Hassan Scandal; ಮಾಜಿ ಸಚಿವ ಹೆಚ್‌ ಡಿ ರೇವಣ್ಣ ವಿರುದ್ಧ ಮತ್ತೊಂದು ಕೇಸ್; ಮನೆಗೆಲಸಕ್ಕೆ ಹೋಗಿದ್ದ ಮಹಿಳೆ ನಾಪತ್ತೆ
ಕನ್ನಡ ಸುದ್ದಿ  /  ಕರ್ನಾಟಕ  /  Hassan Scandal; ಮಾಜಿ ಸಚಿವ ಹೆಚ್‌ ಡಿ ರೇವಣ್ಣ ವಿರುದ್ಧ ಮತ್ತೊಂದು ಕೇಸ್; ಮನೆಗೆಲಸಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Hassan Scandal; ಮಾಜಿ ಸಚಿವ ಹೆಚ್‌ ಡಿ ರೇವಣ್ಣ ವಿರುದ್ಧ ಮತ್ತೊಂದು ಕೇಸ್; ಮನೆಗೆಲಸಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಹಾಸನ ಲೈಂಗಿಕ ಹಗರಣ ಕೇಸ್ ದಿನೇದಿನೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ, ಮಾಜಿ ಸಚಿವ ಹೆಚ್‌ ಡಿ ರೇವಣ್ಣ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದ್ದು, ಅವರ ಮನೆಗೆಲಸಕ್ಕೆ ಹೋಗಿದ್ದ ಮಹಿಳೆ ನಾಪತ್ತೆಯಾಗಿದ್ದಾರೆ ಎಂದು ಆಕೆಯ ಪುತ್ರ ಕೆ ಆರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. (ವರದಿ- ರಂಗಸ್ವಾಮಿ, ಮೈಸೂರು)

ಮಾಜಿ ಸಚಿವ ಹೆಚ್‌ ಡಿ ರೇವಣ್ಣ (ಚಿತ್ರದಲ್ಲಿರುವವರು) ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ರೇವಣ್ಣ ಅವರ ಮನೆಗೆಲಸಕ್ಕೆ ಹೋಗಿದ್ದ ಮಹಿಳೆ ನಾಪತ್ತೆ ಎಂದು ಆಕೆಯ ಪುತ್ರ ದೂರು ನೀಡಿದ್ದಾರೆ.
ಮಾಜಿ ಸಚಿವ ಹೆಚ್‌ ಡಿ ರೇವಣ್ಣ (ಚಿತ್ರದಲ್ಲಿರುವವರು) ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ರೇವಣ್ಣ ಅವರ ಮನೆಗೆಲಸಕ್ಕೆ ಹೋಗಿದ್ದ ಮಹಿಳೆ ನಾಪತ್ತೆ ಎಂದು ಆಕೆಯ ಪುತ್ರ ದೂರು ನೀಡಿದ್ದಾರೆ.

ಮೈಸೂರು: ಹಾಸನ ಲೈಂಗಿಕ ಹಗರಣ ಕೇಸ್ ಜೊತೆಗೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ತನ್ನ ತಾಯಿ ಕಾಣೆಯಾಗಿದ್ದಾರೆ ಎಂದು ಮಹಿಳೆಯ ಪುತ್ರ ಮೈಸೂರು ಜಿಲ್ಲೆ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿನ್ನೆ (ಮೇ 2) ತಡರಾತ್ರಿ ದೂರು ದಾಖಲಾಗಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಸೂಕ್ಷ್ಮ ಪ್ರಕರಣವಾಗಿರುವ ಕಾರಣ ಮಾಹಿತಿ ಬಹಿರಂಗಪಡಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಹಲವರ ಬಳಿ ಮಾಹಿತಿ ಕಲೆ ಹಾಕಿರುವ ವಿಶೇಷ ತಂಡದ ಪೊಲೀಸರು, ಕೆ ಆರ್ ನಗರ ತಾಲೂಕಿನ ವಿವಿಧೆಡೆ ಹಲವರ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ತಡರಾತ್ರಿ ದಾಖಲಾಯಿತು ದೂರು, ಎಚ್‌ ಡಿ ರೇವಣ್ಣ ಮೊದಲ ಆರೋಪಿ

ಮೈಸೂರು ಜಿಲ್ಲೆಯ ಕೆ ಆರ್ ನಗರ ಪಟ್ಟಣ ಪೊಲೀಸ್ ಠಾಣೆಗೆ ಸಂತ್ರಸ್ತೆಯ ಪುತ್ರ ನೀಡಿರುವ ದೂರಿನ ಪ್ರಕಾರ, ಸಂಸದ ಪ್ರಜ್ವಲ್ ರೇವಣ್ಣ ಅವರ ತಂದೆ ಮಾಜಿ ಸಚಿವ ಎಚ್ ಡಿ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಆಯುಕ್ತೆ ನಂದಿನಿ ಭೇಟಿ ನೀಡಿ ದೂರುದಾರರಿಂದ ಮಾಹಿತಿ ಸಂಗ್ರಹಿಸಿದರು.

