ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Session: ಕರ್ನಾಟಕದ 4 ಸಂಸದರು ಲೋಕಸಭೆ ಅವಧಿಯ 5 ವರ್ಷ ಒಮ್ಮೆಯೂ ಮಾತನಾಡಲೇ ಇಲ್ಲ, ಯಾರವರು?

Lok Sabha Session: ಕರ್ನಾಟಕದ 4 ಸಂಸದರು ಲೋಕಸಭೆ ಅವಧಿಯ 5 ವರ್ಷ ಒಮ್ಮೆಯೂ ಮಾತನಾಡಲೇ ಇಲ್ಲ, ಯಾರವರು?

ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿ ಐದು ವರ್ಷದ ಈ ಅವಧಿಯಲ್ಲಿ ಒಮ್ಮೆಯೂ ಸದನದಲ್ಲಿ ಮಾತನಾಡದ ಒಟ್ಟು ಒಂಬತ್ತು ಸಂಸದರಲ್ಲಿ ಕರ್ನಾಟಕದ ನಾಲ್ವರ ಹೆಸರಿದೆ.

ಕರ್ನಾಟಕದ ನಾಲ್ವರು ಬಿಜೆಪಿ ಸಂಸದರು ಸಕ್ರಿಯವಾಗಿ ಭಾಗಿಯಾಗಿಲ್ಲ ಎನ್ನುವ ಮಾಹಿತಿಯನ್ನು ಲೋಕಸಭೆ ಸಚಿವಾಲಯ ನೀಡಿದೆ.
ಕರ್ನಾಟಕದ ನಾಲ್ವರು ಬಿಜೆಪಿ ಸಂಸದರು ಸಕ್ರಿಯವಾಗಿ ಭಾಗಿಯಾಗಿಲ್ಲ ಎನ್ನುವ ಮಾಹಿತಿಯನ್ನು ಲೋಕಸಭೆ ಸಚಿವಾಲಯ ನೀಡಿದೆ.

ನವದೆಹಲಿ: ನಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ನಮ್ಮ ಪರವಾಗಿ ಸದನದಲ್ಲಿ ಮಾತನಾಡಲಿ. ನಮ್ಮ ಸಮಸ್ಯೆಗಳಿಗೆ ಕೇಂದ್ರ ಮಟ್ಟದಲ್ಲಿ ದನಿಯಾಗಲಿ ಎನ್ನುವ ಆಶಯದೊಂದಿಗೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಾರೆ. ಅದರಲ್ಲೂ ಲೋಕಸಭಾ ಸದಸ್ಯರೆಂದರೆ ಇನ್ನೂ ಜವಾಬ್ದಾರಿ ಹೆಚ್ಚು. ಆದರೆ ಕರ್ನಾಟಕದಿಂದ ಲೋಕಸಭೆಗೆ ಈ ಬಾರಿ ಆಯ್ಕೆಯಾಗಿ ಹೋದ ಅತ್ಯಂತ ಹಿರಿಯ ಸದಸ್ಯರು ಒಮ್ಮೆಯೂ ಸದನದಲ್ಲಿ ಮಾತನಾಡೇ ಇಲ್ಲ. ಕ್ಷೇತ್ರದ ಪರಿವಾಗಿ ಒಂದೂ ಪ್ರಶ್ನೆಯನ್ನು ಕೇಳಿಲ್ಲ. ಚರ್ಚೆಗಳಲ್ಲೂ ಭಾಗಿಯಾಗಿಲ್ಲ. ಅವರಿಗೆ ಸಿಕ್ಕ ಅವಕಾಶಗಳನ್ನೂ ಬಳಸಿಕೊಂಡಿಲ್ಲ.

