ರಘು ಶಿವಮೊಗ್ಗ ನಿರ್ದೇಶನದ 3ನೇ ಚಿತ್ರಕ್ಕೆ ಮುಹೂರ್ತ; ದಿ ಟಾಸ್ಕ್‌ ಸಿನಿಮಾದಲ್ಲಿ ಹೊಸ ಪ್ರತಿಭೆಗಳ ಅನಾವರಣ
ಕನ್ನಡ ಸುದ್ದಿ  /  ಮನರಂಜನೆ  /  ರಘು ಶಿವಮೊಗ್ಗ ನಿರ್ದೇಶನದ 3ನೇ ಚಿತ್ರಕ್ಕೆ ಮುಹೂರ್ತ; ದಿ ಟಾಸ್ಕ್‌ ಸಿನಿಮಾದಲ್ಲಿ ಹೊಸ ಪ್ರತಿಭೆಗಳ ಅನಾವರಣ

ರಘು ಶಿವಮೊಗ್ಗ ನಿರ್ದೇಶನದ 3ನೇ ಚಿತ್ರಕ್ಕೆ ಮುಹೂರ್ತ; ದಿ ಟಾಸ್ಕ್‌ ಸಿನಿಮಾದಲ್ಲಿ ಹೊಸ ಪ್ರತಿಭೆಗಳ ಅನಾವರಣ

ಬೆಳ್ಳಿ ತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿರುವ ರಘು ಶಿವಮೊಗ್ಗ ಮೂರನೇ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. ರಘು ನಿರ್ದೇಶನದ ದಿ ಟಾಸ್ಕ್‌ ಸಿನಿಮಾ ಮುಹೂರ್ತ ಸೋಮವಾರ ಬೆಂಗಳೂರಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ನೆರವೇರಿದೆ. ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೇ ಇದ್ದಾರೆ.

ರಘು ಶಿವಮೊಗ್ಗ ನಿರ್ದೇಶನದ 3ನೇ ಸಿನಿಮಾ ದಿ ಟಾಸ್ಕ್‌ ಚಿತ್ರಕ್ಕೆ ಮುಹೂರ್ತ
ರಘು ಶಿವಮೊಗ್ಗ ನಿರ್ದೇಶನದ 3ನೇ ಸಿನಿಮಾ ದಿ ಟಾಸ್ಕ್‌ ಚಿತ್ರಕ್ಕೆ ಮುಹೂರ್ತ

ಚೂರಿಕಟ್ಟೆ, ಪೆಂಟಗನ್ ಸಿನಿಮಾಗಳ ಸೂತ್ರಧಾರ ರಘು ಶಿವಮೊಗ್ಗ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದು ಆ ಚಿತ್ರ ಇಂದು ಸೆಟ್ಟೇರಿದೆ. ಬೆಂಗಳೂರಿನ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಇಂದು ರಘು ನಿರ್ದೇಶನದ ಮೂರನೇ ಸಿನಿಮಾ ದಿ ಟಾಸ್ಕ್ ಮುಹೂರ್ತ ನೆರವೇರಿದೆ. ಡಿವೈಎಸ್ ಪಿ ರಾಜೇಶ್ ದಿ ಟಾಸ್ಕ್ ಚಿತ್ರಕ್ಕೆ ಕ್ಲ್ಯಾಪ್ ಮಾಡಿದರೆ, ಕೈವಾ ಸಿನಿಮಾ ಛಾಯಾಗ್ರಾಹಕಿ ಶ್ವೇತ್ ಪ್ರಿಯಾ ಕ್ಯಾಮೆರಾಗೆ ಚಾಲನೆ ಕೊಟ್ಟರು.

