ ಹಂಚಿಕೆಗೆ ಸೂತ್ರವನ್ನು ಅಂತಿಮಗೊಳಿಸಲಾಗಿದೆ. ಅಧಿಕಾರ ಹಂಚಿಕೆಯು 6-1 ಸೂತ್ರವನ್ನು ಆಧರಿಸಿದೆ ಎಂದು ಮೂಲಗಳು ತಿಳಿಸಿವೆ. ಅಂದರೆ ಪಕ್ಷ ಹೊಂದಿರುವ ಪ್ರತಿ ಆರು ಶಾಸಕರಿಗೆ ಒಂದು ಸಚಿವ ಸ್ಥಾನವನ್ನು ನೀಡಲಾಗುತ್ತದೆ. ಸೂತ್ರದ ಪ್ರಕಾರ, ನಿರೀಕ್ಷೆಯಂತೆ, 132 ಸ್ಥಾನಗಳನ್ನು ಗೆದ್ದ ಬಿಜೆಪಿ, ಗರಿಷ್ಠ ಸಂಖ್ಯೆಯ ಸಚಿವ ಸ್ಥಾನಗಳನ್ನು ಸಹ ಹೊಂದಿರುತ್ತದೆ. ಅದರ ಎರಡು ಮಿತ್ರಪಕ್ಷಗಳು ಏಕನಾಥ್ ಶಿಂಧೆ ಶಿವಸೇನೆ ಬಣ ಮತ್ತು ಅಜಿತ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಬಣಕೂಡ ಸಚಿವ ಸ್ಥಾನವನ್ನು ಪಡೆಯಲಿವೆ. ಎರಡೂ ಪಕ್ಷದಿಂದ ತಲಾ ಒಬ್ಬರು ಉಪಮುಖ್ಯಮಂತ್ರಿ ಇರಲಿದ್ದಾರೆ.
ಮೂರು ಪಕ್ಷಗಳ ಪ್ರಮುಖರ ಸಮ್ಮುಖದಲ್ಲಿ ನಡೆದಿರುವ ಮಾತುಕತೆಯ ಪ್ರಕಾರ ಬಿಜೆಪಿಗೆ 20 ರಿಂದ 22 ಸಚಿವ ಸ್ಥಾನಗಳಿಗೆ ಅವಕಾಶ ಸಿಗಲಿದೆ. ಏಕನಾಥ್ ಶಿಂಧೆ ಅವರ ಪಕ್ಷಕ್ಕೆ 12 ಸ್ಥಾನಗಳು ಮತ್ತು ಎನ್‌ಸಿಪಿಯ ಅಜಿತ್ ಪವಾರ್ ಬಣಕ್ಕೆ 9 ರಿಂದ 10 ಸಚಿವ ಸ್ಥಾನಗಳನ್ನು ನೀಡಬಹುದು. ಆದರೆ ಖಾತೆ ವಿಚಾರವಾಗಿಯೂ ಇನ್ನೂ ಅಂತಿಮ ತೀರ್ಮಾನವಾಗಿಲ್ಲ.
ಗೃಹ ಖಾತೆ ಬೇಡಿಕೆ
ಗೃಹ ಖಾತೆಯನ್ನು ಬಿಜೆಪಿ ಉಳಿಸಿಕೊಳ್ಳಲು ಮುಂದಾಗಿದ್ದರೆ, ಶಿವಸೇನೆ ಬಣವು ಗೃಹ ಖಾತೆಯನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡುವಂತೆ ಕೇಳಿಕೊಂಡಿದೆ. ಇದಲ್ಲದೇ ಪ್ರಮುಖ ಖಾತೆಗಳ ವಿಚಾರದಲ್ಲೂ ಸಂಜೆ ಒಳಗೆ ಸ್ಪಷ್ಟ ಚಿತ್ರಣ ಸಿಗಬಹುದು.
ಏತನ್ಮಧ್ಯೆ, ಅಜಿತ್ ಪವಾರ್ ಅವರ ಎನ್‌ಸಿಪಿ ಹೊಸ ಸರ್ಕಾರದಲ್ಲಿ ಶಿಂಧೆ ಬಣಕ್ಕೆ ಸಮನಾದ ಪಾಲು ನೀಡಬೇಕೆಂದು ಒತ್ತಾಯಿಸಿದೆ. ಎನ್‌ಸಿಪಿ ನಾಯಕ ಛಗನ್ ಭುಜಬಲ್ ಅವರಂತೂ ಶಿವಸೇನೆಯ "ಸ್ಟ್ರೈಕ್ ರೇಟ್" ಉತ್ತಮವಾಗಿದೆ ಮತ್ತು ಅದಕ್ಕೆ ಅನುಗುಣವಾಗಿ ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಘೋಷಿಸಿದ್ದಾರೆ. ಈ ಕುರಿತು ಇನ್ನೂ ಎರಡು ಪಕ್ಷಗಳ ನಡುವೆ ಚರ್ಚೆಗಳು ನಡೆದಿದ್ದು, ಅಂತಿಮಗೊಳಿಸುವ ಕಸರತ್ತು ಮಾತ್ರ ಬುಧವಾರ ಮಧ್ಯಾಹ್ನವಾದರೂ ನಿಂತಿರಲಿಲ್ಲ.
ಶಿಂಧೆ ಭೇಟಿ ಮಾಡಿದ ಫಡ್ನವೀಸ್
ಬುಧವಾರ ಬೆಳಿಗ್ಗೆಯೇ ಮುಂಬೈಗೆ ಆಗಮಿಸಿರುವ ಶಿವಸೇನಾ ನಾಯಕ ಹಾಗೂ ಹಂಗಾಮಿ ಸಿಎಂ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಕೆಲ ಹೊತ್ತು ಮಾತುಕತೆ ನಡೆಸಿದರು.
ಶಾಸಕಾಂಗ ನಾಯಕರ ಆಯ್ಕೆ
ಶಿವಸೇನೆಯಿಂದ ಏಕನಾಥ ಶಿಂಧೆ ಹಾಗೂ ಎನ್‌ಸಿಪಿ ಶಾಸಕಾಂಗ ನಾಯಕರಾಗಿ ಅಜಿತ್ ಪವಾರ್ ಆಯ್ಕೆಯಾಗಿದ್ದಾರೆ. ಅಜಿತ್ ಪವಾರ್ ಅವರು ಬಹುತೇಕ ಉಪಮುಖ್ಯಮಂತ್ರಿಯಾಗಲಿದ್ದು. ಶಿವಸೇನೆಯಿಂದ ಏಕನಾಥ ಶಿಂಧೆ ಇಲ್ಲವೇ ಅವರ ಪುತ್ರ ಡಿಸಿಎಂ ಸ್ಥಾನ ಅಲಂಕರಿಸಬಹುದು. ಇಲ್ಲವೇ ಪಕ್ಷದ ಹಿರಿಯರಿಗೆ ಆ ಸ್ಥಾನ ಸಿಗಬಹುದು. ಈಗಾಗಲೇ ಶಿವಸೇನೆಯ ಮೂಲ ಬಣ ಆದಿತ್ಯ ಠಾಕ್ರೆ ಅವರನ್ನು ತಮ್ಮ ಪಕ್ಷದ ನಾಯಕರಾಗಿ ಘೋಷಿಸಿದೆ.