ಕನ್ನಡ ಸುದ್ದಿ  /  ಕರ್ನಾಟಕ  /  Dakshina Kannada: ದಕ್ಷಿಣ ಕನ್ನಡದಲ್ಲಿ ಸತ್ವ ಕಳೆದುಕೊಳ್ಳುತ್ತಿದೆ ಕುಡಿಯುವ ನೀರು; ಸಾಂಕ್ರಾಮಿಕ ರೋಗ ಬಾರದಂತೆ ಎಚ್ಚರ ವಹಿಸಿ

Dakshina Kannada: ದಕ್ಷಿಣ ಕನ್ನಡದಲ್ಲಿ ಸತ್ವ ಕಳೆದುಕೊಳ್ಳುತ್ತಿದೆ ಕುಡಿಯುವ ನೀರು; ಸಾಂಕ್ರಾಮಿಕ ರೋಗ ಬಾರದಂತೆ ಎಚ್ಚರ ವಹಿಸಿ

Mangaluru News: ಧಾರಾಕಾರ ಮಳೆ ಸುರಿದರೆ, ಕೆಸರು, ಕೊಳೆಗಳೆಲ್ಲಾ ತೊಳೆದು ಹೋಗುತ್ತವೆ. ಆದರೆ ನೀವು ಎಸೆದ ತೊಟ್ಟೆಗಳು ಈಗ ಕುಡಿಯುವ ನೀರು ಇರುವ ನದಿಯ ಭಾಗದಲ್ಲಿ ತೇಲಿಕೊಂಡಿರುತ್ತವೆ. ಈಗಲೂ ನದಿಗೆ ಚರಂಡಿಯ ನೀರು ಹೋಗುತ್ತಲಿವೆ. ಇವುಗಳ ಮೇಲೆಯೇ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಇದನ್ನು ಹಾಗೆಯೇ ಕುಡಿಯಲು ಬಳಸಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ.

ಸತ್ವ ಕಳೆದುಕೊಳ್ಳುತ್ತಿದೆ ಕುಡಿಯುವ ನೀರು
ಸತ್ವ ಕಳೆದುಕೊಳ್ಳುತ್ತಿದೆ ಕುಡಿಯುವ ನೀರು

ಮಂಗಳೂರು: "ನಾವು ಸಿಟಿ ಕಾರ್ಪೊರೇಶನ್ ನೀಡುವ ನೀರನ್ನೇ ಹಾಗೆಯೇ ಕುಡಿಯುತ್ತೇವೆ, ಅದನ್ನು ಶುದ್ಧೀಕರಿಸಿಯೇ ಕೊಡುತ್ತಾರೆ" ಎಂದು ನೀವು ಹೇಳಬಹುದು. ಅದು ಸತ್ಯವೂ ಹೌದು ಎಂದುಕೊಳ್ಳೋಣ. ಆದರೆ ಹಾಗೆಯೇ ಟ್ಯಾಪ್ ನಿಂದ ತಿರುಗಿಸಿ ಕುಡಿಯುವ ಬದಲು ಅದನ್ನು ಕುದಿಸಿ ಆರಿಸಿದ ಬಳಿಕ ಕುಡಿಯುವುದು ಒಳ್ಳೆಯದು. ಕಾರಣ ಕಾರ್ಪೊರೇಶನ್ ಗೆ ಸಪ್ಲೈ ಆಗುವ ನೀರಿನ ಮೂಲ ಸಹಿತ ಹೆಚ್ಚಿನ ಕಡೆಗಳಲ್ಲಿ ನೀರು ಪಾತಾಳ ತಲುಪುತ್ತಿದೆ. ನದಿಯಲ್ಲಿ ಇನ್ನೂ ನೀರಿನ ಸೆಲೆ ಚಿಮ್ಮಬೇಕಷ್ಟೇ. ಇರುವ ನೀರು ಸತ್ವ ಕಳೆದುಕೊಳ್ಳುತ್ತಿದ್ದರೆ, ತಳ ತಲುಪಿದ ನೀರು ಕುಡಿದು ವಾಂತಿ ಬೇಧಿ ಸಮಸ್ಯೆಯಾಗುವವರೂ ಹೆಚ್ಚಾಗುತ್ತಿದ್ದಾರೆ.

