ಕನ್ನಡ ಸುದ್ದಿ  /  ಕರ್ನಾಟಕ  /  Kara Hunnime: ಕಲ್ಯಾಣ ಕರ್ನಾಟಕದಲ್ಲಿ ಅನ್ನದಾತನ ಮೊದಲ ಹಬ್ಬ ಕಾರ ಹುಣ್ಣಿಮೆ ಸಂಭ್ರಮ

Kara Hunnime: ಕಲ್ಯಾಣ ಕರ್ನಾಟಕದಲ್ಲಿ ಅನ್ನದಾತನ ಮೊದಲ ಹಬ್ಬ ಕಾರ ಹುಣ್ಣಿಮೆ ಸಂಭ್ರಮ

Kalaburagi News: ಉತ್ತರ ಕರ್ನಾಟಕದ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿರುವ, ಗ್ರಾಮೀಣ ಸೊಗಡಿನ ಕಾರ ಹುಣ್ಣಿಮೆಯನ್ನು ಭಾನುವಾರ ರೈತರು ಸಂಭ್ರಮದಿಂದ ಆಚರಿಸಿದರು.

ಕಾರ ಹುಣ್ಣಿಮೆ ಆಚರಿಸಿದ ಅನ್ನದಾತರು
ಕಾರ ಹುಣ್ಣಿಮೆ ಆಚರಿಸಿದ ಅನ್ನದಾತರು

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾರ ಹುಣ್ಣಿಮೆ ತುಂಬಾ ವಿಶೇಷ. ಭಾನುವಾರ (ಮೇ 4) ಕಾರ ಹುಣ್ಣಿಮೆ ನಿಮಿತ್ತ ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಅದರಲ್ಲೂ ಗ್ರಾಮೀಣ ಭಾಗದ ರೈತರು, ತಮ್ಮ ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿದರು.

ಟ್ರೆಂಡಿಂಗ್​ ಸುದ್ದಿ

ಬೇಸಿಗೆ ಕಾಲ ಮುಗಿದು, ಮುಂಗಾರು ಹಂಗಾಮು ಪ್ರಾರಂಭವಾಗುವ ಹೊತ್ತಿಗೆ ಬರುವ ಕಾರ ಹುಣ್ಣಿಮೆ ರೈತರ ಮೊದಲ ಹಬ್ಬ ಎಂದೇ ಕರೆಯಲಾಗುತ್ತದೆ. ಬೇಸಿಗೆಯಲ್ಲಿ ಎತ್ತುಗಳಿಂದ ಭೂಮಿ ಉಳುಮೆ ಮಾಡಿಸುವ ರೈತರು, ನಂತರ ಕಾರ ಹುಣ್ಣಿಮೆ ಸಂದರ್ಭದಲ್ಲಿ ಅವುಗಳಿಗೆ ವಿಶ್ರಾಂತಿ ನೀಡುತ್ತಾರೆ. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಮತ್ತೆ ಕೃಷಿಯಲ್ಲಿ ತೊಡಗುವ ಅನ್ನದಾತರು, ಉಳುಮೆಗೆ ಎತ್ತುಗಳಿಗೆ ಗಳೆ ಕಟ್ಟುತ್ತಾರೆ. ಹೀಗಾಗಿ ಕಾರ ಹುಣ್ಣಿಮೆಯನ್ನು ಪ್ರತಿ ವರ್ಷ ರೈತರು ಸಂಭ್ರಮದಿಂದ ಆಚರಿಸುತ್ತಾರೆ.

ಎತ್ತುಗಳೊಂದಿಗೆ ರೈತರು
ಎತ್ತುಗಳೊಂದಿಗೆ ರೈತರು

ಕಾರ ಹುಣ್ಣಿಮೆಯ ವಿಶೇಷ

ದೇಶಕ್ಕೆ ರೈತ ಬೆನ್ನೆಲುಬಾದರೆ, ರೈತರಿಗೆ ಎತ್ತುಗಳೇ ಬೆನ್ನೆಲುಬು. ಎತ್ತುಗಳು ರೈತರ ಬೆನ್ನೆಲುಬಾಗಿ ಕೃಷಿ ಭೂಮಿಯಲ್ಲಿ ದುಡಿಯುತ್ತವೆ. ಯಂತ್ರಗಳು ಇರಲಿ ಇಲ್ಲದಿರಲಿ. ರೈತರ ಜಮೀನಿನಲ್ಲಿ ಅತಿ ಹೆಚ್ಚು ದುಡಿಯುವುದು ಎತ್ತುಗಳು. ಇತ್ತೀಚೆಗೆ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗುತ್ತಿದೆ. ಆದರೂ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕೃಷಿಗೆ ಎತ್ತುಗಳೇ ಆಧಾರ. ಹೀಗಾಗಿ ರೈತರು ಎತ್ತುಗಳನ್ನು ಪೂಜನೀಯ ಭಾವದಿಂದ ಕಾಣುತ್ತಾರೆ.

