ಬೆಂಗಳೂರು ಮತಗಟ್ಟೆಯಲ್ಲಿ ಹೃದಯಘಾತದಿಂದ ಕುಸಿದ ಬಿದ್ದ ಮಹಿಳೆ, CPR ಮಾಡಿ ಪ್ರಾಣ ಉಳಿಸಿದ ವೈದ್ಯ, ಏನಿದು CPR? ಇಲ್ಲಿದೆ ವಿವರ
ಲೋಕಸಭಾ ಚುನಾವಣೆಯ ಮತದಾನ ಸಂದರ್ಭದಲ್ಲಿ ಬೆಂಗಳೂರು ಮತಗಟ್ಟೆಯಲ್ಲಿ ಹೃದಯಘಾತದಿಂದ ಕುಸಿದ ಬಿದ್ದ ಮಹಿಳೆಗೆ CPR ಮಾಡಿ ವೈದ್ಯರೊಬ್ಬರು ಪ್ರಾಣ ಉಳಿಸಿದರು. ಏನಿದು CPR? ಇಲ್ಲಿದೆ ಆ ವಿವರ.
ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆಯ ಮೊದಲ ಹಂತದ ಮತದಾನದ ವೇಳೆ (ಏಪ್ರಿಲ್ 26) ಬೆಂಗಳೂರಿನ ಮತಗಟ್ಟೆಯಲ್ಲಿ ಮತದಾನಕ್ಕೆ ಸರದಿ ನಿಂತಿದ್ದ ಮಹಿಳೆ ಕುಸಿದು ಬಿದ್ದಾಗ, ಅಲ್ಲೇ ಇದ್ದ ಡಾಕ್ಟರ್ ಅವರಿಗೆ ಸಿಪಿಆರ್ ನೀಡಿ ಜೀವ ರಕ್ಷಿಸಿದ ವಿದ್ಯಮಾನ ನಡೆದಿದೆ. ಡಾ. ಗಣೇಶ್ ಶ್ರೀನಿವಾಸ್ ಪ್ರಸಾದ್ ಈ ರೀತಿ ಸಿಪಿಆರ್ ಮಾಡಿದವರು. ಮೂತ್ರಪಿಂಡ ತಜ್ಞ ಮತ್ತು ಟ್ರಾನ್ಸ್‌ಪ್ಲಾಂಟ್ ಫಿಸಿಷಿಯನ್ ಆಗಿರುವ ಡಾ.ಗಣೇಶ್ ಶ್ರೀನಿವಾಸ ಪ್ರಸಾದ್ ಕೂಡ ಮತದಾನ ಮಾಡುವುದಕ್ಕೆಂದು ಅದೇ ಮತಗಟ್ಟೆಯಲ್ಲಿ ಸರದಿಯಲ್ಲಿ ನಿಂತಿದ್ದರು. ಮಹಿಳೆ ಬಿದ್ದ ಕೂಡಲೇ ಅದು ಅವರ ಗಮನಕ್ಕೂ ಬಂದಿದ್ದು, ಕೂಡಲೇ ಸ್ಪಂದಿಸಿ ಅಗತ್ಯ ಪ್ರಥಮ ಚಿಕಿತ್ಸೆ ನೀಡಿದರು.
ಅವರು ಈ ವಿಚಾರವನ್ನು ಟ್ವೀಟ್ ಮಾಡಿದ್ದು, “ನಾನು ಸರದಿಯಲ್ಲಿ ಕಾಯುತ್ತಿರುವಾಗ, ನನ್ನ ಮುಂದೆ ಇದ್ದ ಒಬ್ಬ ಮಹಿಳೆಗೆ ಹೃದಯ ಸ್ತಂಭನವಾಗಿತ್ತು. ನಾಡಿಮಿಡಿತ ಇರಲಿಲ್ಲ. ನಾನು ತಕ್ಷಣ ಸಿಪಿಆರ್ ಪ್ರಾರಂಭಿಸಿದೆ. ಅದೃಷ್ಟವಶಾತ್ ಆಕೆ ಕೆಲವೇ ನಿಮಿಷಗಳಲ್ಲಿ ಸ್ಪಂದಿಸಿದರು” ಎಂದು ಬರೆದುಕೊಂಡಿದ್ದಾರೆ.