"ಪೆನ್ ಡ್ರೈವ್ ಪ್ರಕರಣದ ವೀಡಿಯೋದಲ್ಲಿ ತನ್ನ ತಾಯಿಯ ಚಿತ್ರವೂ ಇದೆ. ವೀಡಿಯೋ ಬಹಿರಂಗವಾದ ಬಳಿಕ ಸತೀಶ್ ಬಾಬು ಹಾಗೂ ರೇವಣ್ಣ ನನ್ನ ತಾಯಿಯನ್ನು ಕರೆಯುತ್ತಿದ್ದರು. ಸತೀಶ್‌ ಬಾಬು ಅವರೇ ಬೈಕಿನಲ್ಲಿ ಬಂದು ತಾಯಿಯನ್ನು ಕರೆದೊಯ್ದರು. ಆಗಿನಿಂದ ತಾಯಿ ನಾಪತ್ತೆಯಾಗಿದ್ದಾರೆ ಎಂದು ಮಹಿಳೆಯ ಪುತ್ರ ದೂರಿನಲ್ಲಿ ಆರೋಪಿಸಿದ್ದಾರೆ. ಇದೇ ದೂರಿನ ಅನ್ವಯ ಸತೀಶ್ ಬಾಬು ಹಾಗೂ ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿರುವಂಥದ್ದು. ಎರಡನೆ ಆರೋಪಿಯಾಗಿರುವ ಸತೀಶ್ ಬಾಬು ರೇವಣ್ಣನವರ ಸಂಬಂಧಿ.

ಏನಿದು ಪ್ರಕರಣ- ಮಹಿಳೆಯನ್ನು ಯಾಕೆ ಕರೆದೊಯ್ದರು

ಹೊಳೆನರಸೀಪುರದ ಚೆನ್ನಾಂಬಿಕಾ ಥಿಯೇಟರ್ ಪಕ್ಕದಲ್ಲಿರುವ ರೇವಣ್ಣ ಮನೆಯಲ್ಲಿ ಸುಮಾರು 6 ವರ್ಷಗಳಿಂದ ಕೆಲಸ ಮಾಡಿದ್ದ ಮಹಿಳೆಯೇ ಈಗ ನಾಪತ್ತೆಯಾಗಿರುವುದಾಗಿ ಆಕೆಯ ಪುತ್ರ ದೂರು ನೀಡಿರುವಂಥದ್ದು.

"ಲೋಕಸಭಾ ಚುನಾವಣೆ ವೇಳೆ ಸತೀಶ್‌ಬಾಬು ತಮ್ಮ ಮನೆಗೆ ಬಂದು ತಾಯಿಯನ್ನು ಭವಾನಿ ಅಕ್ಕ ಕರೆಯುತ್ತಿದ್ದಾರೆಂದು ಹೇಳಿ ಕರೆದುಕೊಂಡು‌ ಹೋಗಿದ್ದರು. ಅಂದು ಸಂಜೆ ಮನೆಗೆ ಕರೆದುಕೊಂಡು ಬಂದು ಬಿಟ್ಟರು.

ಪೊಲೀಸರು ಬಂದರೆ ಏನೂ‌ ಹೇಳಬೇಡಿ. ಅವರಿಗೆ ಯಾವುದೇ ಕಾರಣಕ್ಕೂ ಸಿಗಬೇಡಿ. ನಿಮ್ಮ ಮೇಲೆ ಕೇಸ್ ಹಾಕಲಾಗುತ್ತದೆ. ಅವರು ಬಂದರೆ ನಮಗೆ ನೀವು ತಿಳಿಸಿ. ನಾನು ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ" ಎಂದು ದೂರಿನಲ್ಲಿ ಸಂತ್ರಸ್ತೆಯ ಮಗ ವಿವರಿಸಿದ್ದಾರೆ.

ಇದೇ ರೀತಿ, ಏಪ್ರಿಲ್ 29ರ ರಾತ್ರಿ 9 ಗಂಟೆಗೆ ರೇವಣ್ಣ ಸಾಹೇಬರು ಕರೆದುಕೊಂಡು ಬರಲು ಹೇಳಿದ್ದಾರೆಂದು ಒತ್ತಾಯ ಮಾಡಿ ತಾಯಿಯನ್ನು ಸತೀಶ್ ತನ್ನ ಹೀರೋಹೋಂಡಾ ಸ್ಪ್ಲೆಂಡರ್ ಬೈಕ್‌ನಲ್ಲಿ ಕರೆದುಕೊಂಡು ಹೋದ. ನನ್ನ ತಾಯಿಯನ್ನು ಎಲ್ಲಿಗೆ ಕರೆದೊಯ್ದರೋ ಗೊತ್ತಿಲ್ಲ.

ಆದರೆ, ಮೇ 1ರಂದು ಗೆಳೆಯರ ಮೂಲಕ ಅಶ್ಲೀಲ ವಿಡಿಯೋ ಬಂತು. ನಿನ್ನ ಅಮ್ಮ ಕಾಲು ಕಟ್ಟಿಕೊಂಡರೂ, ಪ್ರಜ್ವಲ್ ಬಲತ್ಕಾರ ಮಾಡಿದ್ದಾರೆ. ಈ ಸಂಬಂಧ ದೊಡ್ಡ ಕೇಸ್ ಆಗಿದೆ ಎಂದು ಗೆಳೆಯರೇ ಮಾಹಿತಿ ನೀಡಿದರು. ಆ ಸಂದರ್ಭದಲ್ಲಿ ನನ್ನ ತಾಯಿಯನ್ನು ವಾಪಸ್ ಕರೆತರಲು ಸತೀಶ್ ಬಾಬುಗೆ ಹೇಳಿದೆ. ಆಗ, ಹಲ್ಲೆ ಪ್ರಕರಣದಲ್ಲಿ ನಿಮ್ಮ ತಾಯಿ ಆರೋಪಿ ಎಂದು ಸತೀಶ್‌ ಬಾಬು ಸುಳ್ಳು ಹೇಳಿದರು. ನನ್ನ ತಾಯಿಯನ್ನು ಒತ್ತಾಯಪೂರ್ವಕವಾಗಿ ಕೂಡಿ ಹಾಕಿದ್ದಾರೆ ಎಂದು ಸಂತ್ರಸ್ತೆ ಪುತ್ರ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.

Whats_app_banner