ಟ್ರೆಂಡಿಂಗ್​ ಸುದ್ದಿ

ಯಾರು ಆ ಸದಸ್ಯರು

17ನೇ ಲೋಕಸಭೆಯಲ್ಲಿ ಅವಧಿಯಲ್ಲಿ ಒಟ್ಟು 524 ಸದಸ್ಯರು ಎಷ್ಟು ಸಕ್ರಿಯವಾಗಿದ್ದರು. ಎಷ್ಟು ಪ್ರಶ್ನೆಗಳನ್ನು ಕೇಳಿದರು. ಚರ್ಚೆಯಲ್ಲಿ ಎಷ್ಟು ಹೊತ್ತು ಭಾಗಿಯಾದರು ಎನ್ನುವ ಮಾಹಿತಿಯನ್ನು ಸಂಸತ್ತಿನಲ್ಲಿ ನಿಖರವಾಗಿ ಸಂಗ್ರಹಿಸಲಾಗುತ್ತದೆ. ಅದರಲ್ಲೂ ಮೋದಿ ಪ್ರಧಾನಿಯಾದ ನಂತರ ಪ್ರತೀ ಸದಸ್ಯರ ಸದನದ ಭಾಗಿ ಅಂಶವನ್ನು ಗಮನಿಸಲಾಗುತ್ತದೆ. ಅದನ್ನು ಪಕ್ಷದ ಸಭೆಗಳಲ್ಲೂ ಉಲ್ಲೇಖಿಸಿ ಹಿಂದೆ ಬಿದ್ದ ಸದಸ್ಯರಿಗೆ ವೈಯಕ್ತಿಕವಾಗಿ ಮಾತನಾಡಲಾಗುತ್ತದೆ. ಹೀಗಿದ್ದರೂ ಈ ಅವಧಿಯಲ್ಲಿ ಒಟ್ಟು 9 ಲೋಕಸಭಾ ಸದಸ್ಯರು ಒಮ್ಮೆಯೂ ಮಾತನಾಡಿಯೇ ಇಲ್ಲ. ಅದರಲ್ಲಿ ಬಿಜೆಪಿಯವರು ಆರು ಮಂದಿ ಇದ್ದಾರೆ. ಇಬ್ಬರು ತೃಣಮೂಲ ಕಾಂಗ್ರೆಸ್ ಮತ್ತು ಒಬ್ಬರು ಬಿಎಸ್‌ಪಿ ಪಕ್ಷದ ಸದಸ್ಯರು.

ಕರ್ನಾಟಕದವರೂ ಇದ್ದಾರೆ

ಕರ್ನಾಟಕದ ನಾಲ್ವರು ಬಿಜೆಪಿ ಸಂಸದರು ಇರುವುದು ವಿಶೇಷ. ಕೇಂದ್ರದಲ್ಲಿ ಸಚಿವರಾಗಿಯೂ ಕೆಲಸ ಮಾಡಿ ಅನುಭವ ಹೊಂದಿ ಆರು ಬಾರಿ ಸಂಸದರಾಗಿರುವ ವಿ.ಶ್ರೀನಿವಾಸಪ್ರಸಾದ್‌( ಚಾಮರಾಜನಗರ), ರಮೇಶ್‌ ಜಿಗಜಿಣಗಿ( ವಿಜಯಪುರ), ಅನಂತಕುಮಾರ್‌ ಹೆಗಡೆ( ಕೆನರಾ) ಹಾಗೂ ಬಿ.ಎನ್‌.ಬಚ್ಚೇಗೌಡ( ಚಿಕ್ಕಬಳ್ಳಾಪುರ) ಈ ಪಟ್ಟಿಯಲ್ಲಿದ್ದಾರೆ.

ಬಿಜೆಪಿ ಬಿಟ್ಟು ಟಿಎಂಸಿಯಿಂದ ಸಂಸದರಾದ ನಟ ಶತ್ರುಘ್ನ ಸಿನ್ಹಾ, ನಟ ಬಿಜೆಪಿಯ ಸನ್ನಿಡಿಯೋಲ್‌ ಕೂಡ ಈ ಬಾರಿ ಮಾತನಾಡದವರ ಪಟ್ಟಿಯಲ್ಲಿದ್ದಾರೆ. ಇನ್ನು ಅತುಲ್‌ ರೈ, ಪ್ರಧಾನ್ ಬರುವಾ ಮತ್ತು ದಿಬ್ಯೇಂದು ಅಧಿಕಾರಿ ಅವರ ಹೆಸರು ಈ ಪಟ್ಟಿಯಲ್ಲಿದೆ.

1,354 ಗಂಟೆ ಕಲಾಪ

ಒಂಬತ್ತು ಸಂಸದರಲ್ಲಿ ಮೂವರು ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ. ಆರು ಸಂಸದರು ಒಂದು ಅವಕಾಶ ಮಾತ್ರ ಪ್ರಶ್ನೆ ಕೇಳಲು ಸದುಪಯೋಗಪಡಿಸಿಕೊಂಡಿದ್ದಾರೆ. ಆದರೆ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರು ಮಾತನಾಡುವುದು ಇರಲಿ. ಒಂದೇ ಒಂದು ಪ್ರಶ್ನೆಯನ್ನು ಕೇಳದೇ ಅವಧಿ ಮುಗಿಸುತ್ತಿದ್ದಾರೆ ಎನ್ನುತ್ತವೆ ಲೋಕಸಭೆ ಸಚಿವಾಲಯದ ಮೂಲಗಳು.

ಸಚಿವಾಲಯದ ಮಾಹಿತಿಯಂತೆ 17ನೇ ಲೋಕಸಭೆಯಲ್ಲಿ ಐದು ವರ್ಷಗಳಲ್ಲಿ 1,354 ಗಂಟೆ ಕಲಾಪ ಜರುಗಿದೆ. 222 ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ. 1,116 ಪ್ರಶ್ನೆಗಳಿಗೆ ಸಚಿವರು ಉತ್ತರ ಕೊಟ್ಟಿದ್ದಾರೆ. ಶೂನ್ಯವೇಳೆಯಲ್ಲಿ 5,568 ವಿಷಯಗಳನ್ನು ಪ್ರಸ್ತಾಪ ಮಾಡಲಾಗಿದೆ.

