Amaran OTT Update: 2 ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಮಾರಾಟವಾಯ್ತು ಶಿವಕಾರ್ತಿಕೇಯನ್ ಸಾಯಿ ಪಲ್ಲವಿ ಅಮರನ್ ಸಿನಿಮಾ;ಸ್ಟ್ರೀಮಿಂಗ್ ಯಾವಾಗ?
Amaran OTT Update: ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನ ಮಾಡಿರುವ ಅಮರನ್ ಸಿನಿಮಾ ನೆಟ್‌ಫ್ಲಿಕ್ಸ್, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ಗೆ ಸೇಲ್ ಆಗಿದೆ ಎನ್ನಲಾಗುತ್ತಿದೆ. ಸಾಯಿ ಪಲ್ಲವಿ, ಶಿವಕಾರ್ತಿಕೇಯನ್ ನಟನೆಯ ಈ ಸಿನಿಮಾ ಬಹುಶ: ನವೆಂಬರ್ ಕೊನೆಯ ವಾರ ಒಟಿಟಿಗೆ ಬರುವ ಸಾಧ್ಯತೆ ಇದೆ.
Amaran OTT Update: ಶಿವರಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ನಟಿಸಿರುವ ಅಮರನ್ ಸಿನಿಮಾ ಅಕ್ಟೋಬರ್ 31 ರಂದು ವಿಶ್ವಾದ್ಯಂತ ರಿಲೀಸ್ ಆಗಿದೆ. ಸಿನಿಮಾ ಮೊದಲ ದಿನವ್ ವಿಶ್ವಾದ್ಯಂತ 34 ಕೋಟಿ ರೂ. ಕಲೆಕ್ಷನ್ ಮಾಡಿದೆ. ಸಿನಿಮಾ ನೋಡಿದ ಎಲ್ಲರೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಶಿವಕಾರ್ತಿಕೇಯನ್ ಕರಿಯರ್‌ನಲ್ಲಿ ಈ ಸಿನಿಮಾ ದಿ ಬೆಸ್ಟ್ ಎನಿಸಿದೆ.
ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಅಮರನ್
ಇದು ಮೇಜರ್ ಮುಕುಂದ್ ವರದರಾಜನ್ ಅವರ ಬಯೋಪಿಕ್. ಸಿನಿಮಾ ನೇಟಿವಿಟಿಗೆ ತಕ್ಕಂತೆ ಚಿತ್ರದಲ್ಲಿ ಲವ್, ಆಕ್ಷನ್, ಫ್ಯಾಮಿಲಿ, ಎಮೋಷನಲ್ ಎಲ್ಲದರ ಮಿಶ್ರಣವಿದೆ. ಚಿತ್ರವನ್ನು ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನ ಮಾಡಿದ್ದಾರೆ. ಶಿವ ಅರೂರ್ ಮತ್ತು ರಾಹುಲ್ ಸಿಂಗ್ ಅವರ ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್: ಟ್ರೂ ಸ್ಟೋರೀಸ್ ಆಫ್ ಮಾಡರ್ನ್ ಮಿಲಿಟರಿ ಹೀರೋಸ್ ಎಂಬ ಪುಸ್ತಕ ಸರಣಿಯಲ್ಲಿ ಮೇಜರ್ ಮುಕುಂದ್ ವರದರಾಜನ್ ಅವರ ಬಗ್ಗೆ ಉಲ್ಲೇಖಿಸಲಾಗಿದ್ದು ಅದರ ಆಧಾರದ ಮೇಲೆ ಅಮರನ್ ಸಿನಿಮಾ ಮಾಡಲಾಗಿದೆ. ಸಿನಿಮಾ ತಮಿಳು ಭಾಷೆಯಲ್ಲಿ ತಯಾರಾಗಿದ್ದು ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆ ಕಂಡಿದೆ. ಚಿತ್ರದಲ್ಲಿ ಶಿವಕಾರ್ತಿಕೇಯನ್ ಮುಕುಂದ್ ವರದರಾಜನ್ ಆಗಿ ನಟಿಸಿದ್ದರೆ, ಸಾಯಿ ಪಲ್ಲವಿ ಮುಕುಂದ್ ಪತ್ನಿ ಇಂದು ರೆಬೆಕಾ ವರ್ಗೀಸ್ ಪಾತ್ರದಲ್ಲಿ ನಟಿಸಿದ್ದಾರೆ.
