ಕನ್ನಡ ಸುದ್ದಿ  /  ಮನರಂಜನೆ  /  Rolex Komal Launched: ಕೋಮಲ್‌-ಸೋನಾಲ್‌ ಹೊಸ ಚಿತ್ರಕ್ಕೆ ಮುಹೂರ್ತ...ಶನಿವಾರದಿಂದ ಚಿತ್ರೀಕರಣ ಆರಂಭ

Rolex Komal Launched: ಕೋಮಲ್‌-ಸೋನಾಲ್‌ ಹೊಸ ಚಿತ್ರಕ್ಕೆ ಮುಹೂರ್ತ...ಶನಿವಾರದಿಂದ ಚಿತ್ರೀಕರಣ ಆರಂಭ

''ಗರಗಸ ಚಿತ್ರದ ನಂತರ ಈ ರೀತಿಯ ಮತ್ತೊಂದು ಪ್ರಯೋಗ ಮಾಡುತ್ತಿದ್ದೇನೆ. ನನ್ನ ಪ್ರತಿಭೆ ತೋರಿಸಲು ಚಿತ್ರದಲ್ಲಿ ಸಾಕಷ್ಟು ಅವಕಾಶ ಇದೆ. ಹಾಡುಗಳು ಈಗಾಗಲೇ ರೆಕಾರ್ಡ್ ಆಗಿದೆ. ಸಿನಿಮಾ ಹಾಡುಗಳಿಗೆ ನಿಮ್ಮೆಲ್ಲರಿಗೂ ಖಂಡಿತ ಇಷ್ಟವಾಗಲಿದೆ'' ಎಂದು ನಟ ಕೋಮಲ್ ಭರವಸೆ ವ್ಯಕ್ತಪಡಿಸಿದ್ದಾರೆ.

'ರೋಲೆಕ್ಸ್‌ ಕೋಮಲ್‌‌' ಚಿತ್ರದ ಮುಹೂರ್ತ
'ರೋಲೆಕ್ಸ್‌ ಕೋಮಲ್‌‌' ಚಿತ್ರದ ಮುಹೂರ್ತ

ಸುಮಾರು 5 ವರ್ಷಗಳ ನಂತರ ನಟ ಕೋಮಲ್‌ ಮೊದಲಿನಂತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಣ್ಣನ ಸಲಹೆಯಂತೆ ನಟನೆಯಿಂದ ದೂರ ಉಳಿದಿದ್ದ ಕೋಮಲ್‌, ಈಗ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸುತ್ತಿದ್ದಾರೆ. ಹೊಸ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇಂದು ( ಶುಕ್ರವಾರ) ಅವರ ಹೊಸ ಸಿನಿಮಾ ಮುಹೂರ್ತ ನೆರವೇರಿದ್ದು ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ಅಡಿ ಅನಿಲ್ ಕುಮಾರ್ ನಿರ್ಮಾಣದಲ್ಲಿ ಶ್ರೀನಿವಾಸ್ ಮಂಡ್ಯ ನಿರ್ದೇಶಿಸುತ್ತಿರುವ 'ರೋಲೆಕ್ಸ್ ಕೋಮಲ್' ಸಿನಿಮಾ ಮುಹೂರ್ತ ಇಂದು ಬೆಂಗಳೂರಿನ ವೆಂಕಟೇಶ್ವರ ದೇವಸ್ಥಾನವೊಂದರಲ್ಲಿ ಸರಳವಾಗಿ ನೆರವೇರಿದೆ. ನಾಳೆಯಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದಲ್ಲಿ ಕೋಮಲ್‌ ಜೊತೆಗೆ ಸೋನಾಲ್‌ ಮೊಂಟೆರೋ ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಹೂರ್ತ ಕಾರ್ಯಕ್ರಮ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಿರ್ದೇಶಕ ಶ್ರೀನಿವಾಸ್‌ ಮಂಡ್ಯ, ''ಶನಿವಾರದಿಂದ 'ರೋಲೆಕ್ಸ್ ಕೋಮಲ್' ಶೂಟಿಂಗ್‌ ಆರಂಭವಾಗಲಿದೆ. ಬೆಂಗಳೂರು ಹಾಗೂ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಕೋಮಲ್ ಸರ್ ತಮ್ಮ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ಬಹಳ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಡಿಫರೆಂಟ್‌ ಆಗಿ ಇರಬೇಕೆಂದು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಚಿತ್ರದಲ್ಲಿ ರಂಗಾಯಣ ರಘು, ಶೋಭರಾಜ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ''ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

