Pushpa 3: ‘ಪುಷ್ಪ 2’ ನಂತರ ‘ಪುಷ್ಪ 3’? ವಿಲನ್ ಪಾತ್ರದಲ್ಲಿ ಅಭಿನಯಿಸಲಿದ್ದಾರಾ ವಿಜಯ್ ದೇವರಕೊಂಡ?
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಬಿಡುಗಡೆ ವೇಳೆಯಲ್ಲೇ ಪುಷ್ಪ 3 ಕೂಡ ಬರಲಿದೆ ಎಂಬ ಸುದ್ದಿ ಹಬ್ಬಿದೆ. ಇದರಲ್ಲಿ ವಿಜಯ್ ದೇವರಕೊಂಡ ವಿಲನ್ ಪಾತ್ರ ನಿರ್ವಹಿಸಲಿದ್ದಾರಾ? ಎಂಬ ಅನುಮಾನ ಮೂಡಿದೆ.
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಚಿತ್ರವು ನಾಳೆ (ಡಿಸೆಂಬರ್ 5) ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಇಂದು ರಾತ್ರಿ ಅಮೇರಿಕಾದಲ್ಲಿ ಪ್ರೀಮಿಯರ್ ಆಗಲಿದೆ. ಈ ಮಧ್ಯೆ, ಚಿತ್ರದ ಮೂರನೇ ಭಾಗ ಬರುವ ಸುದ್ದಿ ಇದ್ದು, ಅದನ್ನು ‘ಪುಷ್ಪ 2’ ಚಿತ್ರದ ಅಂತ್ಯದಲ್ಲಿ ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
‘ಪುಷ್ಪ 3’ ಚಿತ್ರ ಬರುತ್ತಿರುವ ಬಗ್ಗೆ ಹಲವು ದಿನಗಳಿಂದ ಸುದ್ದಿ ಇದ್ದೇ ಇದೆ. ಚಿತ್ರದ ಚಿತ್ರೀಕರಣ ಕಳೆದ ವಾರ ಅಂತ್ಯವಾದ ಸಂದರ್ಭದಲ್ಲಿ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ, ‘ಪುಷ್ಪ 3’ ಬರುವ ಸಾಧ್ಯತೆ ಇದೆ ಎಂದು ಹಿಂಟ್ ಕೊಟ್ಟಿದ್ದರು. ಈಗ ಆ ಬಗ್ಗೆ ಇನ್ನಷ್ಟು ವಿಷಯಗಳು ಕೇಳಿ ಬರುತ್ತಿದೆ.
ವಿಜಯ್ ದೇವರಕೊಂಡ ವಿಲನ್ ಆಗಿ ನಟಿಸುವ ಸಾಧ್ಯತೆ
‘ಪುಷ್ಪ 2’ ಚಿತ್ರದ ಅಂತ್ಯದಲ್ಲಿ ಮುಂದುವರೆದ ಭಾಗದ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಲಿದ್ದು, ಆ ಚಿತ್ರಕ್ಕೆ ‘ಪುಷ್ಪ 3 – ದಿ ರಾಂಪೇಜ್’ ಎಂಬ ಹೆಸರನ್ನು ಇಡಲಾಗಿದೆಯಂತೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ವಿಲನ್ ಆಗಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದಕ್ಕೆ ಸರಿಯಾಗಿ ಸ್ಟುಡಿಯೋದಲ್ಲಿ ‘ಪುಷ್ಪ 3 – ದಿ ರಾಂಪೇಜ್’ ಎಂಬ ಪರದೆಯ ಮುಂದೆ ಸೌಂಡ್ ಡಿಸೈನರ್ ರೆಸೂಲ್ ಪೂಕ್ಕುಟ್ಟಿ ಮತ್ತು ಇತರರು ನಿಂತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಅದರ ಜೊತೆಗೆ, ನಿರ್ದೇಶಕ ಸುಕುಮಾರ್ ಮತ್ತು ವಿಜಯ್ ದೇವರಕೊಂಡ ಜೊತೆಯಾಗಿ ನಿಂತಿರುವ ಫೋಟೋ ಸಹ ವೈರಲ್ ಆಗಿದೆ. ಈ ಎರಡೂ ಫೋಟೋಗಳನ್ನು ಮುಂದಿಟ್ಟುಕೊಂಡು, ‘ಪುಷ್ಪ 3’ ಚಿತ್ರವು ಬರಲಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ಆದರೆ, ಚಿತ್ರದ ಮುಂದುವರೆದ ಭಾಗ ನಿಜಕ್ಕೂ ಬರುತ್ತದಾ? ಎಂಬುದರನ್ನು ‘ಪುಷ್ಪ 2’ ಬಿಡುಗಡೆಯಾಗಿ, ಒಂದು ಪ್ರದರ್ಶನವಾದ ಮೇಲಷ್ಟೇ ಗೊತ್ತಾಗಬೇಕು. ಇನ್ನು, ವಿಜಯ್ ದೇವರಕೊಂಡ ನಟಿಸುತ್ತಿರುವ ಕುರಿತು ಸಹ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.
‘ಪುಷ್ಪ 2’ ಚಿತ್ರವು ಪುಷ್ಪರಾಜ್ ಅಲಿಯಾಸ್ ಪುಷ್ಪ ಎಂಬ ರಕ್ತಚಂದನದ ಸ್ಮಗ್ಲರ್ ಸುತ್ತ ಸುತ್ತುವ ಚಿತ್ರವಾಗಿದ್ದು, ಈ ಚಿತ್ರವನ್ನು ತೆಲುಗಿನ ಜನಪ್ರಿಯ ಚಿತ್ರ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಸುಕುಮಾರ್.
‘ಪುಷ್ಪ – ದಿ ರೂಲ್’ ಚಿತ್ರವು ‘ಪುಷ್ಪ – ದಿ ರೈಸ್’ನ ಮುಂದುವರೆದ ಭಾಗವಾಗಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಧನಂಜಯ್, ಫಹಾದ್ ಫಾಸಿಲ್, ಸುನೀಲ್, ಅನುಸೂಯ ಭಾರದ್ವಾಜ್, ರಾವ್ ರಮೇಶ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: 17 ವರ್ಷಗಳ ಹಿಂದಿನ ಉಪೇಂದ್ರ ಅಭಿನಯದ ಚಿತ್ರ ಬಿಡುಗಡೆಗೆ ಸಿದ್ಧ; ಜನವರಿಯಲ್ಲಿ ತೆರೆ ಕಾಣಲಿದೆ 'ರಕ್ತ ಕಾಶ್ಮೀರ' ಸಿನಿಮಾ