ಕನ್ನಡ ಸುದ್ದಿ  /  Karnataka  /  Education News Karnataka Puc 2 Exam 2024 Begins Today Check Instructions Timings Datesheet 4 Points Uks

2nd PU Exam 2024: ಕರ್ನಾಟಕ ದ್ವಿತೀಯ ಪಿಯು ಪರೀಕ್ಷೆ ಶುರು, ಮಾ 22ಕ್ಕೆ ಮುಕ್ತಾಯ; ವಿದ್ಯಾರ್ಥಿಗಳು ಗಮನಿಸಬೇಕಾದ 4 ಅಂಶಗಳು

ಕರ್ನಾಟಕದಲ್ಲಿ ದ್ವಿತೀಯ ಪಿಯು ಪರೀಕ್ಷೆ ಇಂದು (ಮಾ.1) ಶುರುವಾಗಿದ್ದು, ಈ ಬಾರಿ ವಿದ್ಯಾರ್ಥಿಗಳು ಆರಾಮವಾಗಿ ಪರೀಕ್ಷೆ ಬರೆಯಲು ಸರ್ಕಾರ ಅವಕಾಶ ನೀಡಿದೆ. ಫಲಿತಾಂಶ ಸುಧಾರಣೆಗಾಗಿ ಈ ಸಲದಿಂದ 3 ಬಾರಿ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಹೀಗಾಗಿ ವಿದ್ಯಾರ್ಥಿಗಳು ಗಮನಿಸಬೇಕಾದ 4 ಅಂಶಗಳ ವಿವರ ಇಲ್ಲಿದೆ.

ಪರೀಕ್ಷಾ ವೇಳಾಪಟ್ಟಿ ಗಮನಿಸುತ್ತಿರುವ ವಿದ್ಯಾರ್ಥಿಗಳು (ಕಡತ ಚಿತ್ರ)
ಪರೀಕ್ಷಾ ವೇಳಾಪಟ್ಟಿ ಗಮನಿಸುತ್ತಿರುವ ವಿದ್ಯಾರ್ಥಿಗಳು (ಕಡತ ಚಿತ್ರ) (PTI)

ಬೆಂಗಳೂರು: ಕರ್ನಾಟಕದಲ್ಲಿ ಈ ಸಾಲಿನ ದ್ವಿತೀಯ ಪಿಯು ಪರೀಕ್ಷೆ ಇಂದು (ಮಾ.1) ಶುರುವಾಗಿದೆ. ಮಾರ್ಚ್ 22 ರ ತನಕ ಪರೀಕ್ಷೆ ನಡೆಯಲಿದ್ದು, ಈ ಸಾಲಿನಿಂದ ವಿದ್ಯಾರ್ಥಿಗಳು ಮೂರು ಸಲ ಪರೀಕ್ಷೆ ಬರೆಯುವ ಅವಕಾಶ ಪಡೆಯಲಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ ಪರೀಕ್ಷೆ ನಡೆಸುತ್ತಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯು ಬೆಳಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೆ ಒಂದೇ ಪಾಳಿಯಲ್ಲಿ ನಡೆಯಲಿದೆ.

ರಾಜ್ಯಾದ್ಯಂತ 1124 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಈ ಬಾರಿ 6.98 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿ ಕೊಂಡಿದ್ದು ಮೊದಲ ದಿನ ಕನ್ನಡ ಮತ್ತು ಅರೇಬಿಕ್ ವಿಷಯದ ಪರೀಕ್ಷೆಗಳು ನಡೆದಿದೆ.

ಮಾರ್ಚ್ 4, 2024 ರಂದು ಗಣಿತ, ಮಾರ್ಚ್ 5, 2024 ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 7 ರಂದು ಇತಿಹಾಸ ಮತ್ತು ಭೌತಶಾಸ್ತ್ರ, ಮಾರ್ಚ್ 9 ರಂದು ಲೆಕ್ಕಶಾಸ್ತ್ರ, ಭೂವಿಜ್ಞಾನ, ಗೃಹ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 11 ರಂದು ಬಿಸಿನೆಸ್ ಸ್ಟಡೀಸ್ ಮತ್ತು ಮಾರ್ಚ್ 13, 2024 ರಂದು ಇಂಗ್ಲಿಷ್ ಪರೀಕ್ಷೆಗಳು ನಡೆಯಲಿವೆ. ಮಾರ್ಚ್ 16 ರಂದು ಅರ್ಥಶಾಸ್ತ್ರ, ಮಾರ್ಚ್ 18, 2024 ರಂದು ಭೂಗೋಳಶಾಸ್ತ್ರ ಮತ್ತು ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ.

ಮೂರು ಸಲ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆಯುವ ಅವಕಾಶ

ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಖುಷಿಯ ವಿಚಾರ ಒಂದಿದೆ. ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಇದೇ ಮೊದಲ ಬಾರಿಗೆ 3 ಬಾರಿ ಪರೀಕ್ಷೆ (ಪರೀಕ್ಷೆ 1, 2, 3) ಬರೆದು ಯಾವ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೋ ಅದನ್ನು ಉಳಿಸಿಕೊಳ್ಳುವ ಅವಕಾಶವನ್ನು ಕರ್ನಾಟಕ ಸರ್ಕಾರ ಕಲ್ಪಿಸಿದೆ.

