ಅಮರನ್ ಸಿನಿಮಾದಲ್ಲಿ ಮಹಾಪ್ರಮಾದ, ಸಾಯಿ ಪಲ್ಲವಿ ಎಂದು ವಿದ್ಯಾರ್ಥಿಗೆ ಕರೆಗಳ ಸುರಿಮಳೆ, 1.1 ಕೋಟಿ ರೂ ಪರಿಹಾರಕ್ಕೆ ಆಗ್ರಹ
Amaran Movie: ಸಹಜ ಸುಂದರಿ ಸಾಯಿ ಪಲ್ಲವಿಯ ಮೊಬೈಲ್ ಸಂಖ್ಯೆಯೆಂದು ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರಿಗೆ ಫೋನ್ ಕರೆಗಳ ಸುರಿಮಳೆಯಾಗುತ್ತಿದೆ. ಅಮರನ್ ಸಿನಿಮಾದಲ್ಲಿ ಸಾಂಕೇತಿಕವಾಗಿ ನೀಡಿರುವ ಸಂಖ್ಯೆ ಈ ವಿದ್ಯಾರ್ಥಿಯ ರಿಯಲ್ ನಂಬರ್ ಆಗಿತ್ತು. ಆತ ಇದೀಗ ಚಿತ್ರತಂಡದ ವಿರುದ್ಧ 1.1 ಕೋಟಿ ಪರಿಹಾರ ನೀಡುವಂತೆ ಕೇಸ್ ದಾಖಲಿಸಿದ್ದಾನೆ.
Amaran Movie: ಚೆನ್ನೈನ ಎಂಜಿನಿಯರ್ ವಿದ್ಯಾರ್ಥಿಯೊಬ್ಬ ಅಮರನ್ ಚಿತ್ರತಂಡದ ವಿರುದ್ಧ ದೂರು ದಾಖಲಿಸಿ, 1.1 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾನೆ. ಇಷ್ಟಕ್ಕೂ ಆಗಿದ್ದೇನೆಂದರೆ, ಆ ವಿದ್ಯಾರ್ಥಿಗೆ ಸಾಯಿ ಪಲ್ಲವಿ ಅಭಿಮಾನಿಗಳು ಫೋನ್ ಮಾಡುತ್ತಿದ್ದಾರಂತೆ. ಒಂದಲ್ಲ ಎರಡಲ್ಲ, ಅಸಂಖ್ಯಾತ ಕರೆಗಳನ್ನು ಸ್ವೀಕರಿಸಿ ಸುಸ್ತಾದ ಆ ವಿದ್ಯಾರ್ಥಿ ದೂರು ದಾಖಲಿಸಿ ಮಾನಸಿಕ ಕಿರಿಕಿರಿಗೆ ಪರಿಹಾರವಾಗಿ 1.1 ಕೋಟಿ ರೂಪಾಯಿ ನೀಡಬೇಕೆಂದು ಕೇಳಿದ್ದಾನೆ. ಇದಕ್ಕೆಲ್ಲ ಕಾರಣವಾಗಿರುವುದು ಅನಿಮಲ್ ಸಿನಿಮಾದಲ್ಲಿ ಕಾಣಿಸಿದ ಒಂದು ಮೊಬೈಲ್ ನಂಬರ್. ಅನಿಮಲ್ ಸಿನಿಮಾದಲ್ಲಿ ಚಿತ್ರದ ನಾಯಕಿಯ ಫೋನ್ ನಂಬರ್ ಎಂದು ಸಾಂಕೇತಿಕವಾಗಿ ನೀಡಲಾದ ನಂಬರ್ ನಿಜವಾಗಿಯೂ ಚೆನ್ನೈನ ವಿದ್ಯಾರ್ಥಿಯ ನಂಬರ್ ಆಗಿತ್ತು. ಅಕ್ಟೋಬರ್ 31 ರಂದು ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ರೀತಿ ಫೋನ್ ಕರೆಗಳು ಬರಲು ಆರಂಭವಾಗಿವೆ. ಇದರಿಂದ ಅಪಾರ ಮಾನಸಿಕ ಕಿರಿಕಿರಿ ಅನುಭವಿಸಿದ್ದು, ನನಗೆ ಪರಿಹಾರ ನೀಡಬೇಕು ಎಂದು ದಾವೆ ಹೂಡಿದ್ದಾನೆ.
ನೆಮ್ಮದಿ ಕೆಡಿಸಿದ ಕರೆಗಳು
ಅಭಿಮಾನಿಗಳು ತಮ್ಮ ನೆಚ್ಚಿನ ನಟನಟಿಯರ ಫೋನ್ ನಂಬರ್ ಹುಡುಕಿ ಕರೆ ಮಾಡಿ ಮಾತನಾಡಲು ಪ್ರಯತ್ನಿಸುವುದು ಸಾಮಾನ್ಯ. ಇದು ಸಾಯಿ ಪಲ್ಲವಿ ನಂಬರ್ ಎಂದು ತಿಳಿದು ಆಕೆಯ ಅಭಿಮಾನಿಗಳು ಈ ವಿದ್ಯಾರ್ಥಿಗೆ ಕರೆ ಮಾಡಿದ್ದಾರೆ. ಸಾಯಿ ಪಲ್ಲವಿ ಅಮರನ್ ಸಿನಿಮಾದಲ್ಲಿ ಇಂದು ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದಾರೆ. ಮೇಜರ್ ಮುಕುಂದ್ ಮೇಲೆ ಫೋನ್ ನಂಬರ್ ಇರುವ ಮಡುಚಿದ ಕಾಗದವನ್ನು ಎಸೆಯುವ ದೃಶ್ಯವಿದೆ. ಇದು ನನ್ನ ಪರ್ಸನಲ್ ನಂಬರ್ ಎಂದು ನಾಯಕನಿಗೆ ರೆಬೆಕಾ ಹೇಳುತ್ತಾರೆ. ಆದರೆ, ಸಾಯಿ ಪಲ್ಲವಿ ಅಭಿಮಾನಿಗಳು ಇದು ಸಾಯಿ ಪಲ್ಲವಿ ನಂಬರ್ ಎಂದುಕೊಂಡು ಕರೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಪಾಪ, ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗೆ ಫೋನ್ ಆನ್ ಮಾಡುವುದೇ ಕಷ್ಟವಾಗಿದೆ.
