ಟಿ20 ವಿಶ್ವಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಸಲ್ಲ, ಭಾರತದಲ್ಲಿ ಭದ್ರತಾ ಸಮಸ್ಯೆ ಇಲ್ಲ; ಪಾಕಿಸ್ತಾನದ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಸಲ್ಲ, ಭಾರತದಲ್ಲಿ ಭದ್ರತಾ ಸಮಸ್ಯೆ ಇಲ್ಲ; ಪಾಕಿಸ್ತಾನದ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ

ಟಿ20 ವಿಶ್ವಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಸಲ್ಲ, ಭಾರತದಲ್ಲಿ ಭದ್ರತಾ ಸಮಸ್ಯೆ ಇಲ್ಲ; ಪಾಕಿಸ್ತಾನದ ಬೇಡಿಕೆ ತಿರಸ್ಕರಿಸಿದ ಬಿಸಿಸಿಐ

ಪಿಸಿಬಿಯ ಹೈಬ್ರಿಡ್ ಮಾದರಿಯ ಷರತ್ತುಗಳನ್ನು ಬಿಸಿಸಿಐ ನಿರಾಕರಿಸಿದೆ. 2025ರ ಚಾಂಪಿಯನ್ಸ್ ಟ್ರೋಫಿಗೆ ಹೈಬ್ರಿಡ್‌ ಮಾದರಿ ಒಪ್ಪಿಕೊಳ್ಳಬೇಕಾದರೆ, ಮುಂದೆ ಭಾರತದಲ್ಲಿ ನಡೆಯವ ಐಸಿಸಿ ಟೂರ್ನಿಗಳನ್ನು ಕೂಡಾ ಇದೇ ಮಾದರಿಯಲ್ಲಿ ನಡೆಸಬೇಕೆಂಬ ಬೇಡಿಕೆ ಇಟ್ಟಿತ್ತು. ಆದರೆ, ಭಾರತ ಅದಕ್ಕೆ ಸೊಪ್ಪು ಹಾಕಿಲ್ಲ.

ಟಿ20 ವಿಶ್ವಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಸಲ್ಲ, ಭಾರತದಲ್ಲಿ ಭದ್ರತಾ ಭೀತಿ ಇಲ್ಲ ಎಂದು ಬಿಸಿಸಿಐ ಹೇಳಿದೆ
ಟಿ20 ವಿಶ್ವಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಸಲ್ಲ, ಭಾರತದಲ್ಲಿ ಭದ್ರತಾ ಭೀತಿ ಇಲ್ಲ ಎಂದು ಬಿಸಿಸಿಐ ಹೇಳಿದೆ

ಮುಂದಿನ ವರ್ಷ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಬಗೆಗಿನ ಗೊಂದಲ ಇನ್ನೂ ಬಗೆಹರಿದಿಲ್ಲ. ಭಾರತದ ಬೇಡಿಕೆಯಂತೆ, ಹೈಬ್ರಿಡ್‌ ಮಾದರಿಯಲ್ಲಿ ಟೂರ್ನಿ ಆಯೋಜನೆಗೆ ಪಾಕಿಸ್ತಾನ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ದಿನಗಳಲ್ಲಿ ಭಾರತದ ಆತಿಥ್ಯದಲ್ಲಿ ನಡೆಯುವ ಪಂದ್ಯಾವಳಿಗಳಲ್ಲಿಯೂ ಪಾಕಿಸ್ತಾನ ಆಡುವುದಿಲ್ಲ. ಪಾಕಿಸ್ತಾನದ ಪಂದ್ಯಗಳನ್ನು ಕೂಡಾ ಹೈಬ್ರಿಡ್‌ ಮಾದರಿಯಲ್ಲಿ ನಡೆಸಬೇಕು ಎಂಬ ಬೇಡಿಕೆಯನ್ನು ಬಿಸಿಸಿಐ ಹಾಗೂ ಐಸಿಸಿ ಮುಂದೆ ಇಟ್ಟಿದೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಬೇಡಿಕೆಯನ್ನು ಸ್ವೀಕರಿಸಲು ಬಿಸಿಸಿಐ ನಿರಾಕರಿಸಿದೆ ಎಂದು ವರದಿಯಾಗಿದೆ.

ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಗೆ ಒಪ್ಪಿಕೊಂಡ ಪಾಕ್‌, 2026ರ ಟಿ20 ವಿಶ್ವಕಪ್ ಸಮಯದಲ್ಲಿ ಭಾರತದಲ್ಲಿ ಯಾವುದೇ ಪಂದ್ಯಗಳನ್ನು ಆಡುವುದಿಲ್ಲ ಎಂದು ಪ್ರಸ್ತಾಪಿಸಿತ್ತು. ಸುದ್ದಿ ಸಂಸ್ಥೆ, ದಿ ಟೆಲಿಗ್ರಾಫ್‌ ವರದಿಯ ಪ್ರಕಾರ, ಬಿಸಿಸಿಐ ಈಗ ಅಂತಹ ವ್ಯವಸ್ಥೆಯನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಭಾರತದಲ್ಲಿ ಯಾವುದೇ ಭದ್ರತಾ ಭೀತಿ ಇಲ್ಲ ಎಂಬುದನ್ನು ವಾದಿಸಿದೆ. ಹೀಗಾಗಿ ಭವಿಷ್ಯದ ಪಂದ್ಯಾವಳಿಗಳನ್ನು ಹೈಬ್ರಿಡ್ ಸ್ವರೂಪದಲ್ಲಿ ನಡೆಸುವ ಸಲಹೆಯನ್ನು ತಿರಸ್ಕರಿಸಿದೆ.

ಬಿಸಿಸಿಐ ನಿಲುವು ಸ್ಪಷ್ಟ

ಭದ್ರತಾ ಕಾಳಜಿ ಆಧಾರದ ಮೇಲೆ ಪಂದ್ಯಾವಳಿಯ ರಚನೆಯನ್ನು ಬದಲಾಯಿಸಲು ಯಾವುದೇ ಮಾನ್ಯ ಕಾರಣಗಳಿಲ್ಲ ಎಂದು ಬಿಸಿಸಿಐ ಭಾವಿಸುತ್ತದೆ. ಏಕೆಂದರೆ ಭಾರತವು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ಆತಿಥ್ಯ ವಹಿಸಲು ಅತ್ಯಂತ ಸುರಕ್ಷಿತ ಸ್ಥಳ ಎಂಬುದು ಬಿಸಿಸಿಐ ನಿಲುವು.

ಭವಿಷ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನಗಳಲ್ಲಿ ವಿವಿಧ ಐಸಿಸಿ ಪಂದ್ಯಾವಳಿಗಳಲು ನಡೆಯಲಿವೆ. ಮುಂದಿನ ವರ್ಷ ಭಾರತದಲ್ಲಿ ಮಹಿಳಾ ಏಕದಿನ ವಿಶ್ವಕಪ್, 2026ರಲ್ಲಿ ಟಿ20 ವಿಶ್ವಕಪ್ ಮತ್ತು 2029ರಲ್ಲಿ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಮುಂಬರುವ ವರ್ಷಗಳಲ್ಲಿ ಭಾರತವು ಹಲವಾರು ಪ್ರಮುಖ ಟೂರ್ನಿಗಳಿಗೆ ಆತಿಥ್ಯ ವಹಿಸಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ರಾಜಿಯಾದ ಮಾತ್ರಕ್ಕೆ, ಭವಿಷ್ಯದ ಪಂದ್ಯಾವಳಿಗಳಿಗೆ ಪೂರ್ವನಿದರ್ಶನವನ್ನು ರೂಪಿಸಬಹುದು ಎಂದು ಪಿಸಿಬಿ ಆಶಿಸಿತ್ತು. ಆದರೆ ಬಿಸಿಸಿಐ ಪಾಕಿಸ್ತಾನದ ಎಲ್ಲಾ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದೆ.

ಡಿಸೆಂಬರ್ 6ರಂದು ಐಸಿಸಿ ಸಭೆ ಸಾಧ್ಯತೆ

ಸರಣಿ ಸಭೆ ಹಾಗೂ ಮಾತುಕತೆಗಳ ಮೂಲಕ ಸಮಸ್ಯೆಯನ್ನು ಪರಿಹರಿಸಲು ಐಸಿಸಿ ಆಶಿಸಿತ್ತು. ಹೈಬ್ರಿಡ್ ಮಾದರಿಯನ್ನು ಚರ್ಚಿಸಲು ನವೆಂಬರ್‌ 6ರ ಶುಕ್ರವಾರ ತುರ್ತು ಮಂಡಳಿ ಸಭೆಯನ್ನು ನಿಗದಿಪಡಿಸಲಾಗಿದೆ. ಆದರೆ ಸಭೆಯ ಸಮಯ ಇನ್ನೂ ಅನಿಶ್ಚಿತವಾಗಿದೆ. ಪಾಕಿಸ್ತಾನವು ಹೈಬ್ರಿಡ್ ಮಾದರಿಗೆ ಒಪ್ಪದಿದ್ದರೆ ಚಾಂಪಿಯನ್ಸ್ ಟ್ರೋಫಿಯನ್ನು ಸ್ಥಳಾಂತರಿಸುವುದಾಗಿ ಐಸಿಸಿ ಕೂಡಾ ಕಟುವಾಗಿ ಹೇಳಿದೆ.

Whats_app_banner