Karataka Damanaka Review: ಗಟ್ಟಿ ಸಂದೇಶಕ್ಕೆ ಕಮರ್ಷಿಯಲ್ ತೋರಣ! ಭಟ್ಟರ ‘ಕರಟಕ ದಮನಕ’ದಲ್ಲಿ ನೀರು, ತೇರು, ಊರಿನ ಕಥೆ
ಯೋಗರಾಜ್ ಭಟ್ ಊರು, ನೀರು, ತೇರಿನ ಕಥೆಯ ಮೂಲಕ ಆಗಮಿಸಿದ್ದಾರೆ. ಶಿವರಾಜ್‌ಕುಮಾರ್, ಪ್ರಭುದೇವ ಎಂಬಿಬ್ಬರು ಘಟಾನುಘಟಿಗಳನ್ನು ಇರಿಸಿಕೊಂಡು ಗಟ್ಟಿ ಸಂದೇಶವೊಂದನ್ನು ಕಮರ್ಷಿಯಲ್ ಕೋನದಲ್ಲಿ ಕರಟಕ ದಮನಕ ಸಿನಿಮಾ ಮಾಡಿ ಪ್ರೇಕ್ಷಕರ ತಟ್ಟೆಗೆ ಬಡಿಸಿದ್ದಾರೆ. ಇಲ್ಲಿ ತಿಳಿ ಹಾಸ್ಯದ ಜತೆಗೆ ಪ್ರಸ್ತುತತೆಗೆ ಬೇಕಿರುವ ಅಂಶವೂ ಅಡಗಿರುವುದು ಕಾಕತಾಳೀಯ!
ಚಿತ್ರ: ಕರಟಕ ದಮನಕ, ನಿರ್ದೇಶನ: ಯೋಗರಾಜ್ ಭಟ್, ನಿರ್ಮಾಣ: ರಾಕ್‌ಲೈನ್ ಪ್ರೊಡಕ್ಷನ್ಸ್, ತಾರಾಗಣ: ಶಿವರಾಜ್‌ಕುಮಾರ್, ಪ್ರಭುದೇವ, ರಂಗಾಯಣ ರಘು, ರವಿಶಂಕರ್, ತನಿಕೆಲ್ಲ ಭರಣಿ, ಪ್ರಿಯಾ ಆನಂದ್, ನಿಶ್ವಿಕಾ ನಾಯ್ದು ಮುಂತಾದವರು. ರೇಟಿಂಗ್: 3/5
Karataka Damanaka Review: ನಂದಿಕೋಲೂರು ಎಂಬ ಒಂದೂರು, ಆ ಊರಲ್ಲಿ ಹನಿ ನೀರಿಗೂ ತತ್ವಾರ. ಎಲ್ಲಿ ನೋಡಿದರೂ ಬಿಸಿಲೋ ಬಿಸಿಲು. ಇಡೀ ಗ್ರಾಮಕ್ಕೆ ಗ್ರಾಮವೇ ಹುಟ್ಟಿದ ಊರಿಂದ ಗುಳೇ ಹೊರಟು ನಿಂತಿದೆ. ಊರ ದೇವರ ಜಾತ್ರೆ ಮಾಡುವುದಕ್ಕೂ ನೀರಿಲ್ಲ. ಇದೆಲ್ಲದರ ನಡುವೆ ರಾಜಕೀಯದ ಮೇಲಾಟಗಳು. ಬಿಟ್ಟ ನೀರನ್ನು ತಡೆಹಿಡಿಯುವ ಕೆಲಸವೂ ಕೆಲವರಿಂದ ನಡೆಯುತ್ತಿದೆ. ಹೀಗೆ ಸಮಸ್ಯೆಯನ್ನು ಹೊದ್ದು ಮಲಗಿದ ನಂದಿಕೋಲೂರಿಗೆ ಕುತಂತ್ರಿಗಳ ಆಗಮನವಾಗುತ್ತದೆ. ಅವರೇ ವಿರೂಪಾಕ್ಷಿ (ಶಿವರಾಜ್‌ಕುಮಾರ್) ಮತ್ತು ಬಾಲರಾಜು (ಪ್ರಭುದೇವ). ಈ ಇಬ್ಬರೂ ಊರು ಬಿಟ್ಟು ಹೋದವರನ್ನು ಹೇಗೆ ಕರೆತರುತ್ತಾರೆ? ಮತ್ತೆ ಆ ಊರಲ್ಲಿ ನೀರು ಚಿಮ್ಮುತ್ತಾ? ಇದೇ ಕರಟಕ ದಮನಕ ಚಿತ್ರದ ಒಂದೆಳೆ!
