Real Estate: ಬೆಂಗಳೂರಿನಲ್ಲಿ ಸೆಕೆಂಡ್‌ ಹ್ಯಾಂಡ್‌ ಮನೆ ಖರೀದಿಸಬಹುದೇ? ಹಳೆ ಮನೆ ಖರೀದಿಯ ಅನುಕೂಲ- ಅನಾನುಕೂಲ
ಕನ್ನಡ ಸುದ್ದಿ  /  ಕರ್ನಾಟಕ  /  Real Estate: ಬೆಂಗಳೂರಿನಲ್ಲಿ ಸೆಕೆಂಡ್‌ ಹ್ಯಾಂಡ್‌ ಮನೆ ಖರೀದಿಸಬಹುದೇ? ಹಳೆ ಮನೆ ಖರೀದಿಯ ಅನುಕೂಲ- ಅನಾನುಕೂಲ

Real Estate: ಬೆಂಗಳೂರಿನಲ್ಲಿ ಸೆಕೆಂಡ್‌ ಹ್ಯಾಂಡ್‌ ಮನೆ ಖರೀದಿಸಬಹುದೇ? ಹಳೆ ಮನೆ ಖರೀದಿಯ ಅನುಕೂಲ- ಅನಾನುಕೂಲ

Bengaluru Resale Property Buy Guide: 2024ರ ಹೊಸ ವರ್ಷದಲ್ಲಿ ಹೊಸ ಮನೆ ಖರೀದಿ ಬಹುತೇಕರ ಕನಸು. ಹಾಗಂತ, ಹಳೆ ಮನೆ ಖರೀದಿ ತಪ್ಪೇನಿಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಹೊಸ ಮನೆ ಖರೀದಿಸಲಾಗದವರು ಮರುಮಾರಾಟಕ್ಕಿಟ್ಟ ಮನೆ ಖರೀದಿಸಬಹುದು. ಆದರೆ, ಅದಕ್ಕೂ ಮೊದಲು ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ.

ಬೆಂಗಳೂರಿನಲ್ಲಿ ಸೆಕೆಂಡ್‌ ಹ್ಯಾಂಡ್‌ ಮನೆ ಖರೀದಿಸಬಹುದೇ? ಹಳೆ ಮನೆ ಖರೀದಿಯ ಅನುಕೂಲ- ಅನಾನುಕೂಲ
ಬೆಂಗಳೂರಿನಲ್ಲಿ ಸೆಕೆಂಡ್‌ ಹ್ಯಾಂಡ್‌ ಮನೆ ಖರೀದಿಸಬಹುದೇ? ಹಳೆ ಮನೆ ಖರೀದಿಯ ಅನುಕೂಲ- ಅನಾನುಕೂಲ

ಬೆಂಗಳೂರಿನ ಪ್ರತಿಷ್ಠಿತ ಬಿಲ್ಡರ್‌ ಒಬ್ಬರಿಗೆ ಕರೆ ಮಾಡಿದೆ. "ಬೆಂಗಳೂರಿನಲ್ಲಿ ಹಳೆ ಮನೆ ಖರೀದಿಸಬಹುದೇ? ರಿಸೇಲ್‌ ಮನೆ ಖರೀದಿ ಕುರಿತು ನಿಮ್ಮ ಅಭಿಪ್ರಾಯವೇನು?" ಈ ಪ್ರಶ್ನೆಗೆ ಅವರ ಉತ್ತರ ನನ್ನ ನಿರೀಕ್ಷೆಯಂತೆಯೇ ಇತ್ತು. "ರಿಸೇಲ್‌ ಪ್ರಾಪರ್ಟಿ ಖರೀದಿ ತಪ್ಪು ಅಂತ ಅಲ್ಲ. ನೋಡಿ ಸರ್‌, ಹಳೆ ಮನೆ ದರದಲ್ಲಿಯೇ ಈಗ ಬೆಂಗಳೂರಿನಲ್ಲಿ ಹೊಸ ಮನೆಗಳು ದೊರಕುತ್ತವೆ. ಹಳೆ ಮನೆ ಖರೀದಿಸಲು ಕಡಿಮೆಯೆಂದರೂ 40-60 ಲಕ್ಷ ರೂಪಾಯಿ ಬೇಕೇಬೇಕು. ಅದೇ ದರಕ್ಕೆ ಹೊಸ ಮನೆ ಖರೀದಿಸಬೇಕು. ಉದಾಹರಣೆಗೆ ನಮ್ಮದೇ ಪ್ರಾಪರ್ಟಿ ನೋಡಿ.... " ಬಳಿಕ ಅವರ ಸಂಸ್ಥೆಯ ಅಪಾರ್ಟ್‌ಮೆಂಟ್‌ ದರ 40 ಲಕ್ಷ ರೂಪಾಯಿಯಿಂದ ಆರಂಭವಾಗುವ ವಿವರ ನೀಡಿದರು. "ಅಂತಿಮವಾಗಿ ಹೊಸ ಮನೆ ಖರೀದಿಸಿದ ತೃಪ್ತಿ ನಿಮ್ಮಲ್ಲಿ ಇರುತ್ತದೆ" ಎಂದು ಅಭಿಪ್ರಾಯಪಟ್ಟರು.

