ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: 1 ವರ್ಷದಲ್ಲಿ 2 ಕೆರೆ ಸ್ವಚ್ಛಗೊಳಿಸಿದ ಬಿಬಿಎಂಪಿ, 200 ಕೆರೆ ಪುನರುಜ್ಜೀವನಕ್ಕೆ ಎಷ್ಟು ವರ್ಷ ಬೇಕು? ವಿಶೇಷ ವರದಿ

Bengaluru News: 1 ವರ್ಷದಲ್ಲಿ 2 ಕೆರೆ ಸ್ವಚ್ಛಗೊಳಿಸಿದ ಬಿಬಿಎಂಪಿ, 200 ಕೆರೆ ಪುನರುಜ್ಜೀವನಕ್ಕೆ ಎಷ್ಟು ವರ್ಷ ಬೇಕು? ವಿಶೇಷ ವರದಿ

ಬೆಂಗಳೂರಿನಲ್ಲಿ 2023ರಲ್ಲಿ ಬಿಬಿಎಂಪಿ ಪುನರುಜ್ಜೀವನಗೊಳಿಸಿದ್ದು 2 ಕೆರೆಗಳನ್ನು ಮಾತ್ರ! ಹಾಗಾದರೆ 200 ಕೆರೆಗಳನ್ನು ಸ್ವಚ್ಛಗೊಳಿಸಲು ಎಷ್ಟು ವರ್ಷಗಳು ಬೇಕಾದೀತು? ಒತ್ತುವರಿ ತೆರವು ವಿಳಂಬ, ಕೆರೆಗಳಿಗೆ ಹರಿಯುವ ತ್ಯಾಜ್ಯ ನಿಯಂತ್ರಿಸಲು ನಿರಾಸಕ್ತಿ ; ಕಾರಣಗಳೇನು? (ವರದಿ: ಎಚ್.ಮಾರುತಿ)

ಬೆಂಗಳೂರು ಕೆರೆ
ಬೆಂಗಳೂರು ಕೆರೆ (https://site.bbmp.gov.in/departmentwebsites/Lakes/)

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಯಾವ ಕೆಲಸ ಕೈಗೆತ್ತಿಕೊಂಡರೂ ಸಂಪೂರ್ಣವಾಗಿ ಮುಗಿಸುವುದಿಲ್ಲ ಎನ್ನುವುದಕ್ಕೆ ಹತ್ತಾರು ನಿದರ್ಶನಗಳನ್ನು ಕೊಡಬಹುದು. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬರುವುದಿಲ್ಲ, ಶಾಲೆಗಳನ್ನು ನಡೆಸಲು ಬರುವುದಿಲ್ಲ, ಸೊಳ್ಳೆ ನಿಯಂತ್ರಣ ಮಾಡಲು ಬರುವುದಿಲ್ಲ. ರಸ್ತೆ ಗುಂಡಿಗಳನ್ನಂತೂ ಮುಚ್ಚಲು ಬರುವುದೇ ಇಲ್ಲ ಎನ್ನುವುದು ಜಗಜ್ಜಾಹೀರಾಗಿದೆ. ಬಹುಶಃ ಕೆಲಸ ಆಗಲಿ ಆಗದಿರಲಿ ಐದಂಕಿ, ಆರಂಕಿ ಬಿಲ್ ಮಾಡುವುದರಲ್ಲಿ ಮಾತ್ರ ಸಿದ್ದಹಸ್ತರು ಎಂದು ಹೇಳದೆ ವಿಧಿಯಿಲ್ಲ.

ಟ್ರೆಂಡಿಂಗ್​ ಸುದ್ದಿ

ಬಿಬಿಎಂಪಿ ಅಸಾಮರ್ಥ್ಯಕ್ಕೆ ಹೊಸ ನಿದರ್ಶನವೊಂದು ಲಭ್ಯವಾಗಿದೆ. 2023ರಲ್ಲಿ ಕೇವಲ 2 ಕೆರೆಗಳನ್ನು ಮಾತ್ರ ಪುನರುಜ್ಜೀವನ ಮಾಡಿದೆ. 30 ಕೆರೆಗಳ ಪುನರುಜ್ಜೀವನ ಪ್ರಗತಿಯಲ್ಲಿದೆ ಎಂದು ಹೇಳಿಕೊಂಡಿದೆ. ಬೆಂಗಳೂರಿನಲ್ಲಿ 201 ಕೆರೆಗಳಿದ್ದು, 6,009.36 ಎಕರೆ ವಿಸ್ತೀರ್ಣ ಹೊಂದಿವೆ. ಬಹುತೇಕ ಕೆರೆಗಳು ಮಲಿನಗೊಂಡಿವೆ. ಅನೇಕ ಕೆರೆಗಳು ತ್ವರಿತವಾಗಿ ಪುನರುಜ್ಜೀವನಗೊಳಿಸಿದರೆ ಮಾತ್ರ ಉಳಿದುಕೊಳ್ಳುವ ಪರಿಸ್ಥಿತಿಯಲ್ಲಿವೆ. ಈ ಮಧ್ಯೆ ಬಿಬಿಎಂಪಿ ಕೆರೆಗಳನ್ನು ಡಿ ವರ್ಗ ಮತ್ತು ಇ ವರ್ಗ ಎಂದು ಪದೇ ಪದೇ ವರ್ಗೀಕರಣಗೊಳಿಸುತ್ತಿದೆ.

ಬಿಬಿಎಂಪಿಯಲ್ಲಿ ಕೆರೆಗಳ ಉಸ್ತುವಾರಿಗೆಂದೇ ಪ್ರತ್ಯೇಕ ಇಲಾಖೆ ಇದ್ದು, ಏನು ಮಾಡುತ್ತಿದೆ ಎನ್ನುವುದೇ ಅರ್ಥವಾಗುತ್ತಿಲ್ಲ. ವರ್ಷಕ್ಕೆ ಕೇವಲ 2 ಕೆರೆಗಳನ್ನು ಪುನರುಜ್ಜೀವನಗೊಳಿಸಿದರೆ ರಾಜ್ಯ ರಾಜಧಾನಿಯಲ್ಲಿರುವ ನೂರಾರು ಕೆರೆಗಳನ್ನು ಸುಧಾರಿಸಲು ಎಷ್ಟು ವರ್ಷಗಳು ಬೇಕಾದೀತು ಎಂದು ಪರಿಸರ ಹೋರಾಟಗಾರರು ಪ್ರಶ್ನಿಸುತ್ತಾರೆ.

ಈ ವರ್ಷದಲ್ಲಿ ಎರಡು ಕೆರೆಗಳನ್ನು ಪುನರುಜ್ಜೀವನಗೊಳಿಸಿದ್ದೇವೆ. 30 ಕೆರೆಗಳ ಪುನರುಜ್ಜೀವನ ಪ್ರಗತಿಯಲ್ಲಿದೆ. ಬೆರಟನ ಅಗ್ರಹಾರ ಮತ್ತು ಕೋಣನಕುಂಟೆ ಕೆರೆಗಳ ಪುನರುಜ್ಜೀವನ ಪೂರ್ಣಗೊಳಿಸಲಾಗಿದೆ ಎಂದು ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಟಿಸಿಡಿಎ)ದ ಅಸಾಮರ್ಥ್ಯವೂ ವಿಳಂಬಕ್ಕೆ ಕಾರಣವಾಗಿದೆ.

ಕೆರೆಗಳ ಪುನರುಜ್ಜೀವನ ವಿಳಂಬವಾಗಲು ಬಿಬಿಎಂಪಿ ಮಾತ್ರ ಕಾರಣವಲ್ಲ. ಕೇಂದ್ರ ಸರಕಾರದ ಪಾಲೂ ಇದರಲ್ಲಿದೆ. ಅಮೃತ ಸರೋವರ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ ಕೆರೆಗಳ ಪುನರುಜ್ಜೀವನಕ್ಕೆ ಅನುದಾನ ನೀಡುತ್ತಿದೆ. ಆದರೆ ಒತ್ತುವರಿ ತೆರವುಗೊಳಿಸಿದ್ದರೆ ಮಾತ್ರ ಅನುದಾನ ಲಭ್ಯವಾಗುತ್ತದೆ. ಈಗ ಇರುವ ನಿಯಮಾವಳಿಗಳ ಪ್ರಕಾರ ಒತ್ತುವರಿಯನ್ನು ತೆರವುಗೊಳಿಸಿದ್ದರೆ ಮಾತ್ರ ಪುನರುಜ್ಜೀವನ ಸಾಧ್ಯ. ಬಿಬಿಎಂಪಿ ಕೆರೆಗಳ ಸಮೀಕ್ಷೆ ನಡೆಸಲು ಪ್ರಯತ್ನ ನಡೆಸಿದ್ದರೂ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಬಿಬಿಎಂಪಿ 2016ರ ಸರ್ವೇ ಭೂಪಟವನ್ನು ಬಳಸುತ್ತಿದ್ದು ಇದು ಗೊಂದಲ ಸೃಷ್ಟಿಯಾಗಲು ಕಾರಣವಾಗಿದೆ.

ಒತ್ತುವರಿ ತೆರವು ವಿಳಂಬದಿಂದ ಪುನರುಜ್ಜೀವನವೂ ತಡವಾಗುತ್ತಿದೆ. ಕೆರೆಗಳ ಪುನರುಜ್ಜೀವನಕ್ಕೆ ಕಾರ್ಪೋರೇಟ್ ಸಾಮಾಜಿಕ ಜವಬ್ದಾರಿ ನಿಧಿ ಬಳಕೆ ಕುರಿತು ಸೂಕ್ತ ನಿರ್ದೇಶನಗಳಿಲ್ಲ. ಈ ನಿಧಿ ಬಳಕೆ ಕುರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇದ್ದು ತೆರವುಗೊಳಿಸಲು ಬಿಬಿಎಂಪಿ ಕ್ರಮ ಕೈಗೊಳ್ಳಬೇಕು.

ಕೆರೆಗಳ ಮಾಲಿನ್ಯ ಕುರಿತು ಹೇಳುವಂತೆಯೇ ಇಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಸ್ವಲ್ಪ ಚುರುಕಾದರೆ ಕೆರೆಗಳ ಮಾಲಿನ್ಯವನ್ನು ನಿಯಂತ್ರಿಸಬಹುದು. ಆದರೆ ಮಾಲಿನ್ಯ ಮಂಡಲಿಯನ್ನು ಕಾಣದ ಕೈಗಳು ನಿಯಂತ್ರಿಸುತ್ತಿವೆಯೇ ಎಂಬ ಶಂಕೆ ಉಂಟಾಗುತ್ತದೆ.

ಕೆರೆಗಳನ್ನು ಯಾರು ನಿರ್ವಹಿಸಬೇಕು ಎಂಬ ಬಗ್ಗೆಯೂ ತುಘಲಕ್ ದರ್ಬರ್ ನಡೆಯುತ್ತಿದೆ. ಉದಾಹರಣೆಗೆ ಕೆಂಗೇರಿ ಕೆರೆಯನ್ನು ಮೊದಲು ಅರಣ್ಯ ಇಲಾಖೆ ನಿರ್ವಹಿಸುತ್ತಿತ್ತು. ನಂತರ ಬಿಡಿಎಗೆ ಹಸ್ತಾಂರಿಸಲಾಯಿತು. ತದನಂತರ ಬಿಎಂಆರ್ ಸಿಎಲ್ ತೆಕ್ಕೆಗೆ ಹೋಯಿತು. ಇದೀಗ ಬಿಬಿಎಂಪಿ ಸುಪರ್ದಿಗೆ ಬಂದಿದೆ. ಹೀಗಾದರೆ ಯಾರನ್ನು ಹೊಣೆಗಾರಿಕೆ ಮಾಡಲು ಸಾಧ್ಯ ಎಂದು ಕೇಳಬೇಕಾಗುತ್ತದೆ. ಕೆರೆಗಳ ಪುನರುಜ್ಜೀವನಕ್ಕೆ ಬಿಡುಗಡೆಯಾಗುವ ಅನುದಾನ ಎಲ್ಲಿ ಹೋಗುತ್ತದೆ ಎನ್ನುವುದೇ ತಿಳಿಯುತ್ತಿಲ್ಲ. ಶೇ.20ರಷ್ಟೂ ಪುನರುಜ್ಜೀವನ ಆಗಿರುವುದಿಲ್ಲ ಎಂದು ಪರಿಸರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಉದಾಹರಣೆಗೆ ಹಲಗೆವಡೇರಹಳ್ಳಿ ಕೆರೆಯನ್ನು 2017ರಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳಿಸಲಾಯಿತು. ಇದೀಗ 2022ರಲ್ಲಿ ಮತ್ತೆ ಪುನರುಜ್ಜೀವನದ ನೆಪದಲ್ಲಿ ಕೆರೆಯ ಸುತ್ತ ಹಾಕಲಾಗಿದ್ದ ಕಲ್ಲುಗಳನ್ನು ತೆಗೆಯಲಾಗುತ್ತಿದೆ.

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಗತ್ಯ ಸಿಬ್ಬಂದಿ ಕೊರೆತೆ ಇದೆ. ಕೆರೆಗಳ ಪುನರುಜ್ಜೀವನ ಕೈಗೊಳ್ಳುವ ಗುತ್ತಿಗೆದಾರರಿಗೆ ಕಾಲಮಿತಿ ಇರುವುದಿಲ್ಲ. ಹೀಗಾಗಿ ಕೆಲಸ ಮುಂದೆ ಹೋಗುವುದೇ ಇಲ್ಲ. ಜಲತಜ್ಞರ ಸಹಕಾರದಿಂದ ಮಾತ್ರ ಕೆರೆಗಳ ಪುನರುಜ್ಜೀವನ ಸಾಧ್ಯ. ಜೊತೆಗೆ ಹೂಳೆತ್ತುವ ಕೆಲಸ ಮತ್ತು ಪುನರುಜ್ಜೀವನ ಕೆಲಸಗಳೆರಡೂ ವೈಜ್ಞಾನಿಕವಾಗಿ ಸಾಗಬೇಕು. ಆಗ ಸುಂದರ ಸ್ವಚ್ಚ ಕೆರೆಗಳನ್ನು ನೋಡಬಹುದು.

IPL_Entry_Point