ಕರಟಕ ದಮನಕ ಎಂಬುದಕ್ಕೆ ವಿಶೇಷ ಅರ್ಥವಿದೆ. ಪಂಚತಂತ್ರ ಕಥೆಯಲ್ಲಿ ಈ ಪದಕ್ಕೆ ಕುತಂತ್ರಿಗಳು ಎನ್ನುತ್ತಾರೆ. ಆ ಹೆಸರಿಗೆ ತಕ್ಕಂತೆ ಕುತಂತ್ರಿಗಳಾಗಿದ್ದಾರೆ ಶಿವರಾಜ್‌ಕುಮಾರ್ ಮತ್ತು ಪ್ರಭುದೇವ. ಆ ಪದಕ್ಕೆ ತಕ್ಕಂತೆ, ಕಳ್ಳತನ ಮಾಡುತ್ತ, ಅವರಿವರಿಗೆ ಮೋಸ ಮಾಡುತ್ತ ಜೀವನ ದೂಡುತ್ತಿರುತ್ತಾರೆ. ಹೀಗಿರುವ ಇದೇ ಖತರ್ನಾಕ್ ಜೋಡಿಯನ್ನು ನಂದಿಕೋಲೂರಿಗೆ ಕಳುಹಿಸುತ್ತಾನೆ ಜೈಲರ್ ರುದ್ರೇಶ್ (ರಾಕ್‌ಲೈನ್ ವೆಂಕಟೇಶ್). ಅಲ್ಲಿಂದ ಈ ಕುತಂತ್ರಿಗಳ ವರಸೆ ಹೇಗಿರುತ್ತದೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು.
ಯೋಗರಾಜ್ ಭಟ್ ಅವರ ಸಿನಿಮಾಗಳೆಂದರೆ ಅಲ್ಲಿ ತಿಳಿ ಹಾಸ್ಯ, ಪೋಲಿತನ, ಮುದ್ದಾದ ಡೈಲಾಗ್‌ಗಳು ನೆನಪಾಗುತ್ತವೆ. ಇದೀಗ ಕರಟಕ ದಮನಕ ಸಿನಿಮಾದಲ್ಲಿ ಹೊಸದನ್ನೇ ಪ್ರೇಕ್ಷಕನಿಗೆ ತೋರಿಸಲು ಬಯಸಿದಂತಿದೆ. ಬಹುತೇಕ ಸಿನಿಮಾ ಬಟಾಬಯಲು ಪ್ರದೇಶದಲ್ಲೇ ಚಿತ್ರೀಕರಣವಾಗಿದೆ. ನೀರು, ತೇರು, ಊರು ಈ ಮೂರು ಪದಗಳ ಪರಿಕಲ್ಪನೆಯಲ್ಲಿಯೇ ಇಡೀ ಸಿನಿಮಾ ತೆರೆದುಕೊಳ್ಳುತ್ತದೆ. ಅದೇ ಹಾದಿಯಲ್ಲಿ ಒಂದಷ್ಟು ಮನರಂಜನೆ, ಮಗದೊಂದಿಷ್ಟು ಸಂದೇಶಗಳ ಜತೆಗೆ ಕ್ರಮಿಸಿ ಸಮಾಪ್ತಿಯಾಗುತ್ತದೆ.
ರಂಜಿಸುತ್ತಲೇ ಪ್ರೇಕ್ಷಕನ ಕಿವಿಹಿಂಡಿದ ನಿರ್ದೇಶಕರು..
ಕರಟಕ ದಮನಕ ಸಿನಿಮಾದಲ್ಲಿ ನಿರ್ದೇಶಕರು ರಂಜನೆಯ ಜತೆಗೆ ಬೋಧನೆಗಿಳಿದಿದ್ದಾರೆ. ಅದೂ ಉತ್ತರ ಕರ್ನಾಟಕದ ಭಾಗದ ಮಣ್ಣಿನ ಕಥೆಯನ್ನು ಆಯ್ದುಕೊಳ್ಳುವುದರ ಮೂಲಕ. ಯೋಗರಾಜ್ ಭಟ್ ಮೂಲತಃ ಉತ್ತರ ಕರ್ನಾಟಕ ಭಾಗದವರು. ಅಲ್ಲಿನ ಸಮಸ್ಯೆಗಳನ್ನು ಎಳೆ ಎಳೆಯಾಗಿ ಅರಿತವರು. ಈಗ ಆ ಭಾಗದ ಬಹುಕಾಲದ ಸಮಸ್ಯೆಯನ್ನೇ ಆಯ್ದುಕೊಂಡು ಮನರಂಜನೆಯ ರಸದೌತಣದ ಜತೆಗೆ, ಬೋಧನೆಯ ಪಾಠ ಮಾಡಿದ್ದಾರೆ. ಪರೋಕ್ಷವಾಗಿ ಪ್ರೇಕ್ಷಕನ ಕಿವಿಯನ್ನೂ ಹಿಂಡಿದ್ದಾರೆ. ಸದ್ಯ ಕರ್ನಾಟಕ ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನೇ ಹಿಡಿದುಕೊಂಡು, ಉತ್ತರ ಕರ್ನಾಟಕ ಭಾಗದ ಅಸಲಿ ಮುಖವನ್ನು ಅನಾವರಣ ಮಾಡಿದ್ದಾರವರು.
