ಕನ್ನಡ ಸುದ್ದಿ  /  ಕರ್ನಾಟಕ  /  Dakshin Kannada News: ದಕ್ಷಿಣ ಕನ್ನಡದ ಬೋರ್ ವೆಲ್ ಗಳಲ್ಲಿ ಬರ್ತಿದೆ ಕೆಂಪುಮಿಶ್ರಿತ ನೀರು, ಕುಸಿಯುತ್ತಿದೆಯೇ ಅಂತರ್ಜಲ?

Dakshin Kannada News: ದಕ್ಷಿಣ ಕನ್ನಡದ ಬೋರ್ ವೆಲ್ ಗಳಲ್ಲಿ ಬರ್ತಿದೆ ಕೆಂಪುಮಿಶ್ರಿತ ನೀರು, ಕುಸಿಯುತ್ತಿದೆಯೇ ಅಂತರ್ಜಲ?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆಗೆ ಮುನ್ನವೇ ಅಂತರ್ಜಲ ಕಡಿಮೆಯಾಗಿ ಮಣ್ಣು ನೀರು ಕೊಳವೆ ಮೂಲಕ ಹರಿಯುತ್ತಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.ವರದಿ: ಹರೀಶ್‌ ಮಾಂಬಾಡಿ. ಮಂಗಳೂರು

ಕೊಳವೆಯಲ್ಲಿ ಹರಿಯುತ್ತಿದೆ ಕೆಂಪು ನೀರು
ಕೊಳವೆಯಲ್ಲಿ ಹರಿಯುತ್ತಿದೆ ಕೆಂಪು ನೀರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವ ನದಿಗಳಾದ ನೇತ್ರಾವತಿ, ಕುಮಾರಧಾರಾ, ಫಲ್ಗುಣಿ ನದಿಗಳನ್ನು ಮೇಲ್ನೋಟದಲ್ಲಿ ಗಮನಿಸಿದರೆ ಎಂದಿಗಿಂತ ಈ ಬಾರಿ ಹರಿಯುವಿಕೆ ಇರುವ ಕಾರಣ ಮುಂದಿನ ಏಪ್ರಿಲ್ ನಲ್ಲಿ ನೀರಿಗೆ ಕೊರತೆ ಆಗಲಿಕ್ಕಿಲ್ಲ ಎಂದು ಅಧಿಕಾರಿಗಳು ಭಾವಿಸಿದರೆ, ಗ್ರಾಮೀಣ ಪ್ರದೇಶಗಳ ಸ್ಥಿತಿಯೇ ಬೇರೆ. ಮಂಗಳೂರು ಹೊರವಲಯದ ಸುಜೀರ್, ಅಬ್ಬೆಟ್ಟುವಿನಂಥ ಪ್ರದೇಶದಲ್ಲಿ ಬೋರ್ ವೆಲ್ ನಲ್ಲೇ ಕೆಂಪುಮಿಶ್ರಿತ ನೀರು ಬರುತ್ತಿದ್ದು, ಇದು ಅಂತರ್ಜಲ ಕುಸಿತದ ಲಕ್ಷಣ ಎಂದು ವಿಶ್ಲೇಷಿಸಲಾಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬೋರ್ ವೆಲ್ ಗಳು ಬತ್ತಿ ಹೋಗುತ್ತಿರುವ ವರ್ತಮಾನಗಳು ಒಂದೊಂದಾಗಿಯೇ ಕೇಳಲಾರಂಭಿಸಿವೆ. ಹಾಗೆಂದು ಕುಡಿಯಲು ಮೈಲುಗಟ್ಟಲೆ ಕೊಡಪಾನ ಹಿಡಿದುಕೊಂಡು ಹೋಗುವಂಥ ಸನ್ನಿವೇಶವಿಲ್ಲ. ಆದರೂ ಇವತ್ತಲ್ಲ, ನಾಳೆ ಹಾಗಾಗಬಹುದು ಎಂಬ ಆತಂಕ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ಕೆಲವು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ. ಮಂಗಳೂರು ಹೊರವಲಯದ ಪುದು ಗ್ರಾಮದಲ್ಲಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಮಾರುಕಟ್ಟೆಯ ಬಾಟಲಿ ನೀರನ್ನೇ ಬಳಸುವ ಪರಿಸ್ಥಿತಿ ಎದುರಾಗಿದೆ. ಹಾಗೂ ಮೇರಮಜಲು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಬಾವಿಯಿಂದ ಕೆಂಪು ಬಣ್ಣದ ನೀರು