ಅನಾರೋಗ್ಯದಲ್ಲೇ ಅವಧಿ ಮುಗಿಸಿದ ಪ್ರಸಾದ್‌

ವಿ.ಶ್ರೀನಿವಾಸಪ್ರಸಾದ್‌ ಅವರು ಹಿರಿಯ ಸದಸ್ಯರಲ್ಲಿ ಒಬ್ಬರು 1980ರಿಂದ ಸತತ ನಾಲ್ಕು ಬಾರಿ ಲೋಕಸಭೆಗೆ ಕಾಂಗ್ರೆಸ್‌ನಿಂದ ಚಾಮರಾಜನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದವರು. ರಾಮಕೃಷ್ಣ ಹೆಗಡೆ ಅವರ ಲೋಕಜನಶಕ್ತಿ ಸೇರಿ ಗೆದ್ದು ಅಟಲ್‌ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಆಹಾರ ಮಂತ್ರಿಯೂ ಆಗಿದ್ದವರು. ಆನಂತರ ಜೆಡಿಎಸ್‌ ಸೇರಿ ಕಾಂಗ್ರೆಸ್‌ ಮರಳಿದವರು. ರಾಜ್ಯ ರಾಜಕೀಯದಲ್ಲೂ ಗುರುತಿಸಿಕೊಂಡು ಸಚಿವರೂ ಆಗಿದ್ದವರು. ಆನಂತರ ಬಿಜೆಪಿ ಸೇರಿದ್ದರು. ಬಿ.ಎಸ್‌.ಯಡಿಯೂರಪ್ಪ ಅವರ ಒತ್ತಡದ ಕಾರಣಕ್ಕೆ ಅನಾರೋಗ್ಯದ ನಡುವೆಯೂ ಗೆದ್ದು ಆರನೇ ಬಾರಿ ಸಂಸದರೂ ಆಗಿದ್ದರು. ಅನಾರೋಗ್ಯದ ಕಾರಣದಿಂದ ಅವರು ಹೆಚ್ಚು ಸದನಕ್ಕೆ ಹೋಗಿಯೇ ಇಲ್ಲ. ಕೆಲವೊಮ್ಮೆ ಹೋಗಿ ಸಹಿ ಹಾಕಿ ಬಂದಿದ್ದು ಬಿಟ್ಟರೆ ಸಕ್ರಿಯವಾಗಿ ಪಾಲ್ಗೊಳ್ಳಲು ಆಗಿಲ್ಲ.

ಎರಡು ಕಡೆ ಗೆದ್ದ ಜಿಗಜಿಣಗಿ

ಮತ್ತೊಮ್ಮೆ ಹಿರಿಯ ರಾಜಕಾರಣಿ ರಮೇಶ್‌ ಜಿಗಜಿಣಗಿ. ವಿಜಯಪುರ ಜಿಲ್ಲೆಯಿಂದಲೇ 80ರ ದಶಕದಿಂದಲೂ ರಾಜಕೀಯ ಮಾಡಿಕೊಂಡು ಬರುತ್ತಿರುವ ರಮೇಶ್‌ ಜಿಗಜಿಣಗಿ ಅವರೂ ರಾಮಕೃಷ್ಣ ಹೆಗಡೆ ಆಪ್ತರು. ಕರ್ನಾಟಕದಲ್ಲಿ ಗೃಹ, ಕಂದಾಯ, ಸಮಾಜಕಲ್ಯಾಣ ಸಚಿವರಾಗಿದ್ದರು. ಸಂಯುಕ್ತ ಜನತಾದಳದಲ್ಲಿದ್ದು ಬೆಳಗಾವಿಯ ಚಿಕ್ಕೋಡಿಯಿಂದ ಸಂಸದರಾಗಿದ್ದರು. ಮೂರು ಬಾರಿ ಅಲ್ಲಿಂದ ಗೆದ್ದಿದ್ದರು. ವಿಜಯಪುರಕ್ಕೆ ವಾಪಾಸಾಗಿ ಇಲ್ಲಿಯೂ ಮೂರು ಬಾರಿ ಸಂಸದರಾಗಿದ್ದಾರೆ. ಐದು ಬಾರಿ ಬಿಜೆಪಿಯಿಂದಲೇ ಗೆದ್ದಿದ್ದಾರೆ. ಕಳೆದ ಅವಧಿಯಲ್ಲಿ ಮೋದಿ ಸಂಪುಟದಲ್ಲಿ ಗ್ರಾಮೀಣ ನೀರು ಸರಬರಾಜು ಸಚಿವರೂ ಆಗಿದ್ದರು. ಕ್ಷೇತ್ರದಲ್ಲಿ ಹೆಚ್ಚು ಮಾತನಾಡುವ ರಮೇಶ್‌ ಜಿಗಜಿಣಗಿ ಸಂಸತ್ತಿನಲ್ಲಿ ಮಾತ್ರ ಮೌನಕ್ಕೆ ಜಾರಿಯಾಗಿದ್ದಾರೆ.

