ಆ ಜೋರು ಮಳೆಯಲ್ಲಿ ಅಮ್ಮನಿಗೆ ನಾನೇ ಹೆರಿಗೆ ಮಾಡಿದ್ದೆ; ಸಿನಿಮಾ ಕಥೆಯನ್ನೂ ಮೀರಿಸಿದ್ದು ನಿರ್ದೇಶಕ ಓಂ ಸಾಯಿ ಪ್ರಕಾಶ್ ಲೈಫ್ ಸ್ಟೋರಿ
ನಿರ್ದೇಶಕ ಓಂ ಸಾಯಿ ಪ್ರಕಾಶ್ ಪೊಲೀಸನ ಹೆಂಡತಿ, ಗೋಲ್ ಮಾಲ್ ರಾಧಾಕೃಷ್ಣ, ಅಣ್ಣ ತಂಗಿ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ನಿರ್ದೇಶಕ ರಘುರಾಮ್ ಅವರ ಕನಸುಗಳ ಕಾರ್ಖಾನೆ ಯೂಟ್ಯೂಬ್ ಚಾನೆಲ್‌ನ ನೂರೊಂದು ನೆನಪು ಕಾರ್ಯಕ್ರಮದಲ್ಲಿ ಓಂ ಸಾಯಿ ಪ್ರಕಾಶ್, ತಮ್ಮ ಜೀವನದ ಅನೇಕ ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ ಅತ್ಯುತ್ತಮ ನಿರ್ದೇಶಕರಲ್ಲಿ ಓಂ ಸಾಯಿ ಪ್ರಕಾಶ್ ಕೂಡಾ ಒಬ್ಬರು. ಆಂಧ್ರಪ್ರದೇಶದ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ, ಕನ್ನಡ ಸಿನಿಮಾ ರಂಗಕ್ಕೆ ಬಂದು ಅನೇಕ ಹಿಟ್ ಸಿನಿಮಾಗಳನ್ನು ಸಾಯಿ ಪ್ರಕಾಶ್ ನೀಡಿದ್ದಾರೆ. ಸಿನಿಮಾ ನಿರ್ದೇಶಕ ಸಾಯಿ ಪ್ರಕಾಶ್ ಜೀವನ ಕೂಡಾ ಸಿನಿಮಾ ಕಥೆಗೂ ಮೀರಿದ್ದು. ಕನಸುಗಳ ಕಾರ್ಖಾನೆ ಯೂಟ್ಯೂಬ್ ಚಾನೆಲ್‌ನ ನೂರೊಂದು ನೆನಪು ಕಾರ್ಯಕ್ರಮದಲ್ಲಿ ನಿರ್ದೇಶಕ ರಘುರಾಮ್ ಜೊತೆಗೆ ಸಾಯಿ ಪ್ರಕಾಶ್, ನಮ್ಮ ಜೀವನದ ಅನೇಕ ಘಟನೆಗಳನ್ನು ಹಂಚಿಕೊಂಡಿದ್ದಾರೆ.
ಆಂಧ್ರಪ್ರದೇಶದ ಪಿರಂಗಿಪುರ ಗ್ರಾಮಕ್ಕೆ ಸೇರಿದ ಓಂ ಸಾಯಿ ಪ್ರಕಾಶ್
ನಾನು ಹುಟ್ಟಿದ್ದು ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಪಿರಂಗಿಪುರ ಗ್ರಾಮದಲ್ಲಿ. ತಂದೆ ಕಬ್ಬಿ ರೆಡ್ಡಿ ತಾಯಿ ಪುಲ್ಲಮ್ಮ. ನನ್ನ ಮೊದಲ ಹೆಸರು ಪ್ರಕಾಶ್ ರೆಡ್ಡಿ. ಆಗಿನ ಕಾಲದಲ್ಲೇ ಮನೆಯಲ್ಲಿ ರಾಜಕೀಯ ವಾತಾವರಣವಿತ್ತು. ನನ್ನ ತಂದೆ ಕಾಂಗ್ರೆಸ್‌ನಲಿದ್ದರೆ, ತಾತ ಟಿಡಿಪಿ ಪಕ್ಷದಲ್ಲಿದ್ದರು. ಇದೇ ವಿಚಾರಕ್ಕೆ ಇಬ್ಬರ ನಡುವೆ ವೈಷಮ್ಯವಿತ್ತು. ಒಂದೇ ಮನೆಯಲ್ಲಿದ್ದರೂ, ತುಂಬು ಕುಟುಂಬವಿದ್ದರೂ ಮನೆಯಲ್ಲಿ ಎರಡು ಗುಂಪುಗಳಿತ್ತು. ತಾತ, ತಂದೆ ನಡುವೆ ಮನಸ್ತಾಪವಿತ್ತು. ಚುನಾವಣೆ ಪ್ರಚಾರದ ಸಮಯದಲ್ಲಿ ನನ್ನ ತಂದೆ, ತಾತನವರನ್ನು ಬಂಗಲೆಯೊಂದರಲ್ಲಿ ಕೂಡಿ ಹಾಕಿದ್ದರು. ಆದರೆ ನಮ್ಮ ತಾತ ಅಲ್ಲಿಂದ ತಪ್ಪಿಸಿಕೊಂಡು 18 ಅಡಿ ಗೋಡೆಯನ್ನು ಹತ್ತಿ, ಇಳಿದು ಪ್ರಚಾರ ಕಾರ್ಯಕ್ಕೆ ಹೋಗಿ ಬಂದಿದ್ದರು.