'ರೋಲೆಕ್ಸ್ ಕೋಮಲ್' ಚಿತ್ರತಂಡ
'ರೋಲೆಕ್ಸ್ ಕೋಮಲ್' ಚಿತ್ರತಂಡ

ನಟ ಕೋಮಲ್ ಮಾತನಾಡಿ ''ರೋಲೆಕ್ಸ್ ಅನ್ನೋದು ಒಂದು ಬ್ರ್ಯಾಂಡ್. ಆ ಬ್ರ್ಯಾಂಡ್ ಹೇಗೆ ಕ್ರಿಯೇಟ್ ಆಗುತ್ತೆ ಅನ್ನೋದೇ ಈ ಚಿತ್ರದ ಎಳೆ. ಚಿತ್ರದಲ್ಲಿ ಬಹಳ ಮನರಂಜನೆ ಇದೆ. ಬಹಳ ಟ್ವಿಸ್ಟ್ ಇದೆ. ಗರಗಸ ಚಿತ್ರದ ನಂತರ ಈ ರೀತಿಯ ಮತ್ತೊಂದು ಪ್ರಯೋಗ ಮಾಡುತ್ತಿದ್ದೇನೆ. ನನ್ನ ಪ್ರತಿಭೆ ತೋರಿಸಲು ಚಿತ್ರದಲ್ಲಿ ಸಾಕಷ್ಟು ಅವಕಾಶ ಇದೆ. ಹಾಡುಗಳು ಈಗಾಗಲೇ ರೆಕಾರ್ಡ್ ಆಗಿದೆ. ಸಿನಿಮಾ ಹಾಡುಗಳಿಗೆ ನಿಮ್ಮೆಲ್ಲರಿಗೂ ಖಂಡಿತ ಇಷ್ಟವಾಗಲಿದೆ'' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

''ಇಡೀ ಸಿನಿಮಾದಲ್ಲಿ ನಾನು ಮತ್ತು ಕೋಮಲ್‌ ಸರ್‌ ಜೊತೆಯಾಗಿರುತ್ತೇವೆ. ನನ್ನ ಭಾಗದ ಚಿತ್ರೀಕರಣ 25ದಿನ ನಡೆಯಲಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತದೆ. ನನ್ನ ಮತ್ತೊಂದು ಸಿನಿಮಾ ಶುಗರ್ ಫ್ಯಾಕ್ಟರಿ ಬಿಡುಗಡೆಗೆ ರೆಡಿಯಾಗಿದೆ. ಇದನ್ನು ಹೊರತುಪಡಿಸಿ, ಮಿ. ನಟ್ವರ್ ಲಾಲ್, ಬುದ್ದಿವಂತ 2, ಗರಡಿ, ಮಹಾದೇವ, ತಲ್ವಾರ್ ಪೇಟೆ, ಸರೋಜಿನಿ ನಾಯ್ಡು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ'' ಎಂದು ನಾಯಕಿ ಸೋನಾಲ್‌ ಮೊಂಟೆರೋ ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿದರು.

ನಿರ್ಮಾಪಕ ಅನಿಲ್ ಕುಮಾರ್ ಮಾತನಾಡಿ ''ಫೀನಿಕ್ಸ್ ಎಂಟರ್ಟೈನ್ಮೆಂಟ್ಸ್‌ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಮೊದಲ ಕನ್ನಡ ಸಿನಿಮಾ ಇದು. ಚಿತ್ರದ ಕಥೆ ನನಗೆ ಬಹಳ ಇಷ್ಟ ಆಯ್ತು. ಕೋಮಲ್ ಕೂಡಾ ಕಥೆ ಕೇಳಿ ಒಪ್ಪಿಕೊಂಡು ನಮ್ಮ ಚಿತ್ರದಲ್ಲಿ ನಟಿಸುತ್ತಿರುವುದು ಬಹಳ ಖುಷಿ ನೀಡಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬರಲಿದೆ. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಸಿನಿಮಾವನ್ನು ತೆರೆಗೆ ತರಲು ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ'' ಎಂದು ಸಿನಿಮಾ ಹಾಗೂ ತಂತ್ರಜ್ಞರ ಬಗ್ಗೆ ಮಾಹಿತಿ ನೀಡಿದರು. ಜಗ್ಗೇಶ್‌, ಕೋಮಲ್‌ ಹಾಗೂ ಸೋನಾಲ್‌ ಮೊಂಟೆರೋ ಅಭಿಮಾನಿಗಳು 'ರೋಲೆಕ್ಸ್ ಕೋಮಲ್' ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

IPL_Entry_Point