Bangalore Tomato Price: ಬೆಂಗಳೂರಿನಲ್ಲಿ 100 ರೂಪಾಯಿ ಗಡಿ ದಾಟಿದ ಕೆಜಿ ಟೊಮೆಟೊ; ಸತತ ಬೆಲೆ ಏರಿಕೆಗೆ ಪ್ರಮುಖ ಕಾರಣಗಳಿವು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟೊಮೆಟೊ ಬೆಲೆ 100 ರೂಪಾಯಿ ಗಡಿ ದಾಟಿದೆ. ಸತತವಾಗಿ ಟೊಮೆಟೊ ಬೆಲೆ ಹೆಚ್ಚಾಗುತ್ತಲೇ ಇರುವುದಕ್ಕೆ ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಟೊಮೆಟೊ ಬೆಲೆ (Tomato Price) ಹೊಸ ದಾಖಲೆ ಬರೆದಿದ್ದು, ಸತತವಾಗಿ ಬೆಲೆ ಏರಿಕೆಯಾಗುತ್ತಲೇ ಇರುವ ಪರಿಣಾಮ ಕೆಜಿ ಟೊಮೆಟೊ ಬೆಲೆ 100 ರೂಪಾಯಿಯ ಗಡಿ ದಾಟಿದೆ.
ನಿನ್ನೆ (ಜೂನ್ 26, ಸೋಮವಾರ) ಬೆಂಗಳೂರಿನ ಮಾರುಕಟ್ಟೆಯಲ್ಲಿ (Bengaluru Market) 90 ರೂಪಾಯಿಗಳ ಗಡಿಯಲ್ಲಿದ್ದ ಟೊಮೆಟೊ ಬೆಲೆ ಇದೀಗ 100 ರೂಪಾಯಿಗೆ ಬಂದು ನಿಂತಿದೆ.
ಇವತ್ತಿನ ಸಗಟು ಮಾರುಕಟ್ಟೆ ಬೆಲೆಗಳನ್ನು ನೋಡುವುದಾದರೆ ಚಿಕ್ಕಬಳ್ಳಾಪುರದಲ್ಲಿ ಕೆಜಿಗೆ 105 ರೂಪಾಯಿ ಮಾರಾಟವಾಗಿದೆ. ಬೆಂಗಳೂರಿನ ಕೆಲವೆಡೆ 100 ರೂಪಾಯಿ ಇದ್ದರೆ, ಕೆಲ ಮಾರುಕಟ್ಟೆಗಳಲ್ಲಿ 90 ರೂಪಾಯಿಗೆ ಮಾಡಲಾಗುತ್ತಿದೆ. ರಾಮನಗರದಲ್ಲಿ 75, ಬಂಗಾರಪೇಟೆಯಲ್ಲಿ 64, ಕನಕಪುರ 75, ಶಿವಮೊಗ್ಗ 60, ಶ್ರೀನಿವಾಸಪುರ 70 ಹಾಗೂ ಕೋಲಾರದಲ್ಲಿ 66 ರೂಪಾಯಿ ಇದೆ.
ಸತತವಾಗಿ ಟೊಮೆಟೊ ಬೆಲೆ ಏರಿಕೆಗೆ ಇದೇ ಕಾರಣ: ಬಹುತೇಕ ಕಡೆ ಮಳೆಯಿಂದಾಗಿ ಟೊಮೆಟೊ ಬೆಳೆಗೆ ಹಾನಿಯಾಗಿದ್ದು, ಕೆಲವು ಕಡೆಗಳಲ್ಲಿ ಬಿಸಿಯಿಂದಾಗಿ ಬೆಳೆ ಸರಿಯಾಗಿ ಆಗಿಲ್ಲ. ಹಿಂದಿನ ವರ್ಷದಲ್ಲಿ ಎಲ್ಲಾ ಕಡೆ ರೈತರು ಟೊಮೆಟೊ ಬೆಳೆಯನ್ನು ಹೆಚ್ಚಾಗಿ ಬೆಳೆದಿದ್ದರು. ಆದರೆ ಸರಿಯಾಗಿ ಬೆಲೆ ಸಿಗದೆ ಕೈ ಸುಟ್ಟುಕೊಂಡಿದ್ದರು.
ಆದರೆ ಈ ಬಾರಿ ಟೊಮೆಟೊ ಬದಲಾಗಿ ಬಹುತೇಕರು ಬೀನ್ಸ್‌ನತ್ತ ಮುಖ ಮಾಡಿದ್ದಾರೆ. ಹೀಗಾಗಿ ಟೊಮೆಟೊ ಬೆಳೆಯ ಇಳುವರಿ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಗೆ ಕಾರಣವಾಗುತ್ತಿದೆ. ಎಲೆ ರೋಗದಿಂದಲೂ ಬೆಳೆ ಸರಿಯಾಗಿ ಆಗಿಲ್ಲ. ಬಿಪರ್‌ಜಾಯ್ ಚಂಡಮಾರುತದ ಪರಿಣಾಮವಾಗಿ ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಬೆಳೆ ಇರುವರಿ ಕಡಿಮೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುುತ್ತಿದ್ದಾರೆ.
ಸದ್ಯ ಮಾರುಕಟ್ಟೆಗಳು, ಮಾಲ್, ಸೂಪರ್ ಮಾರುಕಟ್ಟೆಗಳು ಉತ್ತಮ ಗುಣಮಟ್ಟದ ಕೆಜಿ ಟೊಮೆಟೊ 100 ರೂಪಾಯಿಗೆ ಮಾರಾಟವಾಗುತ್ತಿದೆ. ಎರಡನೇ ಮತ್ತು ಮೂರನೇ ಗುಣಮಟ್ಟದ ಟೊಮೆಟೊವನ್ನು ಕೆಜಿಗೆ 60 ರಿಂದ 80 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ತಳ್ಳುವ ಗಾಡಿಗಳಲ್ಲೂ ಮಾರಾಟ ಮಾಡುತ್ತಿರುವ ಟೊಮೆಟೊ ಬೆಲೆ 100 ರೂಪಾಯಿ ಅಸುಪಾಸಿನಲ್ಲಿದೆ.
ಪ್ರಸ್ತುತ ಬೀನ್ಸ್ 110 ರೂಪಾಯಿ, ಕ್ಯಾರೆಟ್ 90 ರೂಪಾಯಿ, ನವಿಲುಕೋಸು 70 ರೂ., ಮೂಲಂಗಿ 49 ರೂ., ನುಗ್ಗೆಕಾಯಿ 100 ರೂ., ಬೀಟ್‌ರೂಟ್ 50 ರೂ., ಹಸಿಮೆಣಸಿನಕಾಯಿ 115 ರೂ., ಬೆಂಡೆಕಾಯಿ 55 ರೂಪಾಯಿಗೆ ಇದೆ. ಹಗಲಕಾಯಿ 35, ಸೋರೆಕಾಯಿ 40, ಗುಂಡು ಬದನೆಕಾಯಿ 39 ರೂ., ಎಲೆಕೋಸು 40 ರೂಪಾಯಿ ಇದೆ.