ಕನ್ನಡ ಸುದ್ದಿ  /  Karnataka  /  Dakshina Kannada News Karnataka Bjp State President Nalin Kumar Kateel On Congress Leader Rahul Gandhi Mangaluru Jra

Nalin on Rahul: ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋತಿದೆ; ಅವರು 224 ಕ್ಷೇತ್ರಗಳಲ್ಲೂ ಸಂಚರಿಸಲಿ; ಕಟೀಲ್ ವ್ಯಂಗ್ಯ

ರಾಹುಲ್ ಗಾಂಧಿ ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ತಿರುಗಾಡಲಿ. ಅವರು ಹೋದಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಅವರು ಬಂದರೆ ನಮಗೆ ಲಾಭವೇ ಹೊರತು ಯಾವುದೇ ತೊಂದರೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.

‌ಪ್ರಧಾನಿ ಮೋದಿಯ ವರ್ಚುವಲ್‌ ಸಂವಾದ ವೀಕ್ಷಿಸಿದ ನಳಿನ್‌ ಕುಮಾರ್‌ ಕಟೀಲ್
‌ಪ್ರಧಾನಿ ಮೋದಿಯ ವರ್ಚುವಲ್‌ ಸಂವಾದ ವೀಕ್ಷಿಸಿದ ನಳಿನ್‌ ಕುಮಾರ್‌ ಕಟೀಲ್

ಮಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳಿಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ವರ್ಚುವಲ್ ಮಾತುಕತೆ ಬಳಿಕ ಮಾತನಾಡಿದ ಅವರು, ರಾಹುಲ್ ಹೋದಲ್ಲೆಲ್ಲಾ ಬಿಜೆಪಿ ಗೆದ್ದಿದೆ ಎಂದಿದ್ದಾರೆ.

ರಾಹುಲ್ ಗಾಂಧಿ ರಾಜ್ಯದ ಎಲ್ಲ 224 ಕ್ಷೇತ್ರಗಳಿಗೂ ತಿರುಗಾಡಲಿ. ಅವರು ಹೋದಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಇದು ಬಿಜೆಪಿಗೆ ಲಾಭವಾಗಿದೆ. ಹೀಗಾಗಿ ಅವರು ಬಂದರೆ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಮಂಗಳೂರಿನಲ್ಲಿ ಇಂದು (ಗುರುವಾರ) ಬೆಳಗ್ಗೆ ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಗಿ ಕುಟುಕಿದ್ದಾರೆ.

ಮಂಗಳೂರಿನ ಡೊಂಗರಕೇರಿಯ ಸುಧೀಂದ್ರ ಸಭಾಭವನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಯಕರ್ತರೊಂದಿಗೆ ನಡೆಸುತ್ತಿರುವ ಸಂವಾದ ಕಾರ್ಯಕ್ರಮದಲ್ಲಿ ಮಂಗಳೂರಿನ ಕಾರ್ಯಕರ್ತರ ಜೊತೆ ಭಾಗವಹಿಸಿದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರದ ಪಿತಾಮಹರೇ ಇದ್ದಾರೆ. ಅವರ ಜಾಯಮಾನವೇ ಭ್ರಷ್ಟಾಚಾರ. ಇನ್ನು ಕಾಂಗ್ರೆಸ್ ಅನ್ನು ಸೋಲಿಸಬೇಕು ಎಂದಿದ್ದರೆ, ಅದರ ಮುಖಂಡ ರಾಹುಲ್ ಗಾಂಧಿ ಒಬ್ಬರೇ ಸಾಕು. ಅವರು ಹೋದಲ್ಲೆಲ್ಲಾ ಆ ಪಕ್ಷದ ಕುರಿತು ಜನರು ಭ್ರಮನಿರಸನ ತಾಳುತ್ತಾರೆ. ಅವರ ಭಾಷಣ ಕೇಳಿದ ಬಳಿಕ ಬಿಜೆಪಿಯ ಗಟ್ಟಿ ನಾಯಕತ್ವದ ಕುರಿತು ಒಲುವು ತೋರುತ್ತಾರೆ. ಹೀಗೆ ರಾಹುಲ್ ಬಂದರೆ ಬಿಜೆಪಿಗೇ ಲಾಭ ಎಂದರು.

ಪ್ರಧಾನಮಂತ್ರಿ ಸಂವಾದದಿಂದ ಹೆಚ್ಚಿದ ವೇಗ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದ ಸರ್ಕಾರ ರಚಿಸುವುದಕ್ಕೆ ನಮ್ಮೆಲ್ಲ ದೇವದುರ್ಲಭ ಕಾರ್ಯಕರ್ತರಿಗೆ ನವಚೈತನ್ಯ ತುಂಬಲು, ಪ್ರಧಾನಿ ಸಂವಾದ ಕಾರ್ಯಕ್ರಮ ನಡೆಸಿದ್ದಾರೆ. ಅದರಲ್ಲಿ ನಮ್ಮ ಮಂಗಳೂರಿನ ಕಾರ್ಯಕರ್ತರೊಂದಿಗೆ ಪಾಲ್ಗೊಂಡಿದ್ದೇವೆ. ಇದರಿಂದ ಪಕ್ಷಕ್ಕೆ ನವಚೈತನ್ಯ ದೊರಕಿದ್ದು, ಇನ್ನಷ್ಟು ಹುರುಪಿನಿಂದ ಕೆಲಸ ಮಾಡುವುದಾಗಿ ಹೇಳಿದರು.

