ಕನ್ನಡ ಸುದ್ದಿ  /  ಕರ್ನಾಟಕ  /  Veerendra Heggade: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುರಿತ ಸೋಷಿಯಲ್ ಮೀಡಿಯಾ ಪೋಸ್ಟ್ ಡಿಲೀಟ್ ಮಾಡಲು ಕೋರ್ಟ್ ಆದೇಶ

Veerendra Heggade: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುರಿತ ಸೋಷಿಯಲ್ ಮೀಡಿಯಾ ಪೋಸ್ಟ್ ಡಿಲೀಟ್ ಮಾಡಲು ಕೋರ್ಟ್ ಆದೇಶ

Veerendra Heggade: ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಈಗಾಗಲೇ ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ ಹಾಕುವಂತೆ ನ್ಯಾಯಾಲಯ ಆದೇಶ ನೀಡಿದೆ.

ವೀರೇಂದ್ರ ಹೆಗ್ಗಡೆ
ವೀರೇಂದ್ರ ಹೆಗ್ಗಡೆ (ANI)

ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಯಾವುದೇ ಮಾಧ್ಯಮಗಳ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ನೀಡಿದೆ. ಇದರೊಂದಿಗೆ ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ ಹಾಕುವಂತೆ ನ್ಯಾಯಾಲಯ ಆದೇಶ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಉಲ್ಲೇಖಿಸಿ ವಿವಿಧ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲೂ ವರದಿಗಳು ಬಿತ್ತರವಾಗಿವೆ. ಈ ಸಂಬಂಧ ನ್ಯಾಯಾಲಯಕ್ಕೆ ವಾದಿಗಳಾದ ಶೀನಪ್ಪ ಹಾಗೂ ಮತ್ತಿತರರು ಸಲ್ಲಿಸಿರುವ ದಾವೆಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ಕುರಿತಂತೆ ಆದೇಶಿಸಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್‌, ಫೇಸ್‌ ಬುಕ್‌, ಇನ್‌ಸ್ಟಾಗ್ರಾಮ್‌, ಯೂಟ್ಯೂಬ್‌ ಸೇರಿದಂತೆ ಟಿವಿ ಚಾನೆಲ್‌ ಹಾಗೂ ಇತರೆ ಯಾವುದೇ ರೀತಿಯ ಮಾಧ್ಯಮಗಳಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ವರದಿ ಮಾಡಬಾರದು ಅಥವಾ ಮಾತನಾಡಬಾರದು ಎಂದು ನಿರ್ಬಂಧಿಸಿ ಆದೇಶ ನೀಡಲಾಗಿದೆ.

ಅಲ್ಲದೆ ಈಗಾಗಲೇ ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳದ ಹೆಸರನ್ನು ಉಲ್ಲೇಖಿಸಿ ಪ್ರಕಟಿಸಲಾಗಿರುವ ವರದಿಗಳು ಹಾಗೂ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಇದೇ ವೇಳೆ 61 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು ವಿಚಾರಣೆ ಮುಂದೂಡಲಾಗಿದೆ.

ಧರ್ಮಸ್ಥಳ ಸಮೀಪದ 2012ರಲ್ಲಿ ನಡೆದಿದ್ದ ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಪ್ರಕರಣದ ಆರೋಪಿಯಾಗಿದ್ದ ಸಂತೋಷ್‌ ಅವರನ್ನು ನಿರ್ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಆ ಬಳಿಕ ಕರಾವಳಿ ಭಾಗದಲ್ಲಿ ಸೌಜನ್ಯ ಪ್ರಕರಣವು ಮರುಜೀವ ಪಡೆದಿದೆ. ಕರಾವಳಿ ಹಾಗೂ ರಾಷ್ಟ್ರಮಟ್ಟದ ಹಲವು ಮಾಧ್ಯಮಗಳು ಹಾಗೂ ಸೋಷಿಯಲ್‌ ಮೀಡಿಯಾಗಳಲ್ಲೂ ಈ ಪ್ರಕರಣ ಸಂಬಂಧಿಸಿದಂತೆ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆಯವರ ಹೆಸರನ್ನು ಉಲ್ಲೇಖಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು, ಮಹೇಶ್‌ ಶೆಟ್ಟಿ ತಿಮರೋಡಿ, ಜಗದೀಶ್‌, ಪ್ರಭಾ ಬೆಳಹೊಂಗಳ, ಸೋಮನಾಥ್‌ ನಾಯಕ್‌, ಬಿಎಂ ಭಟ್‌, ವಿಠ್ಠಲ ಗೌಡ ಎಂಬವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬಸ್ಥರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ದಾವೆದಾರರು ಅರ್ಜಿಯಲ್ಲಿ ದೂರಿದ್ದರು.

ಧರ್ಮಸ್ಥಳದ ಮೇಲೆ ದ್ವೇಷವೇಕೆ; ನಮಗಂತೂ ಭಯವಿಲ್ಲ, ಸಿಬಿಐ ತನಿಖೆಯಾಗಲಿ: ಮೌನ ಮುರಿದ ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ ಕ್ಷೇತ್ರದ ಸಾಧನೆ ಕಂಡು ದ್ವೇಷ ಮಾಡುತ್ತಿರುವ ಕೆಲವರು ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ. ನಮಗಂತೂ ಯಾವುದೇ ಭಯವಿಲ್ಲ. ನೈತಿಕವಾಗಿ ಗಟ್ಟಿಯಾಗಿದ್ದೇವೆ. ಸಿಬಿಐ ಸಹಿತ ಯಾವುದೇ ತನಿಖೆಯನ್ನಾದರೂ ಮಾಡಿದರೂ ಅದನ್ನು ಸ್ವಾಗತಿಸುತ್ತೇವೆ. ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಈ ಹಿಂದೆ ಹೇಳಿದ್ದರು.

ಧರ್ಮಸ್ಥಳ ಸಮೀಪದಲ್ಲೇ ಯುವತಿ ಸೌಜನ್ಯ ಪ್ರಕರಣದಲ್ಲಿ ಶ್ರೀ ಕ್ಷೇತ್ರದ ಹೆಸರು ಥಳುಕು ಹಾಕಿಕೊಂಡಿರುವ ಜತೆಗೆ ಹೋರಾಟಗಳೂ ನಡೆಯುತ್ತಿರುವುದರಿಂದ ಅವರು ಬುಧವಾರ ಧರ್ಮಸ್ಥಳದ ವಿಭಾಗೀಯ ಮುಖ್ಯಸ್ಥರ ಸಭೆಯಲ್ಲಿ ಮುಕ್ತವಾಗಿಯೇ ಮಾತನಾಡಿದರು. ನೀವು ಇನ್ನು ಮೌನವಾಗಿರಬೇಡಿ. ನಿಮ್ಮ ಜತೆಗಿನ ಸಿಬ್ಬಂದಿಗಳು ಮುಕ್ತವಾಗಿ ಸತ್ಯವನ್ನು ಮಾತನಾಡಲು ಹೇಳಿ ಎಂದೂ ಹೆಗ್ಗಡೆ ಅವರು ಸಲಹೆ ನೀಡಿದರು.

IPL_Entry_Point