ಭಾರತೀಯ ಸೂಪರ್‌ಮ್ಯಾನ್‌ ಸರಣಿಗೆ ಹನುಮಾನ್‌ ಮುನ್ನುಡಿ; ಹೊಸ ನಿರೀಕ್ಷೆ ಹುಟ್ಟುಹಾಕಿದ ತೇಜ ಸಜ್ಜಾ ಸಿನಿಮಾ-tollywood news teja sajja hanuman movie is the prelude to the indian superman series social media discuss pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಭಾರತೀಯ ಸೂಪರ್‌ಮ್ಯಾನ್‌ ಸರಣಿಗೆ ಹನುಮಾನ್‌ ಮುನ್ನುಡಿ; ಹೊಸ ನಿರೀಕ್ಷೆ ಹುಟ್ಟುಹಾಕಿದ ತೇಜ ಸಜ್ಜಾ ಸಿನಿಮಾ

ಭಾರತೀಯ ಸೂಪರ್‌ಮ್ಯಾನ್‌ ಸರಣಿಗೆ ಹನುಮಾನ್‌ ಮುನ್ನುಡಿ; ಹೊಸ ನಿರೀಕ್ಷೆ ಹುಟ್ಟುಹಾಕಿದ ತೇಜ ಸಜ್ಜಾ ಸಿನಿಮಾ

ತೇಜ ಸಜ್ಜಾ ನಟನೆಯ ಹನುಮಾನ್‌ ಸಿನಿಮಾವು ಭಾರತದಲ್ಲಿ ಹೊಸ ಸೂಪರ್‌ಮ್ಯಾನ್‌ ಸರಣಿಗೆ ಮುನ್ನುಡಿ ಬರೆಯಲಿದೆ ಎಂದು ಯುವ ಬರಹಗಾರ ರಾಜೀವ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಪುರಾಣದ ಸ್ಪರ್ಶವಿರುವ ಈ ಕಥೆಗೆ ಹನುಮಂತನಷ್ಟೇ ಶಕ್ತಿಯಿದೆ ಎನ್ನುವ ನಂಬಿಕೆ ಹುಟ್ಟಿಸಿದೆ ಎಂದು ಅವರು ಹೇಳಿದ್ದಾರೆ.

ಹನುಮಾನ್‌ ಸಿನಿಮಾದ ಕುರಿತು ರಾಜೀವ ಹೆಗಡೆ ಬರಹ
ಹನುಮಾನ್‌ ಸಿನಿಮಾದ ಕುರಿತು ರಾಜೀವ ಹೆಗಡೆ ಬರಹ

ಸ್ಪೈಡರ್‌ ಮ್ಯಾನ್‌, ಬ್ಯಾಟ್‌ಮ್ಯಾನ್ ರೀತಿಯ ಹಾಲಿವುಡ್‌ ಸಿನೆಮಾಗಳನ್ನು ದಶಕಗಳ ಕಾಲದಿಂದ ಸಿನಿಪ್ರಿಯರು ಆರಾಧಿಸಿಕೊಂಡು ಬಂದಿದ್ದೇವೆ. ಭಾರತೀಯ ಸಿನೆಮಾಗಳಲ್ಲಿ ಲಾಜಿಕ್‌ ಪ್ರಶ್ನಿಸುವ ನಾವು, ಎಂದಿಗೂ ಈ ಹಾಲಿವುಡ್‌ ಸೂಪರ್‌ ಹೀರೋ ಸಿನೆಮಾಗಳಲ್ಲಿ ವೈಜ್ಞಾನಿಕತೆ, ತರ್ಕವನ್ನು ನೋಡದೇ ಎಂಜಾಯ್‌ ಮಾಡಿದೆವು. ಸಿನೆಮಾವನ್ನು ನಿಜವಾಗಿ ನೋಡಬೇಕಾದ ಮಾದರಿ ಕೂಡ ಅದೇ ಆಗಿದೆ. ನಾವು ಸಿನೆಮಾ ನೋಡುವ ‌2-3 ಗಂಟೆಗಳ ಕಾಲ ಖುಷಿ ನೀಡುವ ಸಿನೆಮಾಗಳೆಲ್ಲ ಉತ್ತಮವಾದದ್ದೇ ಎನ್ನುವುದು ಒಬ್ಬ ಸಾಮಾನ್ಯ ಪ್ರೇಕ್ಷಕನ ಲೆಕ್ಕಾಚಾರ.

ಆದರೆ ಭಾರತದಲ್ಲಿ ಸೂಪರ್‌ ಮ್ಯಾನ್‌ಗಳ ಸಿನೆಮಾಗಳು ಬಂದಿದ್ದು ತೀರಾ ಕಡಿಮೆ. ಅದರಲ್ಲೂ ನಮ್ಮ ಪುರಾಣಗಳಲ್ಲಿ ಇವರಿಗಿಂತ ವಿಭಿನ್ನವಾದ ಸೂಪರ್‌ ಹೀರೋಗಳಿದ್ದರೂ, ಅದನ್ನು ತೆರೆ ಮೇಲೆ ತರುವ ಹಾಗೂ ಅದನ್ನು ಫ್ರಾಂಚೈಸಿ ಮಾಡುವ ಪ್ರಯತ್ನ ಆಗಿರಲಿಲ್ಲ ಎನ್ನಬಹುದು. ಒಂದೊಮ್ಮೆ ಆಗಿದ್ದರೂ ಈ ಕ್ಷಣಕ್ಕೆ ನನಗೆ ನೆನಪಾಗುತ್ತಲೂ ಇಲ್ಲ. ಈಗ "ಹನುಮಾನ್‌" ಸಿನೆಮಾವು ಭಾರತದ ಚಲನಚಿತ್ರ ವಲಯದಲ್ಲಿ ಹೊಸ ಸೂಪರ್‌ ಮ್ಯಾನ್‌ ಸರಣಿ ಅಥವಾ ಫ್ರಾಂಚೈಸಿಗೆ ಮುನ್ನುಡಿ ಬರೆಯುವ ಎಲ್ಲ ಲಕ್ಷಣ ಕಾಣಿಸುತ್ತಿದೆ.

