Davangere university convocation: ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಶಿಕ್ಷಣಕ್ಕೆ ಪೂರಕ; ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕಿವಿಮಾತು
Davangere university convocation: ದಾವಣಗೆರೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಇಂದು ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇದರಲ್ಲಿ ಭಾಗವಹಿಸಿದ್ದು, ಶಿಕ್ಷಣದ ಜತೆಗೆ ಕ್ರೀಡಾ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಅದು ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸುತ್ತದೆ ಎಂದು ಹೇಳಿದರು.
ಬೆಂಗಳೂರು: ಶಿಕ್ಷಣದ ಜತೆಗೆ ಕ್ರೀಡಾ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ, ಅದು ನಿಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢಗೊಳಿಸುತ್ತದೆ. ಅಲ್ಲದೆ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಮುನ್ನಡೆಸುವ ಅವಕಾಶವೂ ಸಿಗಬಹುದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಅವರು, ದಾವಣಗೆರೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶಿಕ್ಷಣ, ಕೌಶಲ್ಯ ಮತ್ತು ನೈತಿಕ ಮೌಲ್ಯಗಳನ್ನು ಜೋಡಿಸುವ ಮೂಲಕ ನವ ಭಾರತ, ಶ್ರೇಷ್ಠ ಭಾರತ, ಆತ್ಮನಿರ್ಭರ ಭಾರತ ಮಾಡಲು ಬದ್ಧರಾಗಿದ್ದಾರೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಭವಿಷ್ಯವನ್ನು ಉಜ್ವಲವಾಗಿ ಮತ್ತು ಯಶಸ್ವಿಯಾಗುವಂತೆ ಮಾಡಲಿದೆ. ನವ ಭಾರತ ನಿರ್ಮಾಣದಲ್ಲಿ ಇದರ ಪಾತ್ರ ನಿರ್ಣಾಯಕವಾಗಿರುತ್ತದೆ ಎಂದು ರಾಜ್ಯಪಾಲ ಗೆಹ್ಲೋಟ್ ಹೇಳಿದರು.
ಈ ಶಿಕ್ಷಣ ನೀತಿಯ ಗುರಿಯು ಎಲ್ಲರಿಗೂ ಉನ್ನತ ಶಿಕ್ಷಣವನ್ನು ಒದಗಿಸುವುದು, ಮಾತೃಭಾಷೆಯಲ್ಲಿ ಅಧ್ಯಯನದ ಜತೆಗೆ ನೆಚ್ಚಿನ ವಿಷಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ. ಭಾರತದ ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸುವಲ್ಲಿ ನಿಮ್ಮ ಕೊಡುಗೆಯನ್ನು ನೀಡಿ ಮತ್ತು ಭಾರತವನ್ನು ಜಾಗತಿಕ ಜ್ಞಾನ ಶಕ್ತಿಯನ್ನಾಗಿ ಮಾಡುವ ಈ ಶಿಕ್ಷಣ ನೀತಿಯನ್ನು ಯಶಸ್ವಿಗೊಳಿಸಿ ಎಂದು ಅವರು ಕರೆ ನೀಡಿದರು.
ಪ್ರಸ್ತುತ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಮುಂದಿನ 25 ವರ್ಷಗಳಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಮುಂದಿನ 25 ವರ್ಷಗಳು ಅದ್ಭುತ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದರ ಜೊತೆಗೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಬೇಕು. ಮತ್ತೇ ಭಾರತವನ್ನು ವಿಶ್ವಗುರವನ್ನಾಗಿಸಲು ಯುವಪೀಳಿಗೆ ಕೈಜೋಡಿಸಬೇಕು ಎಂದು ಅವರು ಹೇಳಿದರು.
ಮನುಷ್ಯನ ಜೀವನವು ಸಂಪೂರ್ಣವಾಗಿ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ಪರಿಸರ ಅಸಮತೋಲನ ಇಂದು ವಿಶ್ವದ ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪ್ರತಿಯೊಬ್ಬರು ನೀರು, ಅರಣ್ಯ ಮತ್ತು ವಾಯು ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಬೇಕು ಎಂದ ಅವರು, ನಮ್ಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯವು ಬಹಳ ಪ್ರಾಚೀನವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ “ವಸುದೈವ ಕುಟುಂಬಕಂ” ಎಂಬ ನೆಲೆಗಟ್ಟಿನ ಮೇಲೆ ಕೇಂದ್ರೀಕೃತವಾಗಿದೆ ಮತ್ತು "ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ" ಎಂಬ ಮನೋಭಾವದಿಂದ ಪ್ರೇರಿತವಾಗಿದೆ. ಇದನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಚೀನ ಶಿಕ್ಷಣ ವ್ಯವಸ್ಥೆಯು ವ್ಯಕ್ತಿತ್ವ ನಿರ್ಮಾಣ, ಆಧ್ಯಾತ್ಮಿಕ ಜ್ಞಾನದ ಜೊತೆಗೆ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದೆ, ಇದರಿಂದಾಗಿ ನಾವು ವಿಶ್ವಗುರು ಎಂದು ಪರಿಗಣಿಸಲ್ಪಟ್ಟಿದ್ದೇವೆ ಮತ್ತು ನಮ್ಮ ಆರ್ಥಿಕತೆಯು ನಮ್ಮ ದೇಶವನ್ನು ಚಿನ್ನದ ಹಕ್ಕಿ ಎಂದು ಕರೆಯುವಷ್ಟು ಪ್ರಬಲವಾಗಿದೆ. ಇದನ್ನು ಮತ್ತೊಮ್ಮೆ ಸಾಧಿಸಲು, ನಮ್ಮ ಯುವ ಕೌಶಲ್ಯಗಳು, ಪ್ರತಿಭೆಗಳು ಮತ್ತು ಶಕ್ತಿಗಳನ್ನು ಪ್ರದರ್ಶಿಸುವ ಮೂಲಕ ನಾವು ಸಂಘಟಿತ ಪ್ರಯತ್ನಗಳನ್ನು ಮಾಡಬೇಕು ಎಂದು ತಿಳಿಸಿದರು.
ಗೌರವ ಡಾಕ್ಟರೇಟ್ ಸ್ವೀಕರಿಸಿದ ಟಿ.ಎಂ. ಚಂದ್ರಶೇಖರಯ್ಯ, ಎ.ಎಸ್. ವೀರಣ್ಣ ಅವರನ್ನು ಅಭಿನಂದಿಸಿದ ರಾಜ್ಯಪಾಲರು, ಸಮಾಜಕ್ಕಾಗಿ ಇವರ ಸೇವೆ ನಿರಂತರವಾಗಿರಲಿ ಎಂದರು. ನಂತರ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ವಿಶ್ವವಿದ್ಯಾನಿಲಯದಿಂದ ನೀವು ಪಡೆಯುವ ಗುಣಮಟ್ಟದ ಶಿಕ್ಷಣ ಮತ್ತು ಬಲವಾದ ನೈತಿಕ ಅಡಿಪಾಯವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಯಾಗಿಸುತ್ತದೆ ಮತ್ತು ಜೀವನದ ಹಾದಿಯಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರು ಮತ್ತು ಮುಖ್ಯ ಅತಿಥಿ ಪ್ರೊಫೆಸರ್ ಟಿ.ಜಿ. ಸೀತಾರಾಮ್, ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ಬಿ.ಡಿ. ಕುಂಬಾರ್ ಉಪಸ್ಥಿತರಿದ್ದರು.