ಪ್ರಧಾನಮಂತ್ರಿ ನಮ್ಮ ಸರ್ಕಾರ ನೀಡಿರುವ ಕೊಡುಗೆಗಳನ್ನು ಜನರ ಬಳಿ ಮುಟ್ಟಿಸುವ ಕುರಿತು ಪ್ರೇರಣಾದಾಯಿ ಮಾತುಗಳನ್ನು ಹೇಳಿದ್ದಾರೆ. ಮನೆ ಮನೆಗೆ ಹೋಗಿ ಹೇಳಬೇಕಾದ ವಿಚಾರಗಳ ಕುರಿತು ತಿಳಿಸಿದ್ದಾರೆ.‌ ಕೇಂದ್ರ ಮತ್ತು ನಮ್ಮ ರಾಜ್ಯದ ಸರ್ಕಾರಗಳ ಸಾಧನೆ, ಡಬಲ್ ಇಂಜಿನ್ ಸರ್ಕಾರದ ಸಾಧನೆ ಹಾಗೂ ನಮ್ಮ ಸರ್ಕಾರ ನೀಡಿರುವ ಕೊಡುಗೆಗಳನ್ನು ತಲುಪಿಸುವ ಕುರಿತು ಕಾರ್ಯಕರ್ತರಿಗೆ ವಿವರವಾಗಿ ಹೇಳಿದ್ದಾರೆ.‌

ಮನೆಮನೆಗೆ ಹೋದಾಗ ಕಾರ್ಯಕರ್ತರು ಹೇಗಿರಬೇಕು. ಬಿಜೆಪಿ ಕಾರ್ಯಕರ್ತ ಚುನಾವಣೆಯನ್ನು ಹೇಗೆ ಸವಾಲಾಗಿ ಸ್ವೀಕರಿಸಬೇಕು ಎಂಬುದನ್ನು ಪ್ರಧಾನಮಂತ್ರಿ ವಿವರಿಸಿದ್ದಾರೆ. ಪ್ರಧಾನಮಂತ್ರಿಯವರು ಕಾರ್ಯಕರ್ತರಿಗೆ ಉತ್ಸಾಹ ತುಂಬಿದ್ದಾರೆ. ಇದರಿಂದಾಗಿ ಇಡೀ ರಾಜ್ಯದಲ್ಲಿ ಹೊಸ ವಾತಾವರಣ ನಿರ್ಮಾಣವಾಗಿದೆ ಎಂದರು.

ಈಗಾಗಲೇ ಚುನಾವಣಾ ಪ್ರಚಾರದ ಭಾಗವಾಗಿ ಮನೆ ಮನೆ ಸಂಪರ್ಕಗಳನ್ನು ಪ್ರಾರಂಭ ಮಾಡಿದ್ದೇವೆ. ಅದಕ್ಕೆ ವೇಗ ಮತ್ತು ಉತ್ಸಾಹ ಎರಡನ್ನೂ ತುಂಬಲಾಗಿದೆ. ಪ್ರಧಾನಮಂತ್ರಿಯವರ ಈ ಸಭೆಯಿಂದ ಕಾರ್ಯಕರ್ತರಲ್ಲಿ ಇನ್ಮಷ್ಟು ಉತ್ಸಾಹ ಬರಲಿದೆ ಎಂದರು.

ಕಾಂಗ್ರೆಸಿಗರು ಉಚಿತವಾಗಿ ಕೊಡುವ ಭರವಸೆಗಳ ಬಗ್ಗೆ ಅವರ ಅಭಿಪ್ರಾಯ ಕೇಳಿ ಬಿಜೆಪಿ ಕಾರ್ಯಕರ್ತ ಅರುಣ್ ಶೇಟ್ ಪ್ರಶ್ನೆ ಕೇಳಿದರು. ಉಚಿತ ಕೊಡುಗೆ ಕೊಡುಗೆ ನೀಡುವ ಮೂಲಕ ದೇಶದ ರಾಜಸ್ವ ನಷ್ಟವಾಗಿ ದೇಶ ಕಂಗಾಲಾಗುವ ಪರಿಸ್ಥಿತಿ ಬರುತ್ತದೆ. ಆ ರೀತಿ ಬರಬಾರದು. ಉಚಿತ ಕೊಡುಗೆಗಳ ಮೂಲಕ ದೇಶವನ್ನು ನಷ್ಟಕ್ಕೆ ತಳ್ಳಬಾರದು ಎಂದು ನರೇಂದ್ರ ಮೋದಿ ಅವರು ಅರುಣ್ ಶೇಟ್ ಅವರಿಗೆ ಸಂವಾದದಲ್ಲಿ ಉತ್ತರಿಸಿದ್ದಾರೆ.

ವರದಿ: ಹರೀಶ್ ಮಾಂಬಾಡಿ, ಮಂಗಳೂರು

IPL_Entry_Point