ಮಾತುಗಾರ ಹೆಗಡೆ ಮೌನ ರಾಜಕಾರಣ

ಬಿಜೆಪಿಯ ಫೈರ್‌ ಬ್ರಾಂಡ್‌ ಸಂಸದ ಎಂದೇ ಹೆಸರಾಗಿರುವ ಕೆನರಾ ಕ್ಷೇತ್ರದ ಅನಂತಕುಮಾರ ಹೆಗ್ಡೆ ಈ ಕ್ಷೇತವನ್ನು ಸತತ ಆರು ಬಾರಿ ಪ್ರತಿನಿಧಿಸಿದ್ದಾರೆ. ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ಅನಂತಕುಮಾರ್‌ ಹೆಗ್ಡೆ ಅವರಿಗೆ ಹಿಂದಿನ ಅವಧಿಯಲ್ಲಿಯೇ ಮೋದಿ ಸಂಪುಟದಲ್ಲಿ ಕೌಶಲ್ಯಾಭಿವೃದ್ದಿ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಮೋದಿ ವೇಗಕ್ಕೆ ಒಗ್ಗಿಕೊಳ್ಳಲು ಆಗದ ಅವರಿಗೆ ಈ ಬಾರಿ ಅವಕಾಶ ಸಿಗಲೇ ಇಲ್ಲ. ಈ ಬಾರಿ ಕ್ಷೇತ್ರದಲ್ಲೂ ಬಹುತೇಕ ಮೌನಕ್ಕೆ ಹೋಗಿದ್ದ ಅನಂತ್‌ ಕುಮಾರ್‌ ಹೆಗಡೆ ಸಂಸತ್ತಿನಲ್ಲೂ ಮಾತನಾಡಿಲ್ಲ. ಕ್ಷೇತ್ರದಲ್ಲೂ ಐದು ವರ್ಷದಲ್ಲಿ ಕಾಣಿಸಿಕೊಂಡಿದ್ದು ಅಪರೂಪ ಎನ್ನುವ ಮಾತುಗಳಿವೆ.

ಅನಿರೀಕ್ಷಿತವಾಗಿ ಗೆದ್ದ ಬಬ್ಬೇಗೌಡ

ಕರ್ನಾಟಕದ ಹಿರಿಯ ರಾಜಕಾರಣಿ ಬಿ.ಎನ್‌.ಬಚ್ಚೇಗೌಡ ಕಳೆದ ಅವಧಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿದ್ದರು. ವಯಸ್ಸಿನ ಕಾರಣಕ್ಕೆ ಅವರೂ ಹೆಚ್ಚು ಸಕ್ರಿಯವಾಗಿ ಭಾಗಿಯಾದವರಲ್ಲ. ಕರ್ನಾಟಕ ರಾಜಕಾರಣದಲ್ಲೇ ಹೆಚ್ಚು ಕಾಲ ಇದ್ದ ಬಚ್ಚೇಗೌಡರು ಸಚಿವರೂ ಆಗಿದ್ದರು. ಬಿ.ಎಸ್.ಯಡಿಯೂರಪ್ಪ ಅವರ ಕಾರಣದಿಂದ ಕಳೆದ ಬಾರಿ ಸ್ಪರ್ಧಿಸಿ ಗೆದ್ದರೂ ಆನಂತರ ಮಗ ಶರತ್‌ ಬಿಜೆಪಿಯೊಂದಿಗೆ ಬಂಡಾಯ ಸಾರಿ ಪಕ್ಷೇತರರಾಗಿ ಹೊಸಕೋಟೆಯಿಂದ ಗೆದ್ದಿದ್ದರು. ಆನಂತರ ಕಾಂಗ್ರೆಸ್‌ ಸೇರಿ ಮತ್ತೆ ಶಾಸಕರಾಗಿದ್ದರು. ಆರೋಗ್ಯ, ರಾಜಕೀಯ ಕಾರಣದಿಂದ ಬಚ್ಚೇಗೌಡರು ಮೌನ ವಹಿಸಿದ್ದೇ ಹೆಚ್ಚು ಎನ್ನುವ ಮಾತುಗಳಿವೆ.

IPL_Entry_Point

ವಿಭಾಗ