ಸದ್ಯ ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ದರದಲ್ಲಿ ಬಿಲ್ಡರ್‌ಗಳು ಪ್ರಾಪರ್ಟಿ ನೀಡುತ್ತಿರುವುದರಿಂದ ಅವರ ಮಾತು ಸಂಪೂರ್ಣ ಸುಳ್ಳಲ್ಲ. ಬೆಂಗಳೂರಿನ ಹೊರವಲಯದಲ್ಲಿ ದೊಡ್ಡದೊಡ್ಡ ಮನೆಗಳು ಸ್ಪರ್ಧಾತ್ಮಕ ದರದಲ್ಲಿ ದೊರಕುತ್ತದೆ. ಆದರೆ, ಅದೇ ಸಮಯದಲ್ಲಿ ರಿಸೇಲ್‌ ಮನೆಗಳ ಮಾರ್ಕೆಟ್‌ ಕೂಡ ದೊಡ್ಡ ಮಟ್ಟದಲ್ಲಿ ಪ್ರಗತಿ ಕಾಣುತ್ತಿದೆ. (ಓದಿ: ಎಚ್‌ಟಿ ಕನ್ನಡ ರಿಯಲ್‌ ಎಸ್ಟೇಟ್‌ ಸುದ್ದಿಗಳು)

ಇತ್ತೀಚೆಗೆ ಬೆಂಗಳೂರಿನಲ್ಲಿ ರಿಸೇಲ್‌ ಪ್ರಾಪರ್ಟಿ ಖರೀದಿಸಿದ ಕೃಷ್ಣ ಮೂರ್ತಿ ಕೆ ಎಂಬವರ ಅಭಿಪ್ರಾಯ ಹೀಗಿದೆ. "60-70 ಲಕ್ಷ ಬಜೆಟ್‌ನಲ್ಲಿ ಬೆಂಗಳೂರು ನಗರದಲ್ಲಿ, ನಮಗೆ ಹತ್ತಿರವಿರುವಲ್ಲಿ ಒಳ್ಳೆಯ ಮನೆ ದೊರಕುತ್ತದೆ ಎಂದು ಹೇಳಲಾಗದು. ಹೊರವಲಯದಲ್ಲಿ ಒಳ್ಳೆಯ ಪ್ರಾಪರ್ಟಿ ದೊರಕಬಹುದು. ಆದರೆ, ಅಲ್ಲಿಂದ ನಿತ್ಯ ಹೋಗೋದು ಬರೋದು ಕಷ್ಟ. ಬೆಂಗಳೂರಿಗೆ ಪ್ರತಿನಿತ್ಯ ಸಾಕಷ್ಟು ಜನರು ಬರ್ತಾರೆ, ಹೋಗ್ತಾರೆ. ಕೆಲವರು ಫ್ಲಾಟ್‌ ಖರೀದಿಸಿ ಅನಿವಾರ್ಯವಾಗಿ ಮಾರಾಟ ಮಾಡಿ ಹೋಗಬೇಕಾಗುತ್ತದೆ. ಈ ಐಟಿ ಉದ್ಯೋಗಿಗಳು ದೊಡ್ಡ ಕನಸಿನಿಂದ ಮನೆ ಖರೀದಿಸ್ತಾರೆ. ವೈಯಕ್ತಿಕ ಅಥವಾ ಉದ್ಯೋಗ ಕಾರಣಗಳಿಂದ ಕೆಲವೇ ವರ್ಷಗಳಲ್ಲಿ ಮನೆ ಮಾರಾಟ ಮಾಡಿ ಬೇರೊಂದು ನಗರಕ್ಕೆ ಹೋಗಬೇಕಾಗುತ್ತದೆ. ಇಂತಹ ಮನೆಗಳು ನಗರದೊಳಗೆ ಸಿಕ್ಕರೆ ಲಾಭ. ಇಂಟೀರಿಯರ್‌ ಎಲ್ಲವನ್ನೂ ಚೆನ್ನಾಗಿ ಮಾಡಿರ್ತಾರೆ. ಸ್ವಲ್ಪ ಚೌಕಾಶಿ ಮಾಡಿದ್ರೆ ಒಳ್ಳೆ ರೇಟ್‌ನಲ್ಲಿ ದೊರಕುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.