ಹೇಗಿದೆ ಶಿವಣ್ಣ-ಪ್ರಭುದೇವ ಕಾಂಬಿನೇಷನ್?
ಇದೇ ಮೊದಲ ಸಲ ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಜೋಡಿಯನ್ನು ತೆರೆಮೇಲೆ ಒಂದಾಗಿಸಿದ್ದಾರೆ ನಿರ್ದೇಶಕ ಯೋಗರಾಜ್ ಭಟ್. ವಯಸ್ಸು 60ಪ್ಲಸ್ ಆದರೂ, ಈಗಿನ್ನೂ ಜಸ್ಟ್ 30 ಎಂಬಂತೆ ಕಾಣಿಸಿಕೊಂಡಿದ್ದಾರೆ ಶಿವರಾಜ್‌ಕುಮಾರ್. ಕುಣಿತಕ್ಕೂ ಸೈ, ಡೈಲಾಗ್ ಹೊಡೆಯುತ್ತ ಹೊಡೆದಾಟಕ್ಕೂ ಜೈ ಎಂದಿದ್ದಾರೆ. ಅದೇ ರೀತಿ ಬಹು ವರ್ಷಗಳ ಬಳಿಕ ನಟ ಪ್ರಭುದೇವ ಸ್ಯಾಂಡಲ್‌ವುಡ್‌ಗೆ ಬಂದಿದ್ದಾರೆ. ತುಂಬ ವರ್ಷಗಳ ಬಳಿಕ ಬಂದಿದ್ದಾರೆ ಎಂದು ಭಾವ ಕಾಡದೇ, ತಮ್ಮ ನಟನೆ ಅರ್ಪಿಸಿದ್ದಾರೆ.
ಇನ್ನುಳಿದಂತೆ ದಂತದ ಗೊಂಬೆಯಂತೆ ನುಲಿದಿದ್ದಾರೆ ಪ್ರಿಯಾ ಆನಂದ್ ಮತ್ತು ನಿಶ್ವಿಕಾ ನಾಯ್ಡು. ಸಿಕ್ಕ ಪಾತ್ರದಲ್ಲಿಯೇ ಮೈ ಚಳಿ ಬಿಟ್ಟು ನಟಿಸಿದ್ದಾರೆ ನಿಶ್ವಿಕಾ. ಖಳನಾಗಿ ರವಿಶಂಕರ್ ಮಿಂಚಿದರೆ, ರಂಗಾಯಣ ರಘು ಸಹ ತಮ್ಮ ಎಂದಿನ ನಟನೆಯನ್ನು ಇಲ್ಲಿಯೂ ಎರಕಹೊಯ್ದಿದ್ದಾರೆ. ಟಾಲಿವುಡ್ ನಟ ತನಿಕೆಲ್ಲ ಭರಣಿ ಚಿತ್ರದುದ್ದಕ್ಕೂ ಕಾಣಿಸುತ್ತಾರೆ. ನೋಡುಗರ ಗಮನ ಸೆಳೆಯುತ್ತಾರೆ. ತಾಂತ್ರಿಕ ಬಳಗದ ಕೆಲಸ ಅಚ್ಚುಕಟ್ಟಾಗಿ ಮೂಡಿಬಂದಿದೆ. ಹಾಡುಗಳು ಗುನುಗುವಂತಿವೆ. ಆಯ್ಕೆ ಮಾಡಿಕೊಂಡ ಲೊಕೇಷನ್‌ಗಳೂ ಮಜವಾಗಿವೆ. ಇದೆಲ್ಲದರ ಆಚೆಗೆ ಸಿನಿಮಾ ಅಲ್ಲಲ್ಲಿ ಕೊಂಚ ಏರಿಳಿತ ಕಾಣುತ್ತದೆಯಾದರೂ, ಕಮರ್ಷಿಯಲ್ ಕೋನದಲ್ಲಿ ನೋಡಿದಾಗ ಭಟ್ಟರು ಮಾಡಿದ್ದು ಸರಿ ಎನಿಸುತ್ತದೆ.