"ಹಲೋ ನಮಗೆ ಸಾಯಿ ಪಲ್ಲವಿ ಜತೆ ಮಾತನಾಡಬೇಕು, ಅವರಿಗೆ ಪೋನ್ ಕೊಡಿ" ಎಂದು ಸಾಕಷ್ಟು ಕರೆಗಳು ಇವರಿಗೆ ಬಂದಿವೆ. ದೀಪಾವಳಿ ಹಬ್ಬದ ಸಮಯದಲ್ಲಿ ಕುಟುಂಬದ ಜತೆ ಕಾಲ ಕಳೆಯುವ ಸಮಯದಲ್ಲಿ ಅತ್ಯಧಿಕ ಕರೆಗಳು ಬಂದು ಕಿರಿಕಿರಿಯಾಗಿದೆ. ಆರಂಭದಲ್ಲಿ ನನಗೆ ಇಷ್ಟೊಂದು ಕಾಲ್ ಯಾಕೆ ಬರುತ್ತದೆ ಎಂದು ವಾಗೀಶನ್ ಎಂಬ ಈ ವಿದ್ಯಾರ್ಥಿಗೆ ಗೊತ್ತಾಗಲಿಲ್ಲವಂತೆ. ಬಳಿಕ ಸಿನಿಮಾದಲ್ಲಿ ಕಾಣಿಸಿದ ಸಂಖ್ಯೆ ನನ್ನದೇ ಎಂದು ತಿಳಿದುಕೊಂಡಿದ್ದಾರೆ.
ಈ ಕುರಿತು ದೂರು ದಾಖಲಿಸಿರುವ ವಾಗೀಸನ್ ಆ ದೂರಿನಲ್ಲಿ "ಹೇಳಲಾಗದ ಕಷ್ಟಗಳು ಮತ್ತು ಮಾನಸಿಕ ಸಂಕಟ ಉಂಟಾಗಿದ್ದು, ನನಗೆ ಪರಿಹಾರ ನೀಡಬೇಕು" ಎಂದು ಕೋರಿದ್ದಾರೆ. ನನಗೆ ಓದಲು, ಮಲಗಲು, ದಿನನಿತ್ಯದ ಚಟುವಟಿಕೆಗೆ ಇದರಿಂದ ಅಡ್ಡಿಯಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಇದು ನನ್ನ ಶೈಕ್ಷಣಕ ಮತ್ತು ವೈಯಕ್ತಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಮನಿಕಂಟ್ರೋಲ್.ಕಾಂ ವರದಿ ಮಾಡಿದೆ.
ಪರಿಹಾರದ ಜತೆಗೆ ನನ್ನ ಮೊಬೈಲ್ ಸಂಖ್ಯೆಯನ್ನು ತಕ್ಷಣ ಆ ಸಿನಿಮಾದಿಂದ ತೆಗೆಯಬೇಕೆಂದು ಅವರು ಕೋರಿದ್ದಾರೆ. ತನ್ನ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ವಿದ್ಯಾರ್ಥಿ ತನ್ನ ಪೋಸ್ಟ್ ಅನ್ನು ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಮತ್ತು ನಟ ಶಿವಕಾರ್ತಿಕೇಯನ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಈ ವಿದ್ಯಾರ್ಥಿಗೆ ಸಿನಿ ತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಚಿತ್ರತಂಡವು ಕಾಲ್ಪನಿಕವಾಗಿ ನೀಡುವ ಸಂಖ್ಯೆಗಳು ಯಾರದ್ದೋ ಮೊಬೈಲ್ ನಂಬರ್ ಆಗಿರಬಹುದು. ಈ ರೀತಿ ನಂಬರ್ ನೀಡುವ ಮುನ್ನ ಆ ಸಂಖ್ಯೆ ಚಾಲ್ತಿಯಲ್ಲಿಯದೆಯೋ ಇಲ್ಲವೇ ಎಂದು ತಿಳಿದುಕೊಳ್ಳುವುದು ಉತ್ತಮ. ಅಥವಾ ಒಂದೆರಡು ಸಂಖ್ಯೆ ಕಡಿಮೆ ಇರುವಂತಹ ಸಾಂಕೇತಿಕ ಸಂಖ್ಯೆಗಳನ್ನು ನೀಡಬಹುದು. ಈ ರೀತಿ ಇತರರ ಸಂಖ್ಯೆ ನೀಡುವ ಮೊದಲು ಸಂಬಂಧಪಟ್ಟವರ ಅನುಮತಿ ಪಡೆಯುವುದು ಒಳ್ಳೆಯದು ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳಾಗುತ್ತಿವೆ.