ತಂದೆ-ತಾತನ ನಡುವೆ ರಾಜಕೀಯ ಮನಸ್ತಾಪ
ರಾಜಕೀಯ ವಿಚಾರಕ್ಕೆ ತಂದೆ-ತಾತ ನಡುವೆ ಮನಸ್ತಾಪ ಹೆಚ್ಚಾಯ್ತು. ರಾಯಲ ಸೀಮೆ ಸಿನಿಮಾ ಕಥೆಗಳಂತೆ ನಮ್ಮ ಮನೆಯಲ್ಲೂ ನಡೆಯುತ್ತಿತ್ತು. ತಾತನವರನ್ನು ಕೂಡಿಹಾಕಿದ್ದ ವಿಚಾರ ತಿಳಿದು ನಮ್ಮ ಅತ್ತೆ, ಮಾವ ಚಿಕ್ಕಪ್ಪಂದಿರು, ಅವರ ಮಕ್ಕಳು ಇನ್ನಿತರರು ಸೇರಿ ನಮ್ಮ ತಂದೆ ಮೇಲೆ ಅಟ್ಯಾಕ್ ಮಾಡಿದ್ದರು. ಕೊನೆಗೂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಇದೇ ಕೋಪಕ್ಕೆ ನಮ್ಮ ತಾತ, ಮನೆ ಖಾಲಿ ಮಾಡುವಂತೆ ನನ್ನ ತಂದೆಗೆ ಕೋರ್ಟ್ ನೋಟಿಸ್ ಕೊಟ್ಟರು. ಆ ಸಮಯಕ್ಕೆ ಅಮ್ಮ ತುಂಬು ಗರ್ಭಿಣಿ. ಆಗ ನನಗೆ 13 ವರ್ಷ ವಯಸ್ಸು. ನಾನು ಸಾಯಿಬಾಬ ಭಕ್ತ. ನನ್ನ ಜೊತೆ ಹುಟ್ಟಿದವರು ಯಾರೂ ಇಲ್ಲ ಎಂದು ಬೇಸರಿಂದಲೇ ಇದ್ದೆ. ನನ್ನ ಆಸೆ ಬಾಬಾಗೆ ತಿಳಿಯಿತೋ ಏನೋ 50ನೇ ವಯಸ್ಸಿಗೆ ಅಮ್ಮ ಗರ್ಭಿಣಿ ಆದರು.
