ಕನ್ನಡ ಸುದ್ದಿ  /  Entertainment  /  Sandalwood News Karataka Damanaka Box Office Collection Report Shiva Rajkumar Movie Mint 1 62 Crore Pcp

Karataka Damanaka: ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಕೋಟಿ ಗಳಿಸ್ತು ಕರಟಕ ದಮನಕ? ಇಲ್ಲಿದೆ 4 ದಿನದ ಬಾಕ್ಸ್‌ ಆಫೀಸ್‌ ವರದಿ

Karataka Damanaka Box Office Collection: ಯೋಗರಾಜ್‌ ಭಟ್‌ ನಿರ್ದೇಶನದ ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ್‌ ಮುಖ್ಯಪಾತ್ರದಲ್ಲಿ ನಟಿಸಿರುವ ಕರಟಕ ದಮನಕ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಒಂದೂವರೆ ಕೋಟಿ ರೂಪಾಯಿಗಿಂತ ಹೆಚ್ಚು ಗಳಿಕೆ ಮಾಡಿದೆ.

ಕರಟಕ ದಮನಕ ಬಾಕ್ಸ್‌ ಆಫೀಸ್‌ ವರದಿ
ಕರಟಕ ದಮನಕ ಬಾಕ್ಸ್‌ ಆಫೀಸ್‌ ವರದಿ

ಕಳೆದ ಶುಕ್ರವಾರ ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನಿಧಾನಗತಿಯಲ್ಲಿ ಗಳಿಕೆ ಮಾಡುತ್ತಿದೆ. ಯೋಗರಾಜ್‌ ಭಟ್‌ ನಿರ್ದೇಶನದ ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ್‌ ಮುಖ್ಯಪಾತ್ರದಲ್ಲಿ ನಟಿಸಿರುವ ಕರಟಕ ದಮನಕ ಸಿನಿಮಾವು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಶಿವಣ್ಣನ ಸಿನಿಮಾವೆಂದ ಮೇಲೆ ಕರ್ನಾಟಕ ಮಾತ್ರವಲ್ಲದೆ ಹೊರರಾಜ್ಯಗಳ ಪ್ರೇಕ್ಷಕರೂ ಕುತೂಹಲದಿಂದ ಕಾಯುತ್ತಿದ್ದರು. ಆದರೆ, ಸಿನಿಮಾ ಬಿಡುಗಡೆಯಾದ ಬಳಿಕ "ನಕಾರಾತ್ಮಕ ವಿಮರ್ಶೆ" "ಚೆನ್ನಾಗಿಲ್ಲ" "ಸಾಧಾರಣ" ಎಂಬ ಜನರ ಬಾಯ್ಮಾತಿನ ಅಭಿಪ್ರಾಯದಿಂದಾಗಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ತಗ್ಗಿದೆ.