ಮರುಮರಾಟದ ಮನೆ ಖರೀದಿಯ ಲಾಭಗಳು

ಬೆಂಗಳೂರಿನಲ್ಲಿ ಹಳೆ ಮನೆ ಖರೀದಿಸುವುದರಿಂದ ಸಾಕಷ್ಟು ಲಾಭವಿದೆ ಎಂದು ಸಾಕಷ್ಟು ಜನರು ಅಭಿಪ್ರಾಯಪಡುತ್ತಾರೆ. ಸೆಕೆಂಡರಿ ಮಾರ್ಕೆಟ್‌ನಿಂದ ಮನೆ ಖರೀದಿಸಿದ್ರೆ ಹಲವು ಲಕ್ಷ ರೂಪಾಯಿ ಉಳಿತಾಯ ಮಾಡಬಹುದು. "ನೋಡಿ ಸರ್‌, ನೀವು ಹೊಸ ಕಾರು ತೆಗೆದುಕೊಳ್ಳಬೇಕೆಂದರೆ ಹತ್ತು ಲಕ್ಷ ರೂಪಾಯಿ ನೀಡಬೇಕು. ಅದೇ ದರಕ್ಕೆ ನಿಮಗೆ 20 ಲಕ್ಷ ರೂಪಾಯಿ ಮೌಲ್ಯದ ಮೂರ್ನಾಲ್ಕು ವರ್ಷ ಬಳಕೆ ಮಾಡಿದ ಒಳ್ಳೆಯ ಬ್ರಾಂಡೆಡ್‌ ಸೆಕೆಂಡ್‌ ಹ್ಯಾಂಡ್‌ ಕಾರು ದೊರಕೋದಿಲ್ವ?" ಎಂದು ಬೆಂಗಳೂರಿನ ರಿಸೇಲ್‌ ರಿಯಲ್‌ ಎಸ್ಟೇಟ್‌ ಬ್ರೋಕರ್‌ವೊಬ್ಬರು ಅಭಿಪ್ರಾಯಪಟ್ಟರು. "ಬೆಂಗಳೂರಿನಲ್ಲಿ ಸೆಕೆಂಡ್‌ ಹ್ಯಾಂಡ್‌ ಮನೆ ಖರೀದಿಸಬೇಕೆಂದಾದರೆ ಅದು ಬೆಂಗಳೂರಿನ ಯಾವ ಸ್ಥಳದಲ್ಲಿದೆ(ಲೊಕೆಷನ್‌)? ಕಟ್ಟಡದ ಗುಣಮಟ್ಟ ಹೇಗಿದೆ? ಇಂಟೀರಿಯರ್‌ ಹೇಗಿದೆ? ಹೊಸ ಮನೆ ಖರೀದಿಸುವ ಬದಲು ಈ ಹಳೆ ಮನೆ ಖರೀದಿಸಿದರೆ ನಿಮಗೆ ಎಷ್ಟು ಲಕ್ಷ ಲಾಭವಾಗುತ್ತದೆ? ಹಳೆ ಮನೆ ನಿಮಗೆ ಎಷ್ಟು ಬೇಗ ಹಸ್ತಾಂತರವಾಗುತ್ತದೆ? ಕಾನೂನು ಅಂಶಗಳು, ತೊಡಕುಗಳು ಇವೆಯೇ? ಇತ್ಯಾದಿ ಹಲವು ಅಂಶಗಳನ್ನು ಪರಿಶೀಲಿಸಬೇಕು" ಎಂದು ಅವರು ಸಲಹೆ ನೀಡಿದ್ದಾರೆ.