ರಾಜಕೀಯ ದ್ವೇಷಕ್ಕೆ ನಮ್ಮನ್ನು ಮನೆಯಿಂದ ಹಾರ ಹಾಕಿದ ತಾತ
ನಮಗೆ ಒಂದು ಬಿಡಿಗಾಸೂ ಕೊಡದೆ, ರಾತ್ರೋ ರಾತ್ರಿ ತಾತ ಮನೆಯಿಂದ ಹೊರ ಹಾಕಿದರು. ವಿಧಿ ಇಲ್ಲದೆ ನಾವು ಮನೆ ಖಾಲಿ ಮಾಡಿ ರಾತ್ರಿಯೆಲ್ಲಾ ರಸ್ತೆ ಬದಿ ಇದ್ದೆವು. ಸಂಬಂಧಿಕರು ಅವರ ಮನೆಗೆ ಕರೆದುಕೊಂಡು ಹೋದರು. ಕೆಲವು ದಿಗನಳ ನಂತರ ಒಂದು ಬಾಡಿಗೆ ಮನೆಗೆ ಶಿಫ್ಟ್ ಆದೆವು. ಆ ವರ್ಷ ನಮ್ಮ ಊರಲ್ಲಿ ಬಹಳ ಮಳೆ. ಒಂದು ದಿನ ಅಪ್ಪ ಹೊರಗೆ ಹೋಗಿದ್ದರು. ಆ ದಿನ ಕೂಡಾ ಜೋರು ಮಳೆ. ಮನೆಯಲ್ಲಿ ನಾನು , ಅಮ್ಮ ಇಬ್ಬರೇ. ಆ ಸಮಯದಲ್ಲಿ ಅಮ್ಮನಿಗೆ ಹೆರಿಗೆ ನೋವು ಶುರುವಾಯ್ತು. ಆ ಮಳೆಯಲ್ಲಿ ಹೋಗಿ ಯಾರನ್ನು ಕರೆಯಬೇಕು ಅಂತ ಗೊತ್ತಾಗಲಿಲ್ಲ. ಕೊನೆಗೆ ಅಮ್ಮನ ಸೂಚನೆಯಂತೆ ಬಿಸಿನೀರು ಕಾಯಿಸಲು ಇಟ್ಟೆ. ಅಷ್ಟರಲ್ಲಿ ಮಳೆಗೆ ಗೋಡೆ ಬಿದ್ದುಹೋಯ್ತು. ಅಲ್ಲಿ ಹೋಗಿ ನೋಡಿದಾಗ ಗೋಡೆ ಮೇಲೆ ಒಂದು ದೊಡ್ಡ ಹಾವು ಇತ್ತು. ಅದನ್ನು ಗಾಬರಿಯಿಂದ ಅಮ್ಮನ ಬಳಿ ಹೇಳಿದೆ.
ಅಮ್ಮನ ಸೂಚನೆಯಂತೆ ನಾನೇ ಹೆರಿಗೆ ಮಾಡಿದೆ
ಹಾವು ಬಂದಿದೆ ಎಂದು ತಿಳಿದು ಅಮ್ಮ ಸ್ವತ: ಶಿವನೇ ಆಶೀರ್ವಾದ ಮಾಡಲು ಬಂದಿದ್ದಾನೆ, ನಮಸ್ಕಾರ ಮಾಡು ಎಂದರು. ಭಯದಿಂದಲೇ ನಮಸ್ಕಾರ ಮಾಡಿದೆ. ಅಮ್ಮ ಮುಂದೇನು ಮಾಡಬೇಕು ಎಂದು ಹೇಳುತ್ತಾ ಹೋದರು. ಅಮ್ಮನಿಗೆ ನಾನೇ ಹೆರಿಗೆ ಮಾಡಿದೆ, ತಂಗಿ ಹುಟ್ಟಿದಳು. ಮಗುವನ್ನು ಒರೆಸಿದ್ದು, ಹೊಕ್ಕುಳಬಳ್ಳಿ ಕತ್ತರಿಸಿದ್ದು ನಾನೆ. ಎಷ್ಟು ಜನ ಮಕ್ಕಳಿಗೆ ಈ ಅವಕಾಶ ದೊರೆಯುತ್ತದೆ? ಇಷ್ಟೆಲ್ಲಾ ಮುಗಿದ ನಂತರ ನೋಡಿದರೆ ಅಲ್ಲಿ ಹಾವು ಇರಲಿಲ್ಲ. ಶಿವನೇ ಆಶೀರ್ವಾದ ಮಾಡಿದ್ದಾನೆ ಎಂದು ತಿಳಿದ ನಮ್ಮ ತಾಯಿ, ನನ್ನ ತಂಗಿಗೆ ಸಾಂಬರಾಜ್ಯೋ ಎಂದು ಹೆಸರಿಟ್ಟರು.
ನನಗೆ ತಂಗಿ ಹುಟ್ಟಿದ ನಂತರವೂ ನಮ್ಮ ಕುಟುಂಬ ಒಂದಾಗಲಿಲ್ಲ. ನನ್ನ ತಾತನಿಗೆ ನನ್ನ ತಂದೆ, ನಮ್ಮ ಮೇಲೆ ಎಷ್ಟು ಕೋಪ ಇತ್ತೆಂದರೆ ನಾನು ಸತ್ತಾಗ ಮಗ ಸಂಸ್ಕಾರ ಮಾಡಬೇಕು ಎಂಬ ಕಾರಣಕ್ಕೆ ತಾತ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಅವರಿಗೆ ಅಷ್ಟು ದ್ವೇಷ ಇತ್ತು ಎಂದು ಓಂ ಸಾಯಿ ಪ್ರಕಾಶ್, ಅಂದಿನ ಘಟನೆಯನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.