ಅವರು ಟ್ವೀಟ್ ಜೊತೆಗೆ ಮಹಿಳೆ ನೆಲದ ಮೇಲೆ ಮಲಗಿರುವ ಫೋಟೋ ಮತ್ತು ಪೊಲೀಸರು ಮತ್ತು ಇತರರು ಸ್ಟ್ರಚರ್‌ನಲ್ಲಿ ಆಕೆಯನ್ನು ಮಲಗಿಸಲು ನೆರವಾದ ವಿಡಿಯೋ ಶೇರ್ ಮಾಡಿದ್ದಾರೆ.
ಬೆಂಗಳೂರು ಮತಗಟ್ಟೆಯಲ್ಲಿ ಕುಸಿದ ಮಹಿಳೆ; ಡಾ. ಗಣೇಶ ಶ್ರೀನಿವಾಸ ಪ್ರಸಾದ್ ಅವರ ವಿಡಿಯೋ
ಬೆಂಗಳೂರಿನಲ್ಲಿ ಸುಡುಬಿಸಿಲಿನ ನಡುವೆ, ರಣಬಿಸಿಲಿನ ತಾಪ ಸಹಿಸಿಕೊಂಡು ಮತದಾರರು ಮತಗಟ್ಟೆಗೆ ತಲುಪಿದ್ದರು. ಮತದಾನ ಮಾಡಲು ಸರದಿ ನಿಂತಿದ್ದಾಗ ಈ ಘಟನೆ ನಡೆದಿದೆ.
“ಭಾರತೀಯ ಹವಾಮಾನ ಇಲಾಖೆಯು ಬೆಂಗಳೂರನ್ನು ಶಾಖದ ಅಲೆ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಸೇರಿಸದಿದ್ದರೂ, ನಗರವು ಶಾಖದ ಅಲೆಯ ಪರಿಸ್ಥಿತಿಗಳಲ್ಲಿ ಒಂದು ಮಾನದಂಡವನ್ನು ದಾಟಿದೆ. ಅಂದರೆ, ಬೆಂಗಳೂರಿನ ತಾಪಮಾನವು ಸಾಮಾನ್ಯ ತಾಪಮಾನದಿಂದ ಕನಿಷ್ಠ 4.5 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚಾಗಿದೆ” ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಎ ಪ್ರಸಾದ್ ಅವರು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಏಪ್ರಿಲ್ ತಿಂಗಳಲ್ಲಿ ಐಟಿ ರಾಜಧಾನಿ ಬೆಂಗಳೂರಲ್ಲಿ ದಿನ ನಿತ್ಯದ ಉಷ್ಣಾಂಶವು ಸಾಮಾನ್ಯ ಉಷ್ಣಾಂಶಕ್ಕಿಂತ ಹೆಚ್ಚೇ ದಾಖಲಾಗುತ್ತ ಬಂದಿದೆ. ಇದೇ ಕಾರಣಕ್ಕೆ ಅಪರಾಹ್ನ 3 ಗಂಟೆ ತನಕ ಯಾರೂ ಹೊರಗೆ ಬರಬೇಡಿ ಎಂಬ ಸಲಹೆಯನ್ನು ಹವಾಮಾನ ಇಲಾಖೆ ಸಾರ್ವಜನಿಕರಿಗೆ ನೀಡಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾಗಿ ವರದಿ ಹೇಳಿದೆ.
ದಕ್ಷಿಣ ಕರ್ನಾಟಕದ 14 ಜಿಲ್ಲೆಗಳಲ್ಲಿ ನಿನ್ನೆ (ಏಪ್ರಿಲ್ 26) ಮತದಾನ ನಡೆದಿತ್ತು. ದೇಶದಲ್ಲಿ ಇದು ಎರಡನೇ ಹಂತದ ಮತ್ತು ರಾಜ್ಯದಲ್ಲಿ ಮೊದಲ ಹಂತದ ಮತದಾನವಾಗಿತ್ತು. ನಿಧಾನಗತಿಯ ಮತದಾನ ಪ್ರಮಾಣ ಮಧ್ಯಾಹ್ನ ನಂತರ 3 ಗಂಟೆಗೆ ಶೇಕಡ 50 ದಾಟಿತ್ತು. ಬೆಂಗಳೂರಿನಲ್ಲಿ ಮತಗಟ್ಟೆಗಳ ಎದುರಷ್ಟೇ ಅಲ್ಲ, ರೆಸ್ಟೋರೆಂಟ್‌ಗಳ ಎದುರು ಕೂಡ ಜನರು ಉಚಿತ ಆಹಾರ ಪಡೆಯಲು ಸರದಿ ನಿಂತಿದ್ದರು.