- ಹಳೆ ಮನೆ ಖರೀದಿಯಿಂದ ಹಣಕಾಸು ವಿಚಾರದಲ್ಲಿ ಸಾಕಷ್ಟು ಲಾಭವಾಗುತ್ತದೆ. ಹೊಸ ಮನೆಗಿಂತ ತುಂಬಾ ಕಡಿಮೆ ದರದಲ್ಲಿ ದೊರಕುತ್ತದೆ. ಇದೇ ಸಮಯದಲ್ಲಿ ಹಳೆ ಮನೆ ಕಟ್ಟಿರುವ ಭೂಮಿಯ ಮೌಲ್ಯವೂ ಹೆಚ್ಚಿರುತ್ತದೆ. ಕಟ್ಟಡದ ವಯಸ್ಸು, ಇಂಟೀರಿಯರ್‌, ಕಟ್ಟಡದ ಗುಣಮಟ್ಟದ ಆಧಾರದಲ್ಲಿ ಚೌಕಾಶಿ ಮಾಡುವ ಅವಕಾಶ ಇರುತ್ತದೆ.

- ಹಳೆ ಮನೆ ಖರೀದಿಯ ಇನ್ನೊಂದು ಲಾಭವೆಂದರೆ ಬೆಂಗಳೂರಿನ ನಗರದ ಪ್ರಮುಖ ಭಾಗಗಳಲ್ಲಿ ಈ ಮನೆಗಳು ಇರಬಹುದು. ಈಗ ಹೊಸ ಮನೆಗಳೆಲ್ಲವೂ ನಗರದಿಂದ ಸಾಕಷ್ಟು ದೂರದಲ್ಲಿರುತ್ತವೆ. ಹೊರವಲಯಕ್ಕಿಂತ ಬೆಂಗಳೂರು ನಗರದೊಳಗೆ ಸೂರು ಹೊಂದುವ ಕನಸು ಈ ಮೂಲಕ ಈಡೇರುತ್ತದೆ. ಜತೆಗೆ, ಸುತ್ತಮುತ್ತ ಸಾಕಷ್ಟು ಸೌಕರ್ಯಗಳೂ ಇರುತ್ತವೆ.

- ಹಳೆ ಮನೆಗಳು ಸಾಮಾನ್ಯವಾಗಿ ಈಗಿನಂತೆ ಇಕ್ಕಟ್ಟಾಗಿ ಕಟ್ಟಿರುವುದಿಲ್ಲ. ಸಾಕಷ್ಟು ಸ್ಥಳಾವಕಾಶ ಹೊಂದಿರುತ್ತವೆ. ರೆಸಿಡೆನ್ಸಿಯಲ್‌ ಸ್ಥಳಗಳಲ್ಲಿ ದೊಡ್ಡ ಗಾತ್ರ, ವಿಶಾಲ ಸ್ಥಳಾವಕಾಶದ ಮನೆ ಸಿಕ್ಕರೆ ಅದಕ್ಕಿಂತ ಸುಖ ಇನ್ನೊಂದಿಲ್ಲ.

- ನಿರ್ಮಾಣದ ಹಂತದಲ್ಲಿರುವ ಮನೆ ಖರೀದಿಸಿದರೆ ಆ ಮನೆ ಕೈ ಸೇರಲು ಕಾಯಬೇಕು. ರಿಸೇಲ್‌ ಮನೆಯಲ್ಲಿ ಇಂತಹ ಕಾಯುವಿಕೆ ಬೇಕಿಲ್ಲ. ಈ ಸಮಯದಲ್ಲಿ ಇಎಂಐ ಕಟ್ಟುವ ಅಗತ್ಯವೂ ಇಲ್ಲ.