ಭಾರತದ ಆಧುನಿಕತೆ ಜತೆಗೆ ಆಧ್ಯಾತ್ಮದ ಮಿಶ್ರಣವು ಅನಿಯಮಿತ ಸಂಖ್ಯೆಗಳ ಕಥೆಗಳನ್ನು ಸೃಷ್ಟಿಸುವ ತಾಕತ್ತನ್ನು ಹೊಂದಿದೆ. ಹಾಗೆಯೇ ರಾಮಾಯಣ ಸೇರಿ ಇತರ ಪುರಾಣಗಳಲ್ಲಿ ಇದಕ್ಕೆ ಪೂರಕವಾದ ಕಥೆಗಳು ಸಾಕಷ್ಟು ಸಿಗುತ್ತವೆ. ಒಳ್ಳೆಯ ನಿರ್ದೇಶಕ, ನಿರ್ಮಾಣ ಸಂಸ್ಥೆಯು "ಹನುಮಾನ್‌"ನ್ನು ಭಾರತದ ಅತ್ಯಂತ ಯಶಸ್ವಿ ಫ್ರಾಂಚೈಸಿಯನ್ನಾಗಿಸಬಹುದು. ಹಾಗೆಯೇ ಜಾಗತಿಕ ಮಟ್ಟದಲ್ಲೂ ಸ್ಪೈಡರ್‌ಮ್ಯಾನ್‌ ಹಂತಕ್ಕೆ ಒಯ್ಯುವ ಸಾಹಸವನ್ನೂ ಮಾಡಬಹುದು.

ತೆಲುಗು ಚಿತ್ರರಂಗದಿಂದ ಮೂಡಿಬಂದಿರುವ ಈಗಿನ 'ಹನುಮಾನ್‌ʼ ಸಿನೆಮಾದ ಯಶಸ್ಸನ್ನು ಆ ಚಿತ್ರತಂಡ ಕೂಡ ನಿರೀಕ್ಷಿಸದಂತೆ ಕಾಣಿಸುತ್ತಿಲ್ಲ. ಮೇಕಿಂಗ್‌ ಹಾಗೂ ಪಾತ್ರ ಆಯ್ಕೆಯಲ್ಲಿ ಆ ರೀತಿಯ ಸೂಚನೆ ಕಾಣಿಸಿಲ್ಲ. ಆದರೆ ಚಿತ್ರಕಥೆ ಹಾಗೂ ಹನುಮಂತನ ಕಾರಣದಿಂದ ಭಾರತದಾದ್ಯಂತ ಮೆಚ್ಚುಗೆ ದೊರೆತಿದೆ. ಈಗಾಗಲೇ ಆ ಚಿತ್ರತಂಡ ಘೋಷಿಸಿರುವ ಎರಡನೇ ಭಾಗವು ಇನ್ನಷ್ಟು ಅದ್ಧೂರಿಯಾಗಿ ಮೂಡಿಬರಬಹುದು. ಕ್ರಿಮಿನಲ್‌ ಜಗತ್ತಿನ ಅಪರಾಧಿಗಳ ಸಿಕ್ವೆಲ್‌ ಅಬ್ಬರಗಳ ನಡುವೆ ʼಹನುಮಾನ್‌ʼ ಒಂದು ವಿಭಿನ್ನ ಫ್ರಾಂಚೈಸಿಯಾಗುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಭಾರತ ಚಿತ್ರರಂಗವನ್ನು ಭಾರತೀಯತೆ ಮೂಲಕ ಜಾಗತಿಕ ವಲಯಕ್ಕೆ ತೆಗೆದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ.

ಅಂದ್ಹಾಗೆ ಈಗ ಜಿಯೋ ಸಿನೆಮಾದಲ್ಲಿ ಲಭ್ಯವಿರುವ ʼಹನುಮಾನ್‌ʼಅತ್ಯದ್ಭುತ ಎಂದು ಹೇಳುತ್ತಿಲ್ಲ. ಆದರೆ ನಮ್ಮ ಪುರಾಣದ ಸ್ಪರ್ಶವಿರುವ ಈ ಕಥೆಗೆ ಹನುಮಂತನಷ್ಟೇ ಶಕ್ತಿಯಿದೆ ಎನ್ನುವ ನಂಬಿಕೆ ಹುಟ್ಟಿಸಿದೆ.

  • ಬರಹ: ರಾಜೀವ ಹೆಗಡೆ (ಫೇಸ್‌ಬುಕ್‌ ಪೋಸ್ಟ್‌)

mysore-dasara_Entry_Point