ಪುದು ಗ್ರಾಮದಲ್ಲಿ ನದಿಗೆ ಸಮೀಪವಾಗಿ ಬಾವಿಯಿಂದ ನೀರು ಟ್ಯಾಂಕಿಗೆ ಪೂರೈಕೆಯಾಗುತ್ತಿದ್ದು, ಕಳೆದ ಒಂದು ತಿಂಗಳಿನಿಂದ ಈ ಬಾವಿಯಲ್ಲಿ ಮಣ್ಣು ಮಿಶ್ರಿತ ಕೆಂಪು ಬಣ್ಣದ ನೀರು ಸರಬಾರಾಜಾಗುತ್ತಿದ್ದು, ಗ್ರಾಮಸ್ಥರ ಒತ್ತಾಯದ ಮೇರೆಗೆ ಆ ನೀರಿನ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ನೀರು ಮಲಿನವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೇ ದೃಢಪಡಿಸಿದೆ. ಜೊತೆಗೆ ಹತ್ತಿರದಲ್ಲಿರುವ ಕೊಳವೆ ಬಾವಿಯ ಪಂಪ್ ಹಾಳಾಗಿದ್ದು ನೀರು ಬರುತ್ತಿಲ್ಲ. ಹೀಗಾಗಿ ಅಲ್ಲಿನ ಜನರು ಕುಡಿಯುವ ನೀರನ್ನು ಮಾರ್ಕೆಟ್ ನಿಂದ ಹಣಕೊಟ್ಟು ತರುವಂತಾಗಿದೆ. ಪಂಚಾಯತ್ ವತಿಯಿಂದ ಹೊಸದಾಗಿ ಕೊಳವೆ ಬಾವಿ ನಿರ್ಮಿಸಿದರೂ ಅದರಿಂದ ನೀರು ಸಿಕ್ಕಿಲ್ಲ. ಹೀಗಾಗಿ ಪುದು ಗ್ರಾಮದ ನಾಲ್ಕು ಪ್ರದೇಶಗಳಾದ ಸುಜೀರು, ದತ್ತನಗರ, ಮಲ್ಲಿ, ದೈಯಡ್ಕದ ಗ್ರಾಮಸ್ಥರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಅಬ್ಬೆಟ್ಟುವಿನಲ್ಲಿ ನೀರಿಗಾಗಿ ಜನರ ಪರದಾಟ

ಮೇರಮಜಲು ಗ್ರಾಮದ ಅಬ್ಬೆಟ್ಟು ಎಂಬಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಗ್ರಾಮಸ್ಥರು ಚಿಂತೆಯಲ್ಲಿದ್ದಾರೆ. ಅಂತರ್ಜಲ ಮಟ್ಟ ಕಡಿಮೆಯಾಗಿದ್ದು ಮನೆಗಳಲ್ಲಿ ಬಾವಿಯ ನೀರು ಆವಿಯಾಗಿದೆ. ಸಂಪೂರ್ಣವಾಗಿ ಪಂಚಾಯತ್ ನೀರಿನ ವ್ಯವಸ್ಥೆಗೆ ಅವಲಂಬಿತರಾಗಿದ್ದು ಗ್ರಾಮದ ಕೊಳವೆ ಬಾವಿ ಕೂಡ ಬತ್ತಿ ಹೋಗಿದೆ. ಹೊಸ ಕೊಳವೆ ಬಾವಿಗಾಗಿ ಸ್ಥಳ ಪರಿಶೀಲಿಸಿದ್ದರೂ ಅಲ್ಲಿಗೆ ಕೊಳವೆ ಬಾವಿಯ ಲಾರಿ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಕಷ್ಟ ಎದುರಾಗಿದೆ. ಅಧಿಕಾರಿಗಳು ಪರ್ಯಾಯ ವ್ಯವಸ್ಥೆಗಾಗಿ ಶ್ರಮಿಸುತ್ತಿದ್ದಾರೆ.

