Shaitaan: ಅಜಯ್ ದೇವಗನ್- ಜ್ಯೋತಿಕಾ ಹಾರರ್ ಸಿನಿಮಾಕ್ಕೆ ಖುಷಿ ನೀಡದ ಮೊದಲ ಸೋಮವಾರ, ಇಲ್ಲಿದೆ ಸೈತಾನ್ ಬಾಕ್ಸ್ ಆಫೀಸ್ ವರದಿ
Shaitaan box office collection day 4: ಅಜಯ್ ದೇವಗನ್, ಆರ್ ಮಾಧವನ್, ಜ್ಯೋತಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸೈತಾನ್ ಸಿನಿಮಾವು ಮೊದಲ ಸೋಮವಾರ 5.21 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಸೈತಾನ್ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 4: ವಿಕಾಸ್ ಬಹ್ಲ್ ನಿರ್ದೇಶನದ ಸೂಪರ್‌ನ್ಯಾಚುರಲ್ ಥ್ರಿಲ್ಲರ್ ಸಿನಿಮಾ ಸೈತಾನ್ ಕಳೆದ ಶುಕ್ರವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅಜಯ್ ದೇವಗನ್, ಆರ್ ಮಾಧವನ್, ಜ್ಯೋತಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ದೇಶಾದ್ಯಂತ ಬಿಡುಗಡೆಯಾಗಿರುವ ಇತರೆ ಸಿನಿಮಾಗಳಿಗೆ ಹೋಲಿಸಿದರೆ ಸೈತಾನ್ ಸಿನಿಮಾ ತುಸು ಉತ್ತಮವಾಗಿ ಗಳಿಕೆ ಮಾಡುತ್ತಿದೆ. ಸೈತಾನ್ ಸಿನಿಮಾ ಈ ಭಾನುವಾರ ಅತ್ಯುತ್ತಮ ಗಳಿಕೆ ಮಾಡಿತ್ತು. ವಾರದ ಆರಂಭವಾದ ಸೋಮವಾರ ಸೈತಾನ್ ಸಿನಿಮಾದ ಗಳಿಕೆ ಕುಸಿತ ಕಂಡಿದೆ.
ಸೈತಾನ್ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ
ಸೈತಾನ್ ಸಿನಿಮಾವು ಮೊದಲ ಸೋಮವಾರ 5.21 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ದಿನವಾದ ಶುಕ್ರವಾರ ಸೈತಾನ್ ಸಿನಿಮಾ ಭಾರತದಲ್ಲಿ 14.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡನೇ ದಿನವಾದ ಶನಿವಾರ 18.75 ಕೋಟಿ ರೂಪಾಯಿ ಗಳಿಸಿತ್ತು. ಭಾನುವಾರ ಈ ಸಿನಿಮಾ ಸುಮಾರು 20 ಕೋಟಿ ರೂಪಾಯಿ ಗಳಿಸಿದೆ. ಭಾನುವಾರ ಥಿಯೇಟರ್‌ಗಳಲ್ಲಿ ಈ ಹಿಂದಿ ಸಿನಿಮಾದ ಆಕ್ಯುಪೆನ್ಸಿ ಶೇಕಡ 36.24ರಷ್ಟಿತ್ತು. ಸೋಮವಾರ ಸೈತಾನ್ ಸಿನಿಮಾದ ಹಿಂದಿ ಆವೃತ್ತಿಯ ಆಕ್ಯುಪೆನ್ಸಿ (ಥಿಯೇಟರ್‌ನಲ್ಲಿ ವೀಕ್ಷಕರ ಪ್ರಮಾಣ) ಶೇಕಡ 12.53ರಷ್ಟಿತ್ತು.
ವಿಕಾಸ್ ಬಾಹ್ಲ್ ನಿರ್ದೇಶನದ ಈ ಹಾರರ್ ಸಿನಿಮಾವನ್ನು ಜಿಯೋ ಸ್ಟುಡಿಯೋ, ದೇವಗನ್ ಫಿಲ್ಮ್ಸ್, ಪನೊರಮಾ ಸ್ಟುಡಿಯೋ ತಯಾರಿಸಿದೆ. ಇದು ಅಜಯ್ ದೇವಗನ್, ಜ್ಯೋತಿ ದೇಶ್‌ಪಾಂಡೆ, ಕುಮಾರ್ ಮಂಗಟ್ ಪಾಠಕ್, ಅಭಿಷೇಕ್ ಪಾಠಕ್ ನಿರ್ಮಾಣದ ಸಿನಿಮಾ. ವಾಸ್ ಹೆಸರಿನ ಗುಜರಾತಿ ಹಾರರ್ ಸಿನಿಮಾದ ರಿಮೇಕ್ ಇದಾಗಿದೆ. ಕಳೆದ ಮೂರು ದಿನಗಳು ವೀಕೆಂಡ್ ಆಗಿರುವ ಕಾರಣ ಸೈತಾನ್‌ಗೆ ಒಂದಿಷ್ಟು ಗಳಿಕೆಯಾಗಿದೆ. ಇದೀಗ ಸೋಮವಾರದಿಂದ ಶುಕ್ರವಾರವರೆಗಿನ ವಾರದ ನಡುವಿನ ದಿನಗಳಲ್ಲಿ ನೀರಸ ಗಳಿಕೆ ಮುಂದುವರೆಯುವ ಸಾಧ್ಯತೆಯಿದೆ.
ಸೈತಾನ್ ಸಿನಿಮಾದ ವಿಮರ್ಶೆ
"ಈ ಸಿನಿಮಾದ ಆರಂಭದ ದೃಶ್ಯದಲ್ಲಿ ಕಾಡಿನಲ್ಲಿ ಕೊಳೆಯುತ್ತಿರುವ ಇಲಿ ಕಾಣಿಸುತ್ತದೆ. ಅಂತಿಮ ಸೀಕ್ವೆನ್ಸ್‌ನಲ್ಲಿ ಸ್ವಯಂ ಅಭಿಮಾನದ ಅರಿವು ಕಟ್ಟಿಕೊಡುವ ರೀತಿ ಇದೆ. ಜತೆಗೆ ಇದು ಹೊಟ್ಟೆಯಲ್ಲಿ ಒಂದಿಷ್ಟು ತಳಮಳ ಸೃಷ್ಟಿಸಬಹುದು. ಆಘಾತಕಾರಿ ಸಂಗತಿಗಳನ್ನು ಅತ್ಯಂತ ನಾಜೂಕಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ. ಆರ್ ಮಾಧವನ್ ಅವರು ಕೊಂಚ ನಿಮ್ಮನ್ನು ಮನರಂಜಿಸಬಹುದು. ಒಟ್ಟಾರೆ ಹಾರರ್ ಸಿನಿಮಾ ವೀಕ್ಷಿಸಲು ಬಯಸುವವರಿಗೆ ಸೈತಾನ್ ಸಿನಿಮಾ ಒಂದಿಷ್ಟು ಮನರಂಜನೆ, ಕೌತುಕ, ಭಯವನ್ನು ನೀಡುತ್ತದೆ" ಎಂದು ಹಿಂದೂಸ್ತಾನ್ ಟೈಮ್ಸ್ ತನ್ನ ವಿಮರ್ಶೆಯಲ್ಲಿ ಅಭಿಪ್ರಾಯಪಟ್ಟಿದೆ.