ನೇತ್ರಾವತಿ ನದಿಯಲ್ಲಿ ನೀರು ಇನ್ನೂ ಸಮೃದ್ಧವಾಗಬೇಕು ಎಂದಾದರೆ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಬೀಳಬೇಕು. ಸದ್ಯದ ಪರಿಸ್ಥಿತಿ ಗಮನಿಸಿದರೆ, ಒಂದು ವಾರ ಮುಂಗಾರು ಮುಂದೆ ಹೋಗಬಹುದು ಎನಿಸುತ್ತದೆ. ಹವಾಮಾನ ಇಲಾಖೆ ಪ್ರಕಾರ ಜೂನ್ 7ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದೆ. ಹಾಗೆ ಆಗುತ್ತದೆ ಎಂದಾದರೆ, ಜೂನ್ 10ರ ಆಜುಬಾಜು ಕರ್ನಾಟಕ ಕರಾವಳಿಗೆ ಕಾಲಿಟ್ಟೀತು. ಒಮ್ಮೆ ಜೋರಾಗಿ ಮಳೆ ಬಿದ್ದರಷ್ಟೇ ಭೂಮಿಯಲ್ಲಿ ಬತ್ತಿದ ಕೊಳವೆಬಾವಿ ರೀಚಾರ್ಜ್ ಆಗಬಹುದು. ಅದುವಗೂ ನಿಂತ ನೀರೇ ಗತಿ.

ವೈದ್ಯರು ಏನಂತಾರೆ:

ನದಿ, ಬಾವಿ, ಕೆರೆಗಳಲ್ಲಿ ನೀರು ತಳ ತಲುಪಿರುವುದು ಹಾಗೂ ಆ ನೀರು ಸತ್ವ ಕಳೆದುಕೊಂಡಿರುವ ಕಾರಣ, ಅದನ್ನು ಹಾಗೆಯೇ ಕುಡಿಯುವ ಪ್ರವೃತ್ತಿ ಬೆಳೆಸಿಕೊಂಡವರು ನಮ್ಮ ಬಳಿ ಹೊಟ್ಟೆನೋವು, ವಾಂತಿ, ಬೇಧಿ, ತಲೆಸುತ್ತುವಿಕೆ ಸಹಿತ ಕಲುಷಿತ ನೀರು ಸೇವನೆಯಿಂದ ಯಾವುದೆಲ್ಲಾ ರೋಗಗಳಿವೆಯೋ ಅವುಗಳ ಹೆಸರು ಹೇಳಿಕೊಂಡು ಬರುತ್ತಿದ್ದಾರೆಎಂದು ಹೇಳುತ್ತಾರೆ ಪಾಣೆಮಂಗಳೂರು ಸಮೀಪ ನರಿಕೊಂಬು ಎಂಬಲ್ಲಿ ವೈದ್ಯವೃತ್ತಿ ನಡೆಸುತ್ತಿರುವ ಡಾ. ಸುಬ್ರಹ್ಮಣ್ಯ.

ಧಾರಾಕಾರ ಮಳೆ ಸುರಿದರೆ, ಕೆಸರು, ಕೊಳೆಗಳೆಲ್ಲಾ ತೊಳೆದು ಹೋಗುತ್ತವೆ. ಆದರೆ ನೀವು ಎಸೆದ ತೊಟ್ಟೆಗಳು ಈಗ ಕುಡಿಯುವ ನೀರು ಇರುವ ನದಿಯ ಭಾಗದಲ್ಲಿ ತೇಲಿಕೊಂಡಿರುತ್ತವೆ. ಈಗಲೂ ನದಿಗೆ ಚರಂಡಿಯ ನೀರು ಹೋಗುತ್ತಲಿವೆ. ಇವುಗಳ ಮೇಲೆಯೇ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. ಇದನ್ನು ಹಾಗೆಯೇ ಕುಡಿಯಲು ಬಳಸಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ವೈದ್ಯರು.