ಹಾಗಾಗಿ ವಿದ್ಯಾರ್ಥಿಗಳು ಆತಂಕ ಪಡುವಂತಿಲ್ಲ. ಈಗ ನಡೆಯಲಿರುವ ಪರೀಕ್ಷೆ ಮೊದಲನೇಯದು. ಆರಾಮವಾಗಿ ಪರೀಕ್ಷೆ ಬರೆಯಬಹುದು. ಒಂದೊಮ್ಮೆ ಪರೀಕ್ಷೆ ಸರಿಯಾಗಿ ಬರೆಯಲಾಗದೇ ಇದ್ದರೆ ಚಿಂತೆ ಬೇಡ. ಏಪ್ರಿಲ್ ಮೊದಲ ವಾರ ಮತ್ತೊಮ್ಮೆ ಪರೀಕ್ಷೆ ಎದುರಿಸುವುದಕ್ಕೆ ಅವಕಾಶ ಸಿಗಲಿದೆ. ಅದರಲ್ಲೂ ಕಷ್ಟವಾಯಿತು ಎಂದಿಟ್ಟುಕೊಳ್ಳಿ.

ಆಗ ಮೂರನೇ ಬಾರಿಗೆ ಪರೀಕ್ಷೆ ಬರೆಯುವ ಅವಕಾಶ ಏಪ್ರಿಲ್ ಕೊನೆಯ ವಾರದಲ್ಲಿ ಸಿಗಲಿದೆ. ಆದ್ದರಿಂದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫಲಿತಾಂಶ ಸುಧಾರಣೆಗೆ ಮೂರು ಅವಕಾಶ ಈ ಬಾರಿಯಿಂದ ವಿದ್ಯಾರ್ಥಿಗಳಿಗೆ ಸಿಗುತ್ತಿರುವುದು ವಿಶೇಷ.

ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 2024: ಇಲ್ಲಿದೆ ಸೂಚನೆಗಳು

ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಇಲ್ಲಿ ನೀಡಲಾದ ಸೂಚನೆಗಳನ್ನು ನಿತ್ಯವೂ ಗಮನಿಸಬಹುದು.

1) ಮೂರು ಬಾರಿ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಉಳಿಸಿಕೊಳ್ಳುವ ಅವಕಾಶವಿದೆ ಆತಂಕ ಬೇಡ. ಪರೀಕ್ಷೆ ಆರಂಭಕ್ಕೂ ಒಂದು ತಾಸು ಮೊದಲೇ ಕೇಂದ್ರದಲ್ಲಿರಿ.

2) ಹೊರಡುವಾಗ ಹಾಲ್ ಟಿಕೆಟ್, ಪೆನ್ನು ಮರೆಯದೆ ಕೊಂಡೊಯ್ಯಬೇಕು. ನಿಮ್ಮ ಪ್ರವೇಶ ಪತ್ರದಲ್ಲಿ ನಿಮ್ಮ ಹೆಸರು, ಛಾಯಾಚಿತ್ರ, ಸಹಿ ಮುಂತಾದ ವಿವರಗಳಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

3) ಪರೀಕ್ಷೆ ಬರೆಯಲು ಅಗತ್ಯ ವಸ್ತುಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಿ. ಆದರೆ, ಮೊಬೈಲ್, ವಾಚ್, ಕ್ಯಾಲ್ಯುಲೇಟರ್, ಇಯರ್‌ಫೋನ್‌ ಸೇರಿ ಯಾವುದೇ ಎಲೆಕ್ಟ್ರಾನಿಕ್ಸ್‌ ಉಪಕರಣ ಕೊಂಡೊಯ್ಯಬೇಡಿ.

4) ಪ್ರಶ್ನೆಗಳನ್ನು ಓದಿಕೊಳ್ಳಲು 15 ನಿಮಿಷ ಕಾಲಾವಕಾಶವಿರುತ್ತದೆ ಬಳಸಿಕೊಳ್ಳಿ. ಅದಾಗಿ, • ಪ್ರತಿ ಪ್ರಶ್ನೆಗೂ ನಿಧಾನವಾಗಿ ಯೋಜಿಸಿ ಸರಿಯಾಗಿ ಉತ್ತರಿಸಿ. ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸುತ್ತ ಹೋಗಿ. • ಉಳಿದ ಪ್ರಶ್ನೆಗಳಿಗೆ ಗೊತ್ತಿರುವಷ್ಟು ಉತ್ತರವನ್ನಾದರೂ ಬರೆಯಿರಿ, ಖಾಲಿ ಬಿಡಬೇಡಿ.

ಪರೀಕ್ಷಾ ಕೇಂದ್ರದ ಸುತ್ತಮುತ್ತ ಬಿಗಿ ಬಂದೋಬಸ್ತ್‌

ದ್ವಿತೀಯ ಪಿಯು ಪರೀಕ್ಷೆ -1 ಮಾ.22ರವರೆಗೆ ನಿತ್ಯ 10.15ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆಗಳು ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ಯಾವುದೇ ಪರೀಕ್ಷಾ ಅಕ್ರಮ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲ ಟ್ಯೂಷನ್, ಕೋಚಿಂಗ್ ಕೇಂದ್ರಗಳು, ಝರಾಕ್ಸ್ ಕೇಂದ್ರಗಳು, ಸೈಬರ್, ಕಂಪ್ಯೂಟರ್, ಗೇಮ್ಸ್ ಕೇಂದ್ರಗಳ ಮೇಲೆ ಗಮನ ಹರಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಕೆಎಸ್‌ಇಎಬಿ ಕಚೇರಿಯಿಂದ ಪರೀಕ್ಷಾ ಕೇಂದ್ರಗಳವರೆಗೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ಸಾಗಣೆ, ಸಂಗ್ರ ಹಣೆ ಕೇಂದ್ರಗಳಲ್ಲಿ ಎಲ್ಲೆಡೆ 24/7 ಸಿಸಿಟಿವಿ ನಿಗಾ ಮಾಡಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

(This copy first appeared in Hindustan Times Kannada website. To read more like this please logon to kannada.hindustantimes.com)