ಏನಿದು ಸಿಪಿಆರ್
ಸಿಪಿಆರ್ ಎಂದರೆ ಕಾರ್ಡಿಯೋ ಪಲ್ಮನರಿ ರಿಸಸೈಟೇಶನ್ ಅಥವಾ ಹೃದಯ ಶ್ವಾಸಕೋಶದ ಪುನರುಜ್ಜೀವನ ಎಂದು ಹೇಳುತ್ತಾರೆ. ಹೃದಯ ಸ್ತಂಭನ ಉಂಟಾದಾಗ ಅಂದರೆ, ವ್ಯಕ್ತಿಯ ಹೃದಯವು ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗದಿದ್ದಾಗ, ಅವರ ಹೃದಯ ಮತ್ತೆ ಕೆಲಸ ಮಾಡುವಂತೆ ಮಾಡುವುದಕ್ಕೆ ಪ್ರಯತ್ನಿಸುವ ಪ್ರಕ್ರಿಯೆ ಇದು. ಇದರ ಮೂಲಕ ಅವರ ಜೀವವನ್ನು ಉಳಿಸುವ ಸಾಧ್ಯತೆ ಇದೆ. ಇದನ್ನು ಯಾರು ಬೇಕಾದರೂ ಕಲಿಯಬಹುದು. ಅಷ್ಟು ಸರಳ ತಂತ್ರ. ಇದರಲ್ಲಿ ಏಳು ಹಂತಗಳಿವೆ.
ಈ ರೀತಿ ಯಾರಾದರೂ ಕುಸಿದು ಬಿದ್ದು ಹೃದಯಸ್ತಂಭನ ಸಂಭವಿಸಿದೆ ತುರ್ತಾಗಿ 108 ಕರೆ ಮಾಡಬೇಕು. ಅಷ್ಟೇ ಅಲ್ಲ, ಪ್ರಥಮ ಚಿಕಿತ್ಸೆಯಾಗಿ ಸಿಪಿಆರ್ ನಡೆಸಬೇಕು. ಸಿಪಿಆರ್ ನಡೆಸುವುದಕ್ಕೆ ಅಗತ್ಯ ತರಬೇತಿಯನ್ನು ಪಡೆಯಬೇಕಾದ್ದು ಅವಶ್ಯ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ಬೆಂಗಳೂರು ಟ್ರಾಫಿಕ್ ನೋಟ; ಸಿಗ್ನಲ್‌ನಲ್ಲಿ ಕಾಣಸಿಕ್ಕಿತು ಸ್ಕೂಟರ್‌ನಲ್ಲಿ ಕುಳಿತು ಝೂಮ್ ಮೀಟಿಂಗ್ ದೃಶ್ಯ, ವಿಡಿಯೋ ವೈರಲ್
2) ‘ನನಗೆ ಇವ್ನೇ ಸಾಕು, ಮದ್ವೆ ಬೇಡ’ ಎಂದ ನಟಿ ಬಾಳಲ್ಲೀಗ ಬ್ರೇಕಪ್ ಬಿರುಗಾಳಿ! ಮತ್ತೆ ತಾಳ ತಪ್ಪಿತು ಶ್ರುತಿ ಹಾಸನ್ ಲೀವ್ ಇನ್ ಲೈಫ್- ವಿವರ ವರದಿ
3) ತಮಿಳಲ್ಲಿ ಭಾಷಣ ಮಾಡಿದ ಶಿವಣ್ಣನಿಗೆ ‘ನೀವು ಕರುನಾಡ ದೊರೆಯಲ್ಲ, ಕರುನಾಡಿಗೇ ದೊಡ್ಡ ಹೊರೆ’ ಎಂದು ಟೀಕೆ VIDEO
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.