ಡೆಂಘಿ, ಮಲೇರಿಯಾ ಕಾಟ:

ಇನ್ನು ಬಿಸಿಲು ಮತ್ತು ಮಳೆ ಎರಡೂ ಇದ್ದರೆ, ನಿಂತ ನೀರು ಅಪಾಯಕಾರಿ. ಡೆಂಘಿ, ಮಲೇರಿಯಾ ಅಥವಾ ವೈರಲ್ ಜ್ವರಗಳ ವಾಹಕಗಳು ಹರಡಲು ಸುಲಭ. ಹಗಲಿಡೀ ಬಿಸಿಲು ಇದ್ದರೂ ಕೆಲವು ಪ್ರದೇಶಗಳಲ್ಲಿ ನೀರು ನಿಲ್ಲಲು ಆರಂಭಗೊಂಡಿದೆ. ಕಸ ಎಸೆಯುವ ಜಾಗಗಳಲ್ಲಂತೂ ನೀರುಮಿಶ್ರಿತ ತ್ಯಾಜ್ಯಗಳು ಕಾಣಿಸಲಾರಂಭಿಸಿವೆ. ಇವು ಸಮಸ್ಯೆಗಳಿಗೆ ಕಾರಣವಾಗಿವೆ. ವಿಪರೀತ ಸೆಖೆ, ಉರಿಬಿಸಿಲು. ಸಣ್ಣ ಮಳೆ ಬಂದು ನಿಂತು ಹೋಗುವುದರಿಂದ ರೋಗಬಾಧೆ ಜಾಸ್ತಿ. ಹೀಗೆ ಸಣ್ಣಪುಟ್ಟ ತಲೆನೋವು, ಜ್ವರ ಶೀತದಂಥ ಕಾಯಿಲೆಗಳೂ ಆರಂಭವಾಗಿದೆ. ಅದರೊಂದಿಗೆ ದವಾಖಾನೆಯ ಬಾಗಿಲು ತಟ್ಟುವ ಮಂದಿಯೂ ಒಂದೊಂದಾಗಿ ಜಾಸ್ತಿಯಾಗತೊಡಗಿದ್ದಾರೆ.

ಹಲವು ಪ್ರದೇಶಗಳಲ್ಲಿ ಚರಂಡಿ ಹೂಳೆತ್ತುವಿಕೆ ಸರಿಯಾಗಿ ಆಗದ ಕಾರಣ ರಸ್ತೆಗೆ ನೀರು ಹರಿದುಹೋಗುವ ಅಪಾಯವೂ ಇದೆ. ಶಾಲೆಗೆ ಹೋಗುವ ಮಕ್ಕಳು ಬಸ್ ನಿಲ್ದಾಣದಲ್ಲಿ ನಿಲ್ಲುವ ಸಂದರ್ಭ ಸೊಳ್ಳೆ ಕಚ್ಚಿದರೂ ಸಮಸ್ಯೆ. ಕೆಲವೆಡೆ ರಸ್ತೆ ಪಕ್ಕ ಹೊಂಡಗಳು ಚರಂಡಿ ಸಮಸ್ಯೆಗಳು ಕಾಣಿಸುತ್ತವೆ. ಅಲ್ಲಿ ನೀರು ನಿಲ್ಲುತ್ತವೆ. ಖಾಲಿ ಜಾಗ ಇದ್ದ ಕೂಡಲೇ ಅಲ್ಲಿ ಕಸ ಎಸೆಯಲಾಗುತ್ತದೆ. ಇದು ಸೊಳ್ಳೆ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದಂತಾಗುತ್ತದೆ. ಮುಂಗಾರು ಮಳೆ ಎದುರಿಸುವುದು ಎಂದರೆ ರಸ್ತೆ ರಿಪೇರಿ, ಟ್ರೀ ಕಟ್ಟಿಂಗ್, ದೋಣಿ ರೆಡಿ ಮಾಡುವುದು, ಪ್ರವಾಹ ಬಂದರೆ ಏನು ಮಾಡುವುದು ಎಂಬ ಬಗ್ಗೆ ಚಿಂತೆ ಮಾಡುವುದಷ್ಟೇ ಅಲ್ಲ, ಮಳೆಗಾಲದಲ್ಲಿ ಸಂಭಾವ್ಯ ಸಾಂಕ್ರಾಮಿಕ ರೋಗಗಳು ಬಂದರೆ ಅದನ್ನು ನಿಯಂತ್ರಿಸುವ ಬಗೆ ಹೇಗೆ ಮತ್ತು ಅವುಗಳು ಉಂಟಾಗಲು ಏನು ಕಾರಣ ಎಂಬುದನ್ನು ಜನಪ್ರತಿನಿಧಿಗಳೂ ಅರಿತುಕೊಳ್ಳಬೇಕು. ಜನರೂ ಜವಾಬ್ದಾರಿಯುತವಾಗಿ ವರ್ತಿಸಬೇಕಾಗುತ್ತದೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

IPL_Entry_Point