ಕರಟಕ ದಮನಕ ಬಾಕ್ಸ್‌ ಆಫೀಸ್‌ ವರದಿ

ಕರಟಕ ದಮನಕ ಸಿನಿಮಾದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಕುರಿತು ಸಕ್‌ನಿಲ್ಕ್‌.ಕಾಂ ವರದಿ ಮಾಡಿದೆ. ಮೊದಲ ದಿನ ಅಂದರೆ ಶುಕ್ರವಾರ ಕರಟಕ ದಮನಕ ಸಿನಿಮಾವು 0.58 ಕೋಟಿ ರೂಪಾಯಿ ಕಳೆಕ್ಷನ್‌ ಮಾಡಿದೆ. ಎರಡನೇ ದಿನವಾದ ಶನಿವಾರ 0.39 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂರನೇ ದಿನವಾದ ಭಾನುವಾರ 0.55 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವೀಕೆಂಡ್‌ನಲ್ಲಿ ತುಸು ಆಶಾದಾಯಕವಾಗಿ ಗಳಿಕೆ ಮಾಡಿದ ಕರಟಕ ದಮನಕ ಸಿನಿಮಾವು ನಾಲ್ಕನೇ ದಿನ ಮತ್ತು ಮೊದಲ ಸೋಮವಾರ ಕೇವಲ 0.1 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಂದರೆ, ಕೇವಲ 10 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಒಟ್ಟಾರೆ ಬಾಕ್ಸ್‌ ಆಫೀಸ್‌ನಲ್ಲಿ ಕಳೆದ ನಾಲ್ಕು ದಿನದಲ್ಲಿ 1.62 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಆನ್‌ಲೈನ್‌ ಬುಕ್ಕಿಂಗ್‌ ಆಧರಿತವಾಗಿ ಈ ಬಾಕ್ಸ್‌ ಆಫೀಸ್‌ ವರದಿ ಇರುತ್ತದೆ. ಥಿಯೇಟರ್‌ನಲ್ಲಿ ಹಣ ನೀಡಿ ಟಿಕೆಟ್‌ ಪಡೆದ ಲೆಕ್ಕ ಈ ಬಾಕ್ಸ್‌ ಆಫೀಸ್‌ ರಿಪೋರ್ಟ್‌ನಲ್ಲಿ ಸೇರಿರುವುದಿಲ್ಲ.

ಕರಟಕ ದಮನಕ- ಶಿವಣ್ಣ ವಿಜಯಯಾತ್ರೆ

ಕರ್ನಾಟಕದಲ್ಲಿ ಈಗ ಬರಗಾಲ ತಾಂಡವವಾಡುತ್ತಿದೆ. ಇದೇ ಸಮಯದಲ್ಲಿ ಕರಟಕ ದಮನಕ ಸಿನಿಮಾವು ಬರ, ನೀರು, ತೇರು ವಿಷಯಗಳನ್ನು ಹೊಂದಿದೆ. ಚಿತ್ರವನ್ನು ಮೆಚ್ಚಿಕೊಂಡಿರುವ ಪ್ರೇಕ್ಷಕರಿಗೆ ಧನ್ಯವಾದ ಹೇಳುತ್ತ ಶಿವಣ್ಣ ವಿಜಯ ಯಾತ್ರೆ ಮಾಡುತ್ತಿದ್ದಾರೆ. ನಿನ್ನೆ ಅಂದರೆ, ಸೋಮವಾರ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಮಧ್ಯಾಹ್ನದವರೆಗೆ ಶಿವಣ್ಣ ವಿಜಯಯಾತ್ರೆ ಕೈಗೊಂಡಿದ್ದರು. ಸಂಜೆ ಹೊಸಪೇಟೆ ಮತ್ತು ಬಳ್ಳಾರಿಯಲ್ಲಿ ವಿಜಯಯಾತ್ರೆ ಕೈಗೊಂಡಿದ್ದರು. ಶಿವಣ್ಣನ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನೆಗೆದಿದ್ದರು.

ಇಂದು ಅಂದರೆ ಮಂಗಳವಾರ ಬೆಳಗಾವಿ ಮತ್ತು ನಿಪ್ಪಾಣಿಯಲ್ಲಿ ಶಿವಣ್ಣನ ವಿಜಯಯಾತ್ರೆ ನಡೆದಿದೆ. ಇಂದು ಮಧ್ಯಾಹ್ನ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ವಿಜಯ ಯಾತ್ರೆ ನಡೆಯಲಿದೆ. ಸಂಜೆ ರಾಣೆಬೆನ್ನೂರಿನಲ್ಲಿ ಕರಟಕ ದಮನಕ ಸಿನಿಮಾದ ವಿಜಯಯಾತ್ರೆ ನಡೆಯಲಿದೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ, ಯೋಗರಾಜ್‌ ಭಟ್‌ ನಿರ್ದೇಶನದ ಸಿನಿಮಾದ ಪ್ರಚಾರವನ್ನೂ ಶಿವಣ್ಣ ಮತ್ತು ಸಿನಿಮಾ ತಂಡ ಈ ಮೂಲಕ ಮಾಡುತ್ತಿದೆ.

IPL_Entry_Point