ಪ್ರತಿ ವರ್ಷ ರೈತರು ಉಳುಮೆಗೆ ಎತ್ತುಗಳನ್ನು ಬಳಸುತ್ತಾರೆ. ಬೇಸಿಗೆಯ ಸುಡು ಬಿಸಿಲಿನಲ್ಲಿ ಎತ್ತುಗಳಿಂದ ಉಳುಮೆ ಮಾಡುವ ರೈತರು ಕಾರ ಹುಣ್ಣಿಮೆಯ ದಿನದಂದು ಎತ್ತುಗಳಿಗೆ ಕೃತಜ್ಞತೆ ಸಮರ್ಪಿಸುತ್ತಾರೆ. ಅವುಗಳನ್ನು ಪೂಜೆ ಮಾಡಿ, ಅವುಗಳ ಸೇವೆಯನ್ನು ಸ್ಮರಿಸುತ್ತಾರೆ.

ಭಾನುವಾರ ಕಾರ ಹುಣ್ಣಿಮೆಯಂದು ರೈತರು ಎತ್ತುಗಳ ಮೈ ತೊಳೆದು, ಅವುಗಳಿಗೆ ಬಣ್ಣ ಹಚ್ಚಿ ಅವುಗಳ ಕೊರಳಲ್ಲಿ ಗೆಜ್ಜೆ ಸರ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಹಾಕಿ ಅಂದ ನೋಡಿದರು. ಹೋಳಿಗೆ ಸೇರಿದಂತೆ ಬಗೆಬಗೆಯ ಸಿಹಿ ಅಡುಗೆಯನ್ನು ಮನೆಯಲ್ಲಿ ಮಾಡಿ ತಮ್ಮ ಮನೆಯಲ್ಲಿರುವ ಎತ್ತುಗಳಿಗೆ ಹೋಳಿಗೆ ಸೇರಿದಂತೆ ಸಿಹಿ ತಿನಿಸುಗಳನ್ನು ತಿನಿಸುತ್ತಾರೆ. ನಂತರ ದೇವಸ್ಥಾನಗಳಿಗೆ ಎತ್ತುಗಳನ್ನು ಒಯ್ದು, ಕರಿ ಹರಿದು, ಎತ್ತುಗಳಿಗೆ ಏನು ತೊಂದರೆಯಾಗದಂತೆ ದೇವರಲ್ಲಿ ಸ್ಬೇಡುತ್ತಾರೆ.

ಕಾರ ಹುಣ್ಣಿಮೆಯ ದಿನ ಎತ್ತುಗಳನ್ನು ಪೂಜನೀಯ ಭಾವದಿಂದ ರೈತರು ಕಾಣುತ್ತಾರೆ. ಅನೇಕ ಕಡೆ ಗ್ರಾಮಗಳಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ಕಾರ ಹುಣ್ಣಿಮೆಯ ಸಂದರ್ಭದಲ್ಲಿ ಎತ್ತಿನ ಬಂಡಿಯನ್ನು ಓಡಿಸಲಾಗುತ್ತದೆ. ಕೊಬ್ಬರಿ ಹೋರಿಯನ್ನು ಓಡಿಸುವ ಸಂಪ್ರದಾಯವಿದೆ. ರೈತರು ಎತ್ತುಗಳಿಗೆ ಪೂಜೆ ಮಾಡಿದ್ರೆ, ಗೌಳಿ ಸಮಾಜದವರು ತಮ್ಮ ಜೀವನಕ್ಕೆ ಆಧಾರವಾಗಿರುವ ಎಮ್ಮೆ, ಹಸುಗಳನ್ನು ಪೂಜಿಸುತ್ತಾರೆ. ರೈತರು ಕೂಡ ಎತ್ತುಗಳ ಜೊತೆ ತಮ್ಮ ಮನೆಯಲ್ಲಿರುವ ಬೇರೆ ರಾಸುಗಳಿಗೆ ಕೂಡ ಪೂಜೆ ಮಾಡುತ್ತಾರೆ. ಸಿಹಿ ತಿನಿಸುಗಳನ್ನು ತಿನ್ನಿಸುತ್ತಾರೆ.

IPL_Entry_Point