ನದಿ ನೀರಿನ ಆಸರೆ

ಬಂಟ್ವಾಳದ ಗ್ರಾಮೀಣ ಭಾಗಗಳಲ್ಲಿಯೂ ಕುಡಿಯುವ ನೀರಿಗಾಗಿ ನೇತ್ರಾವತಿ ನದಿಯನ್ನೇ ಆಶ್ರಯಿಸಿದ್ದು, ಈ ವರ್ಷ ನೇತ್ರಾವತಿ ತುಂಬಿ ಹರಿಯುತ್ತಿದ್ದಾಳೆ. ತುಂಬೆ ಡ್ಯಾಮ್‌ನಲ್ಲಿ ಪ್ರಸ್ತುತ 6 ಮೀ. ನೀರಿನ ಸಂಗ್ರಹವಿದೆ. ಶಂಭೂರು ಡ್ಯಾಮ್‌ನಲ್ಲೂ 18.9 ಮೀ. ನೀರಿನ ಸಂಗ್ರಹವಿದೆ. ಬಂಟ್ವಾಳ ಜಕ್ರಿಬೆಟ್ಟು ಬಳಿ ನೂತನ ಡ್ಯಾಂ ನಿರ್ಮಾಣದಿಂದ ಈ ಭಾಗದಲ್ಲಿಯೂ ನದಿನೀರು ಶೇಖರಣೆಯಾಗಿದ್ದು, ಈ ಭಾಗದಲ್ಲಿ ಸುತ್ತ ಮುತ್ತ ಎಲ್ಲಾ ಬಾವಿ, ಕೆರೆಗಳಲ್ಲಿ ಒಳಹರಿವು ಜಾಸ್ತಿಯಾಗಿದ್ದು ಬಂಟ್ವಾಳ ಕಸ್ಬಾ, ನಾವೂರು ಗ್ರಾಮ, ಕಾವಳಮೂಡೂರು ಸುತ್ತಮುತ್ತಲ ಪ್ರದೇಶದ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಇಲ್ಲ. ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ನೀರು ಸದ್ಬಳಕೆಯ ಮಾಹಿತಿ ಕಾರ್ಯಾಗಾರ ನಡೆಯುತ್ತಿದ್ದು, ಪ್ರತಿ ದಿನದ ವರದಿಯನ್ನು ತಾಲೂಕು ಪಂಚಾಯತ್‌ಗೆ ರವಾನಿಸಲಾಗಿದ್ದು ಮಾರ್ಚ್ ಎಪ್ರಿಲ್ ವರೆಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಬಂಟ್ವಾಳ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಹೊಸ ಕೊಳವೆ ಬಾವಿ

ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿ ಇರುವ ಬೋರ್‌ವೆಲ್‌ನಲ್ಲಿ ನೀರು ಕಡಿಮೆ ಇದ್ದು, ಜನಜೀವನ್ ಮಿಷನ್ ಯೋಜನೆಯಡಿಯಲ್ಲಿ ಇನ್ನೊಂದು ಹೊಸಬೋರ್‌ವೆಲ್ ತೋಡಲಾಗುವುದು. ಮತ್ತು ಮೇರಮಜಲು ಗ್ರಾಮದ ಕೆಲವು ಕಡೆ ನೀರಿನ ಸಮಸ್ಯೆ ತಲೆದೋರಿದ್ದು, ಪರ್ಯಾಯ ವ್ಯವಸ್ಥೆಗೆ ನಡೆಸುತ್ತಾ ಇದ್ದು ಅದಷ್ಟು ಬೇಗ ಇಲ್ಲಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಇಂಜಿನಿಯರ್ ತಿಳಿಸಿದರು.

ಪುದು ಮತ್ತು ಮೇರಮಜಲು ಗ್ರಾಮದಲ್ಲಿ ನೀರಿನ ಸಮಸ್ಯೆ ಇದ್ದು ಜನರು ಸಂಕಷ್ಟದಲ್ಲಿದ್ದಾರೆ. ಪುದು ಗ್ರಾಮದಲ್ಲಿ ಹೊಸ ಕೊಳವೆ ಬಾವಿಯನ್ನು ನಿರ್ಮಾಣ ಮಾಡುವ ಚಿಂತನೆಯಲ್ಲಿದ್ದೇವೆ. ಅದೇ ರೀತಿ ಮೇರಮಜಲಿನಲ್ಲಿ ಕೊಳವೆ ಬಾವಿಯ ಲಾರಿ ಹೋಗಲು ಸರಿಯಾದ ರಸ್ತೆ ಇಲ್ಲದೆ ಇರುವುದರಿಂದ ಮೊದಲಿಂದ ಪರ್ಯಾಯ ಮಾರ್ಗವನ್ನು ಹುಡುಕಿ ಕೂಡಲೇ ಕೊಳವೆ ಬಾವಿ ನಿರ್ಮಾಣ ಮಾಡಲಿದ್ದೇವೆ ಎನ್ನುತ್ತಾರೆ ಅಧಿಕಾರಿಗಳು

ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point