ನೈಜ ಘಟನೆ ಆಧಾರಿತ ಸಿನಿಮಾ

ದಿ ಟಾಸ್ಕ್ ಸಿನಿಮಾ ನೈಜ ಘಟನೆ ಸ್ಫೂರ್ತಿ ಆಧಾರಿತ ಸಿನಿಮಾ. ಈ ಹಿಂದೆ ರಘು ಶಿವಮೊಗ್ಗ ನಿರ್ದೇಶನದ ಪೆಂಟಗನ್‌ನಲ್ಲಿ ಹೀರೋ ಆಗಿ ಅಭಿನಯಿಸಿದ್ದ ಸಾಗರ್ ಹಾಗೂ ಭೀಮ ಚಿತ್ರದಲ್ಲಿ ಖಳನಾಯಕನಾಗಿ ಪರಿಚಯರಾಗಿದ್ದ ಜಯಸೂರ್ಯ ನಾಯಕರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಶ್ರೀಲಕ್ಷ್ಮೀ, ಅರವಿಂದ್ ಕುಪ್ಳಿಕರ್, ಬಿಂಬಶ್ರೀ ನೀನಾಸಂ, ಹರಿಣಿ ಶ್ರೀಕಾಂತ್, ಬಾಲಾಜಿ ಮನೋಹರ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಘು ಶಿವಮೊಗ್ಗ ಈ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ಅಲ್ಲದೆ, ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಘು ಅವರ ದಿ ಟಾಸ್ಕ್‌ ಚಿತ್ರಕ್ಕೆ ಲೋಕಪೂಜ್ಯ ಪಿಕ್ಚರ್ ಹೌಸ್ ಸಂಸ್ಥೆ ಅಡಿ ನಿರ್ಮಾಪಕ ವಿಜಯ್ ಕುಮಾರ್ ಹಾಗೂ ರಾಮಣ್ಣ ಬಂಡವಾಳ ಹೂಡುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದು, ಮಡಿಕೇರಿ, ಬೆಂಗಳೂರು ಹಾಗೂ ಸುತ್ತಮುತ್ತ ಚಿತ್ರೀಕರಣ ನಡೆಸಲಿದೆ.

ನೀನಾಸಂನಲ್ಲಿ ನಟನೆ ಕಲಿತಿರುವ ರಘು ಶಿವಮೊಗ್ಗ

ರಘು, ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ನಟಿಸಿದ್ದರು. ಇವರ ನೆಗೆಟಿವ್‌ ಪಾತ್ರ ನೋಡಿ ಎಷ್ಟೋ ಜನರು ಅವರನ್ನು ಬೈದಿರುವೂ ಉಂಟು. ನಟನೆಯಲ್ಲಿ ಅಷ್ಟು ಪಳಗಿರುವ ರಘು ಹೆಸರೇ ಹೇಳುವಂತೆ ಶಿವಮೊಗ್ಗದವರು. ಮೂಲತ: ರಂಗಭೂಮಿ ಕಲಾವಿದರಾಗಿರುವ ರಘು, ಆರಂಭದಲ್ಲಿ ಮಿಮಿಕ್ರಿ ಮಾಡುತ್ತಿದ್ದರು. ನಂತರ ನೀನಾಸಂ ಸೇರಿ ಅಲ್ಲಿ ಆಕ್ಟಿಂಗ್‌ ಕಲಿತರು. ಆಕ್ಟಿಂಗ್‌ ಕೋರ್ಸ್‌ ಮುಗಿಯುತ್ತಿದ್ದಂತೆ ನಟನೆಗೆ ಇಳಿದರು. ಜೊತೆಗೆ ನಿರ್ದೇಶಕನಾಗಿ, ಬರಹಗಾರನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.

ಸಿನಿಮಾ, ಧಾರಾವಾಹಿಗಳಲ್ಲಿ ಇನ್ಸ್‌ಪೆಕ್ಟರ್‌ ಪಾತ್ರದಲ್ಲಿ ನಟಿಸಿರುವ ರಘು

ರಘು ಮೊದಲ ಬಾರಿಗೆ ನಟಿಸಿದ್ದು ಮುಕ್ತ ಧಾರಾವಾಹಿಯಲ್ಲಿ. ನಂತರ ಮಕ್ಕಳ ರಂಗಭೂಮಿ ಎಂಬ ಕಿರುಚಿತ್ರ ನಿರ್ದೇಶನ ಮಾಡಿ, ಚೂರಿಕಟ್ಟೆ ಸಿನಿಮಾ ಮೂಲಕ ಬೆಳ್ಳಿತೆರೆಗೆ ನಿರ್ದೇಶಕನಾಗಿ ಎಂಟ್ರಿ ಕೊಟ್ಟರು. ಕೈವಾ, ಧನಂಜಯ್‌ ಅಭಿನಯದ ಹೊಯ್ಸಳ, ದುನಿಯಾ ವಿಜಯ್‌ ಅಭಿನಯದ ಭೀಮಾ ಸಿನಿಮಾದಲ್ಲಿ ಕೂಡಾ ಪೊಲೀಸ್‌ ಆಫೀಸರ್‌ ಆಗಿ ನಟಿಸಿದ್ದಾರೆ. ರಘು ನಿರ್ದೇಶನ ಮಾಡಿದ್ದ ಚೌಕಬಾರ ಎಂಬ ಕಿರುಚಿತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡಾ ಬಂದಿದೆ. ಇದೀಗ ರಘು ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದು ಯಾವ ರೀತಿ ಗಮನ ಸೆಳೆಯಲಿದೆ ನೋಡಬೇಕು.

Whats_app_banner