130 ಕೋಟಿ ರೂ ಬಜೆಟ್‌ನಲ್ಲಿ ತಯಾರಾದ ಸಿನಿಮಾ
ಕಮಲ್ ಹಾಸನ್ ಒಡೆತನದ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್, ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಜಂಟಿಯಾಗಿ ಸೇರಿ ಅಮರನ್ ಸಿನಿಮಾವನ್ನು ನಿರ್ಮಾಣ ಮಾಡಿದೆ. ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎರಡೂ ದಿನಗಳಲ್ಲಿ ವರ್ಲ್ಡ್ ವೈಡ್ 80 ಕೋಟಿ ರೂ. ಕಲೆಕ್ಷನ್ ಮಾಡಿದೆ. 130 ಕೋಟಿ ರೂ ಬಂಡವಾಳ ಹಾಕಿ ಸಿನಿಮಾ ಮಾಡಲಾಗಿದ್ದು ಇನ್ನು 2 ದಿನಗಳಲ್ಲಿ ಸಿನಿಮಾಗೆ ಖರ್ಚು ಮಾಡಲಾದ ಹಣ ವಾಪಸ್ ಬರಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಮಾಡುತ್ತಿದ್ದಾರೆ.
ಅಮರನ್ ಒಟಿಟಿ ರಿಲೀಸ್ ಯಾವಾಗ, ಎಲ್ಲಿ?
ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಒಂದು ತಿಂಗಳ ನಂತರ ಒಟಿಟಿಗೆ ಬರುವುದು ಈಗ ಸಾಮಾನ್ಯವಾಗಿದೆ. ಅಮರನ್ ಸಿನಿಮಾ ಒಟಿಟಿಗೆ ಯಾವಾಗ ಎಂಟ್ರಿ ಕೊಡಬಹುದು ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ. ಮೂಲಗಳ ಪ್ರಕಾರ ಅಮರನ್ ಸಿನಿಮಾ ನೆಟ್‌ಫ್ಲಿಕ್ಸ ಹಾಗೂ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಎರಡೂ ಪ್ಲಾಟ್‌ಫಾರ್ಮ್‌ಗಳಿಗೆ ಸೇಲ್ ಆಗಿದೆ ಎಂದು ತಿಳಿದು ಬಂದಿದೆ. ಹಿಂದಿ ವರ್ಷನ್ ನೆಟ್‌ಫ್ಲಿಕ್ಸ್‌ನಲ್ಲಿ ತಮಿಳು, ತೆಲುಗು, ಕನ್ನಡ ಹಾಗೂ ಮಲಯಾಳಂ ವರ್ಷನ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ. ಆದರೆ ಯಾವ ದಿನಾಂಕದಿಂದ ಸ್ಟ್ರೀಮಿಂಗ್ ಆರಂಭಿಸಲಿದೆ ಎನ್ನುವುದರ ಬಗ್ಗೆ ಚಿತ್ರತಂಡ, ನೆಟ್‌ಫ್ಲಿಕ್ಸ್ ಅಥವಾ ಡಿಸ್ನಿ ಹಾಟ್ ಸ್ಟಾರ್ ಶೀಘ್ರದಲ್ಲೇ ಘೋಷಣೆ ಮಾಡಲಿದೆ. ಬಹುಶ: ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಿನಿಮಾ ಒಟಿಟಿಗೆ ಬರುವ ಸಾಧ್ಯತೆ ಇದೆ.