- ಸೆಕೆಂಡ್‌ ಹ್ಯಾಂಡ್‌ ಮನೆಗಳಲ್ಲಿ ಅಮೆನಿಟೀಸ್‌ ಅಥವಾ ಸೌಕರ್ಯಗಳು ಈಗಾಗಲೇ ಲಭ್ಯ ಇರುತ್ತವೆ. ಗ್ಯಾಸ್‌ ಕನೆಕ್ಷನ್‌, ವಿದ್ಯುತ್‌, ನೀರಿನ ಸೌಲಭ್ಯ ಇತ್ಯಾದಿಗಳನ್ನು ಈ ಹಿಂದಿನ ಮನೆಯ ಓನರ್‌ ಮಾಡಿರುತ್ತಾರೆ. ಈ ತಾಪತ್ರಯ ತಪ್ಪುತ್ತದೆ. ಆದರೆ, ಹಳೆ ಮನೆಗೆ ಹೋಗುವ ಮುನ್ನ ಕೊಂಚ ರಿಪೇರಿ ಕೆಲಸ ನಿಮಗೆ ಕಾಯುತ್ತ ಇರಬಹುದು.

- ಹಳೆ ಮನೆ ಖರೀದಿಗೆ ಗೃಹ ಸಾಲ ಮಾಡಿದ್ದರೆ ಅದಕ್ಕೂ ನಿಮಗೆ ಆದಾಯ ತೆರಿಗೆ ಕಾಯಿದೆಯ 80 ಸಿ ಅನ್ವಯ ಒಂದು ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ದೊರಕಬಹುದು. ರಿಸೇಲ್‌ ಮನೆಗಳ ಗೃಹಸಾಲ ಬಡ್ಡಿದರದಲ್ಲಿ ಸೆಕ್ಷನ್‌ 24ಬಿಯಡಿ ಗರಿಷ್ಠ 5 ಲಕ್ಷ ರೂಪಾಯಿವರೆಗೆ ವಿನಾಯಿತಿ ದೊರಕುತ್ತದೆ.

ಹಳೆ ಮನೆ ಖರೀದಿ ಅನಾನುಕೂಲ

- ಹಳೆ ಮನೆ ಖರೀದಿಸುವ ಮೊದಲು ಕಟ್ಟಡದ ವಯಸ್ಸಿನ ಕುರಿತು ಗಮನ ಹರಿಸಬೇಕು. ಐದರಿಂದ ಹತ್ತು ವರ್ಷ ಹಳೆಯ ಕಟ್ಟಡ ಖರೀದಿಸುವುದು ಉತ್ತಮ. ಹತ್ತು ವರ್ಷಕ್ಕಿಂತ ಹಳೆಯ ಕಟ್ಟಡ ಖರೀದಿಸುವುದು ಉತ್ತಮವಲ್ಲ ಅನ್ನೋದು ರಿಯಲ್‌ ಎಸ್ಟೇಟ್‌ ತಜ್ಞರ ಅಭಿಪ್ರಾಯ.

- ಹಳೆ ಮನೆ ಹಳೆ ಓನರ್‌ನ ಟೇಸ್ಟ್‌ಗೆ ತಕ್ಕಂತೆ ಇರುತ್ತದೆ. ನಿಮ್ಮ ಕನಸಿನ ಮನೆಯ ನಿರೀಕ್ಷೆಯಂತೆ ಇರದು.

- ಕೆಲವೊಮ್ಮೆ ಹಳೆ ಮನೆ ಖರೀದಿಸುವಾಗ ಹಳೆ ಓನರ್‌ ಸಾಕಷ್ಟು ಬಾಕಿ ಉಳಿಸಿರಬಹುದು. ಮೇಂಟೆನ್ಸ್‌, ಸೊಸೈಟಿ ಮೆಂಬರ್‌ಶಿಪ್‌ ಇತ್ಯಾದಿ ಬಿಲ್‌ ಕಟ್ಟದೆ ಇರಬಹುದು. ಇದೆಲ್ಲವನ್ನೂ ಕ್ಲಿಯರ್‌ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

- ಹಳೆ ಮನೆಯಲ್ಲಿ ನಿಮಗೆ ಭವಿಷ್ಯದಲ್ಲಿ ಹಲವು ನವೀಕರಣ ವೆಚ್ಚ ಉಂಟಾಗಬಹುದು. ಪೇಂಟಿಂಗ್‌, ಫ್ಲೋರಿಂಗ್‌, ಪ್ಲಂಬಿಂಗ್‌ ಇತ್ಯಾದಿಗಳು ಸಣ್ಣಪುಟ್ಟ ವಿಷಯಗಳಂತೆ ಕಂಡರೂ ಕಿಸೆಗೆ ದೊಡ್ಡ ಹೊಡೆತ ನೀಡಬಲ್ಲವು.

- ಹಳೆ ಮನೆಗೆ ಅಥವಾ ರಿಸೇಲ್‌ ಮನೆಗೆ ಗೃಹ ವಿಮೆ ಮೌಲ್ಯ ಕಡಿಮೆ ಇರುತ್ತದೆ. ಕಟ್ಟಡದ ವಯಸ್ಸಿನ ಆಧಾರದಲ್ಲಿ ವಿಮಾ ಕಂಪನಿಗಳು ವಿಮೆ ನೀಡುತ್ತವೆ.

- ಹಳೆ ಮನೆ ಖರೀದಿಸಲು ಗೃಹ ಸಾಲ ಬಯಸಿದರೆ ಹೆಚ್ಚು ಡೌನ್‌ಪೇಮೆಂಟ್‌ ನೀಡಬೇಕಾಗುತ್ತದೆ. ಹೊಸ ಮನೆ ಖರೀದಿಸಲು ಹೋದರೆ ಮನೆ ಮೌಲ್ಯದ ಶೇಕಡ 5, ಶೇಕಡ 10 ಡೌನ್‌ಪೇಮೆಂಟ್‌ ಆಫರ್‌ ಕೂಡ ಬ್ಯಾಂಕ್‌ಗಳು ನೀಡುತ್ತವೆ.

ಹಳೆ ಮನೆ ಖರೀದಿ- ಚೆಕ್‌ಲಿಸ್ಟ್‌

- ಹಳೆ ಮನೆಯ ದಾಖಲೆಗಳನ್ನು ಲಾಯರ್‌ ಮುಖಾಂತರ ಪರಿಶೀಲಿಸಿಕೊಳ್ಳಿ. ಮನೆಯ ಮಾಲಿಕತ್ವದ ಒಂದು ಪ್ರತಿ ನಿಮ್ಮಲ್ಲಿ ಇರಲಿ.

- ಮನೆ ಮಾಲೀಕರ ನಡುವೆ ಆಸ್ತಿ ವರ್ಗಾವಣೆಗೆ ಡೆವಲಪರ್‌ಗಳು ಶುಲ್ಕ ವಿಧಿಸಬಹುದು.

- ಹಳೆ ಮನೆ ಡೀಲ್‌ನಲ್ಲಿ ಬ್ರೋಕರ್‌ ಪಾಲ್ಗೊಳ್ಳುವಿಕೆ ಇದ್ದರೆ ಮೋಸದ ವ್ಯವಹಾರ ನಡೆಯದಂತೆ ಎಚ್ಚರಿಕೆ ವಹಿಸಿ.

- ಮನೆ ಎಷ್ಟು ಸುಸ್ಥಿತಿಯಲ್ಲಿದೆ ಎಂದು ವೃತ್ತಿಪರರ ನೆರವಿನಿಂದ ತಿಳಿದುಕೊಳ್ಳಿ.

- ಫರ್ನಿಸ್ಡ್‌ ಮನೆ ಖರೀದಿಸಿದ್ದರೆ ಸಂಬಂಧಪಟ್ಟ ಎಲ್ಲಾ ವಾರೆಂಟಿ ಪಡೆದುಕೊಳ್ಳಿ.

- ಮನೆಯ ನೆರೆಹೊರೆಯವರ ಜತೆ ಮಾತನಾಡಿ. ಆಗ ನೀವು ಖರೀದಿಸಲಿರುವ ಪ್ರಾಪರ್ಟಿಗೆ ಸಂಬಂಧಪಟ್ಟ ಒಳಿತು ಕೆಡುಕುಗಳ ಕುರಿತು ಇನ್ನಷ್ಟು ಸ್ಪಷ್ಟತೆ ದೊರಕುತ್ತದೆ.

  • ಲೇಖನ: ಪ್ರವೀಣ್‌ ಚಂದ್ರ ಪುತ